ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಿನ್ನ ಜೀಯರ್ ಸ್ವಾಮೀಜಿಗೆ ಆಹ್ವಾನ

ಸದಾ ಲೋಕ ಕಲ್ಯಾಣದ ಬಗ್ಗೆ ಯೋಚಿಸುವ ಮತ್ತು ಜೀಯರ್ ಎಂದು ಕರೆಸಿಕೊಳ್ಳುವ ಅತ್ಯಂತ ಗೌರವಾನ್ವಿತ ಶ್ರೀ ರಾಮಾನುಜಾಚಾರ್ಯ ವಂಶಾವಳಿಗೆ ಸೇರಿರುವ ಶ್ರೀ ತ್ರಿಂದಾನಿ ಚಿನ್ನ ಶ್ರೀಮನ್ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಅವರನ್ನು ಆಗಸ್ಟ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

23ನೇ ವಯಸ್ಸಿನಲ್ಲಿ ಸನ್ಯಾಸದ ದೀಕ್ಷೆ ಪಡೆದ 63 ವರ್ಷ ವಯಸ್ಸಿನ ಜೀಯರ್ ಅವರು ವೈಷ್ಣವ ಸಂಪ್ರದಾಯದಲ್ಲಿ ತರಬೇತಿ ಹೊಂದಿದ್ದು ವೈಷ್ಣಪಂಥದ ತೆಂಕಲೈ ಪ್ರತೀತಿಯನ್ನು ಪ್ರತಿಪಾದಿಸುತ್ತಾರೆ.

ಆಧ್ಯಾತ್ಮಿಕ ಪ್ರವಚನಗಳಿಗೆ ವಿಶ್ವದಾದ್ಯಂತ ಪ್ರಖ್ಯಾತರಾಗಿರುವ ಅವರು ಅಮೇರಿಕಾದಲ್ಲೂ ಆಧ್ಯಾತ್ಮಿಕ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಶ್ರೀಗಳು ಲಂಡನ್, ಹಾಂಗ್ ಕಾಂಗ್, ಸಿಂಗಾಪುರ, ಕೆನಡಾ ಮುಂತಾದ ದೇಶಗಳಲ್ಲಿ ಅನೇಕ ಬಾರಿ ಯಙ್ಞಗಳನ್ನು ನಡೆಸಿದ್ದಾರೆ.

2013 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ಗೆ (ಎಬಿವಿಪಿ) ತಮ್ಮ ಬೆಂಬಲ ಸೂಚಿಸಿದ ಜೀಯರ್, ಅದು ವಿದ್ಯಾರ್ಥಿಗಳಲ್ಲಿ ರಾಷ್ರಪ್ರೇಮ ಹುಟ್ಟಿಸುತ್ತದೆ. ಜೊತೆಗೆ, ಅವರಲ್ಲಿ ಭಾರತೀಯ ಸಂಸ್ಕ್ರತಿಯನ್ನು ಬಿತ್ತುತ್ತಿದೆ ಎಂದು ಹೇಳಿದ್ದರು. ಭಾರತೀಯ ಇತಿಹಾಸದ ತಿರುಳನ್ನು ವಿದ್ಯಾರ್ಥಿಗಳು ಸಮಗ್ರವಾಗಿ ಗ್ರಹಿಸಿಕೊಂಡರೆ ದೇಶದ ಸಂಸ್ಕ್ರತಿ ಮತ್ತು ಪರಂಪರೆ ಯಾವತ್ತೂ ಬದಲಾಗದು ಎಂದು ಅವರು ಹೇಳಿದ್ದರು.

ವಿಶ್ವ ಶಾಂತಿ, ಭಾವೈಕ್ಯತೆ, ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಅನುದಿನವೂ ಸಾರುವ ಜೀಯರ್ ಅವರನ್ನು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಅವರಿಗೆ ತಕ್ಕ ಗೌರವವನ್ನು ಸಲ್ಲಿಸಲಾಗಿದೆ.

Related Tags:

Related Posts :

Category: