SSLC, PUC ಯಲ್ಲಿ ದಕ್ಷಿಣ ಕನ್ನಡ ಹೆಚ್ಚಿನ ಬಾರಿ ಫಸ್ಟ್ ಬರಲು ಕಾರಣವೇನು?: ಇಲ್ಲಿಯ ಎಜುಕೇಷನ್ ಸಿಸ್ಟಂ ಹೇಗಿದೆ?

|

Updated on: Apr 20, 2024 | 11:57 AM

Dakshina Kannada Education System: ಮಂಗಳೂರು ಇನ್ನೋವೇಶನ್ ಹಬ್ ಅಲ್ಲದಿರಬಹುದು, ಆದರೆ ಇದು ಭಾರತದ ವಿವಿಧ ಸ್ಥಳಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಯೋಗ್ಯ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಿದ ಮತ್ತು ಸಹಾಯ ಮಾಡುತ್ತಿರುವ ನಗರವಾಗಿದೆ. ವಾಣಿಜ್ಯೇತರ ಮತ್ತು ಸಾಮಾನ್ಯ ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುವ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಇಲ್ಲಿವೆ.

SSLC, PUC ಯಲ್ಲಿ ದಕ್ಷಿಣ ಕನ್ನಡ ಹೆಚ್ಚಿನ ಬಾರಿ ಫಸ್ಟ್ ಬರಲು ಕಾರಣವೇನು?: ಇಲ್ಲಿಯ ಎಜುಕೇಷನ್ ಸಿಸ್ಟಂ ಹೇಗಿದೆ?
Dakshina Kannada 1st
Follow us on

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಲಡುತ್ತದೆ. ಅದು ಅಲ್ಲಿನ ಆಹಾರ ಪದ್ಧತಿಯ ಪ್ರಭಾವವೊ, ಆ ಮಣ್ಣಿನ ಗುಣವೋ, ಇಲ್ಲ ಶಿಕ್ಷಣದ ಗುಣಮಟ್ಟವೋ ಗೊತ್ತಿಲ್ಲ. ಪರಶುರಾಮನ ಸೃಷ್ಟಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾದ ಈ ನಾಡಿಗೆ ವಿದ್ಯೆ ವರವಾಗಿ ಬಂದಿದೆ ಎಂದೇ ಹೇಳಬಹುದು. ಇತ್ತೀಚೆಗಷ್ಟೆ ಕರ್ನಾಟದಲ್ಲಿ ಪಿಯುಸಿ ಫಲಿತಾಂಶ ಪ್ರಕಟಗೊಂಡಿತ್ತು. ಇದರಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. ಪಿಯುಸಿ ಮಾತ್ರವಲ್ಲ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಈ ಎರಡು ಜಿಲ್ಲೆ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿ ಪಿಯುಸಿಯಲ್ಲಿ 97.37 ಶೇಕಡ ಫಲಿತಾಂಶ ಪಡೆದ ದಕ್ಷಿಣ ಕನ್ನಡ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದ್ದರೆ, 95.24 ಶೇಕಡಾ ಫಲಿತಾಂಶ ಪಡೆದು ಉಡುಪಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ.

ಕಳೆದ ಮೂರು ವರ್ಷಗಳಲ್ಲಿ ಪಿಯುಸಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನು, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಬಂದಿದೆ. ಪ್ರತಿಬಾರಿ ಇದೇರೀತಿಯ ಫಲಿತಾಂಶಕ್ಕೆ ಕಾರಣವೇನು?. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣವನ್ನು ಯಾವರೀತಿ ಹೇಳಿಕೊಡಲಾಗುತ್ತದೆ?, ವಿವಿಧ ರಾಜ್ಯಗಳಿಂದ ಈ ಜಿಲ್ಲೆಗೆ ಕಲಿಯಲು ಅನೇಕರು ಬರುತ್ತಾರೆ, ಇದಕ್ಕೆ ಕಾರಣವೇನು?.

