ಬೇಹುಗಾರಿಕೆ ನಡೆಸಲು ಜಲಾಂತರ್ಗಾಮಿ ಡ್ರೋಣ್​ ಬಳಸಿದ ಚೀನಾ

ಮೂರು ಸೆನ್ಸಾರ್​ಗಳನ್ನು ಹೊಂದಿರುವ ಡ್ರೋಣ್​ ಉಷ್ಣಾಂಶ, ನೀರಿನ ಏರಿಳಿತ, ಸಮುದ್ರದ ನೀರಿನಲ್ಲಿಯ ಉಪ್ಪಿನಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಇಂಡೋನೇಷ್ಯಾದ ನೌಕಾದಳದ ತಜ್ಞರು ತಿಳಿಸಿದ್ದಾರೆ.

  • TV9 Web Team
  • Published On - 15:33 PM, 11 Jan 2021
ಪತ್ತೆಯಾದ ಜಲಾಂತರ್ಗಾಮಿ ಡ್ರೋಣ್

ಜಕಾರ್ತಾ: ತನ್ನ ನೆರೆರಾಷ್ಟ್ರಗಳ ಸರಹದ್ದು ಅತಿಕ್ರಮಿಸುವ ಚೀನಾದ ಚಾಳಿ ಮುಂದುವರೆದಿದೆ. ಇಂಡೋನೇಷ್ಯಾದ ಮೀನುಗಾರರು ಸೆಲೆಯಾರ್ ದ್ವೀಪದ ಬಳಿ ಚೀನಾದ ಜಲಾಂತರ್ಗಾಮಿ ಡ್ರೋಣ್​ಗಳನ್ನು ಪತ್ತೆಹಚ್ಚಿದ್ದಾರೆ. ಚೀನಾದ ಬೀಜಿಂಗ್ ಹಡಗು ಮಾರ್ಗದಿಂದ ಅನತಿ ದೂರದಲ್ಲೇ ಈ ಡ್ರೋಣ್​ಗಳು ಪತ್ತೆಯಾಗಿದ್ದು, ಇಂಡೋನೇಷ್ಯಾದ ಮಾಧ್ಯಮಗಳು ಚೀನಾದ ಒಳನುಸುಳುವಿಕೆಯ ಧೋರಣೆಯನ್ನು ಟೀಕಿಸಿವೆ.

ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರವನ್ನು ಸಂಪರ್ಕಿಸುವ ಈ ಹಡಗು ಮಾರ್ಗದಲ್ಲಿ ಈ ಜಲಾಂತರ್ಗಾಮಿ ಡ್ರೋನ್​ಗಳು ಪತ್ತೆಯಾಗಿದ್ದು, ಭಾರತಕ್ಕೂ ಅಪಾಯದ ಮುನ್ಸೂಚನೆ ಎದುರಾಗಿದೆ. ಇಂಡೋನೇಷ್ಯಾ ಈ ಸಮುದ್ರ ಪ್ರದೇಶವನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಘೋಷಿಸಿದ್ದು, ಚೀನಾ ಈ ಮುನ್ನವೇ ಈ ಸಮುದ್ರ ಪ್ರದೇಶವು ತನಗೆ ಸೇರಿದ್ದೆಂದು ವಾದ ಮಂಡಿಸಿತ್ತು. ಈ ಜಲಮಾರ್ಗವು ಆಸ್ಟ್ರೇಲಿಯಾಕ್ಕೆ ಸರಕು ಸಾಗಾಣಿಕಾ ಹಡಗು ಸಂಚರಿಸುವಲ್ಲೂ ಪ್ರಮುಖ ಪಾತ್ರ ವಹಿಸಿದೆ.

ಚೀನಾದ ಡ್ರೋಣ್​ಗಳೇ ಎಂದ ತಜ್ಞರು
ರೆಕ್ಕೆಯಂತಹ ರಚನೆಯನ್ನು ಹೊಂದಿರುವ ಈ ಜಲಾಂತರ್ಗಾಮಿ ಡ್ರೋಣ್​ಗಳು ಅಷ್ಟೇನೂ ಶಕ್ತಿಯುತವಾಗದಿದ್ದರೂ, ಸಮುದ್ರದಾಳದಿಂದಲೇ ಸುತ್ತಲಿನ ಆಗುಹೋಗುಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅವುಗಳು 225 ಸೆಂ.ಮೀಟರ್ ಉದ್ದ, 50 ಸೆಂ.ಮೀ ಅಗಲದ ರೆಕ್ಕೆ ಮತ್ತು 93 ಸೆಂ. ಮೀ ಉದ್ದದ ಆಂಟೆನಾಗಳನ್ನು ಹೊಂದಿವೆ ಎಂದು ಇಂಡೋನೇಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾ,ಫ್ರಾನ್ಸ್​ಗಳು ಸಹ ಇಂತಹ ಜಲಾಂತರ್ಗಾಮಿ ಡ್ರೋಣ್​ಗಳನ್ನು ಬಳಸುತ್ತವೆಯಾದರೂ, ಮೀನುಗಾರರಿಗೆ ದೊರೆತ ಡ್ರೋಣ್​ಗಳು ಚೀನಾ ತಯಾರಿಸಿದಂತಿವೆ ಎಂದು ವರದಿ ತಿಳಿಸಿದೆ. ಮೂರು ಸೆನ್ಸಾರ್​ಗಳನ್ನು ಹೊಂದಿರುವ ಡ್ರೋಣ್​ ಉಷ್ಣಾಂಶ, ನೀರಿನ ಏರಿಳಿತ, ಸಮುದ್ರದ ನೀರಿನಲ್ಲಿಯ ಉಪ್ಪಿನಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಇಂಡೋನೇಷ್ಯಾದ ನೌಕಾದಳದ ತಜ್ಞರು ತಿಳಿಸಿದ್ದಾರೆ.

2019ರಲ್ಲೂ ಇಂಡೋನೇಷ್ಯಾ ಮತ್ತು ಸಿಂಗಾಪುರದ ನಡುವಿನ ಮಲಕ್ಕಾ ಜಲಸಂಧಿಯ ಬಳಿ ಪತ್ತೆಯಾಗಿದ್ದವು. 2020 ರ ಜನವರಿಯಲ್ಲಿ ದಕ್ಷಿಣ ಇಂಡೋನೇಷ್ಯಾದ ಸುಂಡಾ ದ್ವೀಪದ ಬಳಿಯೂ ಜಲಾಂತರ್ಗಾಮಿ ಡ್ರೋಣ್​ಗಳು ಪತ್ತೆಯಾಗಿದ್ದವು.

ನಾಪತ್ತೆಯಾಗಿದ್ದ ಬೋಯಿಂಗ್ 737-500 ವಿಮಾನ ಸಮುದ್ರದಲ್ಲಿ ಪತನ