WhatsApp Fraud: 50 ಸೆಕೆಂಡ್​ನಲ್ಲಿ ಹೋಗಿದ್ದು 30 ಸಾವಿರ; ಶಿವಮೊಗ್ಗದಲ್ಲಿ ವಾಟ್ಸ್ಯಾಪ್​ ಹ್ಯಾಕ್ ಮಾಡಿ ವಂಚನೆ, ವ್ಯಾಪಕ ಆತಂಕ

ಇದುವರೆಗೆ Facebook ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ದುಡ್ಡು ಕೇಳುತ್ತಾ ಇದ್ದರು. ಈಗ ಒಂದು ಫೋನ್ ಕಾಲ್ ಮಾಡಿ ನಿಮ್ಮ whatsApp ಅನ್ನು hack ಮಾಡಬಹುದು.

WhatsApp Fraud: 50 ಸೆಕೆಂಡ್​ನಲ್ಲಿ ಹೋಗಿದ್ದು 30 ಸಾವಿರ; ಶಿವಮೊಗ್ಗದಲ್ಲಿ ವಾಟ್ಸ್ಯಾಪ್​ ಹ್ಯಾಕ್ ಮಾಡಿ ವಂಚನೆ, ವ್ಯಾಪಕ ಆತಂಕ
ದೀಪಾ ಹಿರೇಗುತ್ತಿ ಅವರ ಪೋಸ್ಟ್​ಗೆ ಬಂದಿರುವ ಕಾಮೆಂಟ್​
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Aug 21, 2022 | 9:27 AM

ಚಿಕ್ಕಮಗಳೂರು: ವಾಟ್ಸ್ಯಾಪ್ ಖಾತೆಯನ್ನು ಹ್ಯಾಕ್ ಮಾಡಿ (WhatsApp Fraud) ಸಂಬಂಧಿಕರು ಹಾಗೂ ಸ್ನೇಹಿತರಿಗೆ ಹಣದ ಅಗತ್ಯವಿದೆ ಎನ್ನುವ ಸಂದೇಶ ರವಾನಿಸುವ ಮೂಲಕ ಸಾವಿರಾರು ರೂಪಾಯಿ ವಂಚಿಸಿರುವ ಘಟನೆ ಶಿವಮೊಗ್ಗ (Shivamogga City) ನಗರದಲ್ಲಿ ನಡೆದಿದೆ. ಕಾಲೇಜಿನಲ್ಲಿ ಲೆಕ್ಕಶಾಸ್ತ್ರ (Accountancy) ಉಪನ್ಯಾಸಕಿಯಾಗಿರುವ ಮಹಿಳೆ ವಂಚನೆಗೆ ಬಲಿಯಾಗಿ ಪರಿತಪಿಸುತ್ತಿದ್ದಾರೆ. ಅವರ ಕೋರಿಕೆ ಮೇರೆಗೆ ಅವರ ಹೆಸರನ್ನು ‘ಟಿವಿ9 ಕನ್ನಡ ಡಿಜಿಟಲ್’ ಪ್ರಕಟಿಸಿಲ್ಲ. ವಂಚನೆ ಕುರಿತು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಪಿಯು ಕಾಲೇಜಿನ ಉಪನ್ಯಾಸಕಿ ಮತ್ತು ಲೇಖಕಿ ದೀಪಾ ಹಿರೇಗುತ್ತಿ ಫೇಸ್​ಬುಕ್​ ಪೋಸ್ಟ್​ನಲ್ಲಿ ವಿವರಿಸಿದ್ದಾರೆ.

‘ಯಾರಿಂದ ಮೆಸೇಜ್ ಬಂದರೂ ಕರೆ ಮಾಡದೇ ದುಡ್ಡು ಕಳಿಸಬೇಡಿ’ ಎಂದು ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ. ‘ಇದುವರೆಗೆ ಫೇಸ್​ಬುಕ್​ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ದುಡ್ಡು ಕೇಳುತ್ತಿದ್ದರು. ಈಗ ಒಂದು ಫೋನ್ ಕಾಲ್ ಮಾಡಿ ನಿಮ್ಮ ವಾಟ್ಸ್ಯಾಪ್​ ಹ್ಯಾಕ್ ಮಾಡಬಹುದು’ ಎಂದು ಎಚ್ಚರಿಸಿದ್ದಾರೆ. ದೀಪಾ ಹಿರೇಗುತ್ತಿ ಅವರು ಈ ಪೋಸ್ಟ್​ ವೈರಲ್ ಆಗಿದ್ದು, 700ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 120ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದು, 218 ಅಕೌಂಟ್​ಗಳಲ್ಲಿ ಶೇರ್ ಆಗಿದೆ.

ದೀಪಾ ಅವರ ಪೋಸ್ಟ್​ನ ಒಕ್ಕಣೆ ಇದು… ‘ಬಹಳ ಮುಖ್ಯ ವಿಷಯ. ದಯವಿಟ್ಟು ಓದಿ. ಹಂಚಿಕೊಳ್ಳಿ. ಮೊನ್ನೆ ನನ್ನ ಸಹೋದ್ಯೋಗಿ ಒಬ್ಬರ ಸಂಬಂಧಿಯ ಮನೆಯಲ್ಲಿ ನಡೆದ ಘಟನೆ. ತಂಗಿಯ ವಾಟ್ಸ್ಯಾಪ್ ನಂಬರ್​ನಿಂದ ಅಕ್ಕನಿಗೆ ‘ಅರ್ಜೆಂಟ್ 9000 ಬೇಕು. ನನ್ನ ಕಾರ್ಡ್ ಬ್ಲಾಕ್ ಆಗಿದೆ. ಹಣ ಕಳಿಸು’ ಎಂಬ ಮೆಸೇಜ್ ಬಂದಿದೆ. ಅದೂ ತಂಗಿ ಅಕ್ಕನನ್ನು ಕರೆಯುವ ನಿಕ್ ನೇಮ್ ಸಹಿತ. ಆಯ್ತು ಎಂದು ಇವಳು ಆ ನಂಬರ್​ಗೆ ಒಂಬತ್ತು ಸಾವಿರ ಹಾಕಿದ್ದಾಳೆ. ತಕ್ಷಣ ಇನ್ನು 21 ಸಾವಿರ ಹಾಕು, ಒಟ್ಟಿಗೇ 30 ಸಾವಿರ ಕಳುಹಿಸುತ್ತೇನೆ ನಾಳೆ ಎಂದು ಮೆಸೇಜ್ ಬಂದಿದೆ. ಅಕ್ಕ ಮತ್ತೆ 21,000 ಕಳಿಸಿದ್ದಾರೆ. ಕೆಲ ಕ್ಷಣದಲ್ಲೇ ಮತ್ತೆ 25,000 ಕಳಿಸು ಎಂಬ ಸಂದೇಶ ಬಂದಿದೆ. ಈಗ ಅಕ್ಕನಿಗೆ ಅನುಮಾನ ಶುರು ಆಗಿದೆ. ಫೋನ್ ಮಾಡಿದರೆ ಆ ಕಡೆ ಎತ್ತುವವರಿಲ್ಲ. ಅದೇ ವೇಳೆಗೆ ತಂಗಿಯ ಸ್ನೇಹಿತೆ ಕೂಡ 9 ಸಾವಿರ ಹಾಕಿದ್ದಾಳೆ. ಮತ್ತೊಬ್ಬ ಸ್ನೇಹಿತ ಒಂದು ಸಾವಿರ ಹಾಕಿ ಫೋನ್ ಮಾಡಿದರೆ ಈ ಕಡೆ ಫೋನ್ ಎತ್ತುತ್ತಾ ಇಲ್ಲ. ಅದೇ ವೇಳೆಗೆ ತಂಗಿಯ ಚಿಕ್ಕಮ್ಮನ ಹೈಸ್ಕೂಲ್ ಓದುವ ಮಗಳಿಗೂ hi ಎಂದು ಸಂದೇಶ ಬಂದಿದೆ. ಇವಳು hi ಅಂದಿದ್ದಾಳೆ. 9,000 ಕಳಿಸು ಎಂದು ಸಂದೇಶ ಬಂದಿದೆ. ಅರೆ, ಚಿಕ್ಕಮ್ಮ ಅಮ್ಮನ ಹತ್ತಿರ ಕೇಳೋದು ಬಿಟ್ಟು ನನ್ನ ಹತ್ತಿರ ದುಡ್ಡು ಕೇಳುತ್ತಾ ಇದ್ದಾಳೆ ಏಕೆ ಎಂದು ಅಮ್ಮನಿಗೆ ಹೇಳಿದ್ದಾಳೆ. ವಿಡಿಯೋ ಕಾಲ್ ಮಾಡಿದರೆ ಯಾರೂ ಇಲ್ಲ. ಕಾರಣ ತಂಗಿಯ whatsApp hack ಆಗಿದೆ’ ಎಂದು ದೀಪಾ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಬರಹ ಮುಂದುವರಿಸಿರುವ ಅವರು, ‘ನೋಡಿ, ಹತ್ತು ನಿಮಿಷದಲ್ಲಿ ಅದೆಷ್ಟು ಮಂದಿಗೆ ಮೆಸೇಜ್ ಮಾಡಿ ಅದೆಷ್ಟು ದುಡ್ಡು ಹೊಡೆದಿದ್ದಾರೆ! ಇದುವರೆಗೆ Facebook ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ದುಡ್ಡು ಕೇಳುತ್ತಾ ಇದ್ದರು. ಈಗ ಒಂದು ಫೋನ್ ಕಾಲ್ ಮಾಡಿ ನಿಮ್ಮ whatsApp ಅನ್ನು hack ಮಾಡಬಹುದು. So be careful. ಯಾರಿಂದ ಮೆಸೇಜ್ ಬಂದರೂ ಕರೆ ಮಾಡದೇ ದುಡ್ಡು ಕಳಿಸಬೇಡಿ. ಇದನ್ನು ಓದಿದ ನೀವು ಮತ್ತು ನಿಮ್ಮ ಸಂಬಂಧಿಗಳು, ಸ್ನೇಹಿತರು ಯಾರೂ ದುಡ್ಡು ಕಳೆದುಕೊಳ್ಳಬೇಡಿ’ ಎಂದು ಎಚ್ಚರಿಸಿದ್ದಾರೆ.

ದುಡ್ಡು ಕಳೆದುಕೊಂಡವರು ಒಬ್ಬಿಬ್ಬರಲ್ಲ

ದೀಪಾ ಹಿರೇಗುತ್ತಿ ಅವರ ಪೋಸ್ಟ್​ಗೆ ಕಾಮೆಂಟ್ ಮಾಡಿರುವ ಹಲವರು ಆನ್​ಲೈನ್ ವಂಚನೆಗೆ ಸಂಬಂಧಿಸಿದ ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ‘ಇದೆ ರೀತಿ ನನಗೂ ವಾಟ್ಸಪ್ ನಲ್ಲಿ ಮೆಸೇಜ್ ಬಂದಿತ್ತು ಹತ್ತು ಸಾವಿರ ಕಳಿಸು ಎಂದು ಅದಕ್ಕೆ ಪೋನ್ ನಲ್ಲಿ ಕರೆನ್ಸಿ ಇಲ್ಲ ರೀಚಾರ್ಜ್ ಮಾಡು ನಂತರ ಕಳಿಸುವೆ ಎಂದೆ ಮತ್ತೆ ಮೆಸೇಜ್ ಬರಲಿಲ್ಲ. ಗೆಳೆಯನ ವಾಟ್ಸಪ್ ಹ್ಯಾಕ್ ಆಗಿದೆ ಎಂಬುದು ಬೆಳಿಗ್ಗೆ ತಿಳಿಯಿತು’ ಎಂದು ಶಿವಕುಮಾರ್ ಇಪ್ಪಾಡಿ ಕಾಮೆಂಟ್ ಮಾಡಿದ್ದಾರೆ.

‘ಮೊನ್ನೆ ನಮ್ಮ ಸ್ನೇಹಿತರೊಬ್ಬರಿಗೆ ಇದೆ ತರಹದಲ್ಲಿ ಮೋಸ ಮಾಡಿದ್ದಾರೆ. ಅವರ ಸರ್ ಅಂಥ ಹೇಳಿ ದುಡ್ಡು ಕೇಳಿದ್ದಾರೆ 7,500 ಹಣ ಕಳುಹಿಸಿದ್ದಾನೆ ಕಾಲ್ ಮಾಡಿದರೆ ಮೊದಲು ಫೋನ್ ರಿಸೀವ್ ಮಾಡಿ, ನಂತರ ಬ್ಲಾಕ್ ಮಾಡಿದರು’ ಎಂದು ಸಿ.ಕೆ.ಮಂಜಣ್ಣ ಕಾಮೆಂಟ್​ನಲ್ಲಿ ತಿಳಿಸಿದ್ದಾರೆ.

‘ನಾವು ಜಾಗರೂಕರಾಗಿರಬೇಕೆಂದರೆ ನಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ನಾನು ಯಾರನ್ನೂ ಹಣ ಕೇಳೋದಿಲ್ಲ, ನನ್ನ ವಾಟ್ಸಪ್ ನಂಬರಿನಿಂದ ಹಣ ಕಳುಹಿಸಿ ಅಂತ ಮೆಸೇಜ್ ಬಂದರೆ ಯಾರೂ ಕಳುಹಿಸಬೇಡಿ ಅಂತ ಹಾಕಿಕೊಳ್ಳಬೇಕು. ನಮ್ಮ ಸಂಪರ್ಕದಲ್ಲಿರುವ ಎಲ್ಲರಿಗೂ ಗೊತ್ತಾಗುತ್ತದೆ’ ಎಂದು ರಾಜೇಶ್​ ರಾವ್ ಅವರು ಸಲಹೆ ಮಾಡಿದ್ದಾರೆ.

ಸುರಕ್ಷೆಯ ಬಗ್ಗೆ ಆತಂಕ

ಗೂಢಲಿಪಿ (Encryption) ತಂತ್ರಜ್ಞಾನ ಬಳಸುವ ವಾಟ್ಸ್ಯಾಪ್​ ಅತ್ಯಂತ ಸುರಕ್ಷಿತ ಮೆಸೇಜಿಂಗ್ ಆ್ಯಪ್ ಎಂದು ಹೆಸರುವಾಸಿಯಾಗಿತ್ತು. ಆದರೆ ಇದನ್ನೂ ಹ್ಯಾಕ್ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆ ಜನರಲ್ಲಿ ಆತಂಕ ಶುರುವಾಗಿದೆ. ಹಣಕಾಸಿನ ವ್ಯವಹಾರಗಳಷ್ಟೇ ಅಲ್ಲ, ಎಷ್ಟೋ ಪ್ರೇಮಿಗಳು ಸರಸ ಸಲ್ಲಾಪ ಮತ್ತು ಖಾಸಗಿ ವಿಡಿಯೊಗಳನ್ನೂ ವಾಟ್ಸ್ಯಾಪ್ ಮೂಲಕವೇ ಹಂಚಿಕೊಂಡಿರುತ್ತಾರೆ. ವಾಟ್ಸ್ಯಾಪ್​ ಖಾತೆ ಹ್ಯಾಕ್ ಮಾಡಿದರೆ ಇಂಥವನ್ನು ಬ್ಲ್ಯಾಕ್​ಮೇಲ್​ಗೆ ಬಳಸಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ.

ಈ ಹಿಂದೆ ಬೆಂಗಳೂರಿನ ಕೆಲ ಸಾಲ ವಸೂಲಿ ಏಜೆನ್ಸಿಗಳು ವಾಟ್ಸ್ಯಾಪ್​ ಹ್ಯಾಕ್ ಮಾಡಿ, ಖಾಸಗಿ ವಿಡಿಯೊಗಳನ್ನು ಹರಿಬಿಟ್ಟು ಬ್ಲ್ಯಾಕ್​ಮೇಲ್​ಗೆ ಮುಂದಾಗಿದ್ದು ದೊಡ್ಡ ಮಟ್ಟದ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ‘ವಾಟ್ಸ್ಯಾಪ್ ಒಂದೇ ಅಲ್ಲ, ಉಚಿತವಾಗಿ ಸಿಗುವ ಯಾವುದೂ ಸುರಕ್ಷಿತ ಅಲ್ಲ ಎನ್ನುವುದು ನನಗೆ ಮನವರಿಕೆಯಾಗಿದೆ. ಹೀಗಾಗಿ ಹಣಕಾಸಿನ ವ್ಯವಹಾರಕ್ಕೆ ಪರ್ಯಾಯ ಕ್ರಮಗಳನ್ನು ಯೋಚಿಸುತ್ತಿದ್ದೇನೆ. ನನ್ನ ಗ್ರಾಹಕರಿಗೂ ಅತಿಸೂಕ್ಷ್ಮ ವಿವರಗಳನ್ನು ವಾಟ್ಸ್ಯಾಪ್ ಮೂಲಕ ಹಂಚಿಕೊಳ್ಳಬೇಡಿ. ಕಚೇರಿಗೇ ಬಂದು ಕೊಡಿ ಅಥವಾ ಇಮೇಲ್ ಮೂಲಕ ಕಳಿಸಿ ಎಂದು ಸೂಚಿಸಿದ್ದೇನೆ’ ಎಂದು ಹಣಕಾಸು ಸಲಹೆಗಾರ ಚಂದ್ರು ಹೇಳಿದರು.

ಹಣ ಕಳಿಸುವ ಮೊದಲು ಎಚ್ಚರ ವಹಿಸಿ

ಇಮೇಲ್, ವಾಟ್ಸ್ಯಾಪ್ ಅಥವಾ ಫೇಸ್​ಬುಕ್ ಮೂಲಕ ಹಣಕ್ಕೆ ಕೋರಿಕೆ ಬಂದರೆ ಮೊದಲು ಅನುಮಾನಿಸಿ. ನಿಮಗೆ ಹಣ ಕೊಡಬೇಕು ಎನಿಸಿದರೆ ನಿಮ್ಮ ಆಪ್ತರಿಗೆ ಫೋನ್ ಮಾಡಿ ಮಾತನಾಡಿ. ಧ್ವನಿಯಲ್ಲಿ ಹೊಂದಾಣಿಕೆ ಕಂಡರೂ ನಂಬಬೇಡಿ. ಅವರಿಗೆ ಮತ್ತು ನಿಮಗೆ ಗೊತ್ತಿರುವ ಕೆಲ ವಿಷಯಗಳನ್ನು ಪ್ರಸ್ತಾಪಿಸಿ. ಅವರು ಸರಿಯಾದ ವ್ಯಕ್ತಿ, ಅವರು ಹೇಳುತ್ತಿರುವ ವಿಷಯವೂ ನಿಜ ಎಂದು ಮನವರಿಕೆಯಾದ ನಂತರವಷ್ಟೇ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದು ಸುರಕ್ಷಿತ ಎಂದು ದೀಪಾ ಹಿರೇಗುತ್ತಿ ಕಿವಿಮಾತು ಹೇಳುತ್ತಾರೆ.

Published On - 8:48 am, Sun, 21 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