ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶಾದ್ಯಂತ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ (DBU) ಚಾಲನೆ ನೀಡಿದ್ದಾರೆ. ಎಸ್ಬಿಐ (SBI), ಕೆನರಾ (Canara), ಇಂಡಿಯನ್ ಬ್ಯಾಂಕ್ (Indian Bank), ಪಿಎನ್ಬಿ ಬ್ಯಾಂಕ್ (PNB Bank) ಸೇರಿದಂತೆ ದೇಶದ ಪ್ರಮುಖ ಬ್ಯಾಂಕ್ಗಳು ಡಿಬಿಯು ಸೇವೆ ಒದಗಿಸುತ್ತಿವೆ. ಐಸಿಐಸಿಐ ಬ್ಯಾಂಕ್ (ICICI Bank) ಉತ್ತರಾಖಂಡದ ಡೆಹ್ರಾಡೂನ್, ತಮಿಳುನಾಡಿನ ಕರೂರ್, ನಾಗಾಲ್ಯಾಂಡ್ನ ಕೊಹಿಮಾ, ಪುದುಚೇರಿಗಳಲ್ಲಿ ಡಿಬಿಯುಗಳನ್ನು ತೆರೆದಿದ್ದರೆ, ಎಚ್ಡಿಎಫ್ಸಿ ಬ್ಯಾಂಕ್ (HDFC Bank) ಹರಿದ್ವಾರ, ಚಂಡೀಗಢ, ಫರೀದಾಬಾದ್ ಹಾಗೂ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಡಿಬಿಯುಗಳನ್ನು ಆರಂಭಿಸಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಚಾಲನೆ ನೀಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಆರಂಭಿಸುವ ಯೋಜನೆ ಹಮ್ಮಿಕೊಂಡಿತ್ತು.
ಡಿಜಿಟಲ್ ಬ್ಯಾಂಕಿಂಗ್ ಘಟಕ ಅಥವಾ ಡಿಬಿಯು ಮೂಲಕ ಗ್ರಾಹಕರು ಏನೇನು ವ್ಯವಹಾರಗಳನ್ನು ಮಾಡಬಹುದು? ಇಲ್ಲಿದೆ;
ಐಸಿಐಸಿಐ ಬ್ಯಾಂಕ್ ಡಿಬಿಯು:
ಐಸಿಐಸಿಐ ಬ್ಯಾಂಕ್ ಪ್ರಕಟಣೆ ಪ್ರಕಾರ, ಡಿಬಿಯುನಲ್ಲಿ ಎರಡು ಆಯ್ಕೆಗಳಿವೆ. ಅವುಗಳೆಂದರೆ, ಸೆಲ್ಫ್ ಸರ್ವೀಸ್ ಝೋನ್ ಮತ್ತು ಡಿಜಿಟಲ್ ಅಸಿಸ್ಟೆನ್ಸ್ ಝೋನ್.
ಸೆಲ್ಫ್ ಸರ್ವೀಸ್ ಝೋನ್ನಲ್ಲಿ ಎಟಿಎಂ, ಕ್ಯಾಶ್ ಡೆಪಾಸಿಟ್ ಮಷಿನ್, ಮಲ್ಟಿ ಫಂಕ್ಷನಲ್ ಕಿಯೋಸ್ಕ್ಗಳು ಇರಲಿದ್ದು ಪಾಸ್ಬುಕ್ ಪ್ರಿಂಟ್ ಮಾಡುವುದು, ಚೆಕ್ ಡೆಪಾಸಿಟ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ದೊರೆಯಲಿವೆ. ಡಿಜಿ ಬ್ರ್ಯಾಂಚ್ ಕಿಯೋಸ್ಕ್ ಕೂಡ ಇರಲಿದ್ದು, ಮೊಬೈಲ್ ಬ್ಯಾಂಕಿಂಗ್ ಆ್ಯಪ್ಗಳಲ್ಲಿ ಲಭ್ಯವಿರುವ ಎಲ್ಲ ಸೇವೆಗಳೂ ಇದರಲ್ಲಿ ದೊರೆಯಲಿವೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ. ಸೆಲ್ಫ್ ಸರ್ವೀಸ್ ಝೋನ್ನಲ್ಲಿ ಗ್ರಾಹಕರ ಜತೆ ಸಂವಹನಕ್ಕೆಂದು ಚಾಟ್ಬಾಟ್ ಇರಲಿದ್ದು ದಿನದ 24 ಗಂಟೆಯೂ ಸೇವೆ ಲಭ್ಯವಿರಲಿದೆ.
ಇದನ್ನೂ ಓದಿ: ದೇಶದಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಡಿಜಿಟಲ್ ಅಸಿಸ್ಟೆನ್ಸ್ ಝೋನ್ನಲ್ಲಿ ಬ್ರ್ಯಾಂಚ್ ಅಧಿಕಾರಿಗಳಿರಲಿದ್ದು, ಹಣಕಾಸು ಮತ್ತು ಹಣಕಾಸೇತರ ವ್ಯವಹಾರಗಳಲ್ಲಿ ಗ್ರಾಹಕರಿಗೆ ನೆರವಾಗಲಿದ್ದಾರೆ. ಉಳಿತಾಯ ಖಾತೆ, ಕರೆಂಟ್ ಅಕೌಂಟ್ ತೆರೆಯುವುದು, ಗೃಹ ಸಾಲ, ಆಟೊ ಸಾಲ, ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಈ ಸೇವೆ ಉಪಯೋಗಕ್ಕೆ ಬರಲಿದೆ.
ಈ ಮೇಲೆ ಹೇಳಿರುವ ಎಲ್ಲ ಸೇವೆಗಳೂ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಆಧಾರ್ ಆಧಾರಿತ ಇ-ಕೆವೈಸಿ ಮೂಲಕ ದೊರೆಯಲಿವೆ. ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಬಳಕೆಗೆ ಗ್ರಾಹಕರಿಗೆ ಅಧಿಕಾರಿಗಳು ನೆರವಾಗಲಿದ್ದಾರೆ.
ಐಸಿಐಸಿಐ ಬ್ಯಾಂಕ್ನ ಡಿಜಿಟಲ್ ಅಸಿಸ್ಟೆನ್ಸ್ ಝೋನ್ ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 9.30ರಿಂದ ಸಂಜೆ 3 ಗಂಟೆವರೆಗೆ ಲಭ್ಯವಿರಲಿದೆ. ಅದೇ ರೀತಿ ಮೊದಲ, ಮೂರನೇ ಹಾಗೂ ಐದನೇ ಶನಿವಾರಗಳಂದು ಕೂಡ ಸೇವೆ ಲಭ್ಯವಿರಲಿದೆ.
ಎಚ್ಡಿಎಫ್ಸಿ ಬ್ಯಾಂಕ್ ಡಿಬಿಯುನಲ್ಲಿ ದೊರೆಯುವ ಸೇವೆಗಳು:
ಎಚ್ಡಿಎಫ್ಸಿ ಬ್ಯಾಂಕ್ ಡಿಬಿಯುನಲ್ಲಿ ಕೂಡ ಸೆಲ್ಫ್ ಸರ್ವೀಸ್ ಝೋನ್ ಹಾಗೂ ಅಸಿಸ್ಟೆಡ್ ಝೋನ್ ಇರಲಿದೆ.
– ಸ್ಥಿರ ಹಾಗೂ ಆರ್ಡಿ ಠೇವಣಿ ತೆರೆಯುವುದು
– ಗ್ರಾಹಕರಿಗೆ ಡಿಜಿಟಲ್ ಕಿಟ್: ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಟ್ರಾನ್ಸಿಟ್ ಸಿಸ್ಟಂ ಕಾರ್ಡ್
– ಉದ್ಯಮಿಗಳಿಗೆ ಡಿಜಿಟಲ್ ಕಿಟ್: ಯುಪಿಐ ಕ್ಯುಆರ್ ಕೋಡ್, ಭೀಮ್ ಆಧಾರ್, ಪಿಒಎಸ್
– ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯದ ಯೋಜನೆಗಳ ಅನ್ವಯ ದೊರೆಯುವ ಸಾಲಗಳು
– ಆನ್‌ಲೈನ್ ಅರ್ಜಿ ಸಲ್ಲಿಸುವಿಕೆಯಿಂದ ತೊಡಗಿ ವಿತರಣೆಯವರೆಗೆ ಅಂತಹ ಸಾಲಗಳ ಡಿಜಿಟಲ್ ಪ್ರಕ್ರಿಯೆಗೆ ನೆರವು
– ಕ್ಯಾಷ್ ಡೆಪಾಟಿಸ್ ಮಷಿನ್ಗಳ ಮೂಲಕ ನಗದು ಪಡೆಯುವಿಕೆ ಮತ್ತು ಠೇವಣಿ ಇಡುವುದಕ್ಕೆ ವ್ಯವಸ್ಥೆ
– ಪಾಸ್ಬುಕ್ ಪ್ರಿಂಟಿಂಗ್ ಮತ್ತು ಸ್ಟೇಟ್ಮೆಂಟ್ ಜನರೇಟ್ ಮಾಡುವುದು
– ಫಂಡ್ ಟ್ರಾನ್ಸ್ಫರ್ (ನೆಫ್ಟ್/ ಐಎಂಪಿಎಸ್)
– ಕೆವೈಸಿ ಅಪ್ಡೇಟ್ / ವೈಯಕ್ತಿಕ ವಿವರಗಳು ಇತ್ಯಾದಿಗಳ ಅಪ್ಡೇಟ್
– ಅಕೌಂಟ್ ಓಪನಿಂಗ್ ಕಿಯೋಸ್ಕ್ / ಕಿಯೋಸ್ಕ್ ವಿತ್ ಇ-ಕೆವೈಸಿ
– ಅಟಲ್ ಪಿಂಚಣಿ ಯೋಜನೆ
– ಪ್ರಧಾನಮಂತ್ರಿ ಜೀವನಜ್ಯೋತಿ ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಬರುವ 15 ವಿಮಾ ಸೇವೆಗಳು