Hiring Tips: ಯಾರನ್ನು ಹೈರಿಂಗ್ ಮಾಡಿಕೊಳ್ಳಬೇಕು? ಇಂಥವರು ಬೇಡ… 4 ನೇಮಕಾತಿ ಸೂತ್ರ ಬಿಚ್ಚಿಟ್ಟ ನೆಟ್​ಫ್ಲಿಕ್ಸ್ ಒಡೆಯ ಮಾರ್ಕ್ ರಾಂಡೋಲ್ಫ್

|

Updated on: Jun 04, 2023 | 6:00 PM

Netflix Co-Founder Mark Randolph's 4 Tips For Recruiters: ನೆಟ್​ಫ್ಲಿಕ್ಸ್​ನ ಸಹ-ಸ್ಥಾಪಕ ಮಾರ್ಕ್ ರಾಂಡೋಲ್ಫ್ ಅವರು ಹೈರಿಂಗ್ ವಿಚಾರವಾಗಿ ಕಾರ್ಪೊರೇಟ್ ಕಂಪನಿಗಳಿಗೆ ಕೆಲವಿಷ್ಟು ಕಿವಿಮಾತುಗಳನ್ನು ಹೇಳಿದ್ದಾರೆ. ಕಾರ್ಪೊರೇಟ್ ಕಂಪನಿಗಳು ಎಂಥವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಮಾರ್ಕ್ 4 ನೇಮಕಾತಿ ಸೂತ್ರ ಮುಂದಿಟ್ಟಿದ್ದಾರೆ.

Hiring Tips: ಯಾರನ್ನು ಹೈರಿಂಗ್ ಮಾಡಿಕೊಳ್ಳಬೇಕು? ಇಂಥವರು ಬೇಡ... 4 ನೇಮಕಾತಿ ಸೂತ್ರ ಬಿಚ್ಚಿಟ್ಟ ನೆಟ್​ಫ್ಲಿಕ್ಸ್ ಒಡೆಯ ಮಾರ್ಕ್ ರಾಂಡೋಲ್ಫ್
ನೆಟ್​ಫ್ಲಿಕ್ಸ್ ಸಹ-ಸಂಸ್ಥಾಪಕ ಮಾರ್ಕ್ ರಾಂಡೋಲ್ಫ್
Follow us on

ಕೋವಿಡ್ ಬಂದ ಬಳಿಕ ಬಹಳ ಕಂಪನಿಗಳು ಮನಬಂದಂತೆ ಹೈರಿಂಗ್ ಮಾಡಿಕೊಂಡವು. ಈಗ ಇಷ್ಟಬಂದಷ್ಟು ಮಂದಿಯನ್ನು ಕೆಲಸದಿಂದ ಕಿತ್ತೆಸೆಯುತ್ತಿವೆ. ಗೂಗಲ್, ಮೈಕ್ರೋಸಾಫ್ಟ್, ಅಮೇಜಾನ್ ಇತ್ಯಾದಿ ದೈತ್ಯ ಕಂಪನಿಗಳು ಸಾವಿರಾರು ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ (Layoffs), ಮುಂದೆಯೂ ಕಳುಹಿಸುತ್ತಿವೆ. ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರಂತೂ ಟೆಕ್ ಕಂಪನಿಗಳಲ್ಲಿರುವ ಬಹಳಷ್ಟು ಉದ್ಯೋಗಿಗಳು ಆ ಕೆಲಸಕ್ಕೆ ಲಾಯಕ್ಕಾಗಿರುವವರಲ್ಲ, ಅವರನ್ನೆಲ್ಲಾ ಮುಲಾಜಿಲ್ಲದೇ ಕಿತ್ತುಬಿಸಾಡಿ ಎಂದು ಇತ್ತೀಚೆಗೆ ಹೇಳಿದ್ದರು. ಆದರೆ, ನೇಮಕಾತಿ ಮಾಡಿಕೊಳ್ಳುವಾಗ ಸೂಕ್ತ ಎನಿಸಿದ ಉದ್ಯೋಗಿಗಳು ನಂತರ ನಿರುಪಯುಕ್ತ ಆಗಲು ಏನು ಕಾರಣ? ಇದು ರೆಕ್ರೂಟರುಗಳ ದೋಷವೋ, ಉದ್ಯೋಗಿಗಳ ಸಾಮರ್ಥ್ಯ ಕೊರತೆಯೋ? ಇದೇ ವೇಳೆ, ವಿಶ್ವದ ಜನಪ್ರಿಯ ಒಟಿಟಿ ಪ್ಲಾಟ್​ಫಾರ್ಮ್ ನೆಟ್​ಫ್ಲಿಕ್ಸ್​ನ ಸಹಸ್ಥಾಪಕ ಮಾರ್ಕ್ ರಾಂಡೋಲ್ಫ್ ಅವರು (Marc Randolph) ಹೈರಿಂಗ್ ವಿಚಾರವಾಗಿ ಕಾರ್ಪೊರೇಟ್ ಕಂಪನಿಗಳಿಗೆ ಕೆಲವಿಷ್ಟು ಕಿವಿಮಾತುಗಳನ್ನು ಹೇಳಿದ್ದಾರೆ. ಕಾರ್ಪೊರೇಟ್ ಕಂಪನಿಗಳು ಎಂಥವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು? ಅದರಲ್ಲೂ ಕಂಪನಿಯ ಆರಂಭಿಕ ಹಂತದಲ್ಲಿ ಎಂಥ ಉದ್ಯೋಗಿಗಳು ಬೇಕು? ಎಂಬ ಪ್ರಶ್ನೆಗಳಿಗೆ ಬದಲಾಗಿ ಮಾರ್ಕ್ ಅವರು 4 ನೇಮಕಾತಿ ಸೂತ್ರ ಮುಂದಿಟ್ಟಿದ್ದಾರೆ.

ನೆಟ್​ಫ್ಲಿಕ್ಸ್ ಸಹಸಂಸ್ಥಾಪಕ ಮಾರ್ಕ್ ರಾಂಡೋಲ್ಫ್ ಅವರ 4 ನೇಮಕಾತಿ ಸೂತ್ರ

  1. ನಿಮಗೆ ಅತ್ಯಗತ್ಯ ಎನಿಸುವವರೆಗೂ ಆ ವ್ಯಕ್ತಿಯ ನೇಮಕಾತಿ ಬೇಡ. ನೇಮಕಾತಿಗೋಸ್ಕರ ನೇಮಕಾತಿ ಬೇಡ. ಕಂಪನಿಗೆ ಅಗತ್ಯ ಇದ್ದರೆ ಮಾತ್ರ ನೇಮಿಸಿಕೊಳ್ಳಿ
  2. ಕಂಪನಿಯ ಕಾರ್ಯನಿರ್ವಹಣೆಯಲ್ಲಿ ಸಾಮರ್ಥ್ಯದ ಕೊರತೆ ಕಾಡುತ್ತಿದ್ದು, ಅದನ್ನು ಸರಿದೂಗಿಸಬಹುದು ಎಂದನಿಸಿದರೆ ಮಾತ್ರ ನೇಮಕಾತಿ ಮಾಡಿಕೊಳ್ಳಿ
  3. ಯಾವುದೇ ಉದ್ಯೋಗವನ್ನು ನೀವೇ ಸ್ವತಃ ಮಾಡಿದಾಗ ಆ ಕೆಲಸಕ್ಕೆ ಎಂಥವರನ್ನು ನೇಮಿಸಿಕೊಳ್ಳಬೇಕು ಎಂಬ ಸಂಗತಿ ನಿಮಗೆ ಗೊತ್ತಾಗುತ್ತದೆ. ಆಗ ಸೂಕ್ತರನ್ನು ಆಯ್ಕೆ ಮಾಡಬಹುದು.
  4. ಆರಂಭಿಕ ಹಂತದಲ್ಲಿ ನಿಮ್ಮ ವಿಚಾರಕ್ಕೆ ಪುಷ್ಟಿ ನೀಡುವ ಒಬ್ಬ ಉದ್ಯೋಗಿಯು, ನಿಮ್ಮಂತೆಯೇ ಯೋಚಿಸುವ ಮೂವರಿಗಿಂತ ಉತ್ತಮ ಎಂಬುದನ್ನು ನೆನಪಿಟ್ಟುಕೊಳ್ಳಿ

ಇದನ್ನೂ ಓದಿ: Bengalurean’s Case: ಬ್ಯಾಗ್ ಹಾಳಾಗಿದ್ದಕ್ಕೆ ಕುವೇತ್ ಏರ್​ವೇಸ್​ನಿಂದ ಪರಿಹಾರ ಕಕ್ಕಿಸಿದ ಬೆಂಗಳೂರಿಗ; ಗ್ರಾಹಕರ ಹಕ್ಕಿಗೆ ಇದೊಂದು ಮಾದರಿ

ತಮ್ಮ ಲಿಂಕ್ಡ್​ಇನ್ ಖಾತೆಯಲ್ಲಿ ಇತ್ತೀಚೆಗೆ ಅವರು ಈ ಬಗ್ಗೆ ವಿವರಿಸಿ ಒಂದು ಪೋಸ್ಟ್ ಹಾಕಿದ್ದಾರೆ. ತಮ್ಮ ಮೊದಲ ಸೂತ್ರದ ಬಗ್ಗೆ ಬರೆದ ಅವರು, ಒಂದು ಕಂಪನಿ ಆರಂಭಿಸಿದಾಗ ಅದಕ್ಕೆ ಸಂಪನ್ಮೂಲ ಕೊರತೆ ಇದ್ದೇ ಇರುತ್ತದೆ. ಆ ಹಂತದಲ್ಲಿ ಯಾರನ್ನು ನೇಮಕಾತಿ ಮಾಡಿಕೊಳ್ಳಬೇಕು, ಯಾವಾಗ ನೇಮಕಾತಿ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವುದು ಬಹಳ ಮುಖ್ಯ. ಈ ವಿಚಾರದಲ್ಲೇ ಬಹುತೇಕ ಮಂದಿ ಎಡವುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಂಪನಿಗಳು ಬಂದ್ ಅಗುವುದಕ್ಕೆ ಬಹುತೇಕ ಕಾರಣ ಹಣದ ಕೊರತೆ. ಶೇ. 1ರಷ್ಟು ಕಂಪನಿಗಳು ಮಾತ್ರ ಸಾಕಷ್ಟು ಉದ್ಯೋಗಿಗಳಿಲ್ಲದಿರುವುದರಿಂದ ಬಂದ್ ಆಗುತ್ತವೆ. ಬಹಳ ಕ್ಷಿಪ್ರವಾಗಿ ನೇಮಕಾತಿ ಮಾಡಿಕೊಳ್ಳುವುದು ಎಂದರೆ ಅಡುಗೆ ಮಾಡುವಾಗ ಕೆಲ ಸಾಮಗ್ರಿಗಳನ್ನು ಹಾಕದೇ ಹೋಗುವುದು. ಹೀಗೆ ಮಾಡಿದಾಗ ಅಂದುಕೊಂಡ ಕೆಲಸ ನಿಗದಿತ ಅವಧಿಯಲ್ಲಿ ಆಗಬಹುದು ಎಂದಾದರೂ ಅಂತಿಮವಾಗಿ ಅದು ವಿಫಲ ಎನಿಸುತ್ತದೆ ಎಂಬುದು ಮಾರ್ಕ್ ರಾಂಡೋಲ್ಫ್ ಅವರ ವಿವರಣೆ.

ಇದನ್ನೂ ಓದಿToxic Bosses: ಬಾಸ್​ಗಳ ಸಹವಾಸ ಸಾಕೆಂದು ಕೆಲಸ ಬಿಟ್ಟವರೇ ಹೆಚ್ಚಂತೆ; ಭಾರತದಲ್ಲಿ ಕುತೂಹಲ ಮೂಡಿಸುತ್ತವೆ ರೆಸಿಗ್ನೇಶನ್ ಕಾರಣಗಳು

ನೀವು ಒಂದು ಸ್ಥಾನಕ್ಕೆ ಯಾರನ್ನಾದರೂ ನೇಮಕಾತಿ ಮಾಡಿಕೊಳ್ಳಬೇಕು ಎಂದಿದ್ದರೆ ನಿಮಗೆ ಆ ಕೆಲಸ ಮಾಡಿ ಗೊತ್ತಿರಬೇಕು. ಆಗ ನಿಮಗೆ ಆ ಕೆಲಸದ ಮೌಲ್ಯ, ಉಪಯುಕ್ತತೆ ಗೊತ್ತಿರುತ್ತದೆ. ಅದಕ್ಕೆ ಎಂಥ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬಹುದು ಎಂಬುದನ್ನು ನಿರ್ಧರಿಸುವುದು ಸುಲಭವಾಗುತ್ತದೆ ಎಂದು ನೆಟ್​ಫ್ಲಿಕ್ಸ್ ಸಹಸಂಸ್ಥಾಪಕರು ತಮ್ಮ ಮೂರನೇ ಸೂತ್ರದ ಬಗ್ಗೆ ನೀಡಿದ ವಿವರಣೆ.

ನೆಟ್​ಫ್ಲಿಕ್ಸ್ ಸಂಸ್ಥೆಯ ಸ್ಥಾಪನೆ ಕಥೆ

ಮಾರ್ಕ್ ರಾಂಡೋಲ್ಫ್ ಮತ್ತು ರೀಡ್ ಹೇಸ್ಟಿಂಗ್ಸ್ ಇಬ್ಬರೂ ಸೇರಿ 1998ರಲ್ಲಿ ನೆಟ್​ಫ್ಲಿಕ್ಸ್ ಕಂಪನಿ ಆರಂಭಿಸಿದರು. ಕುತೂಹಲವೆಂದರೆ ಆಗ ಇನ್ನೂ ಒಟಿಟಿ ಕಾನ್ಸೆಪ್ಟ್ ಇರಲಿಲ್ಲ. ಸಿಡಿ, ಡಿವಿಡಿಗಳ ಕಾಲಘಟ್ಟ ಅದು. ಡಿವಿಡಿ ರೆಂಟಲ್ ಮತ್ತು ಸೇಲ್ಸ್ ವೆಬ್​ಸೈಟ್ ಆಗಿ ನೆಟ್​ಫ್ಲಿಕ್ಸ್ ಸ್ಥಾಪನೆಯಾಗಿತ್ತು. ಆಗ 30 ಉದ್ಯೋಗಿಗಳು ಅದರಲ್ಲಿದ್ದರು. ಆ ಹಂತದಿಂದ ನೆಟ್​ಫ್ಲಿಕ್ಸ್ ಈಗ ವಿಡಿಯೋ ಸ್ಟ್ರೀಮಿಂಗ್ ದೈತ್ಯ ಕಂಪನಿಯಾಗಿ ಬೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