CET Exam: ಈ ಬಾರಿ ನೀಟ್ ಮಾದರಿಯಲ್ಲಿ ಸಿಇಟಿ ಪರೀಕ್ಷೆ, ಪರೀಕ್ಷಾ ಕೇಂದ್ರಗಳ ಬಳಿ ಜಾಮರ್
ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಸಲು ನಿರ್ಧರಿಸಲಾಗಿದೆ. ಮೆಟಲ್ ಡಿಡೆಕ್ಟರ್ ಅಳವಡಿಸಬೇಕೆಂದು ಕೆಇಎ ಬೋರ್ಡ್ ಚಿಂತನೆ ನಡೆಸಿದೆ.
ಬೆಂಗಳೂರು: ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (Common Entrance Test – CET) ಈ ಬಾರಿ ಕಟ್ಟುನಿಟ್ಟಾಗಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನೀಟ್ ಮಾದರಿ ಅನುಸರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಾರಿ ಸಿಇಟಿ ಪರೀಕ್ಷೆಗೆ ಮಾಂಗಲ್ಯ ಸರ, ಮೂಗುತಿ, ಕಿವಿಯೋಲೆ, ಸರ, ಬಳೆ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಆಭರಣಗಳನ್ನೂ ಪರೀಕ್ಷೆ ಬರೆಯುವಾಗ ಧರಿಸುವಂತಿಲ್ಲ. ಕೈಗಡಿಯಾರ ಮತ್ತು ಕ್ಯಾಲ್ಕುಲೇಟರ್ಗಳಿಗೂ ನಿಷೇಧ ಹೇರಲಾಗಿದೆ. ಇದರ ಜೊತೆಗೆ ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಸಲು ನಿರ್ಧರಿಸಲಾಗಿದೆ. ಮೆಟಲ್ ಡಿಡೆಕ್ಟರ್ ಅಳವಡಿಸಬೇಕೆಂದು ಕೆಇಎ ಬೋರ್ಡ್ ಚಿಂತನೆ ನಡೆಸಿದೆ.
ಈ ಬಾರಿ ಒಟ್ಟು 2.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 1.4 ಲಕ್ಷ ಪುರುಷ ವಿದ್ಯಾರ್ಥಿಗಳಿದ್ದರೆ 1.7 ಲಕ್ಷ ಮಹಿಳಾ ಅಭ್ಯರ್ಥಿಗಳಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಹದ್ದಿನ ಕಣ್ಣು ಇರಿಸಲು ಅಧಿಕಾರಿಗಳು ಮುಂದಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಲ 200 ಮೀಟರ್ ವ್ಯಾಪ್ತಿಯಲ್ಲಿ 144ನೇ ವಿಧಿ ಜಾರಿಗೊಳಿಸಲಾಗುವುದು. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವುದು ಕಡ್ಡಾಯ ಎಂದು ಹೇಳಲಾಗಿದೆ.
ಹಿಜಾಬ್ಗೆ ಇಲ್ಲ ಅವಕಾಶ
ಸಿಇಟಿ ಪರೀಕ್ಷೆ ಬರೆಯುವವರೂ ಹಿಜಾಬ್ ಧರಿಸುವಂತಿಲ್ಲ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬರುವವರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ (Karnataka Examinations Authority – KEA). ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲೇ ಹಿಜಾಬ್ ತೆಗೆದಿಡಬೇಕು. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮಾದರಿಯಲ್ಲೇ ಸಿಇಟಿ ಪರೀಕ್ಷೆಯೂ ನಡೆಯಲಿದೆ. ಈ ಸಂಬಂಧ ಸರ್ಕಾರ ಹಾಗೂ ಹೈಕೋರ್ಟ್ ಆದೇಶ ಪಾಲನೆಗೆ ಕೆಇಎ ಮುಂದಾಗಿದೆ. ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಿ ಸಿಇಟಿ ಪರೀಕ್ಷೆಗೆ ಬರುವಂತಿಲ್ಲ. ಸದ್ಯದಲ್ಲೇ ಸಮವಸ್ತ್ರ ಪಾಲನೆ ನಿಯಮವನ್ನು ಕಿಇಎ ಪ್ರಕಟಿಸಲಿದೆ.
ರಾಜ್ಯದಲ್ಲಿ ಜೂನ್ 16, 17 ಮತ್ತು 18ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಸಿಇಟಿ ಪರೀಕ್ಷೆಗೆ ಯಾವುದೇ ಸಮವಸ್ತ್ರ ನಿಗದಿ ಮಾಡಿಲ್ಲ. ಆದರೆ ಸರ್ಕಾರದ ವಸ್ತ್ರ ನಿಯಮವನ್ನು ನಾವು ಪಾಲಿಸುತ್ತೇವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಹೇಳಿದ್ದಾರೆ.
Published On - 8:01 am, Wed, 25 May 22