ಲಸಿಕೆಯ ಪೆಟ್ಟಿಗೆಯ ಮೇಲೆ ಬರೆದಿರುವ ‘ಸರ್ವೇ ಸಂತು ನಿರಾಮಯಾಃ’ ಎಂಬ ಸಾಲು ಕುತೂಹಲಕ್ಕೆ ಕಾರಣವಾಗಿದೆ. ಅದರ ಅರ್ಥವೇನು? ವಿಚಾರವೇನು? ಎಂಬ ಬಗ್ಗೆ ಜಿಜ್ಞಾಸೆಗಳು ಉಂಟಾಗಿದೆ. ಆ ಬಗ್ಗೆ ’ಟಿವಿ9 ಕನ್ನಡ’ ಸಂಸ್ಕೃತ ವಿದ್ವಾಂಸರನ್ನು ಮಾತನಾಡಿಸಿ, ಅರ್ಥ ತಿಳಿದುಕೊಳ್ಳುವ ಪ್ರಯತ್ನ ಮಾಡಿತು.
ಜಗತ್ತಿಗೇ ಮಾರಕವಾಗಿದ್ದ ಕೊರೊನಾ ಕಾಣಿಸಿಕೊಂಡು ಅದಾಗಲೇ ಒಂದು ವರ್ಷವಾಗಿದೆ. ತಕ್ಷಣಕ್ಕೆ ಎದುರಾದ ಆಘಾತವನ್ನು ಎದುರಿಸಿದ್ದೇವೆ. ಕೊವಿಡ್-19 ವಿರುದ್ಧ ಸೆಣಸಾಡಿದ್ದೇವೆ. ವಿಶ್ವದ ಹಲವು ರಾಷ್ಟ್ರಗಳು ಕೊರೊನಾ ಲಸಿಕೆಗಳನ್ನು ತಯಾರಿಸಿವೆ. ಲಸಿಕೆ ವಿತರಣಾ ಕಾರ್ಯವನ್ನೂ ಆರಂಭಿಸಿದೆ. ಈ ವಿಚಾರದಲ್ಲಿ ಭಾರತವೂ ಹಿಂದೆ ಉಳಿದಿಲ್ಲ. ಕೊವಿಶೀಲ್ಡ್, ಕೊವ್ಯಾಕ್ಸಿನ್ ಕೊರೊನಾ ಲಸಿಕೆಗಳನ್ನು ಭಾರತ ತಯಾರಿಸಿದೆ. ಮೊದಲ ಹಂತದ ಲಸಿಕೆ ವಿತರಣೆ ಜನವರಿ 16ರ ಬಳಿಕ ಆರಂಭವಾಗಲಿದೆ.
ಈ ಮಧ್ಯೆ, ಲಸಿಕೆಯ ಪೆಟ್ಟಿಗೆಯ ಮೇಲೆ ಬರೆದಿರುವ ‘ಸರ್ವೇ ಸಂತು ನಿರಾಮಯಾಃ’ ಎಂಬ ಸಾಲು ಕುತೂಹಲಕ್ಕೆ ಕಾರಣವಾಗಿದೆ. ಅದರ ಅರ್ಥವೇನು? ವಿಚಾರವೇನು? ಎಂಬ ಬಗ್ಗೆ ಜಿಜ್ಞಾಸೆಗಳು ಉಂಟಾಗಿದೆ. ಆ ಬಗ್ಗೆ ‘ಟಿವಿ9 ಕನ್ನಡ ಡಿಜಿಟಲ್’ ಡಾ.ಎಂ. ಪ್ರಭಾಕರ ಜೋಷಿ, ಸೂರ್ಯನಾರಾಯಣ ಭಟ್ ಹಿತ್ಲಳ್ಳಿ, ಡಾ. ಸತೀಶ್ ಭಟ್ ಹೆಬ್ಬಾರಕಂಠ ಅವರನ್ನು ಮಾತನಾಡಿಸಿ, ಅರ್ಥ ತಿಳಿದುಕೊಳ್ಳುವ ಪ್ರಯತ್ನ ಮಾಡಿತು.
