ಕೊರೊನಾ ರುದ್ರ ನರ್ತನಕ್ಕೆ ಕುರುನಾಡು ಕಂಗಾಲು: ಜನತಾ ಕರ್ಫ್ಯೂಗೆ ಎಲ್ಲವೂ ಸ್ತಬ್ಧ!

ಬೆಂಗಳೂರು: ಚೀನಾದಲ್ಲಿ ಅದೆಂತ್ತದ್ದೋ ಕೊರೊನಾ ಅನ್ನೋ ರೋಗ ಬಂದಿದೆಯಂತೆ. ಕೊರೊನಾಕ್ಕೆ ಅಲ್ಲಿ ಇಷ್ಟು ಜನ, ಮತ್ತೆಲ್ಲೋ ಅಷ್ಟು ಜನ ಸತ್ತೋದ್ರಂತೆ. ಅಲ್ಲೆಲ್ಲೋ ಸತ್ತರೆ ಸಾಯ್ಲಿ ಬಿಡಿ, ನಮ್ಮ ದೇಶಕ್ಕೆ ಬರಲ್ಲ ಬಿಡ್ರಿ. ಈ ಟಿವಿಯವರಿಗೆ ಮಾಡೋಕೆ ಕೆಲಸನೇ ಇಲ್ಲ ಸಮ್ಮನ್ನೆ ಹೆದರಿಸುತ್ತಿದ್ದಾರೆ ಅಂತಿದ್ದವರು ಈಗ ಬೆಕ್ಕಸ ಬೆರಗಾಗಿ ಹೋಗಿದ್ದಾರೆ. ಕೊರೊನಾ ಹೆಸರು ಕೇಳಿದ್ರೆ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಿದ್ದಾರೆ. ವಿಶ್ವವನ್ನೇ ಗಢಗಢ ನಡುಗಿಸಿದ ಹೆಮ್ಮಾರಿ ಕೊರೊನಾ ಕರುನಾಡನ್ನೇ ಬೆಚ್ಚಿ ಬೀಳಿಸಿದೆ.

ಕರ್ನಾಟಕವನ್ನು ಖಾಲಿ.. ಖಾಲಿ.. ಮಾಡಿದ ಹೆಮ್ಮಾರಿ..!
ನಿಜ.. ತನ್ನಪಾಡಿಗೆ ಶಾಂತವಾಗಿದ್ದ ಕರ್ನಾಟಕ ಕೊರೊನಾ ಆರ್ಭಟಕ್ಕೆ ಬೆಂಡಾಗಿ ಹೋಗಿದೆ. ಎಲ್ಲವನ್ನೂ ಬಿಟ್ಟು ಜೀವ ಉಳಿದ್ರೆ ಸಾಕು ಅನ್ನುವಂತಾಗಿದೆ. ಕೊರೊನಾವನ್ನ ಕರುನಾಡಿನಿಂದ ಒದ್ದೋಡಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.

ಕೊರೊನಾ ಹೊಡೆತಕ್ಕೆ ಬಿಕೋ ಅಂತಿದೆ ಕಲಬುರಗಿ..!
ಕೊರೊನಾ ಹೊಡೆತಕ್ಕೆ ಕಲಬುರಗಿ ತತ್ತರಿಸಿಹೋಗಿದೆ. ಕಲಬುರಗಿ ಜಿಲ್ಲೆಯ ಜನರು ಮನೆ ಬಿಟ್ಟು ಹೊರಬರಲು ಕೂಡಾ ಇದೀಗ ಭಯ ಪಡುತ್ತಿದ್ದಾರೆ. ಜಿಲ್ಲಾಡಳಿತ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ರಿಂದ ಲಬುರಗಿ ನಗರ ಸೇರಿದಂತೆ ಎಲ್ಲಡೆ ಬಿಕೋ ಅನ್ನುವ ವಾತಾವರಣ ನಿರ್ಮಾಣವಾಗಿದೆ. ಜನರಿಲ್ಲದೆ ರಸ್ತೆಗಳು ಖಾಲಿ ಖಾಲಿಯಾಗಿದ್ರೆ, ಅಂಗಡಿ ಮುಂಗಟ್ಟುಗಳು, ದೇವಸ್ಥಾನಗಳು ಬಂದಾಗಿವೆ.

ಕಳೆದ ಒಂದು ವಾರದಿಂದ ಮಾಲ್ ಗಳು ಓಪನ್ ಆಗಿಲ್ಲಾ. ಚಿತ್ರಮಂದಿರಗಳು ತೆರೆದಿಲ್ಲ. ಹೊಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳು ಕ್ಲೋಸ್ ಆಗಿವೆ. ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತು ಪಡಿಸಿದ್ರೆ ಒಂದು ಟೀ ಅಂಗಡಿ ಕೂಡಾ ಓಪನ್ ಆಗಿಲ್ಲಾ. ಕಲಬುರಗಿಯಿಂದ ಮಹಾರಾಷ್ಟ್ರಕ್ಕೆ ಹೋಗುವ ಖಾಸಗಿ ಮತ್ತು ಸರ್ಕಾರಿ ಬಸ್ ಗಳನ್ನು ನಿಲ್ಲಿಸಲಾಗಿದೆ. ಹೀಗೆ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ನಿಯಂತ್ರಣಕ್ಕೆ ಕಲಬುರಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಮಹಾಮಾರಿಯ ಆರ್ಭಟಕ್ಕೆ ಬಿಸಿಲನಾಡು ಸ್ತಬ್ಧ..!
ಇನ್ನು ಬಿಸಿಲ ನಾಡಿ ರಾಯಚೂರಿನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕರೋನ್​ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾಡಳಿತ ನಿಷಧಾಜ್ನೆ ಜಾರಿಗೊಳಿಸಿದೆ. ಹೀಗಾಗಿ ರಾಯಚೂರು ನಗರದೆಲ್ಲೆಡೆ ಅಘೋಷಿತ ಕರ್ಫ್ಯೂ ವಾತಾವರಣ ನಿರ್ಮಾಣಗೊಂಡಿದೆ.. ರಸ್ತೆಗಳೆಲ್ಲ ಬೀಕೋ ಎನ್ನುತ್ತಿದೆ. ಬಹುತೇಕ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನ ಬಂದ್ ಮಾಡಲಾಗಿದೆ. ಜನ ಸ್ವಯಂಪ್ರೇರಿತರಾಗಿ ಮನೆ ಬಿಟ್ಟು ಹೊರ ಬರುತ್ತಿಲ್ಲ. ಅಲ್ಲದೇ ರಾಯಚೂರ ಜಿಲ್ಲೆಯಿಂದ ನೆರೆಯ ಕಲಬುರಗಿ ಜಿಲ್ಲೆಗೆ ತೆರಳುತ್ತಿದ್ದ ಎಲ್ಲಾ ಬಸ್‌ಗಳ ಸಂಚಾರ ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲ ನಗರದೆಲ್ಲೆಡೆ ಇಂದಿರಾ ಕ್ಯಾಂಟಿನ್‌ಗಳನ್ನ ಸಹ ಮುಚ್ಚಲಾಗಿದೆ.

ನಾಳೆಯ ಜನತಾ ಕರ್ಫ್ಯೂಗೆ ಕಡಲ ನಗರಿ ಬಂದ್‌…!
ನಾಳೆಯ ಜನತಾ ಕರ್ಫ್ಯೂ ಗೆ ಕಡಲ ನಗರಿ ಮಂಗಳೂರು ಬಂದ್ ಆಗೋದು ಬಹುತೇಕ ಖಚಿತವಾಗಿದೆ. ಬಾರ್, ಹೋಟೆಲ್, ಮಾರ್ಕೆಟ್, ಬಸ್ ಸಂಚಾರ ಎಲ್ಲವೂ ಬಂದ್ ಆಗಲಿದ್ದು, ಸ್ವಯಂಪ್ರೇರಿತವಾಗಿ ಬಂದ್ ಮಾಡಲು ಜನ ಸಿದ್ಧರಾಗಿದ್ದಾರೆ. ಈಗಾಗಲೇ ಸರ್ಕಾರಿ ಬಸ್ ಗಳು ಶೇಕಡಾ 70 ರಷ್ಟು ಕಾರ್ಯಾಚರಣೆ ನಿಲ್ಲಿಸಿದ್ದು ಹೊರರಾಜ್ಯದ ಬಸ್ ಗಳು ಸಂಪೂರ್ಣ ಸಂಚಾರ ನಿಲ್ಲಿಸಲಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಬಹುತೇಕ ಮಂಗಳೂರು ಸ್ತಬ್ಧವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಅಲ್ಲದೇ ಇಂದಿನಿಂದ ನಗರದಾದ್ಯಂತ ಬ್ಯೂಟಿ ಪಾರ್ಲರ್, ಸೆಲ್ಯೂನ್ ಬಂದ್ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಆದೇಶಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂದಿನಿಂದ ಮುಂದಿನ ಆದೇಶದವರೆಗೆ ಮುಚ್ಚಲು ಆದೇಶಿಸಲಾಗಿದೆ.

ಕಟ್ಟಿಂಗ್‌ ಶಾಪ್‌ಗಳಿಗೆ ತಟ್ಟಿದ ಕೊರೊನಾ ಎಫೆಕ್ಟ್‌:
ಕೊರೊನಾ ಭೀತಿ ಹೆಚ್ಚುತ್ತಿದ್ದಂತೆ, ಕಟ್ಟಿಂಗ್ ಶಾಪ್ ಗಳ ಬಗ್ಗೆ ಆತಂಕ ಉಂಟಾಗುತ್ತಿದೆ. ಹೀಗಾಗಿ ಉಡುಪಿ ಜಿಲ್ಲೆಯ ಕ್ಷೌರದ ಅಂಗಡಿಗಳಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸವಿತಾ ಸಮಾಜದ ವಿವಿಧೋದ್ದೇಶ ಸೌಹಾರ್ದ ಸಹಕಾರ ನಿಯಮಿತ ಮತ್ತು ಉಡುಪಿ ಜಿಲ್ಲಾ ಸವಿತಾ ಸಮಾಜದ ಜಂಟಿ ವತಿಯಿಂದ ಜಿಲ್ಲೆಯ ಎಲ್ಲಾ ಕ್ಷೌರಿಕ ಬಂಧುಗಳಿಗೆ ಉಚಿತ ಮಾಸ್ಕ ವಿತರಣೆ ಮಾಡಲಾಯ್ತು. ಕ್ಷೌರಿಕ ವೃತ್ತಿ ಮಾಡುವವರು ಕಡ್ಡಾಯವಾಗಿ ಮಾಸ್ಕ ಧರಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಮಾಡಬೇಕು. ಹಾಗೇ ಬಂದ ಗ್ರಾಹಕರಿಗೆ ಕೈತೊಳೆಯಲು ಸ್ಯಾನಿಟೈಸರ್ ಕೊಡಬೇಕು ಎಂದು ಸಲಹೆ ನೀಡಲಾಯ್ತು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!