ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕಕ್ಕೆ ಅಸಲಿ ಕಾರಣ ಇದು!

ಬೆಂಗಳೂರು: ಕಾಂಗ್ರೆಸ್​ ಹೈಕಮಾಂಡ್​ ಎದ್ನೋ ಬಿದ್ನೋ ಎಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕಕ್ಕೆ ಅಸ್ತು ಅಂದಿದೆ. ಯಾಕಪ್ಪಾ? 2-3 ತಿಂಗಳಿಂದ ಡಿಕೆಶಿ ಜಪ ನಡೀತಾ ಇತ್ತು ಅಲ್ವಾ? ಈಗ್ಯಾಕೆ ಒಂದೇ ಉಸಿರಿಗೆ ಎಐಸಿಸಿ ಅವರನ್ನ ನೇಮಕ ಮಾಡಬೇಕು ಅನ್ನಬಹುದು. ಆದ್ರೆ ಡಿಕೆಶಿಯನ್ನ ಕ್ಷಿಪ್ರವಾಗಿ ನೇಮಕ ಮಾಡಲೂ ಬಲವಾದ ಕಾರಣ ಇಲ್ಲಿದೆ.

ಕಮಲ್ ನಾಥ್ ಸರ್ಕಾರಕ್ಕೆ ಮುಳುಗುನೀರು ತರುವಲ್ಲಿ ಯಶಸ್ವಿ:
ನಾಯಕತ್ವ ಮತ್ತು ದೂರದೃಷ್ಟಿ ಇಲ್ಲದೆ ತೊಳಲಾಡುತ್ತಿರುವ ಕಾಂಗ್ರೆಸ್​ ಹೈಕಮಾಂಡ್​ಗೆ ಮಧ್ಯಪ್ರದೇಶದಲ್ಲಿ ಯುವಶಕ್ತಿಯೊಂದು ಮೂರು ದಿನಗಳ ಹಿಂದೆ ಬಲವಾದ ಪೆಟ್ಟು ಕೊಟ್ಟಿತ್ತು! ರಾಜಕೀಯ ಮೇಲಾಟಗಳು ಏನೇ ಇರಬಹುದು. ಯುವಶಕ್ತಿ ಮತ್ತು ನಿಷ್ಠಾವಂತ ನಾಯಕರನ್ನು ಕಡೆಗಣಿಸಿದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ಸ್ಪಷ್ಟ ಸಂದೇಶವೊಂದು ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯದ ಮೂಲಕ ರವಾನೆಯಾಗಿತ್ತು. ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ರಾಯ್ ಸರ್ಕಾರಕ್ಕೆ ಮುಳುಗುನೀರು ತರುವಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಯಶಸ್ವಿಯಾದರು. ತನ್ಮೂಲಕ ತಮ್ಮಂತಹ ನಿಷ್ಠಾವಂತರನ್ನು ಕಡೆಗಣಿಸಿದ್ರೆ ಪಕ್ಷದ ಕಥೆ ಇಷ್ಟೇ ಕಣಣ್ಣೋ ಎಂಬುದನ್ನು ಎತ್ತಿತೋರಿಸಿದರು.

ಅಲ್ಲಿಗೂ ಕಾಂಗ್ರೆಸ್​ ಹೈಕಮಾಂಡ್ ಎಂದಿನ ಉದಾಸೀನತೆಗೆ ಜಾರಿತು. ಸರಿಯಾಗಿ ಅದೇ ವೇಳೆ ಡಿಕೆ ಶಿವಕುಮಾರ್​ಗೂ ತಮ್ಮ ತಾಕತ್ತು ಏನು ಎಂಬುದನ್ನು ಹೈಕಮಾಂಡ್​ಗೆ ರುಜುವಾತು ಪಡಿಸಲು ಸ್ವತಃ ಹೈಕಮಾಂಡೇ ಅಸ್ತ್ರವೊಂದನ್ನು ಕಲ್ಪಿಸಿಕೊಟ್ಟಿತು!