‘ಸರ್ವೇ ಸಂತು ನಿರಾಮಯಾಃ’ ಎಂಬ ಸಾಲು ಲಸಿಕೆಯ ಪೆಟ್ಟಿಗೆಯ ಮೇಲೆ ಅಚ್ಚಾಗಿದೆ. ಶ್ಲೋಕದ ಸಾಲುಗಳು ಹೀಗಿವೆ:
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್ ||
ಓಂ ಶಾಂತಿಃ ಶಾಂತಿಃ ಶಾಂತಿಃ
ಡಾ. ಎಂ.ಪ್ರಭಾಕರ ಜೋಶಿ ಹೀಗೆ ವಿಚಾರ ಮಾಡಿದ್ದಾರೆ
ಶ್ಲೋಕದ ಸಾಲಿನಂತೆ, ಒಬ್ಬರು ಮತ್ತೊಬ್ಬರಿಗೆ ನಾಲ್ಕು ವಿಧದಲ್ಲಿ ಒಳಿತನ್ನು ಬಯಸಬಹುದು, ಶುಭಹಾರೈಸಬಹುದು. ಮೊದಲ ಸಾಲಿನಲ್ಲಿ ಎಲ್ಲರಿಗೂ ಸುಖವಿರಲಿ ಎಂದು, ಎರಡನೆಯ ಸಾಲಿನಲ್ಲಿ ಎಲ್ಲರೂ ಆರೋಗ್ಯವಾಗಿರಲಿ ಅಥವಾ ರೋಗ ರಹಿತವಾಗಿರಲಿ ಎಂದು, ಮೂರನೇ ಸಾಲಿನಲ್ಲಿ ಎಲ್ಲರೂ ಒಳ್ಳೆಯದನ್ನೇ ಕಾಣಲಿ, ದುಃಖ ಬಾರದಿರಲಿ ಎಂದು ಹೇಳಲಾಗಿದೆ. ಈ ನಾಲ್ಕು ಅಪೇಕ್ಷೆಗಳಲ್ಲಿ ಸದ್ಯ ಬೇಕಾಗುವುದು ಆರೋಗ್ಯ.
‘ಸರ್ವೇ ಸಂತು ನಿರಾಮಯಾಃ’ ಎಂದರೆ, ಎಲ್ಲರೂ ರೋಗರಹಿತರಾಗಲಿ ಎಂಬ ಅರ್ಥ. ಅಂದರೆ, ಆರೋಗ್ಯವಾಗಿರಲಿ ಎಂದು ಹೇಳುವುದು. ಇದನ್ನು ಎರಡು ವಿಧದಲ್ಲಿ ನಾವು ಕಾಣಬಹುದು. ಮೊದಲನೆಯದು, ಎಲ್ಲರೂ ಆರೋಗ್ಯ/ Healthy ಆಗಿರಲಿ ಎಂದು. ಎರಡನೆಯದು ರೋಗರಹಿತವಾಗಿರಲಿ ಎಂದು. ಒಬ್ಬಾತನಿಗೆ ಹೊಟ್ಟೆ ತುಂಬಿರಲಿ ಎಂದು ಹಾರೈಸುವುದಕ್ಕೂ, ಹಸಿವೆ ಇಲ್ಲದೆ ಇರಲಿ ಎನ್ನುವುದಕ್ಕೂ ವ್ಯತ್ಯಾಸವಿದೆ. ಅವೆರಡೂ ಬೇರೆ ಬೇರೆ. ಹಾಗೆಯೇ ಇಲ್ಲೂ ಕೂಡ. ನಿರಾಮಯಾಃ ಅಂದರೆ ರೋಗರಹಿತವಾಗಿರಲಿ ಎಂದು ಅರ್ಥ.
ಆ ಸಾಲಿನ ಮೊದಲ ಪದ ‘ಸರ್ವೇ’ ಎಂಬುದಾಗಿದೆ. ಸರ್ವೇ ಅಂದರೆ ಸರ್ವರೂ ಅಥವಾ ಎಲ್ಲರೂ. ಈ ಪದ ಕೂಡ ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾಗಿದೆ. ಕೊರೊನಾ ಲಸಿಕೆ ಇತರ ಲಸಿಕೆಗಳಂತಲ್ಲ. ಇದು ಎಲ್ಲರಿಗೂ ಬೇಕಾದ ಲಸಿಕೆ. ಮಕ್ಕಳಿಗೆ ಮಾತ್ರ ಕೊಡುವ, 60 ವರ್ಷ ದಾಟಿದವರಿಗೆ ಮಾತ್ರ ಕೊಡುವ ಲಸಿಕೆ ಇದಲ್ಲ. ಹಾಗೆ ನೋಡಿದರೆ, ಲಸಿಕೆಯ ಪೆಟ್ಟಿಗೆಯ ‘ಸರ್ವೇ’ ಎನ್ನುವುದು ಸರಿ. Let the last man be healthy. Entire humanity ಎಲ್ಲರೂ ರೋಗರಹಿತವಾಗಿರಲಿ ಎಂದು ಆ ಸಾಲು ಹೇಳುತ್ತದೆ.
