ನಿವೃತ್ತಿಯ ಸನಿಹಕ್ಕೆ ಮುಖ್ಯ ಕಾರ್ಯದರ್ಶಿ TM ವಿಜಯಭಾಸ್ಕರ್: ಮುಂದಿನ CS ಯಾರು?

  • pruthvi Shankar
  • Published On - 15:11 PM, 21 Nov 2020

ಬೆಂಗಳೂರು: ರಾಜ್ಯದಲ್ಲಿ ಕಾರ್ಯಾಂಗದ ಚುಕ್ಕಾಣಿ ಹಿಡಿದಿರುವ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಡಿಸೆಂಬರ್ 31ರಂದು ನಿವೃತ್ತರಾಗಲಿದ್ದಾರೆ. ಸೇವಾ ಜೇಷ್ಠತೆಯ ಪ್ರಕಾರ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಪಿ.ರವಿಕುಮಾರ್ ನೇಮಕವಾಗುವ ಸಾಧ್ಯತೆಯಿದೆ.

ಮುಖ್ಯವಾಗಿ ಬಿ.ಎಸ್.ಯಡಿಯೂರಪ್ಪ ಅವರಿಗೂ ರವಿಕುಮಾರ್ ಅವರ ಮೇಲೆ ವಿಶ್ವಾಸವಿದೆ. ಎರಡು ತಿಂಗಳ ಹಿಂದಿನವರೆಗೂ ರವಿಕುಮಾರ್, ಮುಖ್ಯಮಂತ್ರಿ ಕಚೇರಿಯಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮುಖ್ಯಕಾರ್ಯದರ್ಶಿಯಾಗಿ ನೇಮಕವಾದರೆ ರವಿಕುಮಾರ್ ಅವರ ಸೇವಾ ಅವಧಿ ಇನ್ನೂ ಒಂದೂವರೆ ವರ್ಷಗಳ ಅವಧಿಗೆ ವಿಸ್ತರಣೆಯಾಗಲಿದೆ.

ಸೇವಾವಧಿ ವಿಸ್ತರಣೆ ಮಾಡುವ ಸಾಧ್ಯತೆ..
ರಾಜ್ಯ ಸರ್ಕಾರವು ತನ್ನ ವಿವೇಚನಾಧಿಕಾರ ಬಳಸಿ, ಹಾಲಿ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರ ಸೇವಾವಧಿ ವಿಸ್ತರಣೆ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಈ ಹಿಂದೆ ಮುಖ್ಯಕಾರ್ಯದರ್ಶಿಯಾಗಿದ್ದ ಕೆ.ರತ್ನಪ್ರಭಾ ಅವರ ಸೇವಾವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜ್ಯ ಸೇವೆಯಲ್ಲಿರುವ ಐಎಎಸ್ ಅಧಿಕಾರಿಗಳ ಪೈಕಿ ವಂದಿತಾ ಶರ್ಮ, ಪ್ರದೀಪ್ ಸಿಂಗ್ ಖರೋಲಾ, ಮಹೇಂದ್ರ ಜೈನ್, ಐಎಸ್ಎನ್ ಪ್ರಸಾದ್, ರಜನೀಶ್ ಗೋಯೆಲ್, ವಿ.ಮಂಜುಳಾ, ಅಜಯ್ ಸೇಠ್, ಅನಿಲ್ ಕುಮಾರ್, ಸಂಜೀವ್ ಕುಮಾರ್ ಅವರು ರವಿಕುಮಾರ್ ನಂತರದಲ್ಲಿ ಸೇವಾ ಹಿರಿತನ ಹೊಂದಿದ್ದಾರೆ. ರಾಜ್ಯ ಸರ್ಕಾರ ಸೇವಾ ಹಿರಿತನದ ಮಾನದಂಡವನ್ನೇ ಪರಿಗಣಿಸಿದಲ್ಲಿ ರವಿಕುಮಾರ್ ಮುಂದಿನ ಮುಖ್ಯಕಾರ್ಯದರ್ಶಿಯಾಗಿ ನೇಮಕವಾಗುವುದು ಬಹುತೇಕ ಖಚಿತ.