ಭಾರತದಲ್ಲಿ ಟೆನೆಟ್ ಬಿಡುಗಡೆಗೆ ಕೂಡಿಬಂತು ಮುಹೂರ್ತ!

  • guruganesh bhat
  • Published On - 8:33 AM, 24 Nov 2020

ಕ್ರಿಸ್ಟೋಫರ್ ನೋಲಾನ್ ನಿರ್ದೇಶನದ ಬಹುನಿರೀಕ್ಷಿತ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಸಿನಿಮಾ ಟೆನೆಟ್ ಭಾರತದ ಚಿತ್ರಮಂದಿರಗಳಿಗೆ ಲಗ್ಗೆಯಿಡುವ ದಿನ ಅಂತೂ ಫಿಕ್ಸ್ ಆಗಿದೆ. ವಾರ್ನರ್ ಬ್ರದರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಬಾಲಿವುಡ್​ನ ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ಟೆನೆಟ್ ಅಗಸ್ಟ್ 26ರಂದೇ 70 ದೇಶಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಕೊರೊನಾ ಉಪಟಳ ಹೆಚ್ಚಾದ ಕಾರಣ ಥಿಯೇಟರ್​ಗಳು ಬಾಗಿಲುಹಾಕಿದ್ದವು. ಭಾರತದಲ್ಲೂ ಸಿನಿಮಾ ಬಿಡುಗಡೆಯ ಪ್ಲಾನ್ ಹಾಕಿದ್ದ ಚಿತ್ರತಂಡ ತೆಪ್ಪಗೆ ಕೂರುವಂತಾಗಿತ್ತು.

ಲಾಕ್​ಡೌನ್ ತೆರವಿನ ನಂತರ ಅಮೇರಿಕಾ ಸೇರಿದಂತೆ, ಎಲ್ಲಾ ದೇಶಗಳ ಒಂದೊಂದೇ ನಗರದಲ್ಲಿ ಸಿನಿಮಾ ಪ್ರದರ್ಶನದ ಯೋಜನೆಯನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಈ ಸಿನಿಮಾಗೆ ತಗುಲಿದ ವೆಚ್ಚವೇ ಬರೋಬ್ಬರಿ 200 ಮಿಲಿಯನ್ ಡಾಲರ್! ಹೀಗಾಗಿ, ಬೇರೆಬೇರೆ ದೇಶಗಳಲ್ಲಿ ರಿ ರಿಲೀಸ್​ಗೂ ನೋಲಾನ್ ಪ್ಲಾನ್ ಹಾಕಿದ್ದಾರೆ.ಅವರ ಪ್ರಕಾರ ಟೆನೆಟ್ ಮೂಲಕ ಜನ ಮತ್ತೆ ಚಿತ್ರಮಂದಿರಗಳಿಗೆ ಲಗ್ಗೆಯಿಡಬೇಕು.ಸಿನಿಮಾ ಇಂಡಸ್ಟ್ರಿ ಚಿಗುರಬೇಕು.

ಹತ್ತು ಆಸ್ಕರ್ ವಿಜೇತ ನೋಲಾನ್, ಟೆನೆಟ್​ನಲ್ಲಿ ಮೂರನೇ ಮಹಾಯುದ್ಧದಿಂದ ವಿಶ್ವವನ್ನು ಹೇಗೆ ರಕ್ಷಿಸಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ! ಲಾಕ್​ಡೌನ್​ನಲ್ಲಿ ನೋಡಿದ ಸಿನಿಮಾವನ್ನೇ ಮತ್ತೆ ಮತ್ತೆ ತಿರುವಿ ಹಾಕಿರುವ ಭಾರತೀಯರ ಪ್ರತಿಕ್ರಿಯೆ ಸಕಾರಾತ್ಮಕವಾಗಿರುತ್ತದೆ ಎಂಬ ನಿರೀಕ್ಷೆ ಚಿತ್ರತಂಡದ್ದು.