ಕೊರೊನಾ ಸಮಯದಲ್ಲಿ ಮತ್ತೆ ತಲೆ ಎತ್ತಿದ ಬಾಲ್ಯ ವಿವಾಹ ಪದ್ಧತಿ, 6 ತಿಂಗಳಲ್ಲಿ 1,791ಕೇಸ್ ದಾಖಲು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ. ಆದರೆ ಕೊರೊನಾ ನಡುವೆ ಬಾಲ್ಯವಿವಾಹ ಸಂಖ್ಯೆಗಳು ಹೆಚ್ಚಾಗಿವೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿಅಂಶಗಳ ಮೂಲಕ ಮಾಹಿತಿ ಬಹಿರಂಗವಾಗಿದೆ. ಕೊರೊನಾ ಭೀತಿಯಿಂದ ಮಕ್ಕಳು ಮನೆಯಲ್ಲಿರುವ ಹಿನ್ನೆಲೆಯಲ್ಲಿ ಪೋಷಕರು ಅಪ್ರಾಪ್ತ ಮಕ್ಕಳ ವಿವಾಹಕ್ಕೆ ಮುಂದಾಗುತ್ತಿದ್ದಾರೆ.

ಆಡುತ್ತ, ನಲಿಯುತ್ತ ತಮ್ಮ ಬಾಲ್ಯವನ್ನು ಅನುಭವಿಸಬೇಕಿದ್ದ ಪುಟಾಣಿಗಳ ಸಂತೋಷವನ್ನು ಕೊರೊನಾ ಕಸಿದುಕೊಂಡಿದೆ. ವಯಸ್ಸಿಗೆ ಬಾರದ ಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗ್ತಿದಾರೆ. ಅದರಲ್ಲೂ ಲಾಕ್​ಡೌನ್ ಹಾಗೂ ಕೊರೊನಾ ಸಂಕಷ್ಟದ ಸಮಯದಲ್ಲೇ ರಾಜ್ಯದಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆದಿವೆ. ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಮನೆಯಲ್ಲಿರೋ ಮಕ್ಕಳಿಗೆ ಪೋಷಕರು ಮದುವೆ ಮಾಡಲು ಮುಂದಾಗುತ್ತಿದ್ದಾರೆ. ಮಗಳು ಓದ್ತಿಲ್ಲ, ಕೊರೊನಾ ಯಾವಾಗ ಮುಗಿಯುತ್ತೋ ಅದಕ್ಕೆ ಮಗಳಿಗೆ ಮದುವೆ ಮಾಡಿಸೋಣ ಎಂದು ಪೋಷಕರು ಮಕ್ಕಳ ಬಾಳಿನ್ನು ಹಾಳು ಮಾಡುತ್ತಿದ್ದಾರೆ.

2020-21ನೇ ಸಾಲಿನಲ್ಲಿ ಲಾಕ್‌ಡೌನ್‌ ವೇಳೆ ಕೇಸ್ ಹೆಚ್ಚಳ:
ಇನ್ನು ಲಾಕ್​ಡೌನ್ ಸಮಯದಲ್ಲೇ ಹೆಚ್ಚು ಬಾಲ್ಯ ವಿವಾಹಗಳು ನಡೆದಿವೆ. ಈ ಬಗ್ಗೆ ಸ್ವೀಕರಿಸಿದ ದೂರುಗಳ ಸಂಖ್ಯೆ 1,791. ಏಪ್ರಿಲ್​ನಲ್ಲಿ 129 ಕೇಸ್​ಗಳು ಬೆಳಕಿಗೆ ಬಂದಿವೆ. ಮೇ 579, ಜೂನ್ 578, ಜುಲೈ 170, ಆಗಸ್ಟ್ 224, ಸೆಪ್ಟೆಂಬರ್‌ನಲ್ಲಿ 111 ದೂರುಗಳನ್ನು ಸ್ವೀಕರಿಸಲಾಗಿದೆ. ಹಾಗೂ 2,655 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಏಪ್ರಿಲ್​ನಲ್ಲಿ 118, ಮೇ 542, ಜೂನ್ 533, ಜುಲೈ 156, ಆಗಸ್ಟ್ 209, ಸೆಪ್ಟೆಂಬರ್‌ನಲ್ಲಿ 97 ಬಾಲ್ಯವಿವಾಹಗಳನ್ನು ತಡೆಯಲಾಗಿದೆ.

ಬಾಲ್ಯವಿವಾಹ ನಡೆದಿರುವ ಅಂಕಿಅಂಶಗಳು 136. ಈ ಪೈಕಿ ಏಪ್ರಿಲ್​ನಲ್ಲಿ 11, ಮೇ 37, ಜೂನ್ 45, ಜುಲೈ 14, ಆಗಸ್ಟ್ 14, ಸೆಪ್ಟೆಂಬರ್‌ನಲ್ಲಿ 14 ಬಾಲ್ಯವಿವಾಹ ನಡೆದಿವೆ. ಹಾಗೂ ಬಾಲ್ಯವಿವಾಹಕ್ಕೆ ಸಂಬಂಧ ದಾಖಲಾದ FIRಗಳು 72. ಈ ಪೈಕಿ ಏಪ್ರಿಲ್ 7, ಮೇ 20, ಜೂನ್ 26, ಜುಲೈ 8, ಆಗಸ್ಟ್ 6, ಸೆಪ್ಟೆಂಬರ್‌ ತಿಂಗಳಲ್ಲಿ 5 ಎಫ್‌ಐಆರ್‌ಗಳು ದಾಖಲಾಗಿವೆ.

Related Tags:

Related Posts :

Category:

error: Content is protected !!