ನವದೆಹಲಿ, ಮಾರ್ಚ್ 14: ಸಗಟು ಮಾರಾಟ ದರ ಆಧಾರಿತ ಹಣದುಬ್ಬರ (WPI based Inflation) ಫೆಬ್ರುವರಿಯಲ್ಲಿ ಶೇ. 0.2ಕ್ಕೆ ಇಳಿದಿದೆ. ಜನವರಿಯಲ್ಲಿ ಹೋಲ್ಸೇಲ್ ಇನ್ಫ್ಲೇಶನ್ ಶೇ. 0.27ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಫೆಬ್ರುವರಿಯಲ್ಲಿ ಹಣದುಬ್ಬರ ಅಲ್ಪ ಇಳಿಕೆ ಆಗಿದೆ. ರೀಟೇಲ್ ಹಣದುಬ್ಬರದಲ್ಲೂ (retail inflation) ಈ ಬಾರಿ ಸ್ವಲ್ಪ ಕಡಿಮೆ ಆಗಿದೆ. ಶೇ. 5.10ರಷ್ಟಿದ್ದ ರೀಟೇಲ್ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 5.09ಕ್ಕೆ ಇಳಿದಿದೆ.
ಭಾರತದಲ್ಲಿ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ದರ 2023ರ ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಮೈನಸ್ನಲ್ಲಿ ಇತ್ತು. ನವೆಂಬರ್ನಲ್ಲಿ ಸೊನ್ನೆಗಿಂತ ಮೇಲೆ ಏರಿತ್ತು. 2023ರ ನವೆಂಬರ್ನಲ್ಲಿ ಹೋಲ್ಸೇಲ್ ಹಣದುಬ್ಬರ ಶೇ. 0.26 ಇತ್ತು. ಫೆಬ್ರುವರಿಯವರೆಗೂ ಈ ದರದಲ್ಲಿ ಹೆಚ್ಚಿನ ವ್ಯತ್ಯಯಗಳಾಗಿಲ್ಲ.
ಆಹಾರ ವಸ್ತು, ತರಕಾರಿ, ಬೇಳೆ ಕಾಳುಗಳ ಬೆಲೆ ಫೆಬ್ರುವರಿಯಲ್ಲಿ ತುಸು ಏರಿಕೆ ಆಗಿದೆ. ಇಂಧನ, ತಯಾರಿಕಾ ಉತ್ಪನ್ನಗಳು ಮೊದಲಾದವರುಗಳ ಬೆಲೆ ತುಸು ಕಡಿಮೆ ಆಗಿರುವುದು ತಿಳಿದುಬಂದಿದೆ.
ಇದನ್ನೂ ಓದಿ: 2024ರ ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಶೇ. 5.09; ಜನವರಿಯಲ್ಲಿ ಔದ್ಯಮಿಕ ಉತ್ಪಾದನೆ ಶೇ. 3.8 ಹೆಚ್ಚಳ
ಆಹಾರದ ಹಣದುಬ್ಬರ ಜನವರಿಯಲ್ಲಿ ಶೇ. 6.85ರಷ್ಟು ಇದ್ದದ್ದು ಫೆಬ್ರುವರಿಯಲ್ಲಿ ಶೇ. 6.95ಕ್ಕೆ ಏರಿದೆ. ತರಕಾರಿಯ ಹಣದುಬ್ಬರ ಜನವರಿಯಲ್ಲಿ ಶೇ. 19.71 ಇದ್ದದ್ದು ಫೆಬ್ರುವರಿಯಲ್ಲಿ ಶೇ. 19.78ಕ್ಕೆ ಏರಿದೆ. ಜನವರಿಯಲ್ಲಿ ಶೇ. 16.06 ಬೇಳೆ ಕಾಳುಗಳಲ್ಲಿನ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 18.48ಕ್ಕೆ ಏರಿದೆ.
ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಬೆಲೆ ಏರಿಕೆ ಫೆಬ್ರುವರಿಯಲ್ಲಿ ಮೈನಸ್ ಶೇ. 0.51ರಷ್ಟು ಇತ್ತು. ಫೆಬ್ರುವರಿಯಲ್ಲಿ ಇದು ಮೈನಸ್ ಶೇ. 1.59ರಷ್ಟಾಗಿದೆ.
ರೀಟೇಲ್ ಮತ್ತು ಹೋಲ್ಸೇಲ್ ಹಣದುಬ್ಬರಗಳ ವ್ಯತ್ಯಾಸವೇನು?
ರೀಟೇಲ್ ಹಣದುಬ್ಬರವು ಚಿಲ್ಲರೆ ಮಾರುಕಟ್ಟೆಯಲ್ಲಿನ ಬೆಲೆಗಳ ಆಧಾರಿತವಾಗಿರುತ್ತದೆ. ಡಬ್ಲ್ಯುಪಿಐ ಹಣದುಬ್ಬರವು ಸಗಟು ಅಥವಾ ಹೋಲ್ಸೇಲ್ ಮಾರುಕಟ್ಟೆಯ ಬೆಲೆಯನ್ನು ಆಧರಿಸಿದ್ದಾಗಿದೆ. ಎರಡೂ ಕೂಡ ಹಣದುಬ್ಬರದ ಸೂಚಕಗಳಾಗಿದ್ದರೂ ರೀಟೇಲ್ ಹಣದುಬ್ಬರವನ್ನು ಆರ್ಬಿಐ ತನ್ನ ವಿಶ್ಲೇಷಣೆಗೆ ಬಳಸಿಕೊಳ್ಳುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