ಲಾಕ್​ಡೌನ್ ​‘ಸಂಕಲ್ಪ’ದಿಂದ ಮಂಗಳಮುಖಿಯರ ಬದುಕೇ ಬದಲಾಯ್ತು!

ಕೋಲಾರ: ಅವರೆಲ್ಲ ರಸ್ತೆಗಳಲ್ಲಿ ಬೇಡಿ ಬದುಕುತ್ತಿದ್ದವರು. ಸಮಾಜದಲ್ಲಿ ಶೋಷಣೆಗೆ ಒಳಗಾಗಿ ‌ಸದಾ‌ ಕಣ್ಣೀರು ಹಾಕುತ್ತಿದ್ದ ಜನ. ಈ ಮಧ್ಯೆ, ಕೊರೊನಾ ಲಾಕ್​ಡೌನ್, ಮಹಾಮಾರಿ ಕೊರೊನಾ ಸಾಕಷ್ಟು ಜನರಿಗೆ ಸಂಕಷ್ಟ ತಂದಿಟ್ಟಿದ್ರೆ, ಮತ್ತಷ್ಟು ‌ಜನರಿಗೆ ಜೀವನ ಪರಿವರ್ತನೆಗೇ ದಾರಿ ಮಾಡಿಕೊಟ್ಟಿದೆ.

ಕೊರೊನಾ ಲಾಕ್​ಡೌನ್​ನಿಂದ ಸಾಕಷ್ಟು ತೊಂದರೆಯಾಗಿ ಅದೆಷ್ಟೋ ಜನರ ಬದುಕು ಬೀದಿಗೆ ಬಿದ್ದಿದ್ರೆ, ಅದೆಷ್ಟೋ ಲಕ್ಷಾಂತರ ಜನರು ಹಸಿವಿನಿಂದ ನರಳಿ ನೊಂದು ಬೆಂದಿದ್ದಾರೆ. ಇದರ ಮಧ್ಯೆ ಅದೆಷ್ಟೋ ಜನರ ಬದುಕಲ್ಲಿ ಪರಿವರ್ತನೆಯಾಗಿದೆ. ಅದಕ್ಕೊಂದು ಜೀವಂತ ನಿದರ್ಶನ ಅಂದ್ರೆ ಕೋಲಾರದ ಈ ಮಂಗಳಮುಖಿಯರ ಕೇಂದ್ರ.

ಸಾಮಾನ್ಯವಾಗಿ ಮಂಗಳಮುಖಿಯರು ಅಂದ್ರೆ ಸಮಾಜದಲ್ಲಿ ಅವರನ್ನು‌ ನೋಡೋ ರೀತಿಯೇ ಬೇರೆ ಇಂಥ ಪರಿಸ್ಥಿತಿಯಲ್ಲಿರುವ ಮಂಗಳಮುಖಿಯರು ಇಂದು ಜೀವನ ನಡೆಸುವುದು ಕಷ್ಟಕರವಾಗಿದೆ. ಲಾಕ್​ಡೌನ್ ನಂತರ ಅವರು ಬದುಕು ಕಟ್ಟಿಕೊಳ್ಳುವುದು ದುಃಸ್ಥರವಾಗಿದೆ. ‌ಪ್ರತಿ ದಿನ ಬಸ್ ನಿಲ್ದಾಣ, ಜನಸಂದಣಿ ಇರುವ ಪ್ರದೇಶದಲ್ಲಿ ಮತ್ತು ಸಂತೆ‌ ನಡೆಯುವ ಕಡೆ ಓಡಾಡಿ ಒಂದಿಷ್ಟು ಹಣ ಬೇಡಿ ಜೀವನ ನಡೆಸುತ್ತಿದ್ದವರು. ಆದ್ರೆ ಇಂಥ ಲಾಕ್​ಡೌನ್​ ನಿಂದ ಇಡೀ ದೇಶವೇ ಸ್ಥಬ್ದವಾದಾಗ ಇಂಥವರ ಬದುಕು ಹೇಗಿರಬಹುದು ಎಂಬುದನ್ನು ಊಹೆ ಮಾಡಿಕೊಳ್ಳೋದೂ ಕಷ್ಟ.