ಹೈಕಮಾಂಡ್ ಒಪ್ಪಿಸಿದ್ದ ಕಾರ್ಯವನ್ನ ಡಿಕೆಶಿ ನಿಭಾಯಿಸಿದ್ದರು:
ಮಧ್ಯ ಪ್ರದೇಶದಂತಹ ಪ್ರಕರಣಗಳು ಕಾಂಗ್ರೆಸ್​ಗೆ ಇತ್ತೀಚಿನ ದಿನಗಳಲ್ಲಿ ಹೊಸದೇನೂ ಅಲ್ಲ. ಆದ್ರೆ ಅಂತಹ ಸಂದರ್ಭಗಳಲ್ಲೆಲ್ಲಾ ಆಪತ್ಬಾಂಧವನಾಗಿ ಇದೇ ಡಿಕೆಶಿ ತಮಗೆ ಒಪ್ಪಿಸಿದ್ದ ಕಾರ್ಯಭಾರವನ್ನು ನಿಭಾಯಿಸಿದ್ದರು. ಅದನ್ನೇ ನೆಚ್ಚಿಕೊಂಡು ಹೈಕಮಾಂಡ್ ಮತ್ತೊಮ್ಮೆ ಮಧ್ಯಪ್ರದೇಶ ಬಿಕ್ಕಟ್ಟಿನಲ್ಲಿ ನೆರವಿನ ಹಸ್ತ ಕೋರಿ ಡಿಕೆಶಿಯತ್ತ ಮುಖಮಾಡಿತು.

ಆದ್ರೆ ಇನ್ನಾದರೂ ತಮ್ಮನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ನೇಮಕ ಮಾಡದೇ, ಪಕ್ಷಕ್ಕೆ ಹೊರಗಿನಿಂದ ಬಂದಿರುವ ಯಾರದೋ ಮಾತಿಗೆ ಮಣೆ ಹಾಕುತ್ತಾ ಕಾಲಹರಣ ಮಾಡುತ್ತಿರುವ ಹೈಕಮಾಂಡ್​ ವಿರುದ್ಧ ಅದ್ಯಾವ ಪರಿಯ ಸಿಟ್ಟು ಇತ್ತೆಂದರೆ ಮಧ್ಯಪ್ರದೇಶ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಲ್ಲಿನ ಬಂಡಾಯ ಶಾಸಕರನ್ನು ಭೇಟಿಯಾಗಿ ಪೂಸಿ ಹೊಡೆಯುವುದಕ್ಕೆ ಆಗೋಲ್ಲ ಎಂದು ಕಡ್ಡಿಮುರಿದ ಹಾಗೆ ಹೇಳಿಕಳುಹಿಸಿದ್ದರು. ಜೊತೆಜೊತೆಗೆ ತಾನೂ ಮತ್ತೊಬ್ಬ ಜ್ಯೋತಿರಾದಿತ್ಯ ಸಿಂಧಿಯಾ ಆಗಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು.

ಆಗ ಎದ್ದುಕುಳಿತುಕೊಂಡಿತು ನೋಡಿ ಕಾಂಗ್ರೆಸ್​ ಹೈಕಮಾಂಡ್. ಯಾವುದೇ ಕಾರಣಕ್ಕೂ ಇನ್ನು ವಿಳಂಬ ಮಾಡುವುದು ಬೇಡ. ಮೊದಲು ಡಿಕೆಶಿ ಕೈಗೆ ಕರ್ನಾಟಕ ಕಾಂಗ್ರೆಸ್​ ಅಧಿಪತ್ಯ ಕೊಟ್ಟುಬಿಡೋಣ ಎಂಬ ಅನಿವಾರ್ಯ ತೀರ್ಮಾನಕ್ಕೆ ಹೈಕಮಾಂಡ್ ಬಂದಿತು. ತತ್ಫಲವಾಗಿ ಡಿಕೆಶಿ ಕಾಂಗ್ರೆಸ್​ ಅಧ್ಯಕ್ಷರಾಗಿ ಕೊನೆಗೂ ನೇಮಕವಾಗಿಯೇ ಬಿಟ್ಟರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!