ಮಂಗಳೂರು ಇನ್ನೋವೇಶನ್ ಹಬ್ ಅಲ್ಲದಿರಬಹುದು, ಆದರೆ ಇದು ಭಾರತದ ವಿವಿಧ ಸ್ಥಳಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಯೋಗ್ಯ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತಿರುವ ನಗರವಾಗಿದೆ. ವಿಶೇಷ ಎಂದರೆ, ಇಲ್ಲಿನ ಹೆಚ್ಚಿನ ಶಿಕ್ಷಣ ಕೇಂದ್ರವನ್ನು ಅಲ್ಲಿಯ ಜನರೇ ಸೃಷ್ಟಿಸಿದ್ದಾರೆಯೇ ಹೊರತು ಸರ್ಕಾರವಲ್ಲ.

ದಕ್ಷಿಣ ಕನ್ನಡದ ಶಿಕ್ಷಣದ ಕುರಿತು ಈ ಬಗ್ಗೆ ಟಿವಿ9 ಆ್ಯಪ್ ಜೊತೆ ಮಾತನಾಡಿದ ಅಲ್ಲಿನ ಖ್ಯಾತ ಉದ್ಯಮಿ ಭೀಮ್ ಭಟ್, ”ನಾವು ಓದುತ್ತಿದ್ದ ಕಾಲದಲ್ಲಿ ನಮಗೆ ಟ್ಯೂಶನ್ ಎಂದರೆ ಏನು ಎಂಬುವುದೇ ಗೊತ್ತಿರಲಿಲ್ಲ. ಏಕೆಂದರೆ ಕ್ಲಾಸ್ ರೂಮಿನಲ್ಲಿ ಅಂತಹ ಗುಣಮಟ್ಟದ ಶಿಕ್ಷಣ ಸಿಗುತ್ತಿತ್ತು. ಇಂದುಕೂಡ ಕಲಿಸುವ ಗುರುಗಳಲ್ಲಿ ಅಂತಹ ಒಂದು ಒಳ್ಳೆಯ ಮನೋಭಾವ ಇದೆ. ಈಗಲೂ ದಕ್ಷಿಣ ಕನ್ನಡದಲ್ಲಿ ಟ್ಯೂಶನ್​ಗೆ ಮೊರೆ ಹೋಗುವವರ ಸಂಖ್ಯೆ ತೀರಾ ಕಡಿಮೆ. ಇಂದು ಉಡುಪಿ ಮತ್ತು ದ. ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಹೆಚ್ಚಿನ ಬಾರಿ ಪ್ರಥಮ ಸ್ಥಾನ ಪಡೆಯುತ್ತಿದೆ ಎಂದರೆ ಅದಕ್ಕೆ ಶಿಕ್ಷಕರ ಶ್ರಮ, ವಿದ್ಯಾರ್ಥಿಗಳ ಶೃದ್ಧೆ ಮತ್ತು ಪರಿಶ್ರಮ ಹಾಗೂ ಪೋಷಕರ ಬೆಂಬಲ ಮುಖ್ಯ ಕಾರಣ,” ಎನ್ನುತ್ತಾರೆ.

ಭಾರತದಾದ್ಯಂತ ವಿದ್ಯಾರ್ಥಿಗಳು ದಕ್ಷಿಣ ಕನ್ನಡಕ್ಕೆ ಬರುತ್ತಾರೆ. ಇಲ್ಲಿ ಅಧ್ಯಯನ ಮಾಡುತ್ತಾರೆ. ಜೊತೆಗೆ ಕರ್ನಾಟಕ ಮತ್ತು ಕೇರಳದ ಮಂಗಳೂರಿನ ಸುತ್ತಮುತ್ತಲಿನ ಜನರಿಗೆ, ಇದು ಗುಣಮಟ್ಟದ ಶಿಕ್ಷಣದ ಮುಖ್ಯ ಶಿಕ್ಷಣ ಕೇಂದ್ರವಾಗಿದೆ. ಈ ಜಿಲ್ಲೆಗಳು ದ್ವಿತೀಯ ಪಿಯುಸಿ ಫಲಿತಾಂಶಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿವೆ. ಅವರ ಯಶಸ್ಸಿಗೆ ಹಲವಾರು ಅಂಶಗಳು ಕೊಡುಗೆ ನೀಡುತ್ತವೆ, ಅವುಗಳೆಂದರೆ:

ಮೂಲಸೌಕರ್ಯ ಮತ್ತು ