ಹೆಚ್ಚುತ್ತಿದೆ COVID-2019 ಕೊರೊನಾ ಭೀತಿ: ದಿನೆ ದಿನೇ ದಿವಾಳಿಯಾಗುತ್ತಿದೆ ಚೀನಾ!

, ಹೆಚ್ಚುತ್ತಿದೆ COVID-2019 ಕೊರೊನಾ ಭೀತಿ: ದಿನೆ ದಿನೇ ದಿವಾಳಿಯಾಗುತ್ತಿದೆ ಚೀನಾ!

ಬೀಜಿಂಗ್: ಕೊರೊನಾ ಅಬ್ಬರ ಇನ್ನೂ ತಗ್ಗಿಲ್ಲ. ವೈರಸ್ ಭೀಕರ ರೂಪ ತಾಳಿ, ಈಗಾಗಲೇ ಸಾವಿರ ಜನರನ್ನ ಬಲಿಪಡೆದಿದೆ. ಚೀನಾ ಅಧಿಕೃತವಾಗಿ ತಿಳಿಸಿರುವಂತೆ ಇದುವರೆಗೂ 1,110 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, 43 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದೆ. ಆದ್ರೆ ರೋಗ ನಿಯಂತ್ರಿಸಲು ಚೀನಾದ ಕಮ್ಯೂನಿಸ್ಟ್ ಸರ್ಕಾರ ಕೈಗೊಳ್ಳುತ್ತಿರುವ ಉಗ್ರ ಕ್ರಮಗಳಿಂದಾಗಿ, ಜಗತ್ತಿನ 2ನೇ ಅತಿದೊಡ್ಡ ಆರ್ಥಿಕತೆಯ ಅಧಃಪತನ ಶುರುವಾಗಿದೆ.

ಆತಂಕ, ಭಯ, ದುಖಃ.. ಅಂದಹಾಗೆ ಚೀನಾದಲ್ಲಿ ಈಗ ಎಲ್ಲಿ ನೋಡಿದ್ರೂ ಜನ ಭಯದಲ್ಲೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಮಹಾಮಾರಿ ‘ಕೊರೊನಾ’ ನಮಗೂ ಹಬ್ಬಿಬಿಡುತ್ತೋ ಅನ್ನೋ ಆತಂಕದಲ್ಲೇ ದಿನದೂಡಿ ನರಳಾಡ್ತಿದ್ದಾರೆ. ಆದ್ರೆ ಇದ್ಯಾವುದಕ್ಕೂ ಇನ್ನು ಉತ್ತರ ಸಿಕ್ಕಿಲ್ಲ. ಕೊರೊನಾ ಸೋಂಕು ನಿಯಂತ್ರಣಕ್ಕೆ ಚೀನಾ ನಿರ್ಬಂಧ ವಿಧಿಸಿರುವ ಪ್ರಾಂತ್ಯಗಳಲ್ಲಿ ನೀರವ ಮೌನ ಆವರಿಸಿಬಿಟ್ಟಿದೆ. ಇಂತಹ ಹೊತ್ತಲ್ಲೇ ಚೀನಾ ಅಧ್ಯಕ್ಷ ಜಿನ್​ಪಿಂಗ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸರ್ಕಾರದ ಕ್ರಮಗಳಿಂದ ಚೀನಾ ಆರ್ಥಿಕತೆಗೆ ನಷ್ಟ!
ಹೌದು, ಮಹಾಮಾರಿ ಕೊರೊನಾ ವೈರಸ್ ದಾಳಿಯಿಂದ ಬೆಚ್ಚಿಬಿದ್ದಿರುವ ಚೀನಾದಲ್ಲಿ ಎಲ್ಲವೂ ಸರಿಯಿಲ್ಲ. ಈ ಪರಿಸ್ಥಿತಿಯಲ್ಲಿ ಆರ್ಥಿಕತೆಗೂ ಹಿನ್ನಡೆಯಾಗ್ತಿದೆ. ಅದೆಷ್ಟರಮಟ್ಟಿಗೆ ಅಂದ್ರೆ, ಕಳೆದ 3 ದಶಕಗಳಲ್ಲೇ ಕಂಡು ಕೇಳರಿಯದ ಆರ್ಥಿಕ ಸಂಕಷ್ಟ ಎದುರಾಗಿದೆ. ಒಂದ್ಕಡೆ ಅಮೆರಿಕ ಆರ್ಥಿಕತೆಗೆ ಠಕ್ಕರ್ ಕೊಡುತ್ತಲೇ, ದೈತ್ಯ ಆರ್ಥಿಕತೆಯಾಗಿ ಚೀನಾ ಬೆಳೆಯುತ್ತಿತ್ತು.

ಆದ್ರೆ ಅದ್ಯಾವಾಗ ‘ಕೊರೊನಾ’ ಎಂಬ ಮಹಾಮಾರಿ ಅಪ್ಪಳಿಸಿತ್ತೋ, ಅಂದಿನಿಂದಲೂ ಚೀನಾಗೆ ಶನಿ ಕಾಟ ಶುರುವಾಗಿದೆ. ಚೀನಾದ ಆರ್ಥಿಕತೆ ಉಳಿಸಿಕೊಳ್ಳಲು ಜಿನ್​ಪಿಂಗ್ ಪರದಾಡ್ತಿದ್ದಾರೆ. ಇದನ್ನ ಖುದ್ದು ಜಿನ್​ಪಿಂಗ್ ಸ್ಪಷ್ಟಪಡಿಸಿದ್ದು, ಅಧಿಕಾರಿಗಳ ವಿರುದ್ಧ ಗರಂ ಆದ ಪ್ರಸಂಗವೂ ನಡೆದಿದೆಯಂತೆ.

ಚೀನಾದ ಬಹುತೇಕ ಕಾರ್ಖಾನೆಗಳು ಬಂದ್?
ಸೋಂಕು ಹರಡಲು ಪೂರಕವಾಗಬಹುದಾದ ವಾತಾವರಣವನ್ನ ಚೀನಾ ನಿಯಂತ್ರಿಸುತ್ತಿದೆ. ಕಾರ್ಖಾನೆ ಸೇರಿದಂತೆ ಬಹುತೇಕ ಸಾರ್ವಜನಿಕರು ಕೂಡಬಹುದಾದ ಸಮೂಹ ಸಾರಿಗೆ ಹಾಗೂ ಸಾರ್ವಜನಿಕ ಸಮಾರಂಭಗಳನ್ನ ನಿಷೇಧ ಮಾಡಲಾಗಿದೆ. ಇದು ಸಾಲ-ಸೋಲ ಮಾಡಿ ಬ್ಯುಸಿನೆಸ್ ಆರಂಭಿಸಿದ್ದ ಕಾರ್ಖಾನೆಗಳಿಗೆ ಸಾವಿರಾರು ಕೋಟಿ ನಷ್ಟ ಉಂಟುಮಾಡಿದೆ. ಅಂದಾಜಿನ ಪ್ರಕಾರ ಈಗಾಗಲೇ ಸುಮಾರು 60 ಸಾವಿರ ಕೋಟಿಯಷ್ಟು ಬ್ಯಾಂಕ್​ನ ಲೋನ್ ಪಾವತಿ ಮಾಡಲಾಗದೆ ಉದ್ಯಮಿಗಳು ಪರದಾಡ್ತಿದ್ದಾರೆ. ನಮ್ಮ ಸಹಾಯಕ್ಕೆ ಬನ್ನಿ ಅಂತಾ ಜಿನ್​ಪಿಂಗ್ ಸರ್ಕಾರವನ್ನು ಉದ್ಯಮಿಗಳು ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರಕ ರೋಗಕ್ಕೆ ಮದ್ದು ಸಿದ್ಧವಾಗಲು ಬೇಕು 18 ತಿಂಗಳು!
ಅಂದಹಾಗೆ ಕೊರೊನಾ ವೈರಸ್​ಗೆ ಕಡೆಗೂ ವಿಜ್ಞಾನಿಗಳು ನಾಮಕರಣ ಮಾಡಿದ್ದು, ‘COVID-2019’ ಎಂಬ ನೇಮ್ ಫಿಕ್ಸ್ ಆಗಿದೆ. ಈ ಮೊದಲು ಕೊಟ್ಟಿದ್ದ ವೈಜ್ಞಾನಿಕ ಹೆಸರಿಗೆ ಬದಲು, ಕೊರೊನಾ ವೈರಸ್​ಗೆ ಹೊಸ ಹೆಸರನ್ನು ಇಡಲಾಗಿದೆ. ಆದ್ರೆ ಈ ಮಾರಕ ರೋಗಕ್ಕೆ ಮದ್ದು ಹುಡುಕಲು 18 ತಿಂಗಳು ಬೇಕಿದೆ ಅಂತಾ ‘ವಿಶ್ವ ಆರೋಗ್ಯ ಸಂಸ್ಥೆ’ ತಿಳಿಸಿದೆ. ಇದು ಇಡೀ ವಿಶ್ವವನ್ನ ಬೆಚ್ಚಿಬೀಳುವಂತೆ ಮಾಡಿದೆ. 18 ತಿಂಗಳ ಅವಧಿಯಲ್ಲಿ ‘ಕೊರೊನಾ’ ವೈರಸ್ ಇತರ ದೇಶಗಳಿಗೂ ಹರಡಿದ್ರೆ ಮಾನವ ಸಂಕುಲದ ವಿನಾಶ ಗ್ಯಾರಂಟಿ.

ಒಟ್ನಲ್ಲಿ ಕೊರೊನಾ ಎಂಬ ಮಹಾಮಾರಿ ಇಡೀ ಪ್ರಪಂಚದ ನಿದ್ದೆಗಡಿಸಿದೆ. ಈ ಕಾರಣಕ್ಕಾಗಿಯೇ ಚೀನಾದಿಂದ ಬರುವವರನ್ನ ಏಲಿಯನ್​ಗಳ ರೀತಿ ನೋಡಲಾಗ್ತಿದೆ. ಈಗಾಗ್ಲೇ ಜಪಾನ್ ಬಳಿ ಹಲವಾರು ಶಿಪ್​ಗಳನ್ನ ‘ಕೊರೊನಾ’ ಭೀತಿಯಿಂದ ತಡೆಹಿಡಿಯಲಾಗಿದ್ದು, ಐಷಾರಾಮಿ ಬೋಟ್​ಗಳಲ್ಲಿ ಇರುವವರು ಅನ್ನ, ಆಹಾರಕ್ಕಾಗಿ ಪರದಾಡ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಪರಿಸ್ಥಿತಿ ನಿಯಂತ್ರಿಸಲು ಕೈಲಾದಷ್ಟು ಕೆಲಸ ಮಾಡುತ್ತಿದ್ದು, ಭಾರತ ಸೇರಿದಂತೆ ಬಲಾಢ್ಯ ರಾಷ್ಟ್ರಗಳು ಚೀನಾದ ಸಹಾಯಕ್ಕೆ ನಿಂತಿವೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!