ಗುರು ರಾಘವೇಂದ್ರ! ಅಧಿಕ ಬಡ್ಡಿ ಆಸೆ ತೋರಿಸಿ 1500 ಕೋಟಿ ಹಣ ಸಂಗ್ರಹಿಸಿದ್ದರು: ಈಗೇನು?

ಬೆಂಗಳೂರು: ಗುರುರಾಘವೇಂದ್ರ ಸಹಕಾರಿ ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ 38.16 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಜಾರಿ ನಿರ್ದೇಶನಾಲಯದಿಂದ ಬ್ಯಾಂಕ್‌ನ ಆಸ್ತಿ ಮುಟ್ಟುಗೋಲು ಹಾಕಲಾಗಿದೆ.
ಇದರ ಜೊತೆಗೆ 7ಕೋಟಿ ಮೌಲ್ಯದ ನಗದು ಸೇರಿದಂತೆ 45.32 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಹ ಜಪ್ತಿ ಮಾಡಲಾಗಿದೆ. ರಾಮಕೃಷ್ಣ, ಸಂತೋಷ್ ಕುಮಾರ್ ಸೇರಿದಂತೆ ಬ್ಯಾಂಕ್​ನ ಇತರೆ ನಿರ್ದೇಶಕರ ಹೆಸರಿನಲ್ಲಿದ್ದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಈ ಹಿಂದೆ ಸಹಕಾರಿ ಬ್ಯಾಂಕ್​ನ ಅಧ್ಯಕ್ಷನಾಗಿದ್ದ ರಾಮಕೃಷ್ಣ, 2016ರಿಂದ 2019ರವರೆಗೆ ಕೋಟ್ಯಂತರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದನು ಎಂದು ತಿಳಿದುಬಂದಿದೆ.

ಬ್ಯಾಂಕ್​ನಿಂದ ಜನರ ಠೇವಣಿ ಹಣ ಹಿಂತಿರುಗಿಸದ ಬಗ್ಗೆ ಈ ಹಿಂದೆ ದೂರು ದಾಖಲಾಗಿತ್ತು. ಈ ಸಂಬಂಧ ಠಾಣೆಯಲ್ಲಿ FIR ಕೂಡ ದಾಖಲಾಗಿತ್ತು. ಜೊತೆಗೆ, PMLA ಕಾಯ್ದೆ ಅಡಿಯಲ್ಲಿ ತನಿಖೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯವು KPID ನಿಯಮವನ್ನು ನಿರ್ದೇಶಕರು ಉಲ್ಲಂಘಿಸಿ ಬರೊಬ್ಬರಿ 1,500 ಕೋಟಿಯಷ್ಟು ಹಣವನ್ನು ಸಂಗ್ರಹಿಸಿದ್ದರು ಎಂದು ಉಲ್ಲೇಖಿಸಿದೆ.

ಶೇ 12 ರಿಂದ 16ರಷ್ಟು ಬಡ್ಡಿ ಆಸೆಯಿಂದ ಸಾಕಷ್ಟು ಹಿರಿಯ ನಾಗರಿಕರಿಂದ ಇದೇ ಬ್ಯಾಂಕ್​ನಲ್ಲಿ FD ಮಾಡಿಸಲಾಗಿತ್ತು. ಬಳಿಕ ಆರೋಪಿಗಳು ಬ್ಯಾಂಕ್​ನಿಂದ ಠೇವಣಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರು. ನಂತರ, ಇದೇ ದುಡ್ಡಲ್ಲಿ ಮಯ್ಯ ಮತ್ತು ರಾಮಕೃಷ್ಣ ಸೇರಿದಂತೆ ಇತರೆ ನಿರ್ದೇಶಕರು ಹಲವರ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದರು. ಈ ಸಂಬಂಧ ರಾಮಕೃಷ್ಣ, ಮಯ್ಯ ಹಾಗೂ ಇತರರು ಖರೀದಿಸಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ.

Related Tags:

Related Posts :

Category:

error: Content is protected !!