ಅಬುಧಾಬಿ, ಮಾರ್ಚ್ 1: ಆಹಾರ ಭದ್ರತಾ ಯೋಜನೆ ಅಡಿಯಲ್ಲಿ (Food security programme) ಸಾರ್ವಜನಿಕ ಪಡಿತರ ವಿತರಣೆಗೆಂದು ಸರ್ಕಾರ ರೈತರಿಂದ ಆಹಾರಧಾನ್ಯಗಳನ್ನು ಖರೀದಿಸುತ್ತದೆ. ಡಬ್ಲ್ಯುಟಿಒ ಸಚಿವರ ಸಭೆಯಲ್ಲಿ ಈ ಯೋಜನೆ ಬಗ್ಗೆ ಥಾಯ್ಲೆಂಡ್ ದೇಶದ ಪ್ರತಿನಿಧಿ ವ್ಯಂಗ್ಯ ಮಾಡಿದ ಘಟನೆ ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದಿಂದ ಪ್ರತಿಭಟನೆ ಮತ್ತು ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಥಾಯ್ಲೆಂಡ್ ತನ್ನ ಈ ಪ್ರತಿನಿಧಿಯನ್ನು ವಾಪಸ್ ಕರೆಸಿದೆ. ಪಿಮ್ಚನೋಕ್ ವಾಂಕೋರ್ಪೋನ್ ಪಿಟ್ಫೀಲ್ಡ್ (Pimchanok Vonkorpon Pitfield) ಭಾರತದ ಆಕ್ರೋಶಕ್ಕೆ ಕಾರಣವಾದ ಥಾಯ್ಲೆಂಡ್ ಅಧಿಕಾರಿ. ಅವರನ್ನು ವಾಪಸ್ ಕರೆಸಿಕೊಂಡು, ಅವರ ಸ್ಥಾನಕ್ಕೆ ಥಾಯ್ಲೆಂಡ್ ವಿದೇಶಾಂಗ ಕಾರ್ಯದರ್ಶಿ ಅವರನ್ನು ಕಳುಹಿಸಲಾಗಿದೆ.
ಭಾರತ ರೈತರಿಂದ ಎಂಎಸ್ಪಿ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸಿ (food procurement), ಅದನ್ನು ಪಡಿತರ ವಿತರಣೆ ವ್ಯವಸ್ಥೆಗೆ ಬಳಸುತ್ತದೆ. ಮತ್ತು ಆಹಾರಧಾನ್ಯಗಳ ಕೊರತೆಯಾದಾಗ ಅದನ್ನು ದೇಶೀಯ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡುತ್ತದೆ. ಈ ವ್ಯವಸ್ಥೆಯನ್ನು ಥಾಯ್ಲೆಂಡ್ ಪ್ರತಿನಿಧಿ ಅಣಕಿಸಿದ್ದಾರೆ. ಡಬ್ಲ್ಯುಟಿಒ ಸಚಿವರ ಸಭೆಯ ವೇಳೆ ಕೃಷಿ ವ್ಯವಹಾರ ಕ್ಷೇತ್ರದಲ್ಲಿ ಸುಧಾರಣೆ ತರುವ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ, ಮಧ್ಯಪ್ರವೇಶಿಸಿದ ಥಾಯ್ಲೆಂಡ್ ರಾಯಭಾರಿ ಪಿಟ್ಫೀಲ್ಡ್, ಭಾರತ ಸರ್ಕಾರ ಎಂಎಸ್ಪಿ ಯೋಜನೆಯಲ್ಲಿ ಆಹಾರಧಾನ್ಯ ಖರೀದಿಸುವುದು ರೈತರಿಗೆ ಉಪಯೋಗ ಆಗಲು ಎಂದಲ್ಲ, ಬದಲಾಗಿ ರಫ್ತು ಮಾರುಕಟ್ಟೆಯಲ್ಲಿ ಪ್ರಾಬಲ್ಯ ತೋರಲು. ರೈತರಿಂದ ಖರೀದಿಸಿದ ಶೇ. 40ರಷ್ಟು ಅಕ್ಕಿಯನ್ನು ಭಾರತ ರಫ್ತಿಗೆ ಬಳಸುತ್ತದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಗಳಿಗೆ ಡಬಲ್ ಭಾಗ್ಯ; ಜೂನ್ನಲ್ಲಿ ಸಂಬಳ ಹೆಚ್ಚಳ; ವಾರಕ್ಕೆ ಐದು ದಿನ ಕೆಲಸ
ಅಕ್ಕಿ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಥಾಯ್ಲೆಂಡ್, ವಿಯೆಟ್ನಾಂ ಕೂಡ ಪ್ರಮುಖ ಅಕ್ಕಿ ರಫ್ತು ದೇಶಗಳಾಗಿವೆ. ಹೀಗಾಗಿ, ಅಕ್ಕಿ ವ್ಯವಹಾರದಲ್ಲಿ ಥಾಯ್ಲೆಂಡ್ಗೆ ಭಾರತ ಪ್ರಮುಖ ಪ್ರತಿಸ್ಪರ್ಧಿ.
ತಮ್ಮ ವ್ಯವಹಾರಕ್ಕೆ ಹೊಡೆತ ಬೀಳುವ ವಿಚಾರವನ್ನು ಪ್ರಸ್ತಾಪಿಸುವುದರಲ್ಲಿ ತಪ್ಪಿಲ್ಲ. ಆದರೆ, ಥಾಯ್ಲೆಂಡ್ ಪ್ರತಿನಿಧಿ ಪಿಟ್ಫೀಲ್ಡ್ ತಮ್ಮ ವಾದ ವ್ಯಕ್ತಪಡಿಸಿದ ರೀತಿ ಮತ್ತು ಅವರ ಧೋರಣೆ ಭಾರತಕ್ಕೆ ಅಸಮಾಧಾನ ತಂದಿದೆ. ಅಲ್ಲದೇ, ಪಿಟ್ಫೀಲ್ಡ್ ಅವರ ಮಾತುಗಳಿಗೆ ಸಭೆಯಲ್ಲಿ ಇದ್ದ ಕೆಲ ಸಿರಿವಂತ ದೇಶಗಳ ಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ ರೀತಿಯೂ ಭಾರತವನ್ನು ಕೆರಳಿಸಿದೆ. ಆಗಲೇ ಭಾರತದ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿತು. ಡಬ್ಲ್ಯುಟಿಒ ಮುಖ್ಯಸ್ಥ ನಗೋಜಿ ಒಕೋಂಜೋ, ಅಮೆರಿಕ, ಯೂರೋಪಿಯನ್ ಒಕ್ಕೂಟ, ಯುಎಇ ಮೊದಲಾದ ದೇಶಗಳ ಬಳಿ ಪಿಯೂಶ್ ಗೋಯಲ್ ನೇತೃತ್ವದ ಭಾರತದ ನಿಯೋಗ ಈ ಬಗ್ಗೆ ಬೇಸರ ಹೊರಹಾಕಿತು.
ಇದನ್ನೂ ಓದಿ: ರೆಬೆಲ್ ಭಾರತ; ಅತ್ತ ಅಮೆರಿಕಕ್ಕೂ ಜಗ್ಗದು, ಇತ್ತ ಚೀನಾಗೂ ಜಗ್ಗದು; ಡಬ್ಲ್ಯುಟಿಒ ಸಭೆಯ ರೋಚಕ ಅಂಶಗಳು
‘ಇಡೀ ಪ್ರಕರಣದಲ್ಲಿ ಕೆಲ ಮುಂದುವರಿದ ದೇಶಗಳ ಪಾತ್ರ ಇದ್ದಂತೆ ತೋರುತ್ತಿದೆ,’ ಎಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಭಾರತ ಸರ್ಕಾರದ ಆಹಾರ ಖರೀದಿ ಯೋಜನೆ ಬಗ್ಗೆ ಕೆಲ ದೇಶಗಳು ತಗಾದೆ ತೆಗೆದದ್ದು ಇದೇ ಮೊದಲಲ್ಲ. ಕಳೆದ ಬಾರಿಯ ಜಿನಿವಾ ಸಭೆಯಲ್ಲೂ ಭಾರತದ ವಿರುದ್ಧ ಅಭಿಪ್ರಾಯ ರೂಪಿಸುವ ಪ್ರಯತ್ನಗಳಾಗಿದ್ದವು. ಜಾಗತಿಕ ವ್ಯವಹಾರ ನಿಯಮಗಳಿಗೆ ವಿರುದ್ಧವಾಗಿ ಭಾರತ ಸಬ್ಸಿಡಿ ದರದಲ್ಲಿ ಅಕ್ಕಿಯನ್ನು ಜಾಗತಿಕ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