ಅಮೆರಿಕ ಅಧ್ಯಕ್ಷರ ಭಾರತ ಭೇಟಿಗೆ ಕೌಂಟ್​ಡೌನ್: ‘ಪ್ರೇಮಸೌಧ’ಕ್ಕೂ ಭೇಟಿ ನೀಡ್ತಾರೆ ಟ್ರಂಪ್!

ದೆಹಲಿ: ಅಮೆರಿಕ ಅಧ್ಯಕ್ಷರ ಭಾರತ ಭೇಟಿಗೆ ಕೌಂಟ್​ಡೌನ್ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇನ್ನು ಟ್ರಂಪ್ ಆತಿಥ್ಯಕ್ಕೆ ಭರದ ಸಿದ್ಧತೆ ನಡೆದಿದ್ದು, ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಡೊನಾಲ್ಡ್ ಟ್ರಂಪ್ ಭಾರತ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಆರ್ಥಿಕ ಹಿಂಜರಿತ ಸೇರಿದಂತೆ ಹಲವಾರು ವಿಚಾರಗಳ ದ್ವಿಪಕ್ಷೀಯ ಮಾತುಕತೆಗೆ ಇದು ವೇದಿಕೆಯಾಗಲಿದೆ. ಮೊದಲಿನಿಂದಲೂ ಅಮೆರಿಕದ ಜೊತೆಗೆ ಉತ್ತಮ ಸ್ನೇಹ ಹೊಂದಿರುವ ಭಾರತ, ಆರ್ಥಿಕ ಸಂಬಂಧವನ್ನೂ ವೃದ್ಧಿಸಿಕೊಳ್ಳುತ್ತಾ ಬಂದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ಬಾಂಧವ್ಯಕ್ಕೆ ಒಂದಷ್ಟು ಹಿನ್ನಡೆ ಉಂಟಾಗುತ್ತಿದೆ. ಇದಕ್ಕೆಲ್ಲಾ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮೊಂಡುತನ ಕಾರಣ ಅನ್ನೋ ಆರೋಪಗಳು ಕೇಳಿ ಬರುತ್ತಿರುವಾಗಲೇ, ಅಮೆರಿಕ ಅಧ್ಯಕ್ಷರ ಭಾರತ ಭೇಟಿಗೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 24 ಹಾಗೂ 25 ರಂದು ಭೇಟಿಗೆ ಡೇಟ್ ಫಿಕ್ಸ್ ಆಗಿದೆ.

‘ಪ್ರೇಮಸೌಧ’ಕ್ಕೂ ಭೇಟಿ ನೀಡಲಿರುವ ಟ್ರಂಪ್..!
ಜಗತ್ತಿನ ಅದ್ಭುತಗಳ ಪೈಕಿ ಒಂದಾದ ತಾಜ್​ಮಹಲ್ ಅಮೆರಿಕ ಅಧ್ಯಕ್ಷರ ಕೇಂದ್ರ ಬಿಂದುವಾಗಿದೆ. ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾಜ್​ಮಹಲ್​ಗೆ ಭೇಟಿ ನೀಡುವುದು ಕನ್ಫರ್ಮ್ ಆಗಿದೆ. ಹೀಗಾಗಿ ಆಗ್ರಾದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟ್ರಂಪ್ ಭೇಟಿ ನೀಡುವ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮತ್ತೊಂದ್ಕಡೆ ಡೊನಾಲ್ಡ್ ಟ್ರಂಪ್ ಅಹಮದಾಬಾದ್​ನ ಏರ್​ಪೋರ್ಟ್​ನಿಂದ ಮೋಟೇರಾ ಕ್ರೀಡಾಂಗಣದವರೆಗೆ 22 ಕಿಲೋ ಮೀಟರ್ ರೋಡ್ ಶೋ ನಡೆಸಲಿದ್ದಾರೆ.

ರೋಡ್ ಶೋ ಮಾರ್ಗದಲ್ಲಿ ಭಾರಿ ಕಟ್ಟೆಚ್ಚರ..!
ಇನ್ನು ರೋಡ್ ಶೋ ನಡೆಯಲಿರುವ ಜಾಗದ ಅಕ್ಕಪಕ್ಕದ ಒಟ್ಟು 1 ಕಿಲೋ ಮೀಟರ್​ನಷ್ಟು ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶಗಳಿದ್ದು, ಇಲ್ಲಿನ ನಿವಾಸಿಗಳಿಗೆ ಜಾಗ ಖಾಲಿ ಮಾಡಲು ಈಗಾಗ್ಲೇ ನೋಟಿಸ್ ನೀಡಲಾಗಿದೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೋಡ್ ಶೋ ನಡೆಯಲಿರುವ ಮಾರ್ಗದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಭಾರತಕ್ಕೆ ಬಂದಿಳಿದ ಅಮೆರಿಕದ ಸೀಕ್ರೇಟ್ ಏಜೆಂಟ್ಸ್..!
ವಾಡಿಕೆಯಂತೆ ಅಮೆರಿಕ ಅಧ್ಯಕ್ಷರು ಭೇಟಿ ನೀಡುವ ಜಾಗಕ್ಕೆ ಮೊದಲೇ ಸೀಕ್ರೇಟ್ ಏಜೆಂಟ್​ಗಳು ವಿಸಿಟ್ ಹಾಕ್ತಾರೆ. ಇದೇ ರೀತಿ ಈಗಾಗಲೇ ಅಮೆರಿಕದ ಸೀಕ್ರೇಟ್ ಏಜೆಂಟ್ಸ್ ಟ್ರಂಪ್ ಭೇಟಿ ನೀಡಲಿರುವ ಜಾಗಗಳನ್ನ ಪಕ್ಕಾ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಭದ್ರತೆಗೆ ತೊಡಕು ಉಂಟುಮಾಡುವ ವಿಚಾರಗಳನ್ನ ನಿಭಾಯಿಸಲು ಸೂಕ್ತ ಸಲಹೆ ನೀಡುತ್ತಿದ್ದಾರೆ. ಹಾಗೇ ಅಮೆರಿಕ ಅಧ್ಯಕ್ಷರು ಬಳಸುವ ಅತಿಹೆಚ್ಚು ಭದ್ರತೆಯ ಕಾರು ಕೂಡ ಭಾರತಕ್ಕೆ ಬಂದಿಳಿದಿದೆ.

ಒಟ್ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಆತಿಥ್ಯಕ್ಕೆ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ಕೇಂದ್ರದ ನಡೆ ಒಂದ್ಕಡೆ ಚರ್ಚೆಗೆ ಗ್ರಾಸವಾಗ್ತಿದೆ. ಆದ್ರೆ ಮತ್ತೊಂದ್ಕಡೆ ವಿಶ್ವದ ದೊಡ್ಡಣ್ಣನಿಗೆ ಆತಿಥ್ಯ ವಹಿಸಲು ಕೇಂದ್ರ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಗಮನಿಸಬೇಕಾದ ಸಂಗತಿ ಅಂದ್ರೆ, ಇದು ಭಾರತಕ್ಕೆ ಪ್ರತಿಷ್ಠೆಯ ವಿಚಾರವೂ ಹೌದು.

Related Posts :

Category:

error: Content is protected !!

This website uses cookies to ensure you get the best experience on our website. Learn more