ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU)ನಲ್ಲಿ ಎರಡು ವರ್ಷಗಳ ಹಿಂದೆ ಆರಂಭವಾಗಿದ್ದ ಕನ್ನಡ ಮಾಧ್ಯಮದ ಇಂಜಿನಿಯರಿಂಗ್ ಕೋರ್ಸ್ ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ಕನ್ನಡ ಮಾಧ್ಯಮದಲ್ಲಿ ಇಂಜನಿಯರಿಂಗ್ ಕೋರ್ಸ್ ಅನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳತ್ತಿಲ್ಲ. ಮತ್ತೊಂದಡೆ ಸರ್ಕಾರದಿಂದ ಇದಕ್ಕೆ ಸೂಕ್ತ ಉತ್ತೇಜನ ಸಿಗುತ್ತಿಲ್ಲ. ಹೀಗಾಗಿ ವಿಟಿಯು ಕೋರ್ಸ್ ಅನ್ನು ಸ್ಥಗಿತಗೊಳಿಸುವ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಯಲ್ಲಿ ಇಂಜಿನಿಯರಿಂಗ್ ಕೋರ್ಸ್ ಅನ್ನು ಆರಂಭಿಸಿದೆ. ಇನ್ನು ದೇಶದಲ್ಲೇ ಎನ್ಇಪಿಯನ್ನು ಅವಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕ.
ರಾಷ್ಟ್ರೀಯ ಶಿಕ್ಷಣ ನೀತಿ (NEP) ಶಿಫಾರಸುಗಳ ಪ್ರಕಾರ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣವನ್ನು ನೀಡಲು ನಿರ್ಧರಿಸಿದೆ. ಈ ಹಿನ್ನೆಲೆ ವಿಟಿಯು ಪಠ್ಯವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿದೆ ಮತ್ತು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಿದೆ. ಆದರೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳದಿರುವುದು ದುರದೃಷ್ಟಕರ ಸಂಗತಿ.
2021-22 ಶೈಕ್ಷಣಿಕ ವರ್ಷದಲ್ಲಿ, ಎಸ್ಜೆಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಚಿಕ್ಕಬಳ್ಳಾಪುರ, ಭೀಮಣ್ಣ ಖಂಡ್ರೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BKIT), ಭಾಲ್ಕಿ ಮತ್ತು ಇತರ ಮೂರು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಆರಂಭಿಸಿದವು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಸಿಇಟಿ ಕೌನ್ಸೆಲಿಂಗ್‌ನಲ್ಲಿ 17 ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಇಂಜಿನಿಯರಿಂಗ್ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡರು.
ಆದರೆ, ಈ ವಿದ್ಯಾರ್ಥಿಗಳು ಪ್ರವೇಶದ ವೇಳೆಗೆ ಕನ್ನಡ ಮಾಧ್ಯಮ ಇಂಜಿನಿಯರಿಂಗ್ ಕೋರ್ಸ್ ಹಿಂತೆಗೆದುಕೊಂಡಿದ್ದು, ಇಂಗ್ಲಿಷ್ ಮಾಧ್ಯಮ ಇಂಜಿನಿಯರಿಂಗ್ ಕೋರ್ಸ್‌ಗೆ ಸೇರಿದರು. 2022-23 ಶೈಕ್ಷಣಿಕ ವರ್ಷದಲ್ಲಿ, SJCIT ಮತ್ತು BKIT ಮಾತ್ರ ಕನ್ನಡ ಮಾಧ್ಯಮ ಕೋರ್ಸ್ ನೀಡಲು ಆಸಕ್ತಿ ತೋರಿದವು. ಆದರೆ ದಾಖಲಾತಿ ಇಲ್ಲದೆ ಪರದಾಡಿದವು. ಇನ್ನು ಕನ್ನಡ ಮಾಧ್ಯಮದ ಸಿವಿಲ್ ಇಂಜಿನಿಯರಿಂಗ್ ಕೋರ್ಸನ 42 ಸೀಟುಗಳಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಕನ್ನಡ ಮಾಧ್ಯಮ ಆಯ್ಕೆ ಮಾಡಿಕೊಂಡಿದ್ದರು. ಅಂತಿಮವಾಗಿ, ಅವರು ಕೂಡ ತಮ್ಮ ಪ್ರವೇಶವನ್ನು ಹಿಂತೆಗೆದುಕೊಂಡರು ಮತ್ತು ಇಂಗ್ಲೀಷ್ ಮಾಧ್ಯಮದ ಇಂಜಿನಿಯರಿಂಗ್ ಕೋರ್ಸ್‌ಗೆ ಸೇರಿದರು.
ಕನ್ನಡ ಮಾಧ್ಯಮದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್‌ನ 24 ಸೀಟುಗಳಿಗೆ ಯಾವುದೇ ವಿದ್ಯಾರ್ಥಿ ಆಸಕ್ತಿ ತೋರಿಸಲಿಲ್ಲ. ಎರಡು ವರ್ಷಗಳಲ್ಲಿ, ನಾವು ಕನ್ನಡ ಮಾಧ್ಯಮ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಶೂನ್ಯ ಪ್ರವೇಶವನ್ನು ಹೊಂದಿದ್ದೇವೆ. ಆದ್ದರಿಂದ, ನಾವು ಅವುಗಳನ್ನು ತಡೆ ಹಿಡಿಯುತ್ತೇವೆ, ಆದರೆ ಕೋರ್ಸ್‌ಗಳನ್ನು ರದ್ದುಗೊಳಿಸುವುದಿಲ್ಲ ಎಂದು ವಿಟಿಯುನ ಉಪಕುಲಪತಿ (ವಿಸಿ) ವಿದ್ಯಾಶಂಕರ್ ಅವರು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಕನ್ನಡ ಮಾಧ್ಯಮದಲ್ಲಿ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಬಗ್ಗೆ ಸರ್ಕಾರ ಆಸಕ್ತಿ ತೋರಿಸಿಲ್ಲ. ಅಲ್ಲದೇ ಸಂಶೋಧನಾ ಸೌಲಭ್ಯಗಳ ಕೊರತೆ ಇದೆ. ಈ ಹಿನ್ನೆಲೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಇಂಜಿನಿಯರಿಂಗ್ ಆಯ್ಕೆ ಮಾಡಲು ಉತ್ಸುಕರಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ವಿಟಿಯು ಮಾಜಿ ವಿಸಿ ಕರಿಸಿದ್ದಪ್ಪ ಕೋರ್ಸ್‌ಗಳಿಗೆ ವ್ಯಾಪಕ ಪ್ರಚಾರ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕನ್ನಡ ಮಾಧ್ಯಮದ ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶಗಳ ಅಗತ್ಯತೆ ಬಗ್ಗೆ ಹೇಳಿದ್ದರು. ಪಿಡಬ್ಲ್ಯೂಡಿ, ನೀರಾವರಿ, ಕೆಪಿಟಿಸಿಎಲ್, ಬೆಸ್ಕಾಂ, ಬಿಡಿಎ, ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿಯ ಅಗತ್ಯವನ್ನು ಅವರು ಒತ್ತಿ ಹೇಳಿದ್ದರು. ಆದರೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಉದ್ಯೋಗ ಅವಕಾಶಗಳನ್ನು ಸೃಷ್ಟಿಸದ ಹೊರತು, ಕನ್ನಡ ಮಾಧ್ಯಮ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಯಾವುದೇ ಅವಕಾಶವಿಲ್ಲ. ಕನ್ನಡ-ಮಾಧ್ಯಮ ಇಂಜಿನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಅಥವಾ ಸಂಶೋಧನೆಗೆ ಯಾವುದೇ ಪಠ್ಯ ಸಾಮಗ್ರಿಗಳಿಲ್ಲ ಮತ್ತು ವಿದ್ಯಾರ್ಥಿಗಳು ಪೂರ್ವನಿಯೋಜಿತವಾಗಿ ಇಂಗ್ಲಿಷ್ ಕೋರ್ಸ್ ಪಠ್ಯವನ್ನು ಅವಲಂಬಿಸಿರುತ್ತಾರೆ. ಆದ್ದರಿಂದ, ಸರ್ಕಾರವು ಕೆಲವು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಪಠ್ಯ ಸಾಮಗ್ರಿಗಳನ್ನು ಲಭ್ಯವಾಗುವಂತೆ ಮಾಡಬೇಕು. ಇಲ್ಲದಿದ್ದರೆ, ಕೋರ್ಸ್‌ಗಳನ್ನು ಮುಚ್ಚುವುದನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ ವಿಟಿಯುನ ಅಧ್ಯಾಪಕರೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