No Delete Option: ಮಾರುವೇಷದ ಹದ್ದುಗಳು; ಶೈಕ್ಷಣಿಕ ಹಿನ್ನಡೆಗೆ ಮುನ್ನವೇ ಎಚ್ಚೆತ್ತುಕೊಳ್ಳಿ ಪೋಷಕರೇ, ವಿದ್ಯಾರ್ಥಿಗಳೇ

ಶ್ರೀದೇವಿ ಕಳಸದ

|

Updated on:Feb 20, 2022 | 3:31 PM

Education : ‘ಕೇವಲ ಆರು ತಿಂಗಳು ದುಡಿದು ವರ್ಷಕ್ಕೆ ಸಾಕಾಗುವಷ್ಟು ಸಂಪಾದನೆಯನ್ನು ಮಾಡಬೇಕಾದ ಪ್ರತಿಕೂಲ ಹವಾಗುಣವನ್ನು ಹೊಂದಿರುವ ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದಾಗಿ ವಿದ್ಯಾವಂಚಿತ ಮಕ್ಕಳು ಪ್ರವಾಸಿಗರಿಗೆ ಕುದುರೆ ಸವಾರಿ ಮಾಡಿಸುವ, ಟ್ಯಾಕ್ಸಿ ಆಟೋ ಚಾಲನೆಯಂಥ ಚಿಕ್ಕಚಿಕ್ಕ ಕೆಲಸಗಳನ್ನು ಮಾಡುವುದಷ್ಟೇ ಸಾಧ್ಯವಾಗಿತ್ತು. ನೂತನ ದೋಶೆಟ್ಟಿ

No Delete Option: ಮಾರುವೇಷದ ಹದ್ದುಗಳು; ಶೈಕ್ಷಣಿಕ ಹಿನ್ನಡೆಗೆ ಮುನ್ನವೇ ಎಚ್ಚೆತ್ತುಕೊಳ್ಳಿ ಪೋಷಕರೇ, ವಿದ್ಯಾರ್ಥಿಗಳೇ
ಲೇಖಕಿ ನೂತನ ದೋಶೆಟ್ಟಿ

ನೋ ಡಿಲೀಟ್ ಆಪ್ಷನ್ | No Delete Option :  ಇದು ದಶಕದ ಹಿಂದೆ ನಡೆದಿದ್ದು. ಕಾಶ್ಮೀರ ಪ್ರವಾಸದಲ್ಲಿ ನಮ್ಮ ಕಾರು ಚಾಲಕ, ಉಗ್ರಗಾಮಿಗಳಿಂದ ತನ್ನ ಶೈಕ್ಷಣಿಕ ಜೀವನ ಅಂತ್ಯವಾಗಿ ಅಧಿಕಾರಿಯಾಗುವ ಕನಸು ಕಮರಿ ಹೋಗಿದ್ದನ್ನು ಹೇಳಿಕೊಂಡಿದ್ದ. ತಾನು ಹತ್ತನೇ ತರಗತಿಯನ್ನೂ ಮುಗಿಸಲು ಸಾಧ್ಯವಾಗದುದನ್ನು ಹೇಳುತ್ತ ಕಣ್ಣೀರಾಗಿದ್ದ; 1990ರ ಹೊತ್ತಿಗೆ ಕಾಶ್ಮೀರ ಹೊತ್ತಿ ಉರಿಯುತ್ತಿತ್ತು. ಆಗ ಶಾಲೆಗೆ ಹೋದ ಮಕ್ಕಳು ಮನೆಗೆ ಹಿಂದಿರುಗುವ ಭರವಸೆಯೇ ಇರಲಿಲ್ಲವಾದ್ದರಿಂದ ಚಾಲಕನ ತಾಯಿ ಅವನ ಹಾಗೂ ಅವನ ತಮ್ಮನ ಓದನ್ನು ಅರ್ಧದಲ್ಲೇ ಬಿಡಿಸಿದ್ದಳು. ಅವರ ಮನೆಯಲ್ಲಿ ಚಾಲಕನ ಒಬ್ಬ ಚಿಕ್ಕಪ್ಪ ‘ದರೋಗಾ’ ಆಗಿದ್ದರು. ಇನ್ನೊಬ್ಬ ಚಿಕ್ಕಪ್ಪ ಕಾಶ್ಮೀರದ ಕಸೂತಿ ಕಲೆಯಲ್ಲಿ ಸಿದ್ಧಹಸ್ತರಾಗಿದ್ದರು. ಇಂಥ ಉನ್ನತ ಶೈಕ್ಷಣಿಕ ಹಿನ್ನೆಲೆಯ ಮುಂದಿನ ತಲೆಮಾರು ಹತ್ತನೇ ತರಗತಿಯನ್ನೂ ಪೂರೈಸಲಾಗಲಿಲ್ಲವೆಂದರೆ ಉಳಿದವರ ಪಾಡೇನು? ಇದು ಒಂದು ಸಂಸಾರದ ಕಥೆಯಲ್ಲ. ನೂತನ ದೋಶೆಟ್ಟಿ, ಲೇಖಕಿ

*

(ಭಾಗ 2)

ನಮ್ಮ ಕುಟುಂಬದ ಪರಿಚಿತರಾದ ಅಲ್ಲಿಯ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ತಮ್ಮ ಪದವಿ ಪ್ರಮಾಣಪತ್ರಗಳನ್ನಷ್ಟೇ ತೆಗೆದುಕೊಂಡು ತಮ್ಮ ಇಬ್ಬರು ಚಿಕ್ಕ ಹೆಣ್ಣುಮಕ್ಕಳು, ಮಡದಿಯೊಂದಿಗೆ ರಾತ್ರೋರಾತ್ರಿ ದೆಹಲಿಗೆ ಪ್ರಯಾಣ ಮಾಡಿದ್ದರು. ಉಗ್ರರ ಹಿಡಿತದಲ್ಲಿ ಕಾಶ್ಮೀರ ನಲುಗಿದಾಗ ಅಲ್ಲಿನ ಸಹಸ್ರಾರು ಮಕ್ಕಳ ಭವಿಷ್ಯ ಅಂಧಕಾರದಲ್ಲಿ ಮುಳುಗಿತು. ಕೇವಲ ಆರು ತಿಂಗಳು ದುಡಿದು ವರ್ಷಕ್ಕೆ ಸಾಕಾಗುವಷ್ಟು ಸಂಪಾದನೆಯನ್ನು ಮಾಡಬೇಕಾದ ಪ್ರತಿಕೂಲ ಹವಾಗುಣವನ್ನು ಹೊಂದಿರುವ ಕಾಶ್ಮೀರದಲ್ಲಿ ವಿದ್ಯಾವಂಚಿತ ಮಕ್ಕಳು ಪ್ರವಾಸಿಗರಿಗೆ ಕುದುರೆ ಸವಾರಿ ಮಾಡಿಸುವ, ಟ್ಯಾಕ್ಸಿ ಆಟೋ ಚಾಲನೆ ಮೊದಲಾದ ಚಿಕ್ಕಚಿಕ್ಕ ಕೆಲಸಗಳನ್ನು ಮಾಡುವುದಷ್ಟೇ ಸಾಧ್ಯವಾಗಿತ್ತು. ಅದೂ ಪ್ರವಾಸಿಗಳು ಬಂದರೆ, ಇಲ್ಲವಾದರೆ ಅದೂ ಇಲ್ಲ. ಹೀಗೆ ಶೈಕ್ಷಣಿಕ ಹಿನ್ನಡೆಯ ಕಾರಣ ಆ ಪ್ರದೇಶದ ಅಭಿವೃದ್ಧಿ ಇನ್ನೂ ಸಾಧ್ಯವಾಗಿಲ್ಲ. ಇದೇ ರೀತಿ ನಕ್ಸಲ್ ಚಟುವಟಿಕೆ ಹೆಚ್ಚಾಗಿರುವ ಜಾರ್ಖಂಡ್, ಆಂಧ್ರಪ್ರದೇಶದ ಕೆಲ ಭಾಗಗಳು, ರಾಜಕೀಯ ಭಯೋತ್ಪಾದನೆಯಿಂದ ಗೂಂಡಾರಾಜ್ ಎಂಬ ಕುಖ್ಯಾತಿಗೆ ಒಳಗಾಗಿದ್ದ ಬಿಹಾರದ ಕೆಲ ಭಾಗಗಳಲ್ಲಿ ಯುವಜನರು ಹಿಂಸೆಯ ಹಾದಿಗೆ ಸೆಳೆಯಲ್ಪಟ್ಟು ಇಂದಿಗೂ ಆ ಪ್ರದೇಶಗಳು ಶೈಕ್ಷಣಿಕ ಹಿನ್ನಡೆಯ ಜೊತೆಗೆ ಸಾಮಾಜಿಕ ಹಾಗೂ ಆರ್ಥಿಕ ಹಿನ್ನಡೆಗೂ ಗುರಿಯಾಗಿವೆ. 2020 ಮಾರ್ಚ್ ನಂತರ ಕೊರೊನಾಘಾತದಿಂದ ಜಗತ್ತೇ ತತ್ತರಿಸಿ ಹೋಗಿದೆ.

ಸಣ್ಣ , ಅತಿಸಣ್ಣ ಉದ್ದಿಮೆಗಳು, ವ್ಯಾಪಾರ ವಹಿವಾಟು ಪೂರ್ತಿಯಾಗಿ ನೆಲ ಕಚ್ಚಿದರೆ, ಮಧ್ಯಮ ಗಾತ್ರದವು ಶೇ. 75 ಸೊರಗಿವೆ. ಇದರಿಂದ ಶಿಕ್ಷಣ ಮುಗಿಸಿ ಹೊರಬರುತ್ತಿರುವ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳೇ ಇಲ್ಲವಾಗಿವೆ. ಕಂಪನಿಗಳಲ್ಲಿ ಉದ್ಯೋಗದ ಕಡಿತ, ಸಂಬಳದ ಕಡಿತಗಳಿಂದ ಆರ್ಥಿಕ ನಿರ್ವಹಣೆ ಏರುಪೇರಾಗಿದೆ. ಇಂಥ ಸಂದಿಗ್ಧಗಳನ್ನು ಮೀರಲು ಸರ್ಕಾರಗಳು ಹೆಣಗುತ್ತಿರುವಾಗ ಮಹಾವಿದ್ಯಾಲಯಗಳು ರಣರಂಗವಾದರೆ ಹರ ಕೊಲ್ಲಲ್ ಪರ ಕಾಯ್ವನೇ?

ಡಾ. ಜ್ಯೋತಿ ಸಾಮಂತ್ರಿ ಬರೆದ ಈ ಬರಹವನ್ನೂ ಓದಿ : No Delete Option: ಆ ಅಸ್ತಿಪಂಜರದ ಸಾರು, ಈ ಪವಿತ್ರ ನುಸಿಚಿತ್ರಾನ್ನ, ಉಪವಾಸ ಸತ್ಯಾಗ್ರಹ ಮತ್ತು ರೊಟ್ಟಿ ಪಾರ್ಟಿ

