ಬೆಂಗಳೂರು:ಬಿಜೆಪಿಯ (BJP) ಅತಿರಥ ಮಹಾರಥರೆಲ್ಲ ತನ್ನ ಜೇಬಿನಲ್ಲಿದ್ದಾರೆ. ತನ್ನ ಪ್ರಭಾವ ಬಳಸಿ ಸೂಕ್ತ ಹುದ್ದೆ/ಕೆಲಸ ಮಾಡಿಸಿಕೊಡುವುದಾಗಿ ಆಟೋ ಡ್ರೈವರ್ನಿಂದ ಹಿಡಿದು ಘಟಾನುಘಟಿಗಳಿಗೂ ಉಂಡೆನಾಮ ತಿಕ್ಕಿದ್ದ ಯುವರಾಜ ಸ್ವಾಮಿ ಎಂಬ ಮಹಾವಂಚಕ ಇತ್ತೀಚೆಗೆ ಸಿಸಿಬಿ ಪೊಲೀಸರಿಗೆ (CCB) ಸಿಕ್ಕಿಬಿದ್ದು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನದೂಡುತ್ತಿರುವುದು ತಮಗೆಲ್ಲಾ ತಿಳಿದೇ ಇದೆ. ಈಗ ಮತ್ತೊಬ್ಬ ವಂಚಕ ಇದೇ ಮಾದರಿಯಲ್ಲಿ ಜನರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಗಮನಾರ್ಹವೆಂದ್ರೆ ಈತ ಸಹ ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ಅವರ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನು ಅಮಾಯಕ ಜನರ ಮುಂದೊಡ್ಡಿ ಧಮ್ಕಿ ಹಾಕಿ, ವಂಚನೆ ಎಸಗಿದ್ದಾನೆ.
ರಾಘವೇಂದ್ರ ಸರ್ವಂ ಎಂಬ ಈ ಸೆಲೆಬ್ರಿಟಿ ವಂಚಕನ ವಿರುದ್ಧ ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣೆಯಲ್ಲಿ ಇದೀಗ ಕೇಸ್ ದಾಖಲಾಗಿದೆ. ರಾಘವೇಂದ್ರನಿಗೆ ಸಾಥ್ ಕೊಟ್ಟ ರಾಜೇಶ್ ಎಂಬಾತನ ವಿರುದ್ದವೂ ಕೇಸ್ ದಾಖಲಾಗಿದ್ದು, ಅದೀಗ ಸಿಸಿಬಿಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಆದರೆ ಸದ್ಯಕ್ಕೆ ಬೆಂಗಳೂರು ದಕ್ಷಿಣ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದಾರೆ.
ರಾಘವೇಂದ್ರ ಸರ್ವಂ (Raghavendra Sarvam) ಎಂಬಾತ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯಾಧ್ಯಕ್ಷರ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾನೆ. ಈ ಬಗ್ಗೆ ವಿಹೆಚ್ಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಎಂಬುವವರು ದೂರು ನೀಡಿದ್ದಾರೆ. ಇದೇ ಫೆಬ್ರವರಿ 18ರಂದು ವಿಹೆಚ್ಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಬೆಂಗಳೂರಿಗೆ ಆಗಮಿಸಿದ್ದರು. ಈ ಮಾಹಿತಿ ಪಡೆದು ಬಸವರಾಜಗೆ ರಾಘವೇಂದ್ರ ಕರೆ ಮಾಡಿದ್ದ. ತಾನು ಅಲೋಕ ಕುಮಾರ್ ಅವರನ್ನು ಭೇಟಿ ಆಗಬೇಕು. ಅಲೋಕ್ ಕುಮಾರ್ ಅವ್ರ ಫೋನ್ ನಂಬರ್ ಬೇಕು ಎಂದು ಕೇಳಿದ್ದಾನೆ. ಈ ವೇಳೆ ನಂಬರ್ ಕೊಡಲಾಗುವುದಿಲ್ಲ ಎಂದು ಬಸವರಾಜ ನಯವಾಗಿ ತಿರಸ್ಕರಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯಾಧ್ಯಕ್ಷರ ಹೆಸರು ಹೇಳಿಕೊಂಡು ವಂಚನೆ ಮಾಡಿರುವ ಆರೋಪಿ ರಾಘವೇಂದ್ರ ಸರ್ವಂ (Raghavendra Sarvam)
ಆದರೂ ಬೆಂಬಿಡದ ರಾಘವೇಂದ್ರ ಸರ್ವಂ ನಿಮ್ಮ ರಾಷ್ಟ್ರೀಯ ಅಧ್ಯಕ್ಷರೇ ಏರ್ಪೋರ್ಟ್ಗೆ ಬರಲು ಹೇಳಿದ್ದಾರೆ. ಏರ್ಪೋರ್ಟ್ನಲ್ಲಿ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ. ಅದಾದ ಬಳಿಕ ಅಲೋಕ್ ಕುಮಾರ್ ಅವ್ರಿಗೆ ವಿನಯ್ ಗುರೂಜಿ ಅವ್ರ ಭೇಟಿ ಮಾಡಿಸಬೇಕು ಎಂದೂ ಹೇಳಿದ್ದಾನೆ. ಈ ವೇಳೆ ಬಸವರಾಜ ಫೋನ್ ಕಟ್ ಮಾಡಿದ್ದರು. ಇಷ್ಟೆಲ್ಲಾ ಆದ ಬಳಿಕ ರಾಘವೇಂದ್ರ ಸರ್ವಂ ಏರ್ಪೋರ್ಟ್ಗೆ ತೆರಳಿ ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾನೆ.
ಅಲೋಕ್ ಕುಮಾರ್ ಭೇಟಿಗೆ ರಾಘವೇಂದ್ರ ಸರ್ವಂ ಸುಳ್ಳು ಐಡೆಂಟಿಟಿ ಕೊಟ್ಟಿದ್ದ ಎಂಬುದು ಗಮನಾರ್ಹ. ವಿಹಿಂಪ ಮತ್ತು ಕೇಂದ್ರ ಸರ್ಕಾರದ ಹಿಂದೂ ಸಲಹೆಗಾರ ಸಮಿತಿಯ ಸದಸ್ಯ ಎಂದು ಹೇಳಿಕೊಂಡಿದ್ದ. ಇದೇ ಐಡೆಂಟಿಟಿ ಬಳಸಿ, ಏರ್ಪೋರ್ಟ್ ಪ್ರವೇಶ ಮಾಡಿ ಅಲೋಕ್ ಕುಮಾರರನ್ನು ಭೇಟಿ ಮಾಡಿ, ಪರಿಚಯ ಮಾಡಿಕೊಂಡಿದ್ದ.
ಟಿವಿ9 ಹೆಸರು ಹೇಳಿ ಬೆದರಿಕೆ ಹಾಕಿದ್ದ ರಾಜೇಶ್
ಇದನ್ನೆಲ್ಲಾ ಗಮನಿಸಿದ ಬಸವರಾಜ ಇದೇ ವಿಚಾರವನ್ನು ರಾಘವೇಂದ್ರನ ಎದುರು ಪ್ರಸ್ತಾಪ ಮಾಡಿದ್ದಕ್ಕೆ ಆತ ಕೋಪಗೊಂಡು, ಬಸವರಾಜಗೆ ಧಮ್ಕಿ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಜನವರಿ 22 ರಂದು ಬಸವರಾಜಗೆ 67 ಬಾರಿ ಕರೆ ಮಾಡಿದ್ದ ರಾಘವೇಂದ್ರ ಸರ್ವಂ, ತಾನೊಬ್ಬ ಪ್ರಭಾವಿ ವ್ಯಕ್ತಿ.. ತನ್ನ ವಿರುದ್ಧ ಮಾತನಾಡಿದ್ರೆ ಚೆನ್ನಾಗಿ ಇರೊದಿಲ್ಲಾ.. ಹುಷಾರ್ ಎಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಇನ್ನು ರಾಜೇಶ್ ಎಂಬಾತ ಟಿವಿ 9 ಹೆಸರು ಹೇಳಿ ಬೆದರಿಕೆ ಹಾಕಿದ್ದಾನೆ. ಅದಾದ ಮೇಲೆ ರಾಘವೇಂದ್ರ ಸರ್ವಂ, ಬಸವರಾಜಗೆ ಕರೆ ಮಾಡಿದ್ದಾನೆ. ತಾನು ಟಿವಿ 9 ವಾಹಿನಿಯ ಮುಖ್ಯಸ್ಥ ಎಂದು ಪರಿಚಯ ಮಾಡಿಕೊಂಡಿದ್ದಾನೆ.
ಆ ವೇಳೇ ಆರೋಪಿ ರಾಘವೇಂದ್ರ ಸರ್ವಂ ನಿಮ್ಮ ಬಗ್ಗೆ ಸಂದರ್ಶನ ಮಾಡಬೇಕು ಎಂದು ಬಸವರಾಜಗೆ ಕೇಳಿದ್ದಾನೆ. ನೀವು ಎಲ್ಲಿ ಇರುವಿರೋ ಅಲ್ಲಿಗೇ ಬಂದು ಸಂದರ್ಶನ ಮಾಡುತ್ತೇನೆ ಎಂದಿದ್ದಾನೆ. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಬಸವರಾಜ ಸಂದರ್ಶನದ ಅವಶ್ಯಕತೆ ತನಗಿಲ್ಲಾ ಎಂದಿದ್ದಾರೆ. ಅದಕ್ಕೆ ಸಿಟ್ಟಿಗೆದ್ದ ರಾಜೇಶ್, ಬಸವರಾಜಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ನಂತ್ರ ನಿನಗೆ ಒಂದು ಗತಿ ಕಾಣಿಸುತ್ತೇವೆ ಎಂದೂ ಬೆದರಿಕೆ ಹಾಕಿದ್ದಾನೆ ರಾಜೇಶ್. ಅದಾದ ಬಳಿಕವೂ ಬಸವರಾಜಗೆ ರಾಜೇಶ್ ಪದೆ ಪದೇ ಕರೆ ಮಾಡಿ, ಬೆದರಿಕೆ ಹಾಕಿದ್ದಾನೆ.
ಕುತೂಹಲಕಾರಿ ಸಂಗತಿಯೆಂದರೆ ರಾಘವೇಂದ್ರ ಸರ್ವಂ ಕಾಂಗ್ರೆಸ್ ನಲ್ಲಿಯೂ ಗುರುತಿಸಿಕೊಂಡಿದ್ದ ಬಗ್ಗೆ ಮಾಹಿತಿ ದೊರೆತಿದೆ. ಕಾಂಗ್ರೆಸ್ನ ರಾಜ್ಯದ ಹಾಗು ರಾಷ್ಟ್ರೀಯ ಪ್ರಭಾವಿ ನಾಯಕರ ಹೆಸರು ಬಳಸಿ ಹಲವರಿಗೆ ವಂಚನೆ ಮಾಡಿರುವ ಬಗ್ಗೆ ಮಾಹಿತಿಯಿದೆ. ಸರ್ಕಾರಿ ಕೆಲಸ, ಪೋಸ್ಟಿಂಗ್, ಟ್ರಾನ್ಸ್ಫರ್ ಮಾಡಿಸುವುದಾಗಿ ಹಲವರಿಗೆ ವಂಚನೆ ಮಾಡಿದ್ದಾನೆ. ಹಲವಾರು ಬಿಲ್ಡರ್ಗಳಿಗೆ ಜಮೀನು ಕೊಡಿಸುತ್ತೇನೆ ಎಂದು ವಂಚನೆ ಮಾಡಿರೊ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಸದ್ಯ ಸಿಸಿಬಿ ಪೊಲೀಸರು ರಾಘವೇಂದ್ರ ಸರ್ವಂ ಹಾಗೂ ರಾಜೇಶ್ ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ Tv9 ಗೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಮಾಹಿತಿ ನೀಡಿದ್ದಾರೆ. ರಾಘವೇಂದ್ರ ಸರ್ವಂ ಹಾಗೂ ರಾಜೇಶ್ ವಿರುದ್ದ ಕೇಸ್ ದಾಖಲಾಗಿದೆ.