ಬಯಲಿಗೆ ಬಿತ್ತು ಇಬ್ಬರು ಅಧಿಕಾರಿಗಳ ಮುಸುಕಿನ ಗುದ್ದಾಟ, ನೊಂದ ಅಧಿಕಾರಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದೇನು?

ಅನೇಕ ತಿಂಗಳಿನಿಂದ ಆಯುಕ್ತ ಕಚೇರಿಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ ನಡುವೆ ಆಡಳಿತಾತ್ಮಕ ವಿಚಾರಗಳಿಗೆ ಭಿನ್ನಾಭಿಪ್ರಾಯ ತಲೆದೋರಿತ್ತು.

  • pruthvi Shankar
  • Published On - 18:54 PM, 26 Nov 2020
ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್

ಧಾರವಾಡ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳ ನಡುವಿನ ವೈಮನಸ್ಸು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಹೊರ ಬರುತ್ತಿದೆ.

ಅನೇಕ ತಿಂಗಳಿನಿಂದ ಆಯುಕ್ತ ಕಚೇರಿಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ ನಡುವೆ ಆಡಳಿತಾತ್ಮಕ ವಿಚಾರಗಳಿಗೆ ಭಿನ್ನಾಭಿಪ್ರಾಯ ತಲೆದೋರಿತ್ತು. ಅದನ್ನು ವರ್ಧನ್ ಅವರು ಬಹಿರಂಗವಾಗಿ ಫೇಸ್​ಬುಕ್ ಮೂಲಕ ಹೊರ ಹಾಕಿದ್ದರು.

ಬಿ.ಕೆ.ಎಸ್. ವರ್ಧನ್ ಅವರು ದಲಿತ ಚಳುವಳಿ, ಹೋರಾಟ, ದಲಿತ ಸಾಹಿತ್ಯದ ಮೂಲಕ ಗುರುತಿಸಿಕೊಂಡವರು. ಇದೀಗ ಅವರನ್ನು ಸರ್ಕಾರ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಿದೆ. ಇದಕ್ಕೆ ಕಾರಣ ಯಾರು ಎಂಬುದನ್ನು ಪರೋಕ್ಷವಾಗಿ ಹೇಳೀರೋ ವರ್ಧನ್, ಎಲ್ಲಿಯೂ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅಂತಾ ನೇರವಾಗಿ ಹೆಸರಿಸಿಲ್ಲ. ತಮ್ಮ ಹೋರಾಟ ಮುಂದುವರೆಯುತ್ತೆ ಅಂತಾ ಹೇಳಿದ್ದಾರೆ.

ಹಲವು ಪ್ರಭಾವಿಗಳ ಹೆಸರು ಬಳಕೆ
ಫೇಸ್​ಬುಕ್ ಪೋಸ್ಟ್​ನಲ್ಲಿ ದೀರ್ಘವಾಗಿ ಬರೆದಿರುವ ವರ್ಧನ್ ಅನೇಕರ ಹೆಸರುಗಳನ್ನು ತೆಗೆದುಕೊಂಡಿದ್ದಾರೆ. ಅದರಲ್ಲೂ ವಿಧಾನ ಪರಿಷತ್ ಸದಸ್ಯ ಹೊರಟ್ಟಿ ಅವರ ಹೆಸರು ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ. ತಮ್ಮ ವಿರುದ್ಧ ನಿರಂತವಾಗಿ ಕೋನರೆಡ್ಡಿ, ಕುಲಕರ್ಣಿ ಅವರನ್ನು ಎತ್ತಿ ಕಟ್ಟಿದ ಹೊರಟ್ಟಿಯವರು ಈಗೇನಂತಾರೆ ಅಂತಾನೂ ಪ್ರಶ್ನಿಸೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕೆಲ ತಿಂಗಳ ಹಿಂದೆ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ವಿರುದ್ಧ ಡಾ. ವರ್ಧನ್ ಇಂಥದ್ದೇ ಪೋಸ್ಟ್ ಹಾಕಿದ್ದರು. ಆಗಲೂ ಅವರ ಹೆಸರು ಪ್ರಸ್ತಾಪಿಸಿರಲಿಲ್ಲ.

ಇದೀಗ ಅವರ ವರ್ಗಾವಣೆಯಾಗಿರೋ ಬೆನ್ನಲ್ಲೇ ಇಂದು ಸಂವಿಧಾನ ದಿನಾಚರಣೆ ನಿಮಿತ್ತ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಕಲಬುರ್ಗಿಗೆ 1994 ರಿಂದ ಇಲ್ಲಿಯವರೆಗೆ 20 ಬಾರಿ ವರ್ಗಾವಣೆಯಾಗಿದ್ದು, ಈಗಿನ ವರ್ಗಾವಣೆಯೇನೂ ಬೇಸರ ತಂದಿಲ್ಲ. ಆದರೆ, ಮೇಲಾಧಿಕಾರಿಗಳ ವಿರುದ್ಧ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ಈ ರೀತಿ ಮಾಡುತ್ತಿರುವುದು ನೋವಿನ ಸಂಗತಿ. ನಮ್ಮನ್ನು ಮೇಲಿಂದ ಮೇಲೆ ತುಳಿಯುತ್ತ, ತಳ್ಳುತ್ತ ಬರಲಾಗುತ್ತಿದೆ. ಆದರೂ ನಾವು ಸಹಿಸಿಕೊಳ್ಳೋಣ ಎಂದು ಸಾಮಾಜಿಕ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಅಪರ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿದವರು. ಕಳೆದ ಮೂರು ವರ್ಷಗಳಿಂದ ಅಪರ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಇತ್ತೀಚಿಗೆ ಇಬ್ಬರ ನಡುವೆ ಅದೇಕೆ ವೈಮನಸ್ಸು ಬಂತು ಅನ್ನೋದು ತಿಳಿದುಬಂದಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಪರ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಡಾ. ವರ್ಧನ್ ಅವರ ವರ್ಗಾವಣೆಯನ್ನು ಸರಕಾರವು ಆಡಳಿತಾತ್ಮಕ ಹಿತದೃಷ್ಟಿಯಿಂದ ಮಾಡಿದೆ. ಇವರ ವರ್ಗಾವಣೆಗೆ ನಾನು ಯಾವುದೇ ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಇದೀಗ ಇಬ್ಬರ ನಡುವಿನ ಗುದ್ದಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.