ಕಾಡಿ ಬೇಡಿದ್ರೂ ಸಿಗಲಿಲ್ಲ ಚಿಕಿತ್ಸೆ, ಹೃದಯಾಘಾತಕ್ಕೆ ನರಳಿ ನರಳಿ ಮಗನ ಎದುರೇ ಪ್ರಾಣ ಬಿಟ್ರು..

  • Ayesh Banu
  • Published On - 12:12 PM, 5 Jul 2020

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಆಸ್ಪತ್ರೆಯ ನಿರ್ಲಕ್ಷ್ಯ ಜೀವ ಬಲಿ ಪಡೆಯುತ್ತಿರುವಂತಹ ಘಟನೆಗಳು ನಡೆಯುತ್ತಿವೆ. ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕರುಣಾಜನಕ ಕಥೆ ಕಂಡು ಬಂದಿದೆ. ಉಸಿರು ನಿಲ್ಲೋ ಸಮಯದಲ್ಲೂ ಚಿಕಿತ್ಸೆ ಸಿಗಲಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡದೇ ಸಿಬ್ಬಂದಿ ನಿರ್ಲಕ್ಷ್ಯವಹಿಸಿ ಜೀವವೊಂದು ಬಲಿಯಾಗಿರುವ ಘಟನೆ ಮರು ಕಳಿಸಿದೆ.

ನಿನ್ನೆ ಕುರುಬರಹಳ್ಳಿ ಮಹಿಳೆಗೆ ಹೃದಯಾಘಾತವಾಗಿತ್ತು. ಹೀಗಾಗಿ ಚಿಕಿತ್ಸೆ ಕೊಡಿಸಲು ತಾಯಿಯನ್ನು ಕರೆದುಕೊಂಡು ಮಗ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ. ಜಯದೇವ ಸೇರಿ ವಿವಿಧ ಆಸ್ಪತ್ರೆಗಳಿಗೆ ಸುತ್ತಾಡಿದ್ದಾರೆ. ಆದ್ರೆ, ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಿಲ್ಲ. ಕೊನೆಗೆ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ, ಅಲ್ಲಿಯೂ ಸಿಬ್ಬಂದಿ ಅಡ್ಮಿಟ್ ಮಾಡಿಕೊಂಡಿಲ್ಲ. ರಾಜಕಾರಣಿಯೊಬ್ರು ಪೋನ್ ಮಾಡಿ ಹೇಳಿದ್ರೂ ನಿರ್ಲಕ್ಷ್ಯವಹಿಸಲಾಗಿದೆ. ಆಸ್ಪತ್ರೆ ಆವರಣದಲ್ಲೇ ಕಾಡಿ ಬೇಡಿದ್ರೂ ವೈದ್ಯರು ಕರುಣೆ ತೋರಿಲ್ಲ. ವೈದ್ಯ ನಿರ್ಲಕ್ಷ್ಯದಿಂದಾಗಿ ಮಹಿಳೆ ಕೊನೆಯುಸಿರೆಳೆದಿದ್ದಾರೆ. ನತದೃಷ್ಟ ಮಗನ ಕಣ್ಣೆದುರೇ ಹೆತ್ತ ತಾಯಿ ಜೀವಬಿಟ್ಟಿದ್ದಾರೆ. ಕಿಮ್ಸ್ ಸಿಬ್ಬಂದಿ ವಿರುದ್ಧ ಮೃತಳ ಮಗ ಆರೋಪಿಸಿದ್ದಾರೆ. ತನ್ನ ತಾಯಿ ಸಾವು ಕಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಆಕ್ಸಿಜನ್ ಕೊಟ್ಟಿದ್ರೆ ನನ್ನ ತಾಯಿ ಬದುಕುತ್ತಿದ್ರು ಕಾಡಿ ಬೇಡಿ, ಕಣ್ಣೀರಿಟ್ರೂ ಎಮರ್ಜೆನ್ಸಿಗೆ ಸೇರಿಸಿಕೊಂಡಿಲ್ಲ. ಸಾಮಾನ್ಯರ ಕಷ್ಟಕ್ಕೆ ಯಾವ ಆಸ್ಪತ್ರೆಯೂ ಆಗ್ತಿಲ್ಲ. ಬೆಡ್ ಇಲ್ಲ ಌಂಬುಲೆನ್ಸ್ ವ್ಯವಸ್ಥೆ ಸರಿಯಾಗಿ ಸಿಗುತ್ತಿಲ್ಲ ಎಂದು ಹೆತ್ತ ತಾಯಿಯ ಕಳೆದುಕೊಂಡ ಮಗ ಲೋಕೇಶ್ ಗೋಳಾಡಿದ್ದಾರೆ.