ಎಲ್ಲಿಂದ ಇನ್ಶೂರೆನ್ಸ್ ಖರೀದಿ ಮಾಡ್ಬೇಕು… ಆನ್ ಲೈನ್ ಬೆಸ್ಟೋ,, ಏಜೆಂಟರೋ? ಇಲ್ಲಿದೆ ಉತ್ತಮ ಮಾಹಿತಿ

ಎಲ್ಲಿಂದ ಇನ್ಶೂರೆನ್ಸ್ ಖರೀದಿ ಮಾಡ್ಬೇಕು... ಆನ್ ಲೈನ್ ಬೆಸ್ಟೋ,, ಏಜೆಂಟರೋ? ಇಲ್ಲಿದೆ ಉತ್ತಮ ಮಾಹಿತಿ
ಎಲ್ಲಿಂದ ಇನ್ಶೂರೆನ್ಸ್ ಖರೀದಿ ಮಾಡ್ಬೇಕು

ಸದಾ ಬ್ಯುಸಿ ಲೈಫ್ ನಲ್ಲಿ ವಿಮೆ ಅಥವಾ ಇನ್ಶೂರೆನ್ಸ್ ಖರೀದಿ ಮಾಡುವುದು ಅನಿವಾರ್ಯತೆಗಳಲ್ಲಿ ಒಂದಾಗಿದೆ. ಈ ವಿಮೆ ಖರೀದಿಗೆ ಸಾಕಷ್ಟು ಗೊಂದಲಗಳಿರುತ್ತವೆ. ಎಲ್ಲಿ ಖರೀದಿ ಮಾಡಬೇಕು?

TV9kannada Web Team

| Edited By: Vivek Biradar

May 14, 2022 | 4:35 PM

ಆಧುನಿಕ ಓಡುವ ಜಗತ್ತಿನಲ್ಲಿ ಸದಾ ಬ್ಯುಸಿ ಲೈಫ್ ನಲ್ಲಿ ವಿಮೆ ಅಥವಾ ಇನ್ಶೂರೆನ್ಸ್ (Insurance) ಖರೀದಿ ಮಾಡುವುದು ಅನಿವಾರ್ಯತೆಗಳಲ್ಲಿ ಒಂದಾಗಿದೆ. ಈ ವಿಮೆ ಖರೀದಿಗೆ ಸಾಕಷ್ಟು ಗೊಂದಲಗಳಿರುತ್ತವೆ. ಎಲ್ಲಿ ಖರೀದಿ ಮಾಡಬೇಕು? ಯಾವ ರೀತಿ ಖರೀದಿ ಮಾಡಬೇಕು? ಹೇಗೆ ಖರೀದಿ ಮಾಡಬೇಕು? ಆನ್ ಲೈನ್ ವೆಬ್ ಅಗ್ರಿಗೇಟರ್ ಒಳ್ಳೆಯದೋ ಅಥವಾ ಬ್ರೋಕರ್ ಗಳ ಬಳಿ ಖರೀದಿ ಮಾಡುವುದು ಉತ್ತಮವೋ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಮುಂದೆ ನೀಡುತ್ತೇವೆ.

ಹಲವಾರು ಆನ್ ಲೈನ್ ವೆಬ್ ಅಗ್ರಿಗೇಟರ್ ಗಳು ವಿಧವಾದ ವಿಮಾ ಕಂಪನಿಗಳ ಜತೆ ಟೈ ಅಪ್ ಮಾಡಿಕೊಂಡು ವಿಮೆ ಮಾಡಿಸಿಕೊಳ್ಳಲು ನಿಮ್ಮನ್ನು ಪ್ರೋತ್ಸಾಹಿಸುತ್ತಿರುತ್ತವೆ. ಹಾಗೇ ಡಿಸ್ಕೌಂಟ್ ನೀಡುವ ಏಜೆಂಟ್ ನಿಮಗೆ ಈ ಪಾಲಿಸಿ ಅತ್ಯುತ್ತಮ ಆ ಪಾಲಿಸಿ ಅತ್ಯುತ್ತಮ ಎಂದು ಹೇಳುತ್ತಾರೆ. ಲಾಭಗಳ ಬಗ್ಗೆ ಗಂಟೆಗಟ್ಟಲೇ ಮಾತನಾಡುತ್ತಾರೆ. ಹಾಗಾದರೆ ಯಾವ ಇನ್ಶೂರೆನ್ಸ್ ಬೆಸ್ಟ್! ಉದಾಹರಣೆ ಮೂಲಕ ನೋಡಿದಾಗ ಸರಳವಾಗಿ ಅರ್ಥವಾಗುತ್ತದೆ.

ಶರತ್ ಎಂಬ ವ್ಯಕ್ತಿಗೆ ಬೇಸಿಕ್ ಟರ್ಮ್ ಲೈಫ್ ಕವರ್ ಬೇಕಾಗಿದೆ. ಇದಕ್ಕಾಗಿ ಆತ ವೆಬ್ ಸೈಟ್ ನಲ್ಲಿ ಸರ್ಚ್ ಮಾಡಿದಾಗ 40 ವಿವಿಧ ರೀತಿಯ ವಿಮಾ ಕಂಪನಿಗಳ ಆಯ್ಕೆಗಳು ಕಣ್ಮುಂದೆ ಮುಂದೆ ಬರುತ್ತವೆ. ಇನ್ನೊಂದೆಡೆ ವಿಮೆ ಏಜೆಂಟ್ ಈ ಎಲ್ಲ ಗೊಂದಲಗಳಿಗೆ ತಲೆಕೊಡಿಸಿಕೊಳ್ಳಬೇಡಿ ಎಂದು ಹೇಳುತ್ತಾರೆ. ನಿಮಗೆ ನಾನು ಉತ್ತಮವಾದ ಪಾಲಿಸಿ ಕೊಡುತ್ತೇನೆ ಎಂದು ಆತ ತಿಳಿಸುತ್ತಾರೆ. ನೀವು ಪಡೆಯುವ ಮನಿಬ್ಯಾಕ್ ಮೊತ್ತ ನನ್ನ ಕಮಿಷನ್ ಗೆ ಸಮ ಎನ್ನುತ್ತಾರೆ. ಹಾಗಾದರೆ ಶರತ್ ಈಗ ಏನು ಮಾಡಬೇಕು? ಮಾರ್ಕೆಟ್ ನಲ್ಲಿ ವಿವಿಧ ರೀತಿಯ ಇನ್ಶುರೆನ್ಸ್ ಪಾಲಿಸಿಗಳು ಲಭ್ಯ. ಆದರೆ ಓರ್ವ ವ್ಯಕ್ತಿಗೆ ಒಂದೇ ಇನ್ಶುರೆನ್ಸ್ ಪಾಲಿಸಿ ಬೇಕಾಗಿರುವುದು.

ನಾವೆಲ್ಲರು ಉಳಿತಾಯದಲ್ಲಿ ನಂಬಿಕೆ ಇರಿಸಿದ್ದೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಈ ನಿಟ್ಟಿನಲ್ಲಿ ಉತ್ತಮ ಆಯ್ಕೆ ಎಂದರೆ, ಯಾವ ವಿಮಾ ಪಾಲಿಸಿ ಬಗ್ಗೆ ಮಾಹಿತಿ ಪಾರದರ್ಶಕವಾಗಿ ಲಭ್ಯವಿದೆಯೋ ಅದನ್ನು ಖರೀದಿಸುವುದು. ನೀವು ವಿಮೆ ಕೊಳ್ಳಲು 5 ಮಾರ್ಗಗಳಿವೆ. ಈ ಐದು ಮಾರ್ಗಗಳು ನಿಮ್ಮನ್ನು ಸರಿಯಾದ ವಿಮೆ ಖರೀದಿಸುವಂತೆ ಮಾಡುತ್ತದೆ.

ಇನ್ಶುರೆನ್ಸ್ ವೆಬ್ ಅಗ್ರಿಗೇಟರ್ಸ್(ಮೊದಲನೇ ಆಯ್ಕೆ- ವಿಮಾ ವೆಬ್ ಸಂಗ್ರಾಹಕರು) : ಇದು ಶೇಕಡ 100ರಷ್ಟು ಡಿಜಿಟಲ್. ವೆಬ್ ಸೈಟ್ ಅಥವಾ ಮೊಬೈಲ್ ಆಪ್ ನಲ್ಲಿ ನೀವು ‘ಹುಡುಕಿದಾಗ ವಿವಿಧ ಕಂಪನಿಗಳ ಹಲವು ಉತ್ಪನ್ನಗಳು ಕಂಡು ಬರುತ್ತವೆ. ನೀವು ಈ ಪಾಲಿಸಿಗಳ ಪ್ರೀಮಿಯಮ್ ನಂತಹ ವಿವಿಧ ರೀತಿಯ ಅಂಶಗಳನ್ನು ಹೋಲಿಕೆ ಮಾಡಿ ನೋಡಬಹುದು.

ಪ್ರಸ್ತುತ ಸುಮಾರು 22 ವಿವಿಧ ವೆಬ್ ಅಗ್ರಿಗೇಟರ್ ಗಳು ದೇಶದಲ್ಲಿದ್ದು, ಇವು ಮಾರ್ಚ್ 2021ರ ವರೆಗೆ 72,59,123 ವಿಮಾ ಪಾಲಿಸಿಗಳನ್ನು ಮಾರಾಟ ಮಾಡಿವೆ. ಇದರ ಒಟ್ಟು ಪ್ರಿಮೀಯಂ ಮೊತ್ತ 4,169 ಕೋಟಿ ರೂಪಾಯಿ. ಅಗ್ರಿಗ್ರೇಟರ್ ಗಳು ಕಂಪನಿಗಳು ತೆಗೆದುಕೊಳ್ಳುವ ಕಮಿಷನ್ ನಿಂದ ಹಣ ಗಳಿಸುತ್ತಾರೆ. ಈ ಎಲ್ಲ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯವಿದ್ದು, ಯಾವುದಾದರೂ ಅಸ್ಪಷ್ಟವಿದ್ದಲ್ಲಿ, ನೀವು ಕಾಲ್ ಸೆಂಟರ್ ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಈ ಎಕ್ಸಿಕ್ಯೂಟಿವ್ ಗಳು ವಿಮಾ ತಜ್ಞರಲ್ಲ. ಆದರೆ, ಕಂಪನಿಯ ಪ್ರತಿನಿಧಿಗಳಾಗಿದ್ದು, ನಿಮ್ಮ ಪ್ರಶ್ನೆಗಳಿಗೆ ಪರಿಹಾರ ಸೂಚಿಸಲು ಕಾಲ್ ಸೆಂಟರ್ ನಲ್ಲಿ ಕುಳಿತಿರುತ್ತಾರೆ.

ವಿಮಾ ಏಜೆಂಟ್: ಐಆರ್ ಡಿಎಐನ ವಾರ್ಷಿಕ ವರದಿಯ ಪ್ರಕಾರ ಸಾಮಾನ್ಯ, ಜೀವ ಹಾಗೂ ಆರೋಗ್ಯ ವಿಮೆ ಏಜೆಂಟರ ಒಟ್ಟು ಸಂಖ್ಯೆ ದೇಶದಲ್ಲಿ 38.77ಲಕ್ಷ ಇದೆ. ಇವರೆಲ್ಲರು ಐಆರ್ ಡಿಎನೊಂದಿಗೆ ನೋಂದಾಯಿತರಾಗಿದ್ದಾರೆ. ಇವರು ವಿಮಾ ಕಂಪನಿಗಳೊಂದಿಗೆ ಒಪ್ಪಂದ ಹೊಂದಿದ್ದಾರೆ. ವಿಮಾ ಕಂಪನಿಗಳ ಏಜೆಂಟರು ಒಂದು ನಿರ್ದಿಷ್ಟ ಕಂಪನಿಯ ಪಾಲಿಸಿಗಳನ್ನಷ್ಟೇ ಮಾರಾಟ ಮಾಡಬಹುದಿರುತ್ತದೆ. ಈ ಏಜೆಂಟರಿಗೆ ಪಾಲಿಸಿ ಮಾರಾಟ ಮಾಡಿದಾಗ ಕಂಪನಿಯಿಂದ ಮೊದಲ ಪ್ರೀಮಿಯಂ ಮೊತ್ತ ದೊರೆಯುವ ಜೊತೆಗೆ ಪ್ರತಿ ಬಾರಿ ಪಾಲಿಸಿಯನ್ನು ನವೀಕರಿಸಿದಾಗ ಕಮಿಷನ್ ದೊರೆಯುತ್ತದೆ. ಆದ್ದರಿಂದಲೇ ಈ ವಿಮಾ ಏಜೆಂಟರು ಒಂದೇ ಕಂಪನಿಯ ಉತ್ಪನ್ನಗಳ ಬಗ್ಗೆ ಪ್ರತಿ ಬಾರಿ ಹೇಳುತ್ತಿರುತ್ತಾರೆ.

