ಚೆನ್ನೈ, ಹೈದರಾಬಾದ್​​ನಿಂದ 6 CRPF ಕಂಪನಿ ಬರ್ತಿದೆ: ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ನಿನ್ನೆ ರಾತ್ರಿ ನಡೆದ ಗಲಭೆಯಿಂದ ತಲ್ಲಣಗೊಂಡಿರುವ ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಏರಿಯಾದ ಸುತ್ತಮುತ್ತ ಇದೀಗ ಗರುಡ ಸ್ಪೆಷಲ್ ಫೋರ್ಸ್​ ರೌಂಡ್ಸ್ ಹೊಡೆಯಲು ಪ್ರಾರಂಭಿಸಿದೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವ ಈ ವಿಶೇಷ ಪಡೆ ಸೈರನ್ ಮೊಳಗಿಸುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದೆ. ಗಲ್ಲಿಗಲ್ಲಿಗೂ ನುಗ್ಗಿ ಎಚ್ಚರಿಕೆ ನೀಡುತ್ತಿರುವ ಗರುಡ ಫೋರ್ಸ್ ಮನೆ ಬಿಟ್ಟು ಹೊರಗೆ ಬಂದವರಿಗೆ ಲಾಠಿ ರುಚಿ ತೋರಿಸುತ್ತಿದೆ.

‘ಹೈದರಾಬಾದ್ ಮತ್ತು ಚೆನ್ನೈನಿಂದ 6 CRPF ತುಕಡಿ ಬರುತ್ತಿದೆ’
ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಅವರು ಹೈದರಾಬಾದ್ ಮತ್ತು ಚೆನ್ನೈನಿಂದ ಬರುತ್ತಿರುವ 6 CRPF ತುಕಡಿಗಳನ್ನ ಡಿಜೆ ಹಳ್ಳಿಯಲ್ಲಿ ನಿಯೋಜಿಸಲಾಗುವುದು. ಸೂಕ್ಷ್ಮ ಪ್ರದೇಶದಲ್ಲಿ CRPF ನಿಯೋಜನೆ ಬಗ್ಗೆ ಹಿರಿಯ ಅಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಜೊತೆಗೆ, ರಾಪಿಡ್ ಌಕ್ಷನ್ ಫೋರ್ಸ್ ಮತ್ತು ಗರುಡ ಫೋರ್ಸ್ ಕೂಡ ಸ್ಥಳದಲ್ಲಿ ಈಗಾಗಲೇ ನಿಯೋಜಿಸಲಾಗಿದೆ.

ಪ್ಲಾನ್ ಮಾಡಿ, ದಾಳಿ ಮಾಡಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ:
ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ಪೊಲೀಸರ ಹತೋಟಿಯಲ್ಲಿದೆ. ಇನ್ನು ಹೆಚ್ಚಿನ ಗಲಭೆಕೋರರ ಬಂಧನ ಆಗಬೇಕಾಗಿದೆ. ಘಟನೆಯ ಹಿಂದೆ ಯಾರಿದ್ದಾರೆ ಅನ್ನೋ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಯುತ್ತಿದೆ. ಘಟನೆಯ ಬಗ್ಗೆ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ನಾನು ಮುಖ್ಯಮಂತ್ರಿ ಜೊತೆ ಫೋನ್ ನಲ್ಲಿ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು  ಹೇಳಿದ್ದಾರೆ.

ಪೊಲೀಸ್ ಸ್ಟೇಷನ್​ನಲ್ಲಿ ಘಟನೆಯ ಎಲ್ಲಾ ರೆಕಾರ್ಡ್​ಗಳಿವೆ. ಸಿಸಿಟಿವಿ ಇದೆ. ಕೃತ್ಯ ಎಸಗಿದ ಎಲ್ಲರ ಮಾಹಿತಿ ಕಲೆ ಹಾಕಲಾಗುತ್ತಿದೆ. ಫೇಸ್​ಬುಕ್​ನಲ್ಲಿ ಕರೆಕೊಟ್ಟು ಪ್ಲಾನ್ ಮಾಡಿ ದಾಳಿ ಮಾಡಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಷಡ್ಯಂತ್ರ ನಡೆದಿದೆ. ಹಬ್ಬ-ಹರಿದಿನಗಳು ಶಾಂತವಾಗಿ ನಡೆಯುತ್ತಿರುವಾಗ ಸಮಾಜಘಾತುಕ ಶಕ್ತಿಗಳ ಕೃತ್ಯ ಕಂಡುಬಂದಿದೆ. ಕೆಲವರು ಪ್ರಚೋದನೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆದಿದೆ. ಬೆಂಗಳೂರು ತಲುಪಿದ ತಕ್ಷಣ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡುತ್ತೇವೆ. ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಉಡುಪಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Related Tags:

Related Posts :

Category: