ನವದೆಹಲಿ: ಬ್ಯಾಂಕುಗಳಲ್ಲಿ ಸಾಲ ಪಡೆಯಲು ನಾವು ಅಡಮಾನವಾಗಿ ಇಡುವ ಮನೆಪತ್ರ, ಇನ್ಷೂರೆನ್ಸ್ ಸರ್ಟಿಫಿಕೇಟ್ ಇತ್ಯಾದಿ ಮೂಲ ಆಸ್ತಿಪತ್ರಗಳು (Property Documents) ಕಳೆದುಹೋದರೆ ಏನು ಗತಿ? ಇಂಥ ಕೆಲ ಪ್ರಕರಣಗಳು ಬೆಳಕಿಗೆ ಬಂದಿರುವುದುಂಟು. ಇದೀಗ ಆರ್ಬಿಐ ಈ ನಿಟ್ಟಿನಲ್ಲಿ ಗಮನ ಹರಿಸಿದ್ದು, ಸಾಲ ಪಡೆಯುವವರ ಆಸ್ತಿ ದಾಖಲೆಗಳು ಬ್ಯಾಂಕ್ನಲ್ಲಿ ಕಳೆದುಹೋಗಿದ್ದರೆ ಆ ಗ್ರಾಹಕರಿಗೆ ಬ್ಯಾಂಕುಗಳು ಪರಿಹಾರ ನೀಡಬೇಕು. ಜೊತೆಗೆ ದಂಡವನ್ನೂ ಕಟ್ಟಿಕೊಡಬೇಕಾಗುವಂತಹ ನಿಯಮ ಮಾರಿ ಮಾಡಲು ಹೊರಟಿದೆ.
ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಸೇವೆಯ ಮಟ್ಟವನ್ನು ಪರಿಶೀಲಿಸಲು ಆರ್ಬಿಐ ಕಳೆದ ವರ್ಷ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು. ಮಾಜಿ ಡೆಪ್ಯೂಟಿ ಆರ್ಬಿಐ ಗವರ್ನರ್ ಬಿ.ಪಿ. ಕಣುಂಗೋ ನೇತೃತ್ವದ ಈ ಸಮಿತಿ ಹಲವು ಶಿಫಾರಸುಗಳನ್ನು ಒಳಗೊಂಡಿರುವ ತನ್ನ ವರದಿಯನ್ನು ಇದೇ ಏಪ್ರಿಲ್ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ಗೆ ಸಲ್ಲಿಸಿತ್ತು. ಆಸ್ತಿಪತ್ರ ಕಳೆದುಹೋದಾಗ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರ ಮತ್ತು ದಂಡ ಕಟ್ಟಿಕೊಡಬೇಕೆನ್ನುವುದು ಈ ಸಮಿತಿ ಮಾಡಿದ ಶಿಫಾರಸುಗಳಲ್ಲಿ ಸೇರಿದೆ.
ಇದನ್ನೂ ಓದಿ: Earn Money: ನಿಮ್ಮ ಟ್ವೀಟ್ಗಳಿಗೆ ಬರುವ ರಿಪ್ಲೈಗಳಿಂದ ಹಣ ಮಾಡಲು ಅವಕಾಶ; ಶೀಘ್ರದಲ್ಲೇ ಈ ಸೌಲಭ್ಯ; ಇದು ಹೇಗೆ ಸಾಧ್ಯ?
ಈ ಸಮಿತಿ ಮಾಡಿದ ಶಿಫಾರಸುಗಳ ಬಗ್ಗೆ ಸಂಬಂಧಿತ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಆರ್ಬಿಐ ಪ್ರತಿಕ್ರಿಯೆಗಳನ್ನು ಆಹ್ವಾನಿಸಿತ್ತು. ಈ ಪ್ರತಿಕ್ರಿಯೆಗಳನ್ನು ಪರಿಶೀಲಿಸಿರುವ ಆರ್ಬಿಐ ತನ್ನ ಸಮಿತಿಯ ಕೆಲ ಶಿಫಾರಸುಗಳನ್ನು ಜಾರಿಗೊಳಿಸಲು ನಿರ್ಧರಿಸಿರುವುದು ತಿಳಿದುಬಂದಿದೆ.
ಬ್ಯಾಂಕ್ನಲ್ಲಿ ಸಾಲದ ಖಾತೆ ಮುಗಿದ ಬಳಿಕ ನಿರ್ದಿಷ್ಟ ಅವಧಿಯೊಳಗೆ ಅಡಮಾನದ ಆಸ್ತಿದಾಖಲೆಗಳನ್ನು ಗ್ರಾಹಕರಿಗೆ ಮರಳಿಸಬೇಕು. ಈ ಗಡುವು ಮೀರಿದರೆ ಅಷ್ಟು ವಿಳಂಬ ಅವಧಿಗೆ ಪರಿಹಾರ ಅಥವಾ ದಂಡವನ್ನು ಬ್ಯಾಂಕುಗಳು ಗ್ರಾಹರಿಗೆ ನೀಡಬೇಕು.
ಒಂದು ವೇಳೆ, ಆಸ್ತಿದಾಖಲೆ ಕಳೆದುಹೋದರೆ ಆ ದಾಖಲೆಗಳ ಸರ್ಟಿಫೈಡ್ ಕಾಪಿಗಳನ್ನು ಪಡೆಯಲು ಬ್ಯಾಂಕು ತನ್ನದೇ ಖರ್ಚಿನಲ್ಲಿ ಗ್ರಾಹಕರಿಗೆ ನೆರವಾಗಬೇಕು. ಜೊತೆಗೆ ವಿಳಂಬಗೊಂಡ ಸಮಯದ ಆಧಾರದ ಮೇಲೆ ಗ್ರಾಹಕರಿಗೆ ಪರಿಹಾರವನ್ನೂ ಕೊಡಬೇಕು ಎಂದು ಆರ್ಬಿಐನ ಈ ಸಮಿತಿ ತನ್ನ ಶಿಫಾರಸಿನಲ್ಲಿ ಸಲಹೆ ನೀಡಿತ್ತು.
ಬ್ಯಾಂಕುಗಳು ದೊಡ್ಡ ಮೊತ್ತದ ಸಾಲ ಕೊಡಲು ಮೂಲ ಆಸ್ತಿಪತ್ರಗಳನ್ನು ಅಡಮಾನವಾಗಿ ಪಡೆಯುತ್ತವೆ. ಸಾಲ ಪೂರ್ಣವಾಗಿ ತೀರಿದ ಬಳಿಕವಷ್ಟೇ ಈ ದಾಖಲೆಗಳನ್ನು ಗ್ರಾಹಕರಿಗೆ ಮರಳಿಸುತ್ತವೆ. ಆದರೆ ಸಾಲ ಮುಗಿದು ಬಹಳ ದಿನಗಳಾದರೂ ಆಸ್ತಿಪತ್ರಗಳನ್ನು ಮರಳಿಸುತ್ತಿಲ್ಲ ಎಂಬ ದೂರಗಳು ಬಹಳ ಕೇಳಿಬಂದಿದ್ದವಂತೆ. ಈ ಹಿನ್ನೆಲೆಯಲ್ಲಿ ಆರ್ಬಿಐನ ಸಮಿತಿ ಈ ಸಮಸ್ಯೆಯನ್ನು ಪರಿಶೀಲಿಸಿ ನಿಯಮ ರೂಪಿಸಲು ಸಲಹೆ ನೀಡಿದೆ. ಆದರೆ, ಗ್ರಾಹಕರಿಗೆ ಎಷ್ಟು ಪರಿಹಾರ ಕೊಡಬೇಕು ಎಂಬ ಬಗ್ಗೆ ನಿರ್ದಿಷ್ಟವಾಗಿ ಮಾಹಿತಿ ಗೊತ್ತಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