ನವದೆಹಲಿ: ಮೇ ತಿಂಗಳಲ್ಲಿ ಸಿಪಿಐ ಆಧಾರಿತ ರೀಟೇಲ್ ಹಣದುಬ್ಬರ ಶೇ. 4.25ಕ್ಕೆ ಇಳಿದಿರುವ ಸುದ್ದಿ ಬಂದ ಬೆನ್ನಲ್ಲೇ ಈಗ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ (WPI Based Inflation) 2023 ಮೇ ತಿಂಗಳಲ್ಲಿ ಮೈನಸ್ 3.45 ಪ್ರತಿಶತಕ್ಕೆ ಕುಸಿದುಹೋಗಿದೆ. ಡಬ್ಲ್ಯೂಪಿಐ ಎಂದರೆ ಸಗಟು ಬೆಲೆ ಸೂಚ್ಯಂಕ. ಹೋಲ್ಸೇಲ್ ದರಗಳ ಬೆಲೆ ವ್ಯತ್ಯಾಸದ ದರವಾಗಿರುವ ಡಬ್ಲ್ಯುಪಿಐ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ಮೈನಸ್ 0.92 ಪ್ರತಿಶತದಷ್ಟಿತ್ತು. ಈಗ ಇನ್ನಷ್ಟು ಇಳಿಮುಖವಾಗಿದೆ. ಇದು ಕಳೆದ 3 ವರ್ಷದಲ್ಲೇ ಅತ್ಯಂತ ಕಡಿಮೆ ಸಗಟು ಬೆಲೆ ಹಣದುಬ್ಬರ ದರವಾಗಿದೆ. ಮೇ ತಿಂಗಳ ಸಗಡು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರದ ಮಾಹಿತಿಯನ್ನು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಜೂನ್ 14ರಂದು ಪ್ರಕಟಿಸಿದೆ.
ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತವಾದ ಈ ಹಣದುಬ್ಬರ ಕಡಿಮೆ ಆಗಿರುವುದು ಮುಂಬರುವ ದಿನಗಳಲ್ಲಿ ರೀಟೇಲ್ ಹಣದುಬ್ಬರ ಮತ್ತಷ್ಟು ಇಳಿಕೆಯಾಗಬಹುದು ಎಂದು ನಿರೀಕ್ಷಿಸಬಹುದು. ಮೇ ತಿಂಗಳಲ್ಲಿ ಶೇ. 4.25ರಷ್ಟಿರುವ ಸಿಪಿಐ ಆಧಾರಿತ ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 4ರ ಆಸುಪಾಸಿಗೆ ಬಂದರೂ ಅಚ್ಚರಿ ಇಲ್ಲ.
ಇದನ್ನೂ ಓದಿ: Indian Economy: 2014 ಮತ್ತು 2023- ಜಿಡಿಪಿ ಆಗ ಎಷ್ಟಿತ್ತು, ಈಗ ಎಷ್ಟಿದೆ?: ಇಲ್ಲಿದೆ ಹೋಲಿಕೆ
ಹೋಲ್ಸೇಲ್ ಬೆಲೆಗಳ ಹಣದುಬ್ಬರ 2023ರ ಮೇ ತಿಂಗಳಲ್ಲಿ ಭರ್ಜರಿಯಾಗಿ ಇಳಿಕೆಯಾಗಲು ವಿವಿಧ ಸರಕುಗಳ ಬೆಲೆ ಇಳಿಕೆ ಕಾರಣವಾಗಿದೆ. ಖನಿಜತೈಲ, ಮೂಲ ಲೋಹಗಳು, ಆಹಾರ ಉತ್ಪನ್ನಗಳು, ಜವಳಿ, ಆಹಾರೇತರ ವಸ್ತುಗಳು, ಕಚ್ಛಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ರಾಸಾಯನಿಕ ಉತ್ಪನ್ನಗಳ ಬೆಲೆ ಇಳಿಕೆಯು ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಇಳಿಕೆಗೆ ಎಡೆ ಮಾಡಿಕೊಟ್ಟಿವೆ. ಏಪ್ರಿಲ್ ತಿಂಗಳ ಸಗಟು ದರ ಹಣದುಬ್ಬರ ಇಳಿಕೆಗೂ ಇವೇ ವಸ್ತುಗಳ ಬೆಲೆ ಇಳಿಕೆ ಕಾರಣವಾಗಿದ್ದವು.
ಸಗಟು ಬೆಲೆ ಹಣದುಬ್ಬರ ಇಳಿಕೆಯು ರೀಟೇಲ್ ಬೆಲೆ ಏರಿಕೆಗೆ ಕಡಿವಾಣ ಬೀಳಲು ಸಹಾಯಕವಾಗುತ್ತದೆ. ಹೀಗಾಗಿ, ಜೂನ್ ತಿಂಗಳ ರೀಟೇಲ್ ಹಣದುಬ್ಬರ ಶೇ. 4ಕ್ಕಿಂತಲೂ ಕಡಿಮೆಗೆ ಇಳಿದರೆ ಅಚ್ಚರಿ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