ಕಾನೂನುಬಾಹಿರ ಟ್ಯೂಷನ್, ಕೋಚಿಂಗ್ ಕ್ಲಾಸ್ ಹಾವಳಿ ತಡೆಗಟ್ಟುವಂತೆ ಆಗ್ರಹ: ಸಿಎಂ ಬೊಮ್ಮಾಯಿಗೆ ರುಪ್ಸ ಮನವಿ
ರಾಜ್ಯಾದ್ಯಂತ ಸಾವಿರಾರು ಟ್ಯೂಷನ್ ತರಗತಿಗಳು/ಕೋಚಿಂಗ್ ಸೆಂಟರ್ಗಳು ಸರ್ಕಾರದಿಂದ ಮಾನ್ಯತೆ ಪಡೆಯದೆ, ಶಿಕ್ಷಣ ಇಲಾಖೆಯ ನಿಯಮಗಳನ್ನೂ ಪಾಲಿಸದೆ ರಾಜಾ ರೋಷವಾಗಿ ನಾಯಿ ಕೊಡೆಯಂತೆ ತಲೆ ಎತ್ತಿವೆ.
ಬೆಂಗಳೂರು: ರಾಜ್ಯಾದ್ಯಂತ ಕಾನೂನುಬಾಹಿರವಾಗಿ ಕೋಚಿಂಗ್ ಕ್ಲಾಸ್, ಟ್ಯೂಷನ್ (Tuition) ನಡೆಯುತ್ತಿದ್ದು, ಈ ಹಾವಳಿಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಸಿಎಂ ಬಸವರಾಜ ಬೊಮ್ಮಾಯಿಗೆ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ ರುಪ್ಸ ಮನವಿ ಸಲ್ಲಿಸಿದೆ. ನಗರದಲ್ಲಿ ಕಾನೂನುಬಾಹಿರವಾಗಿ ಕೋಚಿಂಗ್ ಕ್ಲಾಸ್ ನಡಿಯುತ್ತಿವೆಯೇ ಎನ್ನುವ ಅನುಮಾನ ಮೂಡುತ್ತಿದ್ದು, ಕೋಚಿಂಗ್ ಹೆಸರಲ್ಲಿ ಖಾಸಗಿ ಶಾಲಾ-ಕಾಲೇಜುಗಳು ಬಡ ವಿದ್ಯಾರ್ಥಿಗಳ ರಕ್ತ ಹೀರುತ್ತಿವೆ. ಕೋರ್ಟ್ ಆದೇಶ ಮೀರಿ ಅಡ್ಮಿಷನ್ ಜೊತೆಗೆ ಕೋಚಿಂಗ್ ಕ್ಲಾಸ್ ಶುಲ್ಕವೂ ವಸೂಲಿ ಮಾಡಲಾಗುತ್ತಿದೆ. ಆರ್ಟಿಇ (RTE) ನಿಯಮ 28ರಲ್ಲಿ ತಿಳಿಸಿರುವಂತೆ ಮಾನ್ಯತೆ ಪಡೆದ ರಾಜ್ಯದ ಯಾವುದೇ ಶಾಲಾ ಕಾಲೇಜು ಕೊಠಡಿಗಳಲ್ಲಿ ಅಥವಾ ಆ ಶಾಲೆಗಳಲ್ಲಿಯ ಸಿಬ್ಬಂದಿಯು ಟ್ಯೂಷನ್ ತರಗತಿಗಳನ್ನು ನಡೆಸುವ ಹಾಗಿಲ್ಲ. ಹಾಗೊಂದು ವೇಳೆ ಟ್ಯೂಷನ್ ತರಗತಿ ನಡೆಸಬೇಕೆಂದರೆ ಶಿಕ್ಷಣ ಇಲಾಖೆಯಿಂದ ಮಾನ್ಯತ ಪಡೆಯಬೇಕು. ಹಾಗು ಮಾನ್ಯತೆಯ ಎಲ್ಲಾ ನಿಯಮಗಳು ಅಂದರೆ ನಿವೇಶನ, ಕಟ್ಟಡ, ಮಕ್ಕಳ ಸುರಕ್ಷತೆಗಳಂತಹ ವಿಚಾರಗಳಲ್ಲಿ ಹೊಸ ಶಾಲೆಗಳಿಗಿರುವ ಮಾನದಂಡಗಳನ್ನು ಅನುಸರಿಸಬೇಕು.
ಇದನ್ನೂ ಓದಿ: CBSE Result 2022: ಸಕಾಲದಲ್ಲಿಯೇ ಸಿಬಿಎಸ್ಇ ಫಲಿತಾಂಶ; ಧರ್ಮೇಂದ್ರ ಪ್ರಧಾನ್
ಆದರೆ ರಾಜ್ಯಾದ್ಯಂತ ಸಾವಿರಾರು ಟ್ಯೂಷನ್ ತರಗತಿಗಳು/ಕೋಚಿಂಗ್ ಸೆಂಟರ್ಗಳು ಸರ್ಕಾರದಿಂದ ಮಾನ್ಯತೆ ಪಡೆಯದೆ, ಶಿಕ್ಷಣ ಇಲಾಖೆಯ ನಿಯಮಗಳನ್ನೂ ಪಾಲಿಸದೆ ರಾಜಾ ರೋಷವಾಗಿ ನಾಯಿ ಕೊಡೆಯಂತೆ ತಲೆ ಎತ್ತಿವೆ. ಶಾಲಾ ಕಾಲೇಜುಗಳ ಶುಲ್ಕಕ್ಕಿಂತ ಟೂಶನ್ ಶುಲ್ಕವೇ ಜಾಸ್ತಿಯಿದೆ. ಸಾಮಾನ್ಯ ಸೌಲಭ್ಯಗಳಾದ ಪೀಠೋಪಕರಣ, ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಟ, ಸಾಂಸ್ಕೃತಿಕ ಚಟುವಟಿಕೆಗಳನ್ನು ಒದಗಿಸಿದೆ, ಬೆಳಗಿನ 7ರಿಂದ ಸಾಯಂಕಾಲದವರೆಗೂ ಮಕ್ಕಳನ್ನು ಹಿಡಿದಿಟ್ಟು ಶಿಕ್ಷಣದ ಹೆಸರಲ್ಲಿ ಮೋಸ ಮಾಡಲಾಗುತ್ತಿದೆ ಎಂದು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರದ ಮೂಲಕ ಆರೋಪಿಸಿದ್ದಾರೆ.
ಇವುಗಳನ್ನು ನಿಯಂತ್ರಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಕೆಲ ಪ್ರತಿಷ್ಠಿತ ಟ್ಯೂಷನ್ ಕೇಂದ್ರಗಳ ಆಮಿಷಕ್ಕೆ ಮಣಿದು ಕಣ್ಣು ಕಿವಿ ಮತ್ತು ಬಾಯಿ ಮುಚ್ಚಿಕೊಂಡು ತಮಗರಿವೇ ಇಲ್ಲದಂತೆ ಮೌನವಾಗಿದ್ದಾರೆ. ಅನೈತಿಕ ಟ್ಯೂಷನ್ /ಕೋಚಿಂಗ್ ಸೆಂಟರ್ಗಳ ನಿಯಂತ್ರಣ ನಿಯಮಗಳಿರುವುದೇ ಅಧಿಕಾರಿಗಳ ಜೇಬು ತುಂಬಿಸಿಕೊಳ್ಳಲೆಂಬಂತೆ ವರ್ತಿಸುತ್ತಿದ್ದಾರೆ. ಈ ರೀತಿ ಅಧಿಕಾರಿಗಳ ನಡುವೆ ಪಾರದರ್ಶಕ ಅಧಿಕಾರ ನೀಡುವ ತಮ್ಮ ಆಲೋಚನೆಗಳು ಇಂತಹ ಅಧಿಕಾರಿಗಳಿಂದ ಹಾಳಾಗುತ್ತಿವೆ. ಟುಶನ್ ಶುಲ್ಕ ನೀಡಲಾಗದ ಬಡ ವಿದ್ಯಾರ್ಥಿಗಳು ತಾವು ಸೇರಿದ ಶಾಲಾ-ಕಾಲೇಜುಗಳಲ್ಲಿ ಸರಿಯಾಗಿ ಪಾಠ ಪ್ರವಚನಗಳು ನಡೆಯದೆ, ಮೂಕ ವೇದನೆ ಅನುಭವಿಸುತ್ತಿವೆ ಎಂದು ದೂರಲಾಗಿದೆ.
ಇದನ್ನೂ ಓದಿ: ICSE Results 2022: ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; ಬೆಂಗಳೂರಿನ 5 ವಿದ್ಯಾರ್ಥಿಗಳಿಗೆ 2ನೇ ರ‍್ಯಾಂಕ್
ಕೆಲ ಪ್ರಮುಖ ಸಂಸ್ಥೆಗಳು ಟ್ಯೂಷನ್, ತರಗತಿಗಳನ್ನು ಪಿಯುಸಿ ಕಾಲೇಜುಗಳ ಆವರಣದಲ್ಲಿ, ಬಹಿರಂಗವಾಗಿ ನಡೆಸುತ್ತಿದ್ದು, ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರನ್ನು ಬಳಸಿಕೊಂಡು ಸರ್ಕಾರಕ್ಕೂ ಟ್ಯಾಕ್ಸ್ ಕಟ್ಟದೆ, NEET, JEE, CET, ಹೆಸರಿನಲ್ಲಿ ಲಕ್ಷಾಂತರ ಶುಲ್ಕ ವಸೂಲಿ ಮಾಡುತ್ತಿವೆ. ಹಾಗೆಯೇ ಉತ್ತರ ಕರ್ನಾಟಕದಲ್ಲಿ ಸೈನಿಕ ಶಾಲೆ, ನವೋದಯ ಶಾಲೆ, ಮುರಾರ್ಜಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಅಂತ ಸಾವಿರಾರು ಹಣವಂತ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ನೋಂದಾಯಿಸಿಕೊಂಡು, ಅನೇಕ ಖಾಸಗಿ ಶಾಲೆಗಳಲ್ಲಿ ನಡೆಸುವ ವಸತಿ ಟ್ಯೂಷನ್ ತರಗತಿಗಳನ್ನು ಪಡೆಯುತ್ತವೆ. ಹೀಗೆಯೇ ಮುಂದುವರೆದರೆ IIT, ವೈದ್ಯಕೀಯ, ಇಂಜಿನಿಯರಿಂಗ್, ನವೋದಯ ಶಾಲೆಗಳಂತಹ ಕೋರ್ಸ್ಗಳಿಗೆ ಹಣವಿಲ್ಲದ ಬಡ ವಿದ್ಯಾರ್ಥಿಗಳು ಸೀಟ್ಗಳನ್ನ ಪಡೆಯಲು ಸಾಧ್ಯವೇ? ಹಾಗು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಮೋಸ ಆಗುವುದಿಲ್ಲವೇ? ಆದ್ದರಿಂದ ಕಾನೂನುಬಾಹಿರ ಟ್ಯೂಷನ್ ತರಗತಿಗಳ ವಿರುದ್ಧ ಕ್ರಮ ಜರುಗಿಸಲು ತಮ್ಮ ಶಿಕ್ಷಣ ಸಚಿವರ ಮೂಲಕ ಇಲಾಖೆ ಉನ್ನತಾಧಿಕಾರಿಗಳಿಗೆ ಆದೇಶಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.