ಡಿಕೆಶಿ ಒಳಗೆ ಹೋಗಲು ಸಿದ್ದರಾಮಯ್ಯ-ಬಿಜೆಪಿ ಕಾರಣ ಅಲ್ಲ, ಮತ್ಯಾರು?

ಮಂಡ್ಯ: ಕಾಂಗ್ರೆಸ್​ನ ಮಾಜಿ ಸಚಿವ ಡಿಕೆ ಶಿವಕುಮಾರ್ ಒಳಗೆ ಹೋಗಲು ಯಾರು ಕಾರಣ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ. ಡಿಕೆಶಿ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗು ಬಿಜೆಪಿ ಪಾತ್ರವಿಲ್ಲ ಎಂದು ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ​ಹೇಳಿದ್ದಾರೆ.

ಸಮುದಾಯದ ನಾಯಕ ಬೆಳೆಯಬಾರದೆಂದು ಡಿಕೆಶಿಯನ್ನು ಜೈಲಿಗೆ ಕಳುಹಿಸಿದ್ರು. ಅಲ್ಲದೆ ಡಿಕೆಶಿ ಪರ ಯಾಕೆ ಹೆಚ್​.ಡಿ.ದೇವೇಗೌಡರ ಕುಟುಂಬ ನಿಲ್ತಿಲ್ಲ ಎಂದು ಪರೋಕ್ಷವಾಗಿ ಡಿಕೆಶಿ ಬಂಧನಕ್ಕೆ ಹೆಚ್​ಡಿಡಿ ಕುಟುಂಬವೇ ಕಾರಣ ಅಂತ ಕೆ.ಸಿ.ನಾರಾಯಣಗೌಡ ಆರೋಪಿಸಿದ್ದಾರೆ.

ಇನ್ನೂ 20 ಜೆಡಿಎಸ್​ ಶಾಸಕರ ರಾಜೀನಾಮೆ?

ನೀವು ನಮ್ಮನ್ನ ತುಳಿದರೆ ಭಗವಂತ ನಿಮ್ಮನ್ನೂ ತುಳಿಯುತ್ತಾನೆ. ಜೆಡಿಎಸ್‌ಗೆ ರಾಜೀನಾಮೆ ಕೊಡಲು 20 ಶಾಸಕರು ಸಿದ್ಧರಿದ್ದಾರೆ ಎಂದು ಕೆ.ಸಿ.ನಾರಾಯಣಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ದೇವೇಗೌಡರು ಮಕ್ಕಳಿಗೆ, ಮೊಮ್ಮಕ್ಕಳಿಗೆ ಅಧಿಕಾರ ಕೊಟ್ರು. ಈಗ ಮುಮ್ಮಕ್ಕಳಿಗೆ ಅಧಿಕಾರ ನೀಡಲು ಹವಣಿಸುತ್ತಿದ್ದಾರೆ. ಕಳೆದ 5 ವರ್ಷದಿಂದ ದೇವೇಗೌಡರ ಕುಟುಂಬ ಮಾನಸಿಕ ಕಿರುಕುಳ ಕೊಟ್ಟಿದೆ. ಇದು ಇಡೀ ರಾಜ್ಯಕ್ಕೆ ಗೊತ್ತು. ಜೆಡಿಎಸ್‌ ಪಕ್ಷದಲ್ಲಿ ಈವರೆಗೂ ಯಾರನ್ನೂ ಬೆಳೆಯಲು ಬಿಟ್ಟಿಲ್ಲ ಎಂದು ಅನರ್ಹ ಶಾಸಕ ನಾರಾಯಣಗೌಡ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ದನದ ರೀತಿ ನಮ್ಮನ್ನ ಬೆದರಿಸ್ತಿದ್ರು

ದೇಶಕ್ಕೆ ಹೆಚ್​.ಡಿ.ಕುಮಾರಸ್ವಾಮಿ-ಹೆಚ್.​ಡಿ.ರೇವಣ್ಣ ಅವರ ಕೊಡುಗೆ ಏನೂ ಇಲ್ಲ, ಈ ಅಣ್ಣ-ತಮ್ಮಂದಿರು ಕುಟುಂಬಕ್ಕಷ್ಟೇ ಸೀಮಿತ. ದೋಸ್ತಿ ಸರ್ಕಾರದಲ್ಲಿ ಶಾಸಕರಿಗೆ ಹೆಚ್​.ಡಿ.ರೇವಣ್ಣ ಕಿರುಕುಳ ಕೊಡ್ತಿದ್ರು. ಅನುದಾನ ಕೇಳಲು ಹೋದ್ರೆ ದನದ ರೀತಿಯಲ್ಲಿ ನಮ್ಮನ್ನು ಬೆದರಿಸಿ ಹೊರಗೆ ಕಳುಹಿಸುತ್ತಿದ್ರು.  ಹೆಚ್.ಡಿ.ರೇವಣ್ಣ ಸತ್ಯ ಹರಿಶ್ಚಂದ್ರನಲ್ಲ. ಮೈತ್ರಿ ಸರ್ಕಾರ ಬೀಳಲು ರೇವಣ್ಣ ಅವರೇ ಕಾರಣ ಎಂದು ಕೆ.ಆರ್.ಪೇಟೆ ಕ್ಷೇತ್ರದ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿಯವರು ಖರ್ಚಿಗೆ ಹಣ ಕೊಡ್ತಿಲ್ಲ

ಸುಪ್ರೀಂಕೋರ್ಟ್‌ ನಮ್ಮನ್ನು ಹಾಕಿಕೊಂಡು ಅರೀತಿದೆ. ನಮ್ಮ ದುಡ್ಡನ್ನು ಸುಪ್ರೀಂಕೋರ್ಟ್‌ನಲ್ಲಿ ಖರ್ಚು ಮಾಡ್ತಿದ್ದೀವಿ ಆದ್ರೆ ನಮಗೆ ಬಿಜೆಪಿಯವರು ಖರ್ಚಿಗೆ ಹಣ ಕೊಡ್ತಿಲ್ಲ ಎಂದು ಕೆ.ಆರ್​.ಪೇಟೆ ಕ್ಷೇತ್ರದ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!