ಸ್ವಾತಂತ್ರ್ಯಾ ನಂತರದ ಈ 8 ದಶಕಗಳಲ್ಲಿ ನಿಧಾನಗತಿಯಲ್ಲಿ ಶೈಕ್ಷಣಿಕ ಪ್ರಗತಿ ಕಾಣುತ್ತಿದೆ. ಸರ್ವರಿಗೂ ಶಿಕ್ಷಣದ ಇಂದಿನ ಹಂತ ತಲುಪಲು ಅನೇಕ ತೊಡರುಗಳನ್ನು ಹಾಯ್ದು ಬಂದಿದೆ. ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಯುವಶಕ್ತಿಯನ್ನು ಹೊಂದಿರುವ ಎರಡನೇ ರಾಷ್ಟ್ರವಾಗಿರುವ ಭಾರತದ ಈ ಶಕ್ತಿ ಹಾದಿ ಬೀದಿಗಳಲ್ಲಿ ಅನಗತ್ಯ ಘೋಷಣೆಗಳನ್ನು ಕೂಗಲು, ದೊಂಬಿ ನಡೆಸಲು ವ್ಯರ್ಥವಾಗಬಾರದು. ರಾಷ್ಟ್ರ ಕಟ್ಟುವಿಕೆಯಲ್ಲಿ ಯುವಜನರ ಪಾತ್ರದ ಜೊತೆಗೆ ಶಿಕ್ಷಣ ಹಾಗೂ ಆರ್ಥಿಕ ಚಟುವಟಿಕೆಗಳ ಪಾತ್ರ ಬಹಳ ದೊಡ್ಡದು. ಇದನ್ನು ಅಸ್ಥಿರಗೊಳಿಸಿದರೆ ಯಾವ ದೇಶವೂ ಮುನ್ನಡೆಯಲು ಸಾಧ್ಯವಿಲ್ಲ. ಇಂಥ ಅಸ್ಥಿರತೆಗಳ ವಿರುದ್ಧ ಜಾಗೃತೆ ಮೂಡಿಸಬೇಕಾದ ಶಿಕ್ಷಣ ವ್ಯವಸ್ಥೆಯೇ ಮಗ್ಗುಲು ಮುರಿದು ಕುಳಿತುಕೊಂಡರೆ ಈ ದೇಶದ ಭಾವಿ ಪ್ರಜೆಗಳ ಸೃಷ್ಟಿ ಹೇಗಾದೀತು? ನಮ್ಮ ಭವಿಷ್ಯ ನಮ್ಮ ಕೈಯಲ್ಲಿರುವುದಷ್ಟೇ ಅಲ್ಲ. ನಮ್ಮ ದೇಶದ ಭವಿಷ್ಯವೂ ನಮ್ಮ ಕೈಯಲ್ಲೇ ಇದೆ ಎಂಬುದನ್ನು ಯುವಜನತೆ ಅರಿಯಬೇಕಾಗಿದೆ.

