Body Shaming; ಸುಮ್ಮನಿರುವುದು ಹೇಗೆ?: ಯಾವುದನ್ನು ಜವಾಬ್ದಾರಿಯುತ ಸ್ಥಾನ ಎನ್ನುತ್ತೀಯಾ, ಅದರ ಅಳತೆಗೋಲೇನು ಎಂದು ಕೇಳಿದರು ಮಕ್ಕಳು

ಹಿಂದೊಮ್ಮೆ ನನ್ನ ಸಹೋದ್ಯೋಗಿಯೊಬ್ಬರು ಮಾತನಾಡುವಾಗ ಆಗಾಗ ನನ್ನ ಎದೆಯನ್ನು ದೃಷ್ಟಿಸುತ್ತಿದ್ದರು. ಕಡೆಗೆ ಸಹನೆ ಮೀರಿ ನಾನು ಮೇಲಿನವರಿಗೆ ಹೇಳಿದೆ, ‘ನೋಡಿ, ಆತ ನನ್ನ ಎದೆಯನ್ನು ದೃಷ್ಟಿಸುತ್ತಾನೆ. ನಾನು ಅವನ ಸೊಂಟದ ಕೆಳಗಡೆ ಪ್ಯಾಂಟ್ ಝಿಪ್ಪಿನತ್ತ ಕಣ್ಣು ಹಾಯಿಸಲೇ ಎನ್ನುವ ಐಡಿಯಾ ಬರುತ್ತಿದೆ. ಆದರೆ ಹಾಗೆ ಮಾಡುವುದು ಅಸಹ್ಯ, ಬ್ಯಾಡ್ ಮ್ಯಾನರ್ಸ್ ಎನ್ನುವುದರ ಅರಿವು ನನಗಿದೆ. ನಾನು ಈ ಮಾತುಗಳನ್ನು ಹೇಳುವ ಸಂದರ್ಭವೇ ಬರಬಾರದು, ಅಲ್ಲವೇ’ ಮುಂದಿನ ದಿನಗಳಲ್ಲಿ ಸಹೋದ್ಯೋಗಿಯ ನಡೆವಳಿಕೆ ಬದಲಾಗಿತ್ತು. ಪಾಶ್ಚಾತ್ಯ ದೇಶಗಳಲ್ಲಿ ಹೆಂಗಸರ ದೇಹದ ಬಗ್ಗೆ ಮಾತಾನಾಡುವುದು ಕಡಿಮೆ.' ಡಾ. ವಿನತೆ ಶರ್ಮ

  • TV9 Web Team
  • Published On - 13:02 PM, 3 Apr 2021
Body Shaming; ಸುಮ್ಮನಿರುವುದು ಹೇಗೆ?: ಯಾವುದನ್ನು ಜವಾಬ್ದಾರಿಯುತ ಸ್ಥಾನ ಎನ್ನುತ್ತೀಯಾ, ಅದರ ಅಳತೆಗೋಲೇನು ಎಂದು ಕೇಳಿದರು ಮಕ್ಕಳು
ಡಾ. ವಿನತೆ ಶರ್ಮ

ಜನಪ್ರತಿನಿಧಿಗಳೇ,
ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ಮೂಲತಃ ಬೆಂಗಳೂರಿನವರಾದ ಡಾ. ವಿನತೆ ಶರ್ಮ ಆಸ್ಟ್ರೇಲಿಯಾದ ಬ್ರಿಸ್ಬೆನ್​ನಲ್ಲಿ ವಾಸವಾಗಿದ್ದಾರೆ. ಸಾಹಿತ್ಯ, ಹೊರಾಂಗಣ ಸಾಹಸ ಚಟುವಟಿಕೆ, ಮನಃಶಾಸ್ತ್ರ, ತಳಸಮುದಾಯಗಳ ಅಧ್ಯಯನ, ಪ್ರವಾಸ, ತೋಟಗಾರಿಕೆ ಇವರ ಆಸಕ್ತಿಯ ವಿಷಯಗಳು. ಸದ್ಯ ಮನಶಾಸ್ತ್ರ (ಅರೆಕಾಲಿಕ) ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನೆರಡು ಮಕ್ಕಳನ್ನು ಆಸ್ಥೆಯಿಂದ ಬೆಳೆಸುತ್ತಿರುವ ಇವರು ಸ್ವಅಸ್ತಿತ್ವದ ಬಗ್ಗೆ ಅಪಾರ ಪ್ರಜ್ಞೆಯುಳ್ಳವರಾಗಿದ್ದಾರೆ.

‘ಎಂಟಿರಬೇಕಾದ ಹೆಂಗಸರ ಸೊಂಟದ ಗಾತ್ರ ಹದಿನೆಂಟಾಗಿದೆ’ ಅಂತ ಯಾರಾದರೂ ಒಬ್ಬ ಗಂಡಸು ವ್ಯಂಗ್ಯವಾಡಿದರೆ ಆ ಕಮೆಂಟನ್ನು ನಾವು ಹೇಗೆಲ್ಲಾ ತೆಗೆದುಕೊಳ್ಳಬಹುದು? ‘ಥೂ ಅವಿವೇಕಿ, ನಿನಗೇನು ತಾಯಿ, ಸೋದರಿ, ಹೆಂಡತಿ, ಮಗಳು ಇಲ್ಲವೇನು,’ ಅಂತ ಟಿಪಿಕಲ್ ಇಂಡಿಯನ್ ಸ್ಟೈಲಿನಲ್ಲಿ ಬೈಯ್ಯಬಹುದು. ‘ಇಷ್ಟು ವಯಸ್ಸಾದರೂ ಬುದ್ಧಿ ಬಂದಿಲ್ಲ’ ಎನ್ನಬಹುದು. ‘ಈ ತನಕ ಅದೆಷ್ಟು ಹೆಣ್ಣುಮಕ್ಕಳ ಸೊಂಟವನ್ನು ಮೇಲೆ ಕೆಳಗೆ ನೋಡುತ್ತಾ ದಿಟ್ಟಿಸಿರಬಹುದು, ಎಂಥ ಕಾಮುಕ ಪಿಶಾಚಿ’ ಎಂದು ಅಸಹ್ಯ ತೋರಬಹುದು. ‘ಇವನಿಗೆ ಯಾಕೆ ಹೆಂಗಸರ ಸೊಂಟದ ಚಿಂತೆ, ನಾವೇನು ಗಂಡಸರ ಬೊಜ್ಜಿನ ಬಗ್ಗೆ ಹಾಗೆಲ್ಲಾ ಬಹಿರಂಗವಾಗಿ ಸಂಜ್ಞೆ ಮಾಡುತ್ತಾ ಮಾತನಾಡುತ್ತೀವಾ,’ ಎಂದು ಪ್ರತ್ಯುತ್ತರ ಕೊಡಬಹುದು. ಅಥವಾ, ಏನನ್ನೂ ಹೇಳದೆಯೇ ಸುಮ್ಮನಾಗಿಬಿಡಬಹುದು. ಇಷ್ಟೆಲ್ಲಾ ಆಗುವ ಬದಲು ಆ ಮಾತು ಬರದೇ ಇದ್ದಿದ್ದರೆ ಚೆನ್ನಾಗಿತ್ತು ಅಲ್ಲವೇ! ಸರಿ, ಹಾಗೆ-ಹೀಗೆ ಮಾತಾದ ಮೇಲೆ ಮುಂದಿನ ಹೆಜ್ಜೆ ಏನು, ಹೇಗೆಲ್ಲ ನಾವು ಅಂಥಾ ಒಬ್ಬ ಗಂಡಸನ್ನು ತಿದ್ದಬೇಕು ಎಂದು ಚಿಂತಿಸಬೇಕಾದ ಕಾಲದಲ್ಲಿ ನಾವಿದ್ದೀವಿ. ಒಬ್ಬರ ದೇಹದ ಬಗ್ಗೆ ಸಂದರ್ಭೋಚಿತವಾಗಿ ಏನು, ಎಷ್ಟು ಮಾತಾಡಬೇಕು ಎನ್ನುವ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಭಾರತದಲ್ಲಿದ್ದಷ್ಟೂ ಕಾಲ ನಾನು ನನ್ನ ದೇಹದ ಬಗ್ಗೆ ನೂರಾರು ಕೊಂಕು, ಅವಹೇಳನದ ಮಾತುಗಳನ್ನು ಕೇಳಿದ್ದೀನಿ. ಒಲ್ಲದ ಮೂರನೇ ಮಗಳಾಗಿ ಹುಟ್ಟಿದೆಯಲ್ಲಾ ನೀನು ಎಂದು ನನ್ನನ್ನು ತಿರಸ್ಕರಿಸಿದ ಹುಟ್ಟಿಸಿದಾತನಿಂದ ಹಿಡಿದು ಹೆಣ್ಣಿನ ರೂಪ ಮತ್ತು ನಡತೆಯ ಸ್ಟಿರಿಯೋಟೈಪ್ಗಳನ್ನ ಆಳವಾಗಿ ರೂಢಿಸಿಕೊಂಡಿದ್ದ ಹೆಂಗಸರು, ಗಂಡಸರು ನನ್ನ ಮೈ ಗಾತ್ರ, ರೂಪ, ಬಣ್ಣ, ನಡೆದಾಡುವ-ಮಾತನಾಡುವ-ಕೂತುಕೊಳ್ಳುವ-ನಿಂತುಕೊಳ್ಳುವ ಸ್ಟೈಲ್, ‘ಗಡಸು’ ಕಂಠ ಎಲ್ಲವನ್ನೂ ಬಹಳ ಆಸಕ್ತಿಯಿಟ್ಟು ಗಮನಿಸಿ ಕೂಲಂಕುಶವಾಗಿ ಬಿಡಿಸಿಬಿಡಿಸಿ ಆಡಿಕೊಂಡಿದ್ದಾರೆ. ಆ ಮಾತುಗಳು ನೂರಕ್ಕೆ ನೂರು ಸಮಾಜದಲ್ಲಿನ ಆಡುಮಾತುಗಳನ್ನೂ, ನಂಬಿಕೆಗಳನ್ನೂ ಪ್ರತಿಫಲಿಸುತ್ತಿದ್ದವು. ಅವನ್ನೆಲ್ಲ ಹೇಗೆ ಬದಲಾಯಿಸುವುದು? ಆ ಕೆಲಸವನ್ನು ಯಾರು ಮಾಡಬೇಕಿದೆ?

ಹಿಂದೊಮ್ಮೆ ನನ್ನ ಸಹೋದ್ಯೋಗಿಯೊಬ್ಬರು ಮಾತನಾಡುವಾಗ ಆಗಾಗ ನನ್ನ ಎದೆಯನ್ನು ದೃಷ್ಟಿಸುತ್ತಿದ್ದರು. ಕಡೆಗೆ ಸಹನೆ ಮೀರಿ ನಾನು ಮೇಲಿನವರಿಗೆ ಹೇಳಿದೆ, ‘ನೋಡಿ, ಆತ ನನ್ನ ಎದೆಯನ್ನು ದೃಷ್ಟಿಸುತ್ತಾನೆ. ನಾನು ಅವನ ಸೊಂಟದ ಕೆಳಗಡೆ ಪ್ಯಾಂಟ್ ಝಿಪ್ಪಿನತ್ತ ಕಣ್ಣು ಹಾಯಿಸಲೇ ಎನ್ನುವ ಐಡಿಯಾ ಬರುತ್ತಿದೆ. ಆದರೆ ಹಾಗೆ ಮಾಡುವುದು ಅಸಹ್ಯ, ಬ್ಯಾಡ್ ಮ್ಯಾನರ್ಸ್ ಎನ್ನುವುದರ ಅರಿವು ನನಗಿದೆ. ನಾನು ಈ ಮಾತುಗಳನ್ನು ಹೇಳುವ ಸಂದರ್ಭವೇ ಬರಬಾರದು, ಅಲ್ಲವೇ’ ಮುಂದಿನ ದಿನಗಳಲ್ಲಿ ಸಹೋದ್ಯೋಗಿಯ ನಡವಳಿಕೆ ಬದಲಾಗಿತ್ತು. ಪಾಶ್ಚಾತ್ಯ ದೇಶಗಳಲ್ಲಿ ಹೆಂಗಸರ ದೇಹದ ಬಗ್ಗೆ ಮಾತಾನಾಡುವುದು ಕಡಿಮೆ.

ತಿದ್ದಬೇಕಿರುವುದು ಒಬ್ಬನನ್ನಲ್ಲ. ಬದಲಾವಣೆ ಬರಬೇಕಿರುವುದು ಒಬ್ಬ ವ್ಯಕ್ತಿಯ ನಡತೆ, ವರ್ತನೆ, ನಂಬಿಕೆಗಳಲ್ಲಿ ಮಾತ್ರವಲ್ಲ. ಹೆಂಗಸರ ಸೊಂಟದ ಬಗ್ಗೆ ಹೇಳಿದ ಲೇವಡಿ ಮಾತು ಇಡೀ ಸಮಾಜಕ್ಕೆ ಕನ್ನಡಿ ಹಿಡಿದಿದೆ. ಹೆಣ್ಣೆಂದರೆ ಹೀಗೇ ಇರಬೇಕು ಎನ್ನುವ ಸಮಾಜದ ಒಟ್ಟಾರೆ ನಂಬಿಕೆಯು ಅದು ಪಾಲಿಸುತ್ತಿರುವ ಪಿತೃಪ್ರಧಾನ ವ್ಯವಸ್ಥೆಯತ್ತ ಬೆಟ್ಟು ಮಾಡುತ್ತದೆ. ಆ ವ್ಯವಸ್ಥೆಯು ಹೆಣ್ಣನ್ನು ಯಾವ ರೀತಿಯಲ್ಲಾದರೂ ನೋಡಬಹುದಾದ ಮತ್ತು ತನಗೆ ಬೇಕಾದಂತೆ ಅವಳನ್ನು ರೂಪಿಸಿಕೊಳ್ಳುವ ಅಪೇಕ್ಷೆಯ ಕೊನೆಮೊದಲಿಲ್ಲದ ಜಾಲದಲ್ಲಿ ಸಿಲುಕಿಸಿಬಿಡುತ್ತದೆ. ಬರೀ ಸೊಂಟವೇನು, ಅವಳ ದೇಹದ ಅಂಗಾಂಗಗಳು, ಎದೆ-ಸೊಂಟ-ಹಿಂಭಾಗಗಳ ಹೊಂದಾಣಿಕೆ, ಮೈಬಣ್ಣ, ಕಣ್ಣುಗಳ ಗಾತ್ರ, ಎಲ್ಲವನ್ನೂ ಅಳತೆ ಮಾಡಿ ವಿಮರ್ಶಿಸುತ್ತದೆ. ಅಂಥ ವಿಮರ್ಶೆ ಆರಂಭವಾಗುವುದು ನಮ್ಮ ಮನೆಗಳಲ್ಲಿಯೇ!

ಆನುವಂಶಿಕವಾಗಿ ಬಂದದ್ದು, ನಮಗೆ ಸಿಕ್ಕುವ ಪೌಷ್ಟಿಕ ಆಹಾರ, ದೈಹಿಕ ಚಟುವಟಿಕೆಗಳು, ಹಾರ್ಮೋನುಗಳು, ದಿನನಿತ್ಯದ ಆರೋಗ್ಯ, ರೋಗರುಜಿನಗಳು, ಮಾನಸಿಕ ಆರೋಗ್ಯ ಮತ್ತು ವಯಸ್ಸು ನಮ್ಮ ದೇಹದ ಮೇಲೆ ಪರಿಣಾಮ ಬೀರುವ ಮುಖ್ಯ ಕಾರಣಾಂಶಗಳು. ಆದರೆ ಹೆಚ್ಚಿನ ಜನರಿಗೆ ಇವುಗಳ ಬಗ್ಗೆ ತಿಳಿದಿಲ್ಲ. ಜಾಗತೀಕರಣದದಿಂದ ಬದಲಾಗಿರುವ ಜೀವನಶೈಲಿಯೂ ಕೂಡ ನಮ್ಮ ಆಹಾರ, ಚಟುವಟಿಕೆಗಳು, ಉದ್ಯೋಗ ಮತ್ತು ಆರೋಗ್ಯದ ಮೇಲೆ ಪ್ರಭಾವವನ್ನು ಬೀರಿದೆ. ಇದನ್ನು ಗಮನಿಸುವ ತಿಳುವಳಿಕೆ ಕೂಡ ಹೆಂಗಸರ ಮೈ ಬಗ್ಗೆ ಮಾತನಾಡುವವರಿಗಿರಬೇಕು.

ಹೆಂಗಸರ ದೇಹದ ಬಗ್ಗೆ ಬೇಕಾಬಿಟ್ಟಿ ಮಾತನಾಡಲು ಈ ತಿಳಿವಳಿಕೆ ಇಲ್ಲದಿರುವುದು ಒಂದು ಕಾರಣವಾಗಬಹುದು. ಮತ್ತೊಂದು ಕಾರಣ ಹಾಗೆ ಮಾತನಾಡಲು ಸಮಾಜದಲ್ಲಿ ಸೃಷ್ಟಿಸಿರುವ ಗಂಡು-ಹೆಣ್ಣುಗಳ ಮಧ್ಯದ ಅಸಮಾನತೆಗಳು. ಉದಾಹರಣೆಗೆ, ಪುಟ್ಟಮಕ್ಕಳನ್ನು ನಡುವಿನಲ್ಲಿ ಹೊತ್ತು ಕೆಲಸ ಮಾಡಲು ಅನುವಾಗುವಂತೆ ಹೆಂಗಸಿನ ಸೊಂಟ ಸಣ್ಣಗಿರಬೇಕು ಎನ್ನುವುದು ಅಂತಹ ಅಸಮಾನತೆಯನ್ನು ಸೂಚಿಸುತ್ತದೆ. ಹೆಂಗಸರೇ ಯಾಕೆ ಮಕ್ಕಳನ್ನು ಹೊತ್ತು ತಿರುಗಬೇಕು? ನಾನು ವಾಸಿಸಿರುವ ಪಶ್ಚಿಮ ದೇಶಗಳಲ್ಲಿ ಮತ್ತು ಸುತ್ತಾಡಿರುವ ಹಲವಾರು ದೇಶಗಳಲ್ಲಿ ಸೊಂಟದಲ್ಲಿ ಮಕ್ಕಳನ್ನು ಕೂರಿಸಿಕೊಂಡು ಓಡಾಡುವವರು ಕಡಿಮೆ. ಅಪ್ಪಅಮ್ಮಂದಿರು ಮಕ್ಕಳನ್ನು ತಮ್ಮ ದೇಹದ ಮೇಲೆ ಹೊರುವುದಕ್ಕೆ ನಾನಾ ವಿಧಗಳಿವೆ (ಬೇಬಿ ಬ್ಯಾಕ್ ಪ್ಯಾಕ್ ಮುಂತಾದವು).

ಆದರೆ ತಾವು ಮುಂದುವರೆದ ದೇಶ/ಸಮಾಜ ಎಂದು ಹೇಳಿಕೊಳ್ಳುವ ಪಾಶ್ಚಿಮಾತ್ಯ ದೇಶಗಳಲ್ಲಿಯೂ ಇದೆ ಈ ಗೋಳು. ಹೆಂಗಸರ ಬಗೆ ಲೇವಡಿ ಮಾತು, ವ್ಯಂಗ್ಯ, ಹಾಗಿರಬೇಕು ಹೀಗಿರಬೇಕು ಅನ್ನೋ ಚಪಲ ಎಲ್ಲವೂ ಇವೆ. ಜೊತೆಗೆ ಹೆಂಗಸು ಮತ್ತು ಗಂಡಸಿನ ದೇಹ ಸೌಂದರ್ಯವೆನ್ನುವುದು ಬಿಲಿಯನ್ ಡಾಲರ್ ಉದ್ಯಮವೂ ಹೌದು.

ಮೊನ್ನೆಮೊನ್ನೆ ಆಸ್ಟ್ರೇಲಿಯಾದಲ್ಲಿ ಮಹಿಳೆಯರು ‘Enough is Enough’ ಎನ್ನುತ್ತಾ ಮಹಿಳೆಯ ಘನತೆ ಮತ್ತು ಗೌರವಗಳನ್ನು ಕಾಪಾಡಲು ಬೀದಿಗಿಳಿದು ಚಳವಳಿ ನಡೆಸಿದರು. ದೇಶದ ಪಾರ್ಲಿಮೆಂಟಿನ ಭವನದಲ್ಲೇ ಸಹೋದ್ಯೋಗಿಯೊಬ್ಬ ತನ್ನನ್ನು ರೇಪ್ ಮಾಡಿದ ಎಂದು ಮಹಿಳೆಯೊಬ್ಬಳು ಆರೋಪಿಸಿದ ಕೇಸಿನ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದೆಯೆಂದು ಸಾವಿರಾರು ಮಹಿಳೆಯರು ದೇಶದಾದ್ಯಂತ ಚಳವಳಿ ನಡೆಸಿದರು. ಆನಂತರದಲ್ಲಿ ಸಂಸತ್ತಿಗನೊಬ್ಬನ ಅಸಹ್ಯ ನಡತೆಯ ಬಗ್ಗೆ ಗುಲ್ಲೆದ್ದಿದೆ. ಈ ಮಹಾಶಯ ಹೆಂಗಸರನ್ನು ಬೆದರಿಸುವುದು, ಅವರ ದೇಹದ ಬಗ್ಗೆ ಸಡಿಲವಾಗಿ ಮಾತನಾಡುವುದು, ಸ್ಕರ್ಟ್ ಹಾಕಿಕೊಂಡ ಯುವತಿಯರು ಬಗ್ಗಿದಾಗ ಅವರಿಗೆ ಗೊತ್ತಿಲ್ಲದೆ ಫೋನಿನಲ್ಲಿ ಅವರ ಹಿಂಬದಿಯ ಫೋಟೋ ಹಿಡಿಯುವ ದುರ್ಬುದ್ಧಿ ತೋರಿಸುತ್ತಿದ್ದ. ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.

body shaming

ಸೌಜನ್ಯ : ಅಂತರ್ಜಾಲ

ಸ್ವಲ್ಪ ಕಾಲದ ಹಿಂದೆ ನಾನು ಸೈಕಾಲಜಿ ಪಠ್ಯವಸ್ತುವಾದ ‘ಲೈಂಗಿಕತೆ ಮತ್ತು ನಿಕಟ ಸಂಬಂಧ’ ವಿಷಯವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಸಂದರ್ಭ ಬಂದಿತ್ತು. ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳಿವರು. ಕಲಿಸುವುದು ಅನ್ನುವುದಕ್ಕಿಂತಲೂ ಆ ವಿಷಯದ ಬಗ್ಗೆ ಅದಾಗಲೇ ಅವರಲ್ಲಿದ್ದ ತಿಳಿವಳಿಕೆ ಮತ್ತು ಜ್ಞಾನವನ್ನು ವಿಶದಿಸುವ ಸುಗಮ ಕಲಿಕೆ ಪ್ರಕ್ರಿಯೆಯದು. ಎಂದಿನಂತೆ ನಾನು ಪಠ್ಯವಸ್ತುವಿನ ಆಳ ಮತ್ತು ಅಗಲಗಳನ್ನು ತಿಳಿದುಕೊಂಡು ಪ್ರತಿವಾರದ ತರಗತಿಗೆ ಸಾಕಷ್ಟು ತಯಾರಿ ಮಾಡಿಕೊಳ್ಳುವುದಿತ್ತು. ಲೈಂಗಿಕತೆ ಎನ್ನುವ ವಿಷಯವೇ ಸಾಗರದಷ್ಟು ವಿಶಾಲವಾದದ್ದು. ಅದರಲ್ಲಿ ಬರುವ Heterosexual, Same-Sex, Bisexual, Intersex Variations, LGBTIQ+ ಮುಂತಾದ ವೈವಿಧ್ಯತೆಗಳನ್ನು ಕುರಿತು ಓದಬೇಕಿತ್ತು, ಲೈಂಗಿಕತೆಯನ್ನು ಆವರಿಸಿರುವ ದೈಹಿಕ ಅಂಶಗಳು, ಸಂಕೇತಗಳು, ಅಂಗಗಳಲ್ಲಿರುವ ಭೇದಗಳು, ಹಾರ್ಮೋನುಗಳಲ್ಲಾಗುವ ಬದಲಾವಣೆಗಳು, ಹಾರ್ಮೋನುಗಳ ಪಾತ್ರ, ಅವುಗಳಿಂದ ನಮ್ಮ ಮನಸ್ಸಿನ ಮೇಲೆ ಆಗುವ ಪರಿಣಾಮಗಳು, ಪರಿಣಾಮಗಳಿಂದ ಬದಲಾವಣೆಯಾಗುವ ಮತ್ತು ಏರುಪೇರಾಗುವ ನಿಕಟ ಸಂಬಂಧಗಳು, ಈ ಎಲ್ಲದರ ಬಗ್ಗೆ ನಾನು ಮತ್ತು ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಕೋನವನ್ನಿಟ್ಟುಕೊಂಡು ಅಧ್ಯಯನಗಳು ಮಂಡಿಸಿರುವ ಅಂಕಿಅಂಶಗಳನ್ನು ಆಧರಿಸಿ, ಆಗಾಗ ನಿಜಜೀವನದ ಘಟನೆಗಳನ್ನು (Case study) ಚರ್ಚಿಸುತ್ತಾ ನಮ್ಮ ಜ್ಞಾನಾರ್ಜನೆಯನ್ನು ರೂಢಿಸಿಕೊಳ್ಳುತ್ತಿದ್ದೆವು. ನಾನು ಮೊದಲ ಬಾರಿಗೆ ಈ ವಿಷಯವನ್ನು ಕಲಿಸುತ್ತಿದ್ದರಿಂದ ನನ್ನಲ್ಲಿದ್ದ ಜ್ಞಾನದ ಕೊರತೆಯ ಮತ್ತು ಮಡಿವಂತಿಕೆಯ ಬಗ್ಗೆ ಸ್ವಲ್ಪ ಅಳುಕಿತ್ತು. ಆದರೆ ವಿದ್ಯಾರ್ಥಿಗಳಲ್ಲಿದ್ದ ಆಲೋಚನೆಯ ಪಕ್ವತೆ, ಸಂಕೋಚಿಸದೆ ವಿಷಯಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸುವುದು ಮತ್ತು ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವುದನ್ನು ನೋಡಿ ನಾನು ಬೆರಗಾಗಿದ್ದೆ. ಮುಂದೆ ಸಮಾಜದಲ್ಲಿ ಜನರೊಂದಿಗೆ ಥೆರಪಿಸ್ಟ್​ಗಳಾಗಿಯೋ ಅಥವಾ ಸೈಕಾಲಜಿಸ್ಟ್​ಗಳಾಗಿಯೋ ಕೆಲಸ ಮಾಡುವ ಅವರುಗಳಲ್ಲಿದ್ದ ಮುಕ್ತ ನಿಲುವುಗಳನ್ನು ಮತ್ತು ಪ್ರೌಢತೆಯನ್ನು ಬಹಳ ಮೆಚ್ಚಿದ್ದೆ. ನಮ್ಮ ದೇಹದ ಮತ್ತು ಮನಸ್ಸಿನ ಬಗ್ಗೆ ತಿಳಿದುಕೊಂಡಷ್ಟೂ ಒಳ್ಳೆಯದು, ಆಗ ನಮ್ಮ ನಡುವಿನ ಭೇದಗಳು ಕಡಿಮೆಯಾಗುತ್ತವೆ ಎನ್ನುವುದು ಮನದಟ್ಟಾಗಿತ್ತು.