ಲಾಕ್​ಡೌನ್​ ಸಂದರ್ಭದಲ್ಲಿ ಈ ಮಂಗಳಮುಖಿಯರು ಮಾಡಿದ್ದೇನು?
ಇವರೆಲ್ಲರೂ ಮಂಗಳಮುಖಿಯರಾಗಿ ಬೇಡಿ ಪಡೆದಿದ್ದಾರೆ, ಲೈಂಗಿಕ ಕೆಲಸ ಕಾರ್ಯಗಳಲ್ಲಿ ತೊಡಗಿ, ಸಾಕಷ್ಟು ಕಷ್ಟ ನೋವು ಅನುಭವಿಸಿದ್ದಾರೆ. ಮೊದಲೆಲ್ಲಾ ಜಾತ್ರೆ, ಅಥವಾ ಮದುವೆ ಸಮಾರಂಭಗಳಿಗೆ ಹೋಗಿ ಅಲ್ಲಿ ಕೊಡುವ ಒಂದಷ್ಟು ಹಣ ಪಡೆದು ಬರುವವರು ಕೆಲವರಿದ್ದರೆ, ಮತ್ತೆ ಕೆಲವರು ದೃಷ್ಟಿ ತೆಗೆಯೋದು, ಪೂಜೆ ಪುನಸ್ಕಾರಗಳನ್ನು ಮಾಡೋ ಕೆಲಸ ಮಾಡುತ್ತಿದ್ರು. ಆದ್ರೆ ಇವರಿಗೆ ಹಣ ಕೊಡುವವರು ಕೆಲವರಾದ್ರೆ ಅವರನ್ನು ಮನಸ್ಸಿಗೆ ಬಂದಂತೆ ಹೀಯಾಳಿಸುತ್ತಿದ್ದ ಜನ ಹಲವರಿದ್ರು. ಹಾಗಾಗಿ ಇಂಥ ನೋವುಗಳಿಂದ ಬೇಸತ್ತಿದ್ದ ಅಶ್ವಿನಿ ರಾಜನ್​ ಹಾಗೂ ಅವರ ಜೊತೆಗಿದ್ದ ಕೆಲವರು ತಮ್ಮದೇ ಹೊಸ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪ ಟ್ರಸ್ಟ್​ ಅನ್ನೋ ಸಂಸ್ಥೆ ಕಟ್ಟಿಕೊಂಡು ಅದರ ಮುಖಾಂತರ ಸ್ವಾವಲಂಬಿ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ.

ಕಳೆದ ನವೆಂಬರ್​ನಲ್ಲಿ ಆರಂಭ ಮಾಡಿದ ಸಂಕಲ್ಪ ಟ್ರಸ್ಟ್​ ಮೂಲಕ ಇವರಿಗೆ ಸಾಲ ಸೌಲಭ್ಯ ಕೂಡಾ ಸಿಕ್ಕಿದ್ದು, ಅದರಲ್ಲಿ ಹೈನುಗಾರಿಕೆ ಆರಂಭ ಮಾಡಿದ್ದಾರೆ. ಈಗಾಗಲೇ ಇವರು ಹಸು, ಕರು, ಎಮ್ಮೆಗಳನ್ನು ಸಾಕಿಕೊಂಡಿದ್ದಾರೆ. ಬರುವ ಹಾಲನ್ನು ಡೈರಿಗೆ ಹಾಗೂ ಹೋಟೆಲ್​ಗಳಿಗೆ ಹಾಕಿ ತಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಈ ಮೂಲಕ ಇನ್ನಷ್ಟು ದೊಡ್ಡ ಮಟ್ಟದ ಕನಸುಗಳನ್ನು ಕಾಣುತ್ತಿದ್ದಾರೆ. ಸರ್ಕಾರದಿಂದ ಕೆಲವು ಸೌಲಭ್ಯಗಳ ನಿರೀಕ್ಷೆಯಲ್ಲಿರುವ ಇವರು ತಮ್ಮದೇ ಸಂಕಲ್ಪ ಬ್ರಾಂಡ್​ನಲ್ಲಿ ಹಾಲಿನ ಉತ್ಪನ್ನಗಳನ್ನು ತಯಾರು ಮಾಡಿ ದೇಶದ ಗಮನ ಸೆಳೆಯುವ ಕನಸು ಕಟ್ಟಿಕೊಂಡಿದ್ದಾರೆ.

ಲಾಕ್​ಡೌನ್​ ನಲ್ಲಿ ಇವರನ್ನು ನೋಡಿ ಬದಲಾದವರು ಹಲವು ಜನ!
ಇನ್ನು ಇವರು ಆರಂಭಿಸಿದ ಸಂಕಲ್ಪ ಟ್ರಸ್ಟ್​ ನಿಂದ ಇಂದು ಅದೆಷ್ಟೋ ತ್ರಿಲಿಂಗಿ ಸಮುದಾಯದವರಿಗೆ ದಾರಿ ದೀಪವಾಗಿದೆ.

