ಆರ್ಕೆಸ್ಟ್ರಾ ಪ್ರೋಗ್ರಾಂನಲ್ಲಿ ನಿಗೂಢ ಸ್ಫೋಟ, ಶಾಸಕ ಹ್ಯಾರಿಸ್​ ಸೇರಿ ನಾಲ್ವರಿಗೆ ಗಾಯ

, ಆರ್ಕೆಸ್ಟ್ರಾ ಪ್ರೋಗ್ರಾಂನಲ್ಲಿ ನಿಗೂಢ ಸ್ಫೋಟ, ಶಾಸಕ ಹ್ಯಾರಿಸ್​ ಸೇರಿ ನಾಲ್ವರಿಗೆ ಗಾಯ

ಬೆಂಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಮಾಸುವ ಮುನ್ನವೇ ರಾಜ್ಯ ರಾಜಧಾನಿಯಲ್ಲೂ ಅದೊಂದು ನಿಗೂಢ ಸ್ಫೋಟ ತೀವ್ರ ಸಂಚಲನ ಸೃಷ್ಟಿಸಿದೆ. ಶಾಸಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಿಗೂಢ ವಸ್ತು ಸ್ಫೋಟಗೊಂಡಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಜನರಲ್ಲಿ ಭಾರಿ ಆತಂಕ ಸೃಷ್ಟಿ ಮಾಡಿದೆ. ಹಾಗಾದ್ರೆ ಆ ಸ್ಫೋಟ ನಡೆದಿದ್ದಾದ್ರೂ ಎಲ್ಲಿ..? ಸ್ಫೋಟದ ಪರಿಣಾಮ ಹೇಗಿತ್ತು..? ಇಲ್ಲಿ ಓದಿ

ಒಂದ್ಕಡೆ ತೀವ್ರ ತಪಾಸಣೆ ನಡೆಸುತ್ತಿರುವ ಶ್ವಾನದಳ. ಮತ್ತೊಂದ್ಕಡೆ ಆತಂಕಕ್ಕೆ ಒಳಗಾಗಿರೋ ಸ್ಥಳೀಯ ಜನ್ರು. ಅಂದಹಾಗೆ ನಿನ್ನೆ ಬೆಂಗಳೂರಿನ ಶಾಂತಿನಗರಕ್ಕೆ ಸಮೀಪವಿರುವ ವನ್ನಾರಪೇಟೆಯಲ್ಲಿ ಭಾರಿ ಆತಂಕ ಮನೆಮಾಡಿತ್ತು. ಎಲ್ಲಿಂದಲೋ ಹಾರಿ ಬಂದ ನಿಗೂಢ ವಸ್ತುವೊಂದು ಶಾಸಕರ ಕಾಲ ಬಳಿಯಲ್ಲೇ ಸ್ಫೋಟಗೊಂಡಿದ್ದು, ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಏನು ನಡೆಯುತ್ತಿದೆ ಅಂತಾ ತಿಳಿಯುವಷ್ಟರಲ್ಲೇ, ಎಲ್ಲೆಲ್ಲೂ ಆತಂಕದ ಕರಿಛಾಯೆ ಆವರಿಸಿಬಿಟ್ಟಿತ್ತು.

ಶಾಸಕ ಹ್ಯಾರಿಸ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸ್ಫೋಟ!
ಅಂದಹಾಗೆ ನಿನ್ನೆ ರಾತ್ರಿ ಶಾಂತಿನಗರದಲ್ಲಿ ನಡೆದ ಆರ್ಕೆಸ್ಟ್ರಾದಲ್ಲಿ ಶಾಸಕ ಹ್ಯಾರಿಸ್ ಪಾಲ್ಗೊಂಡಿದ್ದರು. ಈ ವೇಳೆ ಹ್ಯಾರಿಸ್ ಕುಳಿತಿದ್ದ ಜಾಗದಲ್ಲಿ ನಿಗೂಢ ವಸ್ತುವೊಂದು ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಸೇರಿದಂತೆ ಸುಮಾರು ನಾಲ್ಕೈದು ಜನರಿಗೆ ಗಾಯಗಳಾಗಿದ್ದು, ಲಘುಸ್ಫೋಟದಿಂದ ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಗಾಯಾಳುಗಳನ್ನ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ವಿವೇಕನಗರ ಮತ್ತು ಅಶೋಕನಗರ ಠಾಣೆ ಪೊಲೀಸ್ರು ಸ್ಫೋಟ ನಡೆದ ಸ್ಥಳದಲ್ಲಿ ಸರ್ಚಿಂಗ್ ನಡೆಸಿದ್ರು. ಅಲ್ಲದೆ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಡಿಸಿಪಿ ಚೇತನ್ ಸಿಂಗ್ ರಾಥೋರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ಸೂಕ್ತ ತನಿಖೆಯಿಂದ ಸತ್ಯ ಹೊರಬರಬೇಕಿದೆ ಅಂದ್ರು.

‘ಇದು ಉದ್ದೇಶಪೂರ್ವಕ ಕೃತ್ಯ, ಸೂಕ್ತ ತನಿಖೆ ಆಗಬೇಕು’
ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಎನ್.ಎ. ಹ್ಯಾರಿಸ್ ಆರೋಗ್ಯ ವಿಚಾರಿಸಿದ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್, ಇದೊಂದು ಉದ್ದೇಶಪೂರ್ವಕ ಕೃತ್ಯ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ ಅಂದ್ರು.

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಸಂಭವಿಸಿರುವ ನಿಗೂಢ ಸ್ಫೋಟವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಶ್ವಾನದಳ ಹಾಗೂ ಎಫ್​ಎಸ್​ಎಲ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನ ಪರಿಶೀಲಿಸಲಾಗುತ್ತಿದ್ದು, ನಗರದಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!