Ancestor Property: ಪಿತ್ರಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು
ಪಿತ್ರಾರ್ಜಿತ ಆಸ್ತಿ ಅಂದರೇನು ಅದಕ್ಕೆ ತೆರಿಗೆ ಲೆಕ್ಕಾಚಾರ ಹಾಕುವುದು ಹೇಗೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.
ಜೈಕುಮಾರ್ ಕಳೆದ 20 ವರ್ಷದಿಂದ ಜೈಪುರದಲ್ಲಿ ವಾಸಿಸುತ್ತಿದ್ದಾರೆ. ಅವರ ತಾತ ಈ ಮನೆಯನ್ನು 2001ರಲ್ಲಿ 10 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಜೈಕುಮಾರ್ ಈಗ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ಜೈಪುರದ ಮನೆಯನ್ನು ಮಾರಾಟ ಮಾಡಲು ಇಚ್ಛಿಸಿದ್ದಾರೆ. ಈ ಮನೆ ಮಾರಾಟ ಮಾಡಿದ ನಂತರ ತೆರಿಗೆ ಕಟ್ಟಬೇಕೆ, ಬೇಡವೇ ಎಂಬ ವಿಚಾರ ಕುರಿತು ವ್ಯಕ್ತವಾದ ಅಭಿಪ್ರಾಯಗಳು ಜೈಕುಮಾರ್‌ರನ್ನು ಗೊಂದಲಕ್ಕೆ ದೂಡಿವೆ. ಜೈಕುಮಾರ್ ಗೊಂದಲ ನಿವಾರಣೆಗೆ ನಮ್ಮ ಕೆಲ ಕಾನೂನು ಸಲಹೆಗಳು ಹೀಗಿವೆ. ಮೊದಲಿಗೆ, ಈ ವಿಚಾರವನ್ನು ಅರಿಯೋಣ. ಆದಾಯ ತೆರಿಗೆ ಕಾಯ್ದೆ ಪ್ರಕಾರ, ಪಿತ್ರಾರ್ಜಿತ ಆಸ್ತಿ ಅಂದರೆ ತಂದೆ, ತಂದೆ ಕಡೆಯ ತಾತ ಹಾಗೂ ಮುತ್ತಾತನಿಂದ ಆನುವಂಶಿಕವಾಗಿ ಬಂದದ್ದು. ತಾಯಿ ಕಡೆಯಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಆನುವಂಶಿಕ ತೆರಿಗೆ ಭಾರತದಲ್ಲಿ ಅನ್ವಯ ಆಗುವುದಿಲ್ಲ. ನೀವು ಆನುವಂಶಿಕವಾಗಿ ಪಡೆಯುವ ಆಸ್ತಿಗೆ ಮಾರಾಟ ಮಾಡಲು ನಿರ್ಧಾರ ಮಾಡುವವರೆಗೂ ತೆರಿಗೆ ಪಾವತಿಸಬೇಕಿರುವುದಿಲ್ಲ. ಹೌದು, ನೀವು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯಿಂದ ಗಳಿಸಿದ ಆದಾಯವನ್ನು ಆದಾಯ ಎಂದು ಪರಿಗಣಿಸುವುದರಿಂದ ಅದು ಕ್ಯಾಪಿಟಲ್ ಗೇಯ್ನ್ಸ್ (Capital Gains) ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದರೆ ನೀವು ತೆರಿಗೆ ಪಾವತಿಸಬೇಕು.
ಈಗ ಬರುವ ಪ್ರಮುಖ ಪ್ರಶ್ನೆಯೆಂದರೆ, ತೆರಿಗೆ ಎಷ್ಟಾಗುತ್ತದೆ ಎಂದು? ಪಿತ್ರಾರ್ಜಿತವಾದ ಆಸ್ತಿಯನ್ನು ಮಾರಾಟ ಮಾಡುವಾಗ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬುದು ನೀವು ಎಷ್ಟು ಕಾಲ ಅದರ ಮಾಲೀಕತ್ವ ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿಸಿರುತ್ತದೆ. ನೀವು 24 ತಿಂಗಳುಗಳಿಗೂ ಅಧಿಕ ಕಾಲ ಆಸ್ತಿಯನ್ನು ನಿಮ್ಮ ಒಡೆತನದಲ್ಲಿ ಇರಿಸಿಕೊಂಡಿದ್ದರೆ ಶೇಕಡಾ 20.8ರಷ್ಟು ಪ್ರಮಾಣದ ತೆರಿಗೆ, ಅಂದರೆ ದೀರ್ಘಕಾಲೀನ ಕ್ಯಾಪಿಟಲ್ ಗೇಯ್ನ್ಸ್ ಪಾವತಿಸಬೇಕು. ನೀವು 24 ತಿಂಗಳಿಗೂ ಕಡಿಮೆ ಅವಧಿಗೆ ಆಸ್ತಿ ಇರಿಸಿಕೊಂಡಿದ್ದರೆ ಅಲ್ಪಾವಧಿ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಅನ್ವಯವಾಗುತ್ತದೆ. ತೆರಿಗೆ ಪ್ರಮಾಣ ನಿಮ್ಮ ಆದಾಯದ ಮೇಲೆ ಅವಲಂಬಿಸಿರುತ್ತದೆ.
ತೆರಿಗೆ ಹಾಗೂ ಹೂಡಿಕೆ ತಜ್ಞರಾದ ಬಲವಂತ್ ಜೈನ್ ವಿವರಿಸುವುದು ಹೀಗೆ: ಪಿತ್ರಾರ್ಜಿತ ಆಸ್ತಿ ನಿಮ್ಮ ವಶದಲ್ಲಿದ್ದ ಅವಧಿ ಬಹಳ ಮುಖ್ಯ. ಈ ಅವಧಿಯನ್ನು ಮೂಲ ಮಾಲೀಕರು ಆಸ್ತಿ ಖರೀದಿಸಿದ ದಿನದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಸ್ವತ್ತಿನ, ಈಗಿನ ಬೆಲೆ ಲೆಕ್ಕ ಹಾಕಲು ಸರ್ಕಾರ ವಾರ್ಷಿಕ ಸೂಚ್ಯಂಕ ಸಿದ್ಧಪಡಿಸಿದೆ. 2001ರಲ್ಲಿ ಈ ಸೂಚ್ಯಂಕ 100 ಇತ್ತು. 2003ರಲ್ಲಿ ಅದು 109 ಆಯಿತು. 2020ರಲ್ಲಿ ಅದೀಗ 317ಕ್ಕೆ ಮುಟ್ಟಿದೆ. ಈಗ, ನೀವು ಬೆಲೆ ಸೂಚ್ಯಂಕವನ್ನು ಹೇಗೆ ತಿಳಿದುಕೊಳ್ಳುತ್ತೀರಾ? ಈ ಸ್ವತ್ತನ್ನು 10 ಲಕ್ಷ ರೂಪಾಯಿಗೆ ಖರೀದಿಸಲಾಯಿತು. ಇದನ್ನು ಈಗಿನ ಸೂಚ್ಯಂಕದಿಂದ ಗುಣಿಸಿ 2003ರ ಸೂಚ್ಯಂಕದಿಂದ ಭಾಗಿಸಿದಾಗ ಆಸ್ತಿಯ ಈಗಿನ ಬೆಲೆ 29.08 ಲಕ್ಷ ರೂಪಾಯಿ ಎಂದು ನಿರ್ಧಾರವಾಗುತ್ತದೆ. ಹಾಗಿದ್ದರೆ ತೆರಿಗೆ ಹೇಗೆ? ಇದಕ್ಕೆ, ಈಗಿನ ಬೆಲೆಯಾದ 29.08 ಲಕ್ಷ ರೂಪಾಯಿಯಿಂದ ಖರೀದಿ ದರ 10 ಲಕ್ಷ ರೂಪಾಯಿ ಕಳೆಯಬೇಕು. ಆಗ ಕ್ಯಾಪಿಟಲ್ ಗೇಯ್ನ್ಸ್ 19.08 ಲಕ್ಷ ರೂಪಾಯಿ ಆಗುತ್ತದೆ. ಇದರ ಮೇಲೆ ತೆರಿಗೆ ಶೇಕಡಾ 20.8ರಂತೆ 3.96 ಲಕ್ಷ ರೂಪಾಯಿ ಪಾವತಿಸಬೇಕು. ಈ ಆಸ್ತಿಯು 2001ರ ನಂತರ ಖರೀದಿಸಿದ್ದು, 2001ಕ್ಕೂ ಮೊದಲು ಖರೀದಿಸಿದ ಆಸ್ತಿಗಳಿಗೆ ನೀವು ಸರ್ಕಾರದಿಂದ ಅಧಿಕೃತಗೊಂಡ ಸರ್ವೇಯರ್ ಸೇವೆ ಮೂಲಕ ಬೆಲೆ ನಿಗದಿ ಪಡಿಸಿಕೊಳ್ಳಬಹುದು.
ಹಾಗಾದರೆ ಜೈಕುಮಾರ್‌ಗೆ ತಿಳಿದದ್ದೇನು? ಯಾವುದೇ ಆಸ್ತಿ ಆನುವಂಶಿಕವಾಗಿ ಅಥವಾ ವಿಲ್ ಮೂಲಕ ಪಡೆದರೆ ಯಾವುದೇ ತೆರಿಗೆ ವಿಧಿಸುವುದಿಲ್ಲ. ಆದರೆ ಅದನ್ನು ಮಾರಾಟ ಮಾಡಿದಾಗ ಗಳಿಸಿದ ಹಣನ್ನು ಆದಾಯ ಎಂದು ಪರಿಗಣಿಸಲಾಗುವುದು. ಈ ಆದಾಯ ಕ್ಯಾಪಿಟಲ್ ಗೇಯ್ನ್ಸ್ ಅಡಿಯಲ್ಲಿ ಬರುವುದರಿಂದ ತೆರಿಗೆ ಪಾವತಿಸಬೇಕಾಗುತ್ತದೆ.
ನಮ್ಮ ಸಲಹೆ ಏನು? ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡುವ ಮೊದಲು ಕಾನೂನು ದಸ್ತಾವೇಜು ಪೂರ್ಣಗೊಳಿಸಿ. ತೆರಿಗೆ ಸಲಹೆಗಾರರಿಂದ ತೆರಿಗೆ ಲೆಕ್ಕ ಹಾಕಿಸಿ. ತೆರಿಗೆ ಉಳಿತಾಯಕ್ಕೆ ಹೂಡಿಕೆ ಅವಕಾಶಗಳ ಕಡೆಯೂ ಗಮನ ಹರಿಸಿ. ಕಡೆಯದಾಗಿ, ನೀವು ಆಸ್ತಿ ಮಾರಾಟ ಮಾಡುವುದರಿಂದ ತೆರಿಗೆ ಹೊರೆ ಎದುರಿಸುತ್ತಿದ್ದರೆ ಅದನ್ನು ಉಳಿಸಲು ಯತ್ನಿಸಿ. ಈ ತೆರಿಗೆ ಉಳಿಸುವುದು ಹೇಗೆ? ಆ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುತ್ತೇವೆ.
ಇದನ್ನೂ ಓದಿ: How To: ಬ್ಯಾಂಕ್ನಲ್ಲಿ ಅಡಮಾನ ಮಾಡಿದ ಆಸ್ತಿ ಮಾರಾಟ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