ಲಾಕ್​ಡೌನ್​ನಿಂದ ಎಲ್ಲವೂ ಬಂದ್​ ಆಗಿ ಹೋಗಿತ್ತು. ಹೆದ್ದಾರಿ ಬಂದ್​ ಆಗಿತ್ತು. ಸಭೆ ಸಮಾರಂಭಗಳಿರಲಿಲ್ಲ, ಜಾತ್ರಗಳಿಲ್ಲ, ಜನರ ಓಡಾಟವೇ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಭಿಕ್ಷೆ ಬೇಡಿ ತಿನ್ನುತ್ತಿದ್ದ ಈ ಸಮುದಾಯದ ಅದೆಷ್ಟೋ ಜನರು ಇವರ ಬಳಿ ಬಂದು ಸ್ವಾವಲಂಭಿ ಬದುಕಿಗೆ ಸೇರಿಕೊಂಡಿದ್ದಾರೆ. ಇಬ್ಬರಿಂದ ಆರಂಭವಾದ ಈ ಮನೆಯಲ್ಲಿ ಇಂದು ಹತ್ತು ಜನರಿದ್ದಾರೆ. ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದ ಅದೆಷ್ಟೋ ಮಂಗಳಮುಖಿಯರು ಇವರ ಆಶ್ರಯದಲ್ಲಿ ನೆಮ್ಮದಿಯ ಹಾಗೂ ಸ್ವಾವಲಂಭಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇವರನ್ನು ಕೀಳಾಗಿ ಕಾಣುತ್ತಿದ್ದವರ ಮುಂದೆ ಇವರೇ ತಲೆಎತ್ತಿ ಬದುಕುವಷ್ಟು ಉತ್ಸಾಹ ಇವರಲ್ಲಿ ಮೂಡಿದೆ.

ಇದೆಲ್ಲವೂ ಒಂದೇ ದಿನದಲ್ಲಿ ಆಗಲಿಲ್ಲ ಸಾಕಷ್ಟು ದಿನ ಇವರ ಮನ ಪರಿವರ್ತನೆ, ಕೌನ್ಸಿಲಿಂಗ್​ ಮಾಡಿಸಿ ಅವರನ್ನು ಇಂಥ ಬದುಕಿಗೆ ಕರೆತರಲಾಗಿದೆ. ಹಾಗಾಗಿ ಈಗ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲೂ ಕೂಡಾ ನೂರಾರು ಜನ ಮಂಗಳಮುಖಿಯರು ಈ ರೀತಿ ಬದುಕು ನಡೆಸಲು ಮುಂದಾಗಿದ್ದಾರೆ ಅನ್ನೋದು ಅಶ್ವಿನಿ ರಾಜನ್ ಮಾತು.

ಸ್ವಾವಲಂಭಿ ಬದುಕಲ್ಲಿ ನೆಮ್ಮದಿ ಕಾಣುತ್ತಿರುವ ಮಂಗಳ ಮುಖಿಯರು:
ಈ ಕೊರೊನಾ ಲಾಕ್​ಡೌನ್​ ಅದ್ಯಾರಿಗೆ ತೊಂದರೆಯಾಯಿತೋ ಅದೆಷ್ಟೋ ಜನರಿಗೆ ಹಸಿವಿನಿಂದ ನರಳುವಂತೆ ಮಾಡಿತೋ ಗೊತ್ತಿಲ್ಲ. ಆದ್ರೆ ಇವರಿಗೆ ಮಾತ್ರ ಕೊರೊನಾ ಲಾಕ್​ಡೌನ್ ಒಂದು ರೀತಿಯ ಪರಿವರ್ತೆಯ ದಿನವಾಗಿ ಮಾರ್ಪಾಟಾಗಿ ಇವರ ಬದುಕನ್ನೇ ಬದಲಿಸಿದ್ದು, ಇದರಿಂದ ಇವರೆಲ್ಲಾ ಇಂದು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. (ವಿಶೇಷ ಬರಹ-ರಾಜೇಂದ್ರಸಿಂಹ)

Related Posts :

Category:

error: Content is protected !!

This website uses cookies to ensure you get the best experience on our website. Learn more