ಆನ್​ಲೈನ್​ ಗ್ಯಾಂಬ್ಲಿಂಗ್​ ಚಟದಿಂದ ಹೊರಬರಲು ಇದು ಸಕಾಲ..

  • TV9 Web Team
  • Published On - 18:30 PM, 23 Nov 2020

ಆನ್ಲೈನ್ ಗ್ಯಾಂಬ್ಲಿಂಗ್ (ಜೂಜು) ಸದ್ಯ ಜಗತ್ತನ್ನೇ ಆವರಿಸಿರುವ ಸಮಸ್ಯೆ. ಈ ಜಾಲದ ಒಳ ಹೊಕ್ಕವರನ್ನು ಹೊರ ತರುವುದು ದೊಡ್ಡ ಸವಾಲು. ಆನ್ಲೈನ್ ಗ್ಯಾಂಬ್ಲಿಂಗ್ ವಿರುದ್ಧ ಭಾರತದ ಕೆಲ ರಾಜ್ಯಗಳು ಈಗಾಗಲೇ ಧ್ವನಿ ಎತ್ತಿವೆ. ನೆರೆಯ ತಮಿಳುನಾಡಿನಲ್ಲಿ ಶುಕ್ರವಾರವಷ್ಟೇ ಆನ್​ಲೈನ್ ಗ್ಲಾಂಬ್ಲಿಂಗ್ ನಿಷೇಧಿಸುವ ಸುಗ್ರೀವಾಜ್ಞೆ ಜಾರಿಯಾಗಿದೆ..

ಇದೇ ಹಾದಿಯಲ್ಲಿ ಕರ್ನಾಟಕವೂ ಇದ್ದು, ಆನ್ಲೈನ್ ಗ್ಯಾಂಬ್ಲಿಂಗ್​ ನಿಷೇಧಿಸಲು ಕಾನೂನು ರೂಪಿಸಲು ಸರ್ಕಾರ ಸಿದ್ಧವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರ ಈ ಚಿಂತನೆಗೆ ಮನೋರೋಗ ಚಿಕಿತ್ಸಕರು, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಪೋಷಕರ ವಲಯಗಳಲ್ಲಿ ಬೆಂಬಲ ಸಿಕ್ಕಿದೆ.

ಈ ಬಾರಿಯ ಐಪಿಎಲ್​ ವೇಳೆ ಕೇವಲ ಒಂದು ತಿಂಗಳ ಅವಧಿಯಲ್ಲಿ 25ಕ್ಕೂ ಹೆಚ್ಚು ಆನ್ಲೈನ್ ಗ್ಯಾಂಬ್ಲಿಂಗ್ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿವೆ. ಈ ಪ್ರಕರಣಗಳಿಂದ ಸುಮಾರು ಒಂದೂವರೆ ಕೋಟಿ ರೂಪಾಯಿಗಳನ್ನು ವಶಪಡಸಿಕೊಂಡಿರುವ ಪೊಲೀಸರು ಆನ್ಲೈನ್ ಗ್ಯಾಂಬ್ಲಿಂಗ್ ಜಾಲದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.

ಮೋಸದ ವಹಿವಾಟಿಗೆ ರಹದಾರಿ
ಆನ್ಲೈನ್ ಗ್ಯಾಂಬ್ಲಿಂಗ್ ಸಾಧಾರಣ ಗ್ಯಾಂಬ್ಲಿಂಗ್​ ಪ್ರಕರಣಗಳಿಗಿಂತಲೂ ಗಂಭೀರವಾಗಿವೆ. ಏಕಕಾಲಕ್ಕೆ ವಿಶ್ವದ ನಾನಾ ದೇಶದವರು ಒಂದೆಡೆ ಸೇರಿ ತಮ್ಮ ಹೆಸರನ್ನು ಸಹ ಬಹಿರಂಗಪಡಿಸದೇ ಆಡುವ ಅವಕಾಶ ಇರುವುದರಿಂದ ಇದನ್ನು ಸಂಪೂರ್ಣವಾಗಿ ಮಟ್ಟ ಹಾಕುವುದಕ್ಕೆ ಜಾಗತಿಕ ಮಟ್ಟದಲ್ಲಿಯೇ ಕಾನೂನು ರೂಪಿಸಬೇಕಿದೆ ಎನ್ನುತ್ತಾರೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್.

ಸದ್ಯ ಕರ್ನಾಟಕದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವುದು ಸ್ವಾಗತಾರ್ಹ ಕ್ರಮ ಎಂದಿರುವ ಸಂದೀಪ್​ ಪಾಟೀಲ್. ಈ ಆನ್ಲೈನ್ ಗ್ಯಾಂಬ್ಲಿಂಗ್​ಗಳು ಪರೋಕ್ಷವಾಗಿ ಇತರ ಮೋಸದ ವಹಿವಾಟುಗಳಿಗೂ ದಾರಿ ಮಾಡಿಕೊಡುತ್ತಿರುವ ಕಾರಣ ಇವುಗಳಿಂದ ದೂರ ಉಳಿಯುವುದೇ ಒಳಿತು ಎನ್ನುತ್ತಾರೆ.

ಬಿಟ್ ಕಾಯಿನ್​ ವ್ಯವಹಾರದಿಂದ ಹಿಡಿದು ಮಾಮೂಲಿ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುವ ಸೈಬರ್ ಅಪರಾಧಗಳಿಗೂ ಆನ್ಲೈನ್ ಗ್ಯಾಂಬ್ಲಿಂಗ್​ ಒಂದು ಮಾರ್ಗ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಮಾನಸಿಕ ಆರೋಗ್ಯಕ್ಕೂ ಧಕ್ಕೆ
ಆನ್ಲೈನ್ ಗ್ಯಾಂಬ್ಲಿಂಗ್​ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವುದರ ಜೊತೆಜೊತೆಗೆ ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತಿರುವುದು ಇನ್ನೊಂದು ಗಂಭೀರ ಸಮಸ್ಯೆ.

ಒಂಟಿತನ, ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ಕೆಲವರು ಆನ್ಲೈನ್ ಗೇಮ್, ಗ್ಯಾಂಬ್ಲಿಂಗ್​ಗಳ ಮೊರೆ ಹೋಗುತ್ತಾರೆ ಎನ್ನುವುದು ನಿಮ್ಹಾನ್ಸ್ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಶ್ರೀಹರಿ ಅವರ ಅಭಿಪ್ರಾಯ.

ಆನ್ಲೈನ್ ಗೇಮ್​ ಆಡಲು ಶುರುಮಾಡುವವರು ಕ್ರಮೆಣ ಅವುಗಳ ದಾಸರಾಗುವುದರಿಂದ ಅದು ಅವರ ದೈನಂದಿನ ಬದುಕಿನ ಮೇಲೆಯೂ ಪರಿಣಾಮ ಬೀರುತ್ತದೆ. ಆಟದಲ್ಲಿ ಹಣ ವ್ಯಯಿಸುವುದರಿಂದ ಮಾನಸಿಕ ಒತ್ತಡಕ್ಕೂ ಹಾದಿಯಾಗುತ್ತಿದೆ. ಹಣಕ್ಕಾಗಿ ಅಪರಾಧ ಚಟುವಟಿಕೆಗಳನ್ನು ಮಾಡಲೂ ಪ್ರೇರೇಪಿಸುತ್ತದೆ. ನಿದ್ರಾಹೀನತೆ, ಅನಾವಶ್ಯಕ ಸಿಟ್ಟು, ಮಾನಸಿಕ ತೊಳಲಾಟಗಳಿಗೆ ಕಾರಣವಾಗುತ್ತಿದೆ ಎಂದು ಎಚ್ಚರಿಸುತ್ತಾರೆ ಅವರು.

ಸುಲಭವಲ್ಲ ನಿಷೇಧ
ಆನ್ಲೈನ್ ಗ್ಯಾಂಬ್ಲಿಂಗನ್ನು ಕರ್ನಾಟಕದಲ್ಲಿ ಸಂಪೂರ್ಣ ನಿಷೇಧಿಸುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೇವಲ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾದಂತೆ ಯಾವುದೇ ವೆಬ್​ಸೈಟ್​ ನಿಷೇಧಿಸುವುದು ಸುಲಭದ ಮಾತಲ್ಲ. ಸರ್ಕಾರಗಳ ನಿಷೇಧದ ನಂತರವೂ ಆ ಗೇಮ್​ಗಳನ್ನು ಮೊಬೈಲ್​ನಲ್ಲಿ ಉಪಯೋಗಿಸುವುದು ಸಾಧ್ಯ ಎಂಬ ವಾದವಿದೆ.

ನಿಷೇಧಿಸಿದ ಮೇಲೆ ಆಡುವುದು ಅಪರಾಧ
ನಿಷೇಧಿತ ಗೇಮ್​ಗಳು ಮೊಬೈಲ್​ನಲ್ಲಿ ಲಭ್ಯವಿದೆ ಎಂಬ ಕಾರಣಕ್ಕೆ ಮತ್ತೆ ಬೆಟ್ಟಿಂಗ್, ಗ್ಯಾಂಬ್ಲಿಂಗ್ ಮುಂದುವರೆಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಕಾನೂನು ತಜ್ಞರು.

ಆನ್ಲೈನ್ ಗ್ಯಾಂಬ್ಲಿಂಗ್ ಒಮ್ಮೆ ನಿಷೇಧವಾಯಿತೆಂದರೆ ಅದನ್ನು ಬಳಸುವುದು ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಸೈಬರ್ ಪೊಲೀಸರ ಕಣ್ತಪ್ಪಿಸಿ ರಂಗೋಲಿಯ ಕೆಳಗೆ ನುಸುಳಿಯಾದರೂ ಗೇಮ್ ಆಡುತ್ತೇವೆ ಎಂದು ಹೊರಟರೆ ಕಠಿಣ ಶಿಕ್ಷೆ ನಿಶ್ಚಿತ. ನಿಷೇಧಿತ ಗೇಮ್​ಗಳನ್ನು ಆಡುವವರು ಪತ್ತೆಯಾದರೆ ಅವರಿಗೆ ಕನಿಷ್ಠ 5,000 ರೂಪಾಯಿ ದಂಡ ಹಾಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಜೊತೆಗೆ, ಗೇಮ್ ನಿಯಂತ್ರಿಸುವವರಿಗೆ 10,000 ರೂಪಾಯಿ ದಂಡ ಹಾಗೂ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಚಿಂತನೆ ನಡೆಸಲಾಗುತ್ತಿದೆ.

ತಂತ್ರಜ್ಞಾನದ ಒಳಗುಟ್ಟುಗಳನ್ನು ತಿಳಿದಿದ್ದೇವೆ ಎಂದು ಬೀಗುತ್ತಾ ಆನ್ಲೈನ್ ಗ್ಯಾಂಬ್ಲಿಂಗ್ ಆಡುವ ಮೊದಲು ಒಮ್ಮೆ ನಿಮ್ಮ ಭವಿಷ್ಯ ಕುರಿತು ಆಲೋಚಿಸಿ. ಮೊದಲು ಆ ಗುಂಗಿನಿಂದ ಹೊರಗೆ ಬನ್ನಿ.