ಶಾಲೆಯ ಐದರಿಂದ ಆರನೇ ತರಗತಿಯಲ್ಲಿದ್ದಾಗ ನನ್ನ ಮಕ್ಕಳು ‘ಸೆಕ್ಸ್ ಎಜುಕೇಶನ್’ ಪಠ್ಯವಸ್ತುವನ್ನು ಕಲಿಯಲಾರಂಭಿಸಿದ್ದು. ಹತ್ತರಿಂದ ಹನ್ನೊಂದನೇ ವಯಸ್ಸಿನಲ್ಲಿ ಬಹುತೇಕ ಮಕ್ಕಳು ಬೆಳವಣಿಗೆಯ Pre-Puberty ಹಂತದಲ್ಲಿರುತ್ತಾರೆ. ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಅವರು ಅರ್ಥ ಮಾಡಿಕೊಳ್ಳಲು ಅದು ಸೂಕ್ತ ವಯಸ್ಸು ಎಂದು ಶಾಲಾ ಪಠ್ಯಕ್ರಮದಲ್ಲಿ ಸೆಕ್ಸ್ ಎಜುಕೇಶನ್ ಅಳವಡಿಸಲಾಗಿರುತ್ತದೆ. ಮತ್ತೊಬ್ಬರ ದೇಹದ ಬಗ್ಗೆ ಹಗುರವಾಗಿ ಮಾತನಾಡುವ ಧೋರಣೆ ಕಡಿಮೆಯಾಗುತ್ತದೆ. ಈ ಲೇಖನ ಬರೆಯುವಾಗ ನನ್ನ ಮಕ್ಕಳನ್ನು ಕೇಳಿದೆ – ‘ಜವಾಬ್ದಾರಿ ಸ್ಥಾನದಲ್ಲಿರುವ ಒಬ್ಬ ಗಂಡಸು ಹೆಂಗಸಿನ ಸೊಂಟದ ಸುತ್ತಳತೆ ಹಿಗ್ಗುತ್ತಿದೆ, ಹೆಂಗಸರು ಸೈಝ್ ಎಂಟಕ್ಕೇ ಅಂಟಿಕೊಂಡಿರಬೇಕು’ ಎಂದು ಹೇಳಿದರೆ ನಿಮ್ಮ ಪ್ರತಿಕ್ರಿಯೆಯೇನು? ಮಕ್ಕಳು ಹೇಳಿದ್ದು – ‘ಯಾವುದನ್ನು ನೀನು ಜವಾಬ್ದಾರಿ ಸ್ಥಾನ ಎಂದು ಪರಿಗಣಿಸುತ್ತೀಯಾ? ಅದರ ಅಳತೆಗೋಲು ಏನು? ಮತ್ತೊಬ್ಬರ ದೇಹದ ಬಗ್ಗೆ ಆಡಿಕೊಳ್ಳುವುದು ತಪ್ಪೇತಪ್ಪು. ಆ ಹಕ್ಕು ಯಾರಿಗೂ ಇಲ್ಲ. ನಮ್ಮ ದೇಹ ಹೀಗಿರಬೇಕೆಂದು ಮತ್ತೊಬ್ಬರು ಹೇಳಿ ನಿಯಂತ್ರಿಸಬಾರದು. ನಾವು ಹೇಗಿದ್ದೇವೋ ಹಾಗೆಯೇ ನಮ್ಮನ್ನು ಒಪ್ಪಿಕೊಳ್ಳುವುದು ಆರೋಗ್ಯಕರ ಮನಸ್ಸಿನ ಲಕ್ಷಣ.’ ಎಂದರು.

ವ್ಯಕ್ತಿಗತ ಘನತೆ, ಗೌರವ ಮತ್ತು ಪರಸ್ಪರರನ್ನು ಸೌಹಾರ್ದತೆಯಿಂದ ಒಪ್ಪಿಕೊಳ್ಳುವುದು-ಇವುಗಳ ಪಾಠ ಮನೆಯಿಂದ ಆರಂಭವಾದರೆ ಚೆನ್ನ. ನಾವು ಅವಕ್ಕೆ ಒತ್ತುಕೊಟ್ಟು ಗಂಡುಮಕ್ಕಳಿಗೆ ಕಲಿಸಿದಷ್ಟೂ ಒಳ್ಳೆಯದು. ಬದಲಾವಣೆ ಬರಬೇಕಿದೆ. ಒಬ್ಬ ಗಂಡಸಿನ ಪ್ರಜ್ಞಾವಂತ ನಡತೆ ಇಡೀ ಮನೆ-ಸಮುದಾಯಕ್ಕೆ ಮಾದರಿಯಾಗುತ್ತದೆ. ಹೀಗೆ ಕಲಿತ-ಬುದ್ಧಿವಂತ-ಪ್ರಜ್ಞಾವಂತ ಗಂಡಸು ಈಗಿನ ಸಮಾಜಕ್ಕೆ ಅತ್ಯವಶ್ಯಕ. ಈ ದಿಕ್ಕಿನಲ್ಲಿ ತುಂಬಾ ಕೆಲಸವಾಗಬೇಕಿದೆ.

ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ? : ಬ್ರಹ್ಮನಷ್ಟೇ ಅಲ್ಲ ನೀವೆಲ್ಲ ಬರೆದಿದ್ದೂ ಸಾಕು, ಇನ್ನಾದರೂ ಆಕೆ ತನ್ನ ಹಣೆಯಲ್ಲಿ ತಾನೇ ಬರೆದುಕೊಳ್ಳಲಿ!

summaniruvudu hege series on body shaming controversial statement by dindigul leoni and response from writer vinathe sharma