ಪ್ರಕೃತಿ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಿದ ಹಕ್ಕಿಗಳ ಕಲರವ

ಹಾವೇರಿ: ನಿಸರ್ಗದ ಸೌಂದರ್ಯವೇ ಹಾಗೆ ಕಂಡಷ್ಟು ಕಣ್ತುಂಬಿಕೊಳ್ಳಬೇಕು, ನೋಡಿದಷ್ಟು ಮತ್ತೆ ಮತ್ತೆ ನೋಡಬೇಕು ಅನ್ನೋ ಬಯಕೆ ಮೂಡಿಸುತ್ತೆ. ಹೀಗೆ ಮನಕ್ಕೆ ಮುದ ನೀಡುವ ಪ್ರಕೃತಿ ಸೌಂದರ್ಯಕ್ಕೆ ಚಳಿಗಾಲ ಮತ್ತಷ್ಟು ಮೆರಗು ನೀಡುತ್ತಾ ಬಂದಿದೆ. ಅದ್ರಲ್ಲೂ ಈ ಬಾರಿ ಉತ್ತಮವಾಗಿ ಮಳೆಯಾಗಿರುವುದು ಪಕ್ಷಿಗಳಿಗೆ ಸ್ವರ್ಗ ಲೋಕವೇ ಸಿಕ್ಕಂತಾಗಿದೆ.

ಎಲ್ಲೆಲ್ಲೂ ರಾರಾಜಿಸುತ್ತಿರುವ ಹಕ್ಕಿಗಳ ಸಂಭ್ರಮ: 
ತುಂಬಿ ತುಳುಕುತ್ತಿರುವ ಕೆರೆ, ಅರೆರೆ ಎಲ್ಲೆಲ್ಲೂ ಸ್ವಚ್ಛಂದವಾಗಿ ಹಾರಾಡುತ್ತಿರುವ ಬಗೆಬಗೆಯ ಪಕ್ಷಿಗಳು. ಇಷ್ಟು ವರ್ಷಗಳ ಕಾಲ ಬತ್ತಿ ಹೋಗುತ್ತಿದ್ದ ಹಾವೇರಿ ಹೊರವಲಯದ ಹೆಗ್ಗೇರಿ ಕೆರೆ ಈ ಬಾರಿಯ ಭರಪೂರ ಮಳೆಗೆ ತುಂಬಿ ತುಳುಕ್ತಿದೆ. ಇದ್ರಿಂದ ಅಕ್ಕಪಕ್ಕದ ಹೊಲಗಳು, ಬದುಗಳಲ್ಲಿ ಹಸಿರು ರಾರಾಜಿಸುತ್ತಿದ್ದು, ಹಕ್ಕಿಗಳಲ್ಲೂ ಸಂಭ್ರಮ ಮನೆಮಾಡಿದೆ. ಅಲ್ಲಲ್ಲಿ ಗೂಡು ಕಟ್ಟಿ ಸಂತಾನೋತ್ಪತ್ತಿ ಜೊತೆಗೆ ಸ್ವಚ್ಛಂದದ ಬದುಕು ಕಂಡುಕೊಂಡಿವೆ. ಹೀಗೆ ಬೆಳ್ಳಂಬೆಳಗ್ಗೆ ಹೆಗ್ಗೇರಿ ಕೆರೆ ಸುತ್ತಮುತ್ತ ಹಕ್ಕಿಗಳ ಲೋಕವೇ ಸೃಷ್ಟಿಯಾಗುತ್ತಿದೆ.

ಕೈಬೀಸಿ ಕರೆಯುತ್ತಿದೆ ಹಕ್ಕಿಗಳ ಹಾರಾಟ:
ಇಲ್ಲಿ ಸ್ವದೇಶಿ ಹಕ್ಕಿಗಳು ಮಾತ್ರವಲ್ಲ ವಿದೇಶಿ ಹಕ್ಕಿಗಳು ಕೂಡ ಬದುಕು ಕಟ್ಟಿಕೊಂಡಿವೆ. ಚಳಿ ಹೆಚ್ಚಿರುವ ಪ್ರದೇಶದಿಂದ ವಲಸೆ ಬರುವ ಹಕ್ಕಿಗಳು ಹಾಯಾಗಿ ಆಹಾರ ಹುಡುಕುತ್ತಾ, ನೆಮ್ಮದಿಯಿಂದ ಬದುಕುತ್ತಿವೆ. ಇನ್ನು ಕರ್ಲ್ಯೂ ಅಥವಾ ಹೆಗ್ಗೊರವ ಪಕ್ಷಿಗಳು ಜಮೀನುಗಳಲ್ಲಿ ಬಿಡಾರ ಹೂಡಿದ್ರೆ, ಎಲೆಗಳು ಉದುರಿದ ಗಿಡಗಳಲ್ಲಿ ಹಸಿರು ಬಣ್ಣದ ‘ಸ್ಮಾಲ್ ಗ್ರೀನ್ ಬೀ ಈಟರ್’ ವಾಸವಾಗಿವೆ. ಜೊತೆಗೆ ನವಿಲುಗಳ ಹಾರಾಟ ಚೀರಾಟ ಪಕ್ಷಿಪ್ರಿಯರನ್ನ ಕೈಬೀಸಿ ಕರೆಯುತ್ತಿದೆ.

ಇಷ್ಟುದಿನ ಮಳೆ ಕೊರತೆಯಿಂದ ನೀರಿನ ಮೂಲಗಳೆಲ್ಲಾ ಬರಡಾಗುತ್ತಿದ್ದ ಕಾರಣ ಕೃಷಿಕರು ಮಾತ್ರವಲ್ಲದೆ, ಪ್ರಾಣಿ-ಪಕ್ಷಿಗಳೂ ಸಂಕಷ್ಟ ಅನುಭವಿಸುವಂತಾಗುತ್ತಿತ್ತು. ಆದ್ರೆ ಈ ಬಾರಿ ಆ ಚಿತ್ರಣವೇ ಬದಲಾಗಿದೆ. ಹಸಿರು ನಳನಳಿಸಿ, ಪಕ್ಷಿ ಪ್ರಾಣಿಗಳಿಗೆ ಭರಪೂರ ಆಹಾರ ಸಿಗುತ್ತಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!