ಸೂರ್ಯನಾರಾಯಣ ಭಟ್ ಹಿತ್ಲಳ್ಳಿ ಹೀಗೆ ಮಾತನಾಡಿದ್ದಾರೆ
ಇದೊಂದು ಸುಪ್ರಸಿದ್ಧ ಶ್ಲೋಕದ ಸಾಲು. ಆಮಯ ಅಂದರೆ ರೋಗ. ನಿರಾಮಯಾಃ ಅಂದರೆ ರೋಗರಹಿತವಾಗಿ ಇರುವುದು. ಎಲ್ಲರೂ ಆರೋಗ್ಯವಂತರಾಗಲಿ. ಸರ್ವರೂ ರೋಗರಹಿತವಾಗಿರಲಿ ಎಂಬುದು ಆ ಸಾಲಿನ ಅರ್ಥ. ಶ್ಲೋಕದ ಕೊನೆಯ ಸಾಲಿನಲ್ಲಿ ಶಾಂತಿಃ ಅಂದರೆ ಶಮನವಾಗಲಿ. ದುಃಖ, ತೊಂದರೆಗಳು ನಾಶವಾಗಲಿ ಎಂಬರ್ಥವನ್ನು ನಾವು ತಿಳಿಯಬಹುದು. ಈ ಸಾಲು ಸನ್ನಿವೇಶಕ್ಕೆ ಸೂಕ್ತವಾದದ್ದೇ ಆಗಿದೆ.
ಡಾ. ಸತೀಶ್ ಭಟ್ ಹೆಬ್ಬಾರಕಂಠ ಹೀಗೆ ತಿಳಿಸಿದ್ದಾರೆ
ಈ ಶ್ಲೋಕವು, ಪ್ರಸಕ್ತ ಕಾಲಕ್ಕೆ ಹೆಚ್ಚು ಔಚಿತ್ಯಪೂರ್ಣ. ಇದಕ್ಕಿಂಥಾ ಒಳ್ಳೆಯ ಸಾಲು ಬೇಕೆಂದರೂ ಸಿಗದು. ಅಷ್ಟು ಸೂಕ್ತವಾಗಿದೆ ಇದು. ಸರ್ವೇ ಸಂತು ನಿರಾಮಯಾಃ ಅಂದರೆ, ಎಲ್ಲರೂ ರೋಗರಹಿತವಾಗಿರಲಿ ಎಂಬ ಉದಾತ್ತ ಭಾವನೆಯನ್ನು ಸೂಚಿಸುವ ಸಾಲು. ರಾಷ್ಟ್ರಕ್ಕೆ ಮಂಗಳವಾದ, ಆಶೀರ್ವಾದ, ಶುಭವನ್ನು ಬಯಸುವ ಸಾಲು. ಸಾಮಾನ್ಯವಾಗಿ ಅಷ್ಟಾವಧಾನದ ಕೊನೆಗೆ ರಾಷ್ಟ್ರಾಶೀರ್ವಾದ ಎಂಬಂತೆ ಈ ಶ್ಲೋಕವನ್ನು ಬಳಸಿಕೊಳ್ಳಲಾಗುತ್ತದೆ.
ಕೊವಿಶೀಲ್ಡ್ ಲಸಿಕೆ
Explainer | ಫೈಝರ್ ಲಸಿಕೆ ಹಾಕಿಸಿಕೊಂಡವರು ಕೊರೊನಾ ಸೋಂಕಿನಿಂದ ಎಷ್ಟು ಸೇಫ್?
EXPLAINER | ಕೊರೊನಾದೊಂದಿಗೆ ಒಂದು ವರ್ಷದ ಸಾಂಗತ್ಯ.. ಇನ್ನೇನಿದ್ದರೂ ಜೊತೆಯಾಗಿ ಬದುಕುವುದು ಅನಿವಾರ್ಯ
Explainer | ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಕ್ಕಿದ್ದಾಯ್ತು; ಮುಂದೇನು?