ಡಿಜೆ ಹಳ್ಳಿ ಗಲಭೆ ಹಿಂದೆ ಗಾಂಜಾ ಗ್ಯಾಂಗ್‌ ಕೈವಾಡ: SR ವಿಶ್ವನಾಥ್

ಬೆಂಗಳೂರು: ಡಿಜೆ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಘಟನೆ ಹಿಂದೆ ಗಾಂಜಾ, ಅಫೀಮು ಗ್ಯಾಂಗ್‌ ಕೈವಾಡವಿದೆಯೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌ ಆರ್‌ ವಿಶ್ವನಾಥ್‌ ಆರೋಪ ಮಾಡಿದ್ದಾರೆ.

ಡಿಜೆ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಗಾಂಜಾ ಮಾರಾಟ ನಡೆಯುತ್ತಿದೆ. ಇಂಥ ಸಮಾಜ ವಿರೋಧಿಗಳು, ಗೂಂಡಾಗಳನ್ನು ಕೆಲವು ರಾಜಕಾರಣಿಗಳು ಬೆಳೆಸಿದ್ದಾರೆ. ಇಂಥವರಲ್ಲಿ ಕಾಂಗ್ರೆಸ್‌ ಮುಖಂಡರು ಸೇರಿದ್ದಾರೆ. ಶಾಸಕರ ಪರ ನಿಂತರೆ ಅಲ್ಪಸಂಖ್ಯಾತರು ಬೇಜಾರು ಮಾಡ್ಕೋತಾರೆ ಅಂತಾ ಕಾಂಗ್ರೆಸ್ ನವರಿಗೆ ಆತಂಕ ಇದೆ. ಹೀಗಾಗಿ ಕಾಂಗ್ರೆಸ್,‌ ಈಗ ತನ್ನ ಶಾಸಕರನ್ನೇ ಕೈಬಿಡುವ ಸ್ಥಿತಿಯಲ್ಲಿದೆ ಎಂದು ಆರೋಪ ಮಾಡಿದ್ದಾರೆ.

ಅಮಾಯಕರು ಯಾರಾದ್ರೂ ರಾತ್ರಿ ಎರಡು ಗಂಟೆಗೆ ಮನೆಯಿಂದ ಹೊರ ಬರುತ್ತಾರಾ?
ಗಲಭೆಯಲ್ಲಿ ಸತ್ತಿರುವವರನ್ನು ಅಮಾಯಕರು ಅಂತಿದ್ದಾರೆ. ಅಮಾಯಕರು ಯಾರಾದ್ರೂ ರಾತ್ರಿ ಎರಡು ಗಂಟೆಗೆ ಮನೆಯಿಂದ ಹೊರ ಬರುತ್ತಾರಾ? ಎಂದು ಪ್ರಶ್ನಿಸಿದ ಎಸ್‌ ಆರ್‌ ವಿಶ್ವನಾಥ್‌, ಮೊನ್ನೆ ರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಘಟನೆ ಏಕಾಏಕಿ ನಡೆದಿರೋದು ಅಲ್ಲ, ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಆಪಾದಿಸಿದ್ದಾರೆ.

ಮಂಗಳೂರು, ಪಾದರಾಯನಪುರ, ಇಲ್ಲಿ ಎಲ್ಲಾ ಕಡೆ ಒಂದೇ ಟೀಮ್ ನವರು ಮಾಡ್ತಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ ರಾಮಮಂದಿರ ಶಿಲಾನ್ಯಾಸ ಸಮಯದಲ್ಲಿ ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ಕಡೆ ಗಲಾಟೆ ಆಗುತ್ತದೆ ಅಂತಾ ವರದಿ ಕೊಟ್ಟಿತ್ತು. ಗಲಭೆ ನಡೆಸಲು ಒಂದು ಟೀಮ್ ರೆಡಿ ಆಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ಗಲಭೆ ನಡೆಸಲು ಉದ್ದೇಶಿಸಿದ್ದರು ಎಂದು ವಿಶ್ವನಾಥ್ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಶಾಸಕ ಜಮೀರ್ ಅಹಮದ್ ಬಗ್ಗೆ ಕೂಡಾ ಟೀಕಾ ಪ್ರಹಾರ ಮಾಡಿದ ವಿಶ್ವನಾಥ್‌, ಜಮೀರ್‌ ಅಹ್ಮದ್‌ ಹೇಳೋದೊಂದು, ಮಾಡೋದೊಂದು. ಬೆಂಗಳೂರಿನಲ್ಲಿ ಮುಸ್ಲಿಂ ನಾಯಕ ಅಂತಾ ಬಿಂಬಿಸಿಕೊಳ್ಳಲು ಹೋಗುತ್ತಾರೆ. ಆದ್ರೆ ಗಲಭೆ ನಿಯಂತ್ರಿಸುವಲ್ಲಿ ಅವರು ಪರಿಣಾಮಕಾರಿಯಾಗಿಲ್ಲ. ತಕ್ಷಣವೇ ಎಸ್‌ಡಿಪಿಐ, ಪಿಎಫ್‌ಐ ನಿಷೇಧ ಆಗಬೇಕು ಎಂದು ಆಗ್ರಹಿಸಿದ್ದಾರೆ.

Related Tags:

Related Posts :

Category: