ರಾಜಕೀಯ ವಿಶ್ಲೇಷಣೆ | ಯಡಿಯೂರಪ್ಪ ಪ್ರಯತ್ನದ ಹೊರತಾಗಿಯೂ ಮುನಿರತ್ನಗೆ ಒಲಿಯಲಿಲ್ಲವೇಕೆ ಮಂತ್ರಿಗಿರಿ

ಉಪಚುನಾವಣೆಯಲ್ಲಿ ಮುನಿರತ್ನಗೆ ಟಿಕೆಟ್‌ ನೀಡುವಾಗಲೂ ರಾಜ್ಯ ಬಿಜೆಪಿಯಲ್ಲಿ ಅಪಸ್ವರ ಕೇಳಿಬಂದಿತ್ತು. ಅದೆಲ್ಲವನ್ನೂ ನಿಭಾಯಿಸಿ ಮುನಿರತ್ನಗೆ ಟಿಕೆಟ್‌ ಕೊಡಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಫಲರಾಗಿದ್ದರು. ಆದರೆ ಈಗ ಮಾತ್ರ ಮುನಿರತ್ನಗೆ ಮಂತ್ರಿಸ್ಥಾನ ಕೊಡಿಸುವ ಯಡಿಯೂರಪ್ಪ ಪ್ರಯತ್ನ ವಿಫಲವಾಗಿದೆ.

  • ಕಿರಣ್ ಹನಿಯಡ್ಕ
  • Published On - 23:15 PM, 13 Jan 2021
ಬಿಜೆಪಿ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಮೊನ್ನೆ ನಡೆದ ಉಪಚುನಾವಣೆಯಲ್ಲಿ ಗೆದ್ದ ಮುನಿರತ್ನ ಮಂತ್ರಿಯಾಗುವ ಮಹದಾಸೆ ಇಟ್ಟುಕೊಂಡಿದ್ದರು. ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್​ಬಿಎಂ ಎಂದು ಕರೆಸಿಕೊಳ್ಳುತ್ತಿದ್ದ ಎಚ್.ಟಿ.ಸೋಮಶೇಖರ್‌, ಭೈರತಿ ಬಸವರಾಜು ಮತ್ತು ಮುನಿರತ್ನರ ಪೈಕಿ ಸೋಮಶೇಖರ್‌ ಮತ್ತು ಭೈರತಿ ಬಸವರಾಜು ಮಂತ್ರಿಗಳಾಗಿದ್ದಾರೆ. ಮುನಿರತ್ನ ಕೂಡ ಮಂತ್ರಿಯಾಗುವ ಹೊಸ್ತಿಲಿಗೆ ಬಂದು ನಿಂತಿದ್ದರು. ಆದ್ರೆ ಕೇಂದ್ರ ಕಮಲ ನಾಯಕರು ಅವರಿಗೆ ಗ್ರೀನ್ ಬದಲು ರೆಡ್‌ ಸಿಗ್ನಲ್‌ ನೀಡಿ ಹತಾಶೆಯ ಕೂಪಕ್ಕೆ ತಳ್ಳಿದ್ದಾರೆ.

ಹಾಗೆ ನೋಡಿದರೆ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಸಮಯದಲ್ಲಿ ಮುನಿರತ್ನ ಹಲವಾರು ಅಡೆತಡೆ ಎದುರಿಸಿದ್ದರು. ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್‌ ನೀಡುವಾಗಲೂ ರಾಜ್ಯ ಬಿಜೆಪಿ ಘಟಕದಲ್ಲಿ ಅಪಸ್ವರ ಕೇಳಿಬಂದಿತ್ತು. ಅದೆಲ್ಲವನ್ನೂ ನಿಭಾಯಿಸಿ ಮುನಿರತ್ನಗೆ ಟಿಕೆಟ್‌ ಕೊಡಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಫಲರಾಗಿದ್ದರು. ಆದರೆ ಮುನಿರತ್ನಗೆ ಮಂತ್ರಿಸ್ಥಾನ ಕೊಡಿಸುವ ಯಡಿಯೂರಪ್ಪನವರ ಪ್ರಯತ್ನ ಮಾತ್ರ ವಿಫಲವಾಗಿದೆ.

ಮುನಿರತ್ನಗೆ ಸಚಿವ ಸ್ಥಾನ ನೀಡಲು ತಡರಾತ್ರಿವರೆಗೂ ಹೈಕಮಾಂಡ್​ನೊಂದಿಗೆ ಸಂಪರ್ಕ!
ನಿನ್ನೆ (ಜ.12) ಸಂಜೆಯೇ ಮಂತ್ರಿಗಳ ಪಟ್ಟಿ ಬಿಡುಗಡೆ ಮಾಡಬೇಕು ಎಂಬ ಯೋಚನೆ ಬಿಎಸ್‌ವೈ ಅವರಿಗಿತ್ತು. ಆದರೆ ಸಂಜೆಯಾಗುತ್ತಿದ್ದಂತೆ ಮುನಿರತ್ನ ಹೆಸರಿಗೆ ಹೈಕಮಾಂಡ್‌ನಿಂದ ವಿಘ್ನ ಎದುರಾಗತೊಡಗಿತ್ತು. ಸಾಯಂಕಾಲ 7 ಗಂಟೆಯಿಂದ ಮಧ್ಯರಾತ್ರಿ 12.15ರವರೆಗೆ ಬಿಎಸ್​ವೈ, ಹೈಕಮಾಂಡ್‌ ನಾಯಕರ ಮನವೊಲಿಸಲು ಸತತ ಪ್ರಯತ್ನ ಮಾಡಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರಿಗೂ ಬಿಎಸ್​ವೈ ಕರೆ ಮಾಡಿ, ಮುನಿರತ್ನ ಹೆಸರು ಕ್ಲಿಯರ್‌ ಮಾಡುವಂತೆ ಬೇಡಿಕೆಯಿಟ್ಟಿದ್ದರು.

ಇಂದು ಪ್ರಮಾಣ ವಚನ ಸ್ವೀಕರಿಸಿದವರೊಂದಿಗೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು

ಇನ್ನು ಮುಂದೆ ಯಾರಿಗೂ ಭರವಸೆ ಕೊಡುವುದಿಲ್ಲ, ಮುನಿರತ್ನ ಹೆಸರು ಕ್ಲಿಯರ್‌ ಮಾಡಿಸಿಕೊಡಿ!
ಹಾಗಂತ ಸಿಎಂ ಯಡಿಯೂರಪ್ಪ, ಸಂತೋಷ್‌ ಅವರನ್ನು ಅಂಗಲಾಚಿದರೆಂದು ಮೂಲಗಳಿಂದ ಗೊತ್ತಾಗಿದೆ. ಮುಂದಿನ ಎರಡೂವರೆ ವರ್ಷದ ಅವಧಿಯಲ್ಲಿ ಯಾರಿಗೂ ನಾನು ಮಂತ್ರಿ ಮಾಡೋದಾಗಿ ಭರವಸೆ ಕೊಡುವ ಪ್ರಸಂಗ ಎದುರಾಗುವುದಿಲ್ಲ. ಆದರೆ ಈಗ ಕೊಟ್ಟಿರುವ ಮಾತು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಪರಿಪರಿಯಾಗಿ ವಿನಂತಿಸಿಕೊಂಡರಂತೆ.

ಆದರೆ, ಸಂತೋಷ್‌ ಈ ವಿಚಾರದಲ್ಲಿ ಪ್ರಧಾನಿ ಮೋದಿ ಜತೆ ಮಾತಾಡಿ ತಿಳಿಸುವುದಾಗಿ ಹೇಳಿ ಸುಮ್ಮನಾಗಿದ್ದಾರೆ. ನಂತರ ಯಡಿಯೂರಪ್ಪನವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಸಂಪರ್ಕಿಸಿ, ಅದೇ ಬೇಡಿಕೆ ಮತ್ತು ಮನವಿಯನ್ನು ಮುಂದಿಟ್ಟರೆಂದು ಮೂಲಗಳು ತಿಳಿಸಿವೆ.

ಆದರೆ ನಡ್ಡಾ ಬೆಳಗ್ಗೆ ತಿಳಿಸುವುದಾಗಿ ಹೇಳಿ ಫೋನ್ ಕಟ್ ಮಾಡಿದರಂತೆ. ಹೀಗಾಗಿ ಇಂದು ಬೆಳಗ್ಗೆ ಹೈಕಮಾಂಡ್‌ ಕರೆಗೆ ಅವರು ಕಾದು ಕುಳಿತಿದ್ದಾಗ ಅ ಕಡೆಯಿದ ಬಂದಿದ್ದು ಒಂದೇ ಸಂದೇಶ, ಮುನಿರತ್ನಗೆ ಈಗ ಮಂತ್ರಿ ಸ್ಥಾನ ಕೊಡುವುದು ಸಾಧ್ಯವಿಲ್ಲ, ಇನ್ನು ಒಂದೂವರೆ ತಿಂಗಳ ನಂತರ ಸಂಪುಟಕ್ಕೆ ಸೇರಿಸಿಕೊಳ್ಳಿ ಎನ್ನುವುದು. ಇದು ಗೊತ್ತಾದ ಮೇಲೆಯೇ ಮುಖ್ಯಮಂತ್ರಿಗಳು ಇಂದು ಮಂತ್ರಿಗಳಾಗಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸುವವರ ಹೆಸರುಗಳನ್ನು ಮಾಧ್ಯಮದ ಮುಂದೆ ಓದಿ ಹೇಳಿದ್ದು.

ಬಿಎಸ್​ವೈ ತಮ್ಮೆಲ್ಲ ಪ್ರಯತ್ನಗಳನ್ನು ಮಾಡಿದಾಗ್ಯೂ ಮುನಿರತ್ನರನ್ನು ಮಂತ್ರಿ ಮಾಡವುದು ಸಾಧ್ಯವಾಗಿಲ್ಲ. ಆದರೆ ಮುನಿರತ್ನ ಹೆಸರಿಗೆ ತಡೆ ಬೀಳಲು ಬಿಜೆಪಿಯಲ್ಲಿ ಪ್ರಮುಖ ಕಾರಣವೊಂದಿದ್ದು ಸದ್ಯಕ್ಕೆ ಕಮಲ ನಾಯಕರು ಆ ವಿಚಾರದಲ್ಲಿ ಗೌಪ್ಯತೆ ಕಾಪಾಡಿಕೊಂಡು ಬರುತ್ತಿರುವಂತೆ ಅನಿಸುತ್ತಿದೆ.

Karnataka BS Yediyurappa Cabinet Expansion ಮೂರನೇ ಬಾರಿಗೆ ವಿಸ್ತರಣೆಗೊಂಡ ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ 7 ಮಂದಿ ಸೇರ್ಪಡೆ, ಯಾರವರು?

ಮಾರ್ಚ್-ಏಪ್ರಿಲ್‌ನಲ್ಲಿ ದೊಡ್ಡ ಮಟ್ಟದ ಸಂಪುಟ ಪುನಾರಚನೆ ಆಗುತ್ತೆ: ರಮೇಶ್ ಜಾರಕಿಹೊಳಿ‌ ಹೊಸ ಬಾಂಬ್

ರಾಜಕೀಯ ವಿಶ್ಲೇಷಣೆ | ಸಿದ್ದು-ಕುಮಾರಸ್ವಾ,ಮಿ ಜಗಳದ ಜುಗಲ್​ಬಂದಿ: ಸಿದ್ದುಗೆ ಸಿಎಂ ಕನಸು, ಕುಮಾರಸ್ವಾಮಿಗೆ ಬಿಜೆಪಿಯತ್ತ ಮನಸು