ಜಾತಿ, ಧರ್ಮಗಳಿಗಿಂತ ದೇಶ ದೊಡ್ಡದು. ಭಾರತದಂತಹ ಬಹುಸಂಸ್ಕೃತಿಯ ರಾಷ್ಟ್ರ ಆಂತರಿಕ ಅಸ್ಥಿರತೆಗೆ ಒಳಗಾದರೆ ಅದರ ಪರಿಣಾಮವಾಗಿ ಬಾಹ್ಯ ಶಕ್ತಿಗಳು ಆಕ್ರಮಣ ಮಾಡಬಹುದು. ಇದರ ಬಿಂಬಗಳು ನಮಗೀಗಾಗಲೇ ಭಾರತದ ಈಶಾನ್ಯ ರಾಜ್ಯಗಳ ಗಡಿಗಳಲ್ಲಿ, ಅರುಣಾಚಲ ಪ್ರದೇಶ, ರಾಜಸ್ಥಾನ, ಪಂಜಾಬ್​ಗಳ ಗಡಿಗಳಲ್ಲಿ ಗೋಚರಿಸುತ್ತಿವೆ. ಜಮ್ಮು ಹಾಗೂ ಕಾಶ್ಮೀರವಂತೂ ಸದಾ ಕುದಿ ಎಸರಾಗಿಯೇ ಇರುತ್ತದೆ. ಇಂಥ ಸನ್ನಿವೇಶದಲ್ಲಿ ನಾವು ಗಮನಿಸಬೇಕಾದ ಸೂಕ್ಷ್ಮವೆಂದರೆ ಇತಿಹಾಸದಲ್ಲಿ ಭಾರತದ ಮೇಲೆ ದಾಳಿಗಳು ಇಲ್ಲಿನ ಸಂಪನ್ಮೂಲಗಳ ಕಾರಣ ಆದವು. ಈಗ ಭಾರತದ ಸಂಪನ್ಮೂಲ ಇಲ್ಲಿನ ಯುವಜನತೆ. ಪ್ರಪಂಚದ ಶೇ 50ರಷ್ಟು ಮಾನವ ಸಂಪನ್ಮೂಲದ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿರುವ ಭಾರತದ ಈ ಸಂಪನ್ಮೂಲವನ್ನು ನಾಶಪಡಿಸುವ ಹುನ್ನಾರಗಳು ನಡೆಯುತ್ತಲೇ ಇವೆ. ಅಂಥವಕ್ಕೆ ಬಲಿಪಶುಗಳಾಗದಂತೆ ತಮ್ಮ ಮಕ್ಕಳನ್ನು ಕಾಪಾಡುವ ಹೊಣೆಯನ್ನು ಇಂದು ಪ್ರಜ್ಞಾವಂತ ಪಾಲಕರು ಹೊರಬೇಕಾಗಿದೆ. ವಿದ್ಯೆ ಇಲ್ಲದವನು ಹದ್ದಿಗಿಂತ ಕಡೆ ಎಂಬುದು ಹಳೆಯ ಗಾದೆ ಮಾತು. ಆದರೆ ಈಗ ವಿದ್ಯೆ ಸಿಗದಂತೆ ಮಾಡಲು ಮಾರುವೇಷದಲ್ಲಿ ಎರಗುತ್ತಿರುವ ಹದ್ದುಗಳ ಬಗ್ಗೆ ಮೈಯೆಲ್ಲಾ ಕಣ್ಣಾಗಿರಬೇಕು ಪಾಲಕರೆ ಹಾಗೂ ಮಕ್ಕಳೆ.

(ಮುಗಿಯಿತು)

ಭಾಗ 1 : No Delete Option: ಮಾರುವೇಷದ ಹದ್ದುಗಳು; ವ್ಯವಸ್ಥಿತ ಮತಬ್ಯಾಂಕ್ ರಾಜಕೀಯದಾಟವಿದು, ಅರಿಯದ್ದೇನಲ್ಲ

*

ಗಮನಿಸಿ : ನಿಮ್ಮ ಮನಸ್ಸಿನಲ್ಲಿ ಹೂತ ಯಾವ ಘಟನೆ, ಪ್ರಸಂಗ, ನೆನಪುಗಳನ್ನೂ ‘No Delete Option’ ಅಂಕಣದಲ್ಲಿ ಬರೆಯಬಹುದು. ನುಡಿ ಅಥವಾ ಯೂನಿಕೋಡ್​ನಲ್ಲಿ ಕನಿಷ್ಟ 300, ಗರಿಷ್ಠ 800 ಪದಗಳಿರಲಿ. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ಮೇಲ್ :  tv9kannadadigital@gmail.com

ಡಾ. ಶಿವು ಅರಕೇರಿ ಬರೆದ ಈ ಬರಹವನ್ನೂ ಓದಿ : No Delete Option: ಸುಂಕಪ್ಪನ ಹೋಟೆಲ್​ಗೆ ಹೋಗೋಣವಾ; ಎಲ್ಲೆಲ್ಲಿದ್ದೀರಿ ಕೃಷ್ಣಾ, ಅಜ್ಮತ್, ಸಲಾಹುದ್ದೀನ್, ರೆಡ್ಡಿ, ಪಾಷಾ, ರಾಘು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada