ನಿವಾರ್ ಚಂಡಮಾರುತ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿ ಎನ್​ಡಿಆರ್​ಎಫ್

  • Arun Belly
  • Published On - 20:34 PM, 24 Nov 2020

ನಿವರ್ ಚಂಡಮಾರುತ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುಮಾರು 1,200 ಕ್ಕೂ ಹೆಚ್ಚು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್​ಡಿಆರ್​ಎಫ್) ಸಿಬ್ಬಂದಿಯನ್ನು ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಪುದುಚೆರಿ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಹಾಗೂ ಇನ್ನೂ 800 ರಷ್ಟು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಎನ್​ಡಿಆರ್​ಎಫ್ ಮುಖ್ಯಸ್ಥ ಎಸ್ ಎನ್ ಪ್ರಧಾನ್ ಹೇಳಿದ್ದಾರೆ. ನಿವರ್ ಚಂಡಮಾರುತವು ಈ ರಾಜ್ಯಗಳ ಕರಾವಳಿ ಪ್ರದೇಶವನ್ನು ಬುಧವಾರದಂದು ಅಪ್ಪಳಿಸಲಿದೆ.

ನಿವರ್ ಚಂಡಮಾರುತ ಎಷ್ಟೇ ತೀವ್ರಗೊಂಡರೂ ಅದು ಸೃಷ್ಟಿಸಬಹುದಾದ ಅಪಾಯಕಾರಿ ಸ್ಥಿತಿಯನ್ನು ಎದುರಿಸಲು ಎನ್​ಡಿಆರ್​ಎಫ್ ಸಿದ್ಧವಾಗಿದೆಯೆಂದು ಪ್ರಧಾನ್ ಹೇಳಿದ್ದಾರೆ. ಪ್ರಸ್ತುತವಾಗಿ ಈ ಚಂಡಮಾರುತವು ಬಂಗಾಳ ಕೊಲ್ಲಿಯಿಂದ ನೈಋತ್ಯ ಕರಾವಳಿ ಪ್ರದೇಶದತ್ತ ಮುನ್ನುಗ್ಗುತ್ತಿದೆ.

‘‘ಚಂಡಮಾರುತದ ಚಲನೆಯನ್ನ್ನು ನಾವು ಸೂಕ್ಷ್ಮವಾಗಿ ಆವಲೋಕಿಸುತ್ತಿದ್ದೇವೆ ಮತ್ತು ಅದರಿಂದ ಪ್ರಭಾವಕ್ಕೊಳಗಾಗಲಿರುವ ರಾಜ್ಯಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ,’’ ಎಂದು , ಪ್ರಧಾನ್ ಚೆನೈಯಲ್ಲಿ ನಡೆಸಿದ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.

‘‘ಕರಾವಳಿ ಪ್ರದೇಶದಲ್ಲಿ ತೀವ್ರ ಗತಿಯಲ್ಲಿ ಉಲ್ಬಣಿಸುತ್ತಿರುವ ಸ್ಥಿತಿಯನ್ನು ನಾವು ಗಮನಿಸುತ್ತಿದ್ದೇವೆ. ಮುಂದಿನ ಕೆಲ ಗಂಟೆಗಳಲ್ಲಿ ಅದು ಗಂಟೆಗೆ 120 ರಿಂದ 130 ಕಿ. ಮೀ ವೇಗ ಪಡೆದುಕೊಂಡು ಅಪ್ಪಳಿಸುವ ಸಾಧ್ಯತೆಯಿದೆ, ಆದರೆ ಜನರು ಭೀತಿಗೊಳಗಾಗುವ ಅವಶ್ಯಕತೆಯಿಲ್ಲ. ಪರಿಸ್ಥಿತಿಯನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ,’’ ಎಂದು ಪ್ರಧಾನ್ ಹೇಳಿದರು.