ಹಲವು ಬಾರಿ, ವಿಮಾ ಏಜೆಂಟರು ಪರಿಚಿತರೊ ಅಥವಾ ಸಂಬಂಧಿಕರೊ ಆಗಿದ್ದು, ನಿಮಗೆ ಪಾಲಿಸಿ ಮಾರಾಟ ಮಾಡಲು ಉದ್ದೇಶಿಸಿರುತ್ತಾರೆ. ಆದರೆ ನೀವು ಮಾರಾಟ ಮಾಡುತ್ತಿರುವ ವ್ಯಕ್ತಿಗೆ ಪಾಲಿಸಿ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಆ ಕ್ಷೇತ್ರದಲ್ಲಿ ಆತನಿಗಿರುವ ಅನುಭವದ ಬಗ್ಗೆಯೂ ಪರಿಶೀಲಿಸಬೇಕು. ಆತನ ಸಾಧನೆ ಹಾಗೂ ಹಿನ್ನೆಲೆ ಕುರಿತು ಮಾಹಿತಿ ಕಲೆಹಾಕಬೇಕು. ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳುವ ಸಲುವಾಗಿ ವಿಮೆ ಮಾಡಿಕೊಳ್ಳಲು ಹೋದರೆ ಸಿಗುವ ಲಾಭ ಕಳೆದುಕೊಳ್ಳಬೇಕಾದೀತು ಎಚ್ಚರ!

ಮೂರನೇ ಆಯ್ಕೆ ವಿಮಾ ಬ್ರೋಕರ್: ವಿಮಾ ಬ್ರೋಕರ್ ಗಳು ಒಂದಕ್ಕಿಂತ ಹೆಚ್ಚು ಕಂಪನಿಗಳ ವಿಮೆಯನ್ನು ಮಾರಾಟ ಮಾಡುವ ಸಂಸ್ಥೆಗಳಾಗಿರುತ್ತವೆ. ಇವರು ಗ್ರಾಹಕರಿಗೆ ಸೇವೆ ನೀಡಲು ಐಆರ್ ಡಿಎಐನಿಂದ ಲೈಸನ್ಸ್ ಪಡೆದಿರಬೇಕು. ಐಆರ್ ಡಿಎಐ ವೈಬ್ ಸೈಟ್ ನಿಂದ ನೀವು ಸಂಬಂಧಿತ ಎಲ್ಲ ಮಾಹಿತಿಯನ್ನು ಪಡೆಯಬಹುದು. ಮಾರ್ಚ್ 2021ರ ವೇಳೆಗೆ ದೇಶದಲ್ಲಿ 486 ಲೈಸೆನ್ಸ್ ಹೊಂದಿರುವ ಬ್ರೋಕರ್ ಗಳಿದ್ದರು. ಇವರು ನಿಮಗೆ ಸಲಹೆ ನೀಡುವ ಜೊತೆಗೆ ಎಲ್ಲ ರೀತಿಯ ಪೇಪರ್ ವರ್ಕ್ ಸಹ ಮಾಡುತ್ತಾರೆ . ವಿಮಾ ಕಂಪನಿಗಳು ಈ ಬ್ರೋಕರ್ ಗಳಿಗೆ ಬ್ರೋಕರೇಜ್ ಶುಲ್ಕ ಅಥವಾ ಕಮಿಷನ್ ನೀಡುತ್ತವೆ. ಈ ಬ್ರೋಕರೇಜ್ ಕಂಪನಿಗಳು ಎರಡು ಅಥವಾ ಮೂರು ಕಂಪನಿಗಳ ವಿಮಾ ಪಾಲಿಸಿಗಳನ್ನು ಮಾರಾಟ ಮಾಡಲು ಅನುಮತಿ ಹೊಂದಿರುವುದರಿಂದ ಇವರು ನಿಮಗೆ ಹೆಚ್ಚಿನ ಆಯ್ಕೆ ನೀಡುತ್ತಾರೆ.

ಬ್ಯಾಂಕುಗಳು: ಬ್ಯಾಂಕುಗಳು ವಿಮಾ ಕಂಪನಿಗಳ ಕಾರ್ಪೋರೇಟ್ ಏಜೆಂಟ್ ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇದನ್ನು ಬ್ಯಾಂಕ್ ಅಶುರೆನ್ಸ್ ಸಿಸ್ಟಮ್ ಎಂದು ಕರೆಯುತ್ತಾರೆ. ಬ್ಯಾಂಕುಗಳು ಜೀವವಿಮೆ ಪಾಲಿಸಿ, ಗುಂಪು ವಿಮೆ ಪಾಲಿಸಿ ಹಾಗೂ ಆರೋಗ್ಯ ವಿಮೆ ಪಾಲಿಸಿಗಳನ್ನು ನಿಮ್ಮ ಖಾತೆಯೊಂದಿಗೆ ಹೊಂದಿಸಿ, ಮಾರಾಟ ಮಾಡುತ್ತವೆ. ಅದೇ ರೀತಿಯಾಗಿ ನಿಮಗೆ ಪ್ರಯಾಣ ವಿಮೆ ಮಾರಾಟ ಮಾಡುವ ಟ್ರಾವಲ್ ಏಜೆಂಟರನ್ನು ಕಾರ್ಪೋರೇಟ್ ಏಜೆಂಟ್ ಗಳೆಂದು ಎಂದು ಕರೆಯುತ್ತಾರೆ. ವಿಮಾ ಪಾಲಿಸಿಯನ್ನು ನೇರವಾಗಿ ವಿಮೆ ಕಂಪನಿಯಿಂದಲೇ ಖರೀದಿಸಬಹುದು. ಪ್ರತಿಯೊಂದು ವಿಮಾ ಕಂಪನಿ ಅದರದೇ ಆದ ಮಾರಾಟ ಕಚೇರಿಗಳನ್ನು ಹೊಂದಿದೆ. ನೀವು ಈ ವಿಮಾ ಕಂಪನಿಗಳ ಶಾಖೆಗಳಿಗೆ ಭೇಟಿ ನೀಡಿ ಅಥವಾ ಆನ್ ಲೈನ್ ಮೂಲಕ ಪಾಲಿಸಿ ಖರೀದಿಸಬಹುದು.

ಒಂದು ವಿಮೆ ಪಾಲಿಸಿಯನ್ನು ಖರೀದಿಸುವ ಮೊದಲು ಸಾಕಷ್ಟು ಮಾಹಿತಿ ಕಲೆ ಹಾಕಿ. ಡಿಸ್ಕೌಂಟ್ ಗಳಿಗೆ ಮಾರು ಹೋಗದಿರಿ ಹಾಗೂ ನಿಮಗೆ ಏಜೆಂಟರು ಪರಿಚಿತರು ಎಂದು ಕಣ್ಣುಮುಚ್ಚಿ ಖರೀದಿಸಬೇಡಿ. ಸೂಕ್ತ ವಿಮಾ ಉತ್ಪನ್ನವನ್ನು ಖರೀದಿಸಲು ನಿರ್ಧರಿಸುವ ಮೊದಲು ನಿಮ್ಮ ಹಣಕಾಸು ತಜ್ಞರಿಂದ ಸಲಹೆ ಪಡೆಯಿರಿ. ನೆನಪಿರಲಿ… ಎಲ್ಲ ವಿಮಾ ಮಾರಾಟಗಾರರು, ಮಾರಾಟಗಾರರೇ ಹೊರತು ಸಲಹೆಗಾರಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Follow us on

Most Read Stories

Click on your DTH Provider to Add TV9 Kannada