ರಾಷ್ಟ್ರ ರಾಜಧಾನಿಗೆ ಯಾರಾಗ್ತಾರೆ ನೂತನ ಬಾಸ್? ಮತದಾರನ ಮನದಿಂಗಿತ ಇಂದು ಬಹಿರಂಗ!

ದೆಹಲಿ: ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಷ್ಟ್ರ ರಾಜಧಾನಿಯ ಮತದಾರರು ಬರೆದ ಭವಿಷ್ಯ ಹೊರಬೀಳಲಿದೆ. ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದ್ದು, ಭರ್ತಿ ಐದು ವರ್ಷ ಆಡಳಿತ ನಡೆಸಿದ ಆಮ್​ಆದ್ಮಿ ಪಕ್ಷ.. ರಾಜಧಾನಿಯ ಗದ್ದುಗೆ ಏರಲು ಹವಣಿಸ್ತಿರೋ ಬಿಜೆಪಿ.. ಅಸ್ತಿತ್ವದ ಹೋರಾಟ ನಡೆಸ್ತಿರೋ ಕಾಂಗ್ರೆಸ್ ಭವಿಷ್ಯ ನಿರ್ಧಾರವಾಗಲಿದೆ. ದೆಹಲಿ ಅಖಾಡದಲ್ಲಿ ಧೂಳೆಬ್ಬಿಸೋದು ಯಾರು? ವಿಜಯ ಪತಾಕೆ ಹಾರಿಸೋದು ಯಾರು ಅನ್ನೋದು ನಿರ್ಧಾರವಾಗಲಿದೆ.

ದೆಹಲಿ ದಂಗಲ್.. ಇದು ಅಂತಿಂಥಾ ಕದನವಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಂಚಲನ ಎಬ್ಬಿಸಿದ ಕದನ. ರಾಷ್ಟ್ರ ರಾಜಕಾರಣದ ರಣಕಾಳಗ.. ದಿಲ್ಲಿ ದರ್ಬಾರ್ ನಡೆಸಲು.. ದೆಹಲಿ ದೊರೆಯಾಗಲು, ನೆಟ್ಟ ಬಾವುಟ ಕಿತ್ತು ಹೊಸ ಸಾಮ್ರಾಜ್ಯ ಸ್ಥಾಪಿಸುವ ಜಿದ್ದಿದೆ.. ಹುಲಿ ಗುಹೆಯೊಳಗೆ ಕಾಲಿಡಲು ಬಿಡಲ್ಲ ಅನ್ನೋ ಜಿಗರ್ ಇದೆ.

ಕೇಜ್ರಿ-ಮೋದಿ ಫೈಟ್.. ಯಾರ ಕಡೆ ತಿರುಗುತ್ತೆ ರಿಸಲ್ಟ್?
ಯೆಸ್, ದೆಹಲಿ ಗದ್ದುಗೆ ಏರಲು ನಡೆದ ಘನಘೋರ ಕಾಳಗದ ಅಂತಿಮ ಫಲಿತಾಂಶಕ್ಕೆ, ದೆಹಲಿ ಮತದಾರ ಬರೆದ ಮಹಾ ಭವಿಷ್ಯ ಹೊರ ಬೀಳೋಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಕೌಂಟಿಂಗ್ ಸೆಂಟರ್ ಓಪನ್ ಆಗಲಿದ್ದು, ಅಖಾಡದಲ್ಲಿರೋ ಅಭ್ಯರ್ಥಿಗಳ ಎದೆ ಬಡಿತ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಕೇಜ್ರಿವಾಲ್ ನೇತೃತ್ವದ ಆಮ್​ಆದ್ಮಿ ಪಕ್ಷಕ್ಕೆ ಗೆಲುವು ಅಂತಾ ಭವಿಷ್ಯ ನುಡಿದಿದ್ರೂ, ಇವತ್ತು ಬರೋ ರಿಸಲ್ಟ್​ ಇವೆಲ್ಲದಕ್ಕೂ ಅಂತಿಮ ಮುದ್ರೆ ಒತ್ತಲಿದೆ.

