ಜಾತಿ ನಿಂದನೆ ಆರೋಪ: ಕ್ಷಮೆಯಾಚಿಸಿದ ಯುವರಾಜ್ ಸಿಂಗ್

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಹರಿಯಾಣಾದ ಹನ್ಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗಾದ್ರೆ ಯುವರಾಜ್ ಯಾರಿಗಾದ್ರೂ ದೋಖಾ ಮಾಡಿದ್ದಾರಾ? ಇಲ್ಲಾ ಹಲ್ಲೆ ಮಾಡಿದ್ರಾ ಅಂತಾ ನೀವು ಯೋಚಿಸ್ತಿರಬಹುದು. ಆದ್ರೆ ಯುವರಾಜ್ ಸಿಂಗ್ ಮೇಲೆ ದೂರು ದಾಖಲಾಗೋದಕ್ಕೆ ಇದ್ಯಾವುದು ಕಾರಣವಲ್ಲ.

ಇತ್ತೀಚೆಗೆ ಯುವರಾಜ್‍ ಸಿಂಗ್ ತಮ್ಮ ಇನ್ಸ್​ಟಾಗ್ರಾಂನಲ್ಲಿ ಕ್ರಿಕೆಟಿಗರಾದ ರೋಹಿತ್‍ ಶರ್ಮಾ ಹಾಗೂ ಯಜುವೇಂದ್ರ ಚಹಲ್ ಜೊತೆ ಕ್ರಿಕೆಟ್ ವಿಚಾರವಾಗಿ ಚರ್ಚೆ ನಡೆಸಿದ್ರು. ಈ ವೇಳೆ ಯುವಿ ಕೆಲ ಹಾಸ್ಯ ಚಟಾಕಿಗಳನ್ನ ಹಾರಿಸೋ ಮೂಲಕ ರೋಹಿತ್ ಮತ್ತು ಚಹಲ್ ನಗೆ ಗಡಲಲ್ಲಿ ತೇಲೋ ಹಾಗೇ ಮಾಡಿದ್ರು.

ಮಾತನಾಡುವ ಭರದಲ್ಲಿ ಯುವಿ ಯಡವಟ್ಟು:
ಆದ್ರೆ ಇದೇ ವೇಳೆ ಯುವರಾಜ್ ಸಿಂಗ್ ತಮಗೆ ಗೊತ್ತಿಲ್ಲದೇ ತಪ್ಪೊಂದನ್ನ ಮಾಡಿದ್ರು. ಚಹಲ್ ಜೊತೆ ಮಾತನಾಡೋ ವೇಳೆ ಜಾತಿ ನಿಂದನೆಯ ಪದವೊಂದನ್ನ ಬಳಿಸಿಬಿಟ್ಟಿದ್ರು. ಇದು ಯುವಿಗೂ ಗೊತ್ತಿರಲಿಲ್ಲ. ಹಾಗೇ ಚಹಲ್​ಗೂ ಗೊತ್ತಿರಲಿಲ್ಲ. ಆದ್ರೆ ಹರಿಯಾಣದ ದಲಿತ ಹಕ್ಕು ಸೇನೆಯ ಮುಖಂಡ ರಜತ್, ಕಲ್ಸನ್ ಪೊಲೀಸ್ ಠಾಣೆಯಲ್ಲಿ ಯುವರಾಜ್ ಸಿಂಗ್ ಜಾತಿ ನಿಂದನೆ ಮಾಡಿದ್ದಾರೆ ಅಂತಾ ದೂರು ದಾಖಲಿಸಿದ್ದಾರೆ.

ಯುವಿ ಹೇಳಿಕೆಗಳಿಂದ ದಲಿತ ಸಮುದಾಯದ ಜನರ ಭಾವನೆಯನ್ನು ಕೆರಳಿಸುವಂತಿದೆ ಎಂದು ಹೇಳಿ, ಯುವಿ ನೀಡಿದ ಹೇಳಿಕೆಯ ವಿಡಿಯೋದೊಂದಿಗೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಡಿಜಿಪಿಗೆ ತಿಳಿಸಿದ್ದು ಯುವಿ ತಪ್ಪು ಮಾಡಿರುವುದು ಸಾಬೀತಾದ್ರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹನ್ಸಿ ಎಸ್ಪಿ ಲೋಕೇಂದ್ರ ಸಿಂಗ್ ತಿಳಿಸಿದ್ದಾರೆ.

ಕ್ಷಮೆ ಕೇಳಿದ ಯುವರಾಜ್ ಸಿಂಗ್:
ಆದ್ರೀಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ತಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಅಲ್ಲದೆ, ತಾನು ಉದ್ದೇಶಪೂರ್ವಕವಾಗಿ ಆಗಲಿ ಅಥವಾ ವೈಯಕ್ತಿಕ ನಿಂದನೆಗಾಗಲಿ, ಅಥವಾ ಜಾತಿ ನಿಂದನೆ ಉದ್ದೇಶದಿಂದಾಗಲೀ ಜಾತಿ ಸೂಚಕ ಪದ ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಒಟ್ನಲ್ಲಿ ಯುವಿ ಮಾತನಾಡೋ ಭರದಲ್ಲಿ ಯಡವಟ್ಟು ಮಾಡಿಕೊಂಡು, ಕ್ಷಮೆ ಕೇಳಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more