ಆಪ್​ಗೆ ಐದು ವರ್ಷದ ಅಭಿವೃದ್ಧಿ ಬಲ!
ದೆಹಲಿ ಚುನಾವಣೆ ಇಡೀ ರಾಷ್ಟ್ರ ರಾಜಕಾರಣದ ಗಮನವನ್ನೇ ಸೆಳೆದಿತ್ತು. ಯಾಕಂದ್ರೆ ಒಂದ್ಕಡೆ ಸಿಎಂ ಕೇಜ್ರಿವಾಲ್ ಆರ್ಭಟ ಮುಂದುರಿದಿದ್ರೆ, ಇನ್ನೊಂದೆಡೆ ಆಪ್ ಆರ್ಭಟ ತಡೆಯೋಕೆ, ಪ್ರಧಾನಿ ಮೋದಿಯೇ ಚುನಾವಣಾ ಅಖಾಡಕ್ಕೆ ಇಳಿದು ರಣಬೇರಿ ಮೊಳಗಿಸಿದ್ರು. ಐದು ವರ್ಷ ದೆಹಲಿಯಲ್ಲಿ ತಮ್ಮದೇ ಕೋಟೆ ಕಟ್ಟಿ ಗಟ್ಟಿ ಮಾಡಿಕೊಂಡಿರೋ ಕೇಜ್ರಿವಾಲ್ ಬಿಜೆಪಿಯಂಥ ದೈತ್ಯ ಪಕ್ಷಕ್ಕೆ.. ಮೋದಿ, ಅಮಿತ್ ಶಾ ಅನ್ನೋ ಸಾಮ್ರಾಟರಿಗೆ ಅಕ್ಷರಶಃ ಸೆಡ್ಡು ಹೊಡೆದಿದ್ರು.

ಹೆಜ್ಜೆ ಹೆಜ್ಜೆಗೂ ತಿರುಗೇಟು ನೀಡಿದ ಕಮಲ!
ದೆಹಲಿ ಕೋಟೆಯನ್ನ ಕಬ್ಜಾ ಮಾಡಲು ಪ್ಲ್ಯಾನ್ ಮಾಡಿದ್ದ ಬಿಜೆಪಿ, ಒಟ್ಟು 70 ವಿಧಾನಸಭಾ ಕ್ಷೇತ್ರಗಳಿರೋ ದೆಹಲಿಯಲ್ಲಿ ಪ್ರತಿ ಕ್ಷೇತ್ರಕ್ಕೆ 3 ಸಂಸದರನ್ನ ನೇಮಿಸಿತ್ತು. ಅಷ್ಟೇ ಅಲ್ಲ ಪ್ರತಿ ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಬ್ಬ ಕೇಂದ್ರ ಸಚಿವರನ್ನ ಪ್ರಚಾರಕ್ಕೆ ನೇಮಿಸಿತ್ತು. ಇದ್ರೆ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 4000 ಕಮಲ ಕಾರ್ಯಕರ್ತರು ಪ್ರಚಾರದ ಫೀಲ್ಡ್​ಗೆ ಇಳಿದ್ರು. ಮಿಷನ್ 45 ಗುರಿ ಹೊಂದಿದ್ದ ಬಿಜೆಪಿ ಅದಕ್ಕಾಗಿ ದೆಹಲಿಯಲ್ಲಿ ಬರೋಬ್ಬರಿ 200 ಬೃಹತ್ ಱಲಿ ನಡೆಸಿದೆ. ಅಮಿತ್ ಶಾ ಒಂದು ದಿನಕ್ಕೆ ನಾಲ್ಕು ನಾಲ್ಕು ಱಲಿಗಳನ್ನ ನಡೆಸಿದ್ದಾರೆ. ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಪ್ರತಿದಿನ 4 ಱಲಿ ನಡೆಸಿದ್ದಾರೆ.

ಇದೆಲ್ಲದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಕೂಡ ದೆಹಲಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಅಮಿತ್ ಶಾ-ನಡ್ಡಾ ಜೋಡಿ ರಾಷ್ಟ್ರ ರಾಜಧಾನಿಯ ಬೀದಿ ಬೀದಿಗಳಲ್ಲಿ ಮತಬೇಟೆ ನಡೆಸಿದ್ದಾರೆ. ದೆಹಲಿ ಚುನಾವಣೆಯನ್ನು ಬಿಜೆಪಿ ಅದೆಷ್ಟು ಪ್ರತಿಷ್ಠೆಯಾಗಿ ಪರಿಗಣಿಸಿದೆ ಅನ್ನೋದನ್ನ ಈ ಱಲಿಗಳೇ ಸಾರಿ ಹೇಳುತ್ತಿವೆ.

ಅಂತ್ಯವಾಗುತ್ತಾ ಬಿಜೆಪಿಯ 21 ವರ್ಷದ ವನವಾಸ?
ಇಷ್ಟಕ್ಕೂ ಬಿಜೆಪಿ ದೆಹಲಿ ಗೆಲ್ಲಲು ಕಮಲ ಪಡೆ ಈ ಪರಿ ಸಾಹಸ ಮಾಡಿರೋದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಬರೋಬ್ಬರಿ 21 ವರ್ಷದ ವನವಾಸ. ಹೌದು, ದೆಹಲಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದೇ ಇಲ್ಲ. 1998 ರಿಂದ 2020ರ ವರೆಗೂ ದೆಹಲಿಯಲ್ಲಿ ಕಮಲ ಅರಳಲೇ ಇಲ್ಲ. ಸತತ ಮೂರು ಬಾರಿ ಗೆದ್ದು 15 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದ್ರೆ, ಕಳೆದ 5 ವರ್ಷದಿಂದ ಆಮ್ ಆದ್ಮಿ ರಾಷ್ಟ್ರ ರಾಜಧಾನಿಯಲ್ಲಿ ಅಬ್ಬರಿಸುತ್ತಿದೆ. ಹೀಗಾಗಿ ಬಿಜೆಪಿ 21 ವರ್ಷಗಳ ದೆಹಲಿಯ ಅಧಿಕಾರದ ವನವಾಸದಿಂದ ಹೊರಬರಲೇಬೇಕು ಅನ್ನೋ ಹವಣಿಕೆಯಲ್ಲಿದೆ.

ಆದ್ರೆ ಬಿಜೆಪಿಯ ಬಾಹುಬಲದ ಮುಂದೆ ಏನೂ ಅಲ್ಲದ ಕೇಜ್ರಿವಾಲ್​ರ ಪೊರಕೆ, ಕೇಸರಿ ಕಲಿಗಳಿಗೆ ದಿಟ್ಟ ಉತ್ತರವನ್ನೇ ನೀಡಿದೆ. ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಉಚಿತ ವಿದ್ಯುತ್, ಉಚಿತ ಕುಡಿಯುವ ನೀರು, ಮೊಹಲ್ಲಾ ಕ್ಲೀನಿಕ್​ಗಳ ಮೂಲಕ ಉಚಿತ ಆರೋಗ್ಯ, ಉಚಿತ ಶಿಕ್ಷಣ.. ಹೀಗೆ ಎಲ್ಲವೂ ಫ್ರೀ ಫ್ರೀ ಫ್ರೀ ಅಂತಾನೇ, ತಾವು ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನ ಮನೆ ಬಾಗಿಲಿಗೆ ಕೊಂಡೊಯ್ಯೋ ಮೂಲಕ ಮತ್ತೆ ದೆಹಲಿ ಮತದಾರನ ಮನ ಗೆಲ್ಲಲು ನೋಡಿದ್ದಾರೆ. ಇದಕ್ಕೆ ಇಂಬು ಕೊಡುವಂತೆ ಚುನಾವಣಾ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳು, ದೆಹಲಿ ಮತದಾರ ಪೊರಕೆಗೆ ಬಹುಪರಾಕ್ ಎಂದಿದ್ದಾನೆ ಅನ್ನೋ ಭವಿಷ್ಯ ನುಡಿದಿವೆ.

ಇನ್ನು ರೇಸ್​ನಲ್ಲಿದ್ರು ಲೆಕ್ಕಕ್ಕೆ ಇಲ್ಲದಂತಾಗಿದೆ ಕಾಂಗ್ರೆಸ್​ ನೀಡಿರುವ ಫೈಟ್. ಒಟ್ನಲ್ಲಿ ದೆಹಲಿ ದಂಗಲ್ ಸದ್ಯ ನಿರ್ಣಾಯಕ ಘಟ್ಟ ತಲುಪಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಎಲ್ಲರ ಹಣೆ ಬರಹ ಹೊರ ಬೀಳಲಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!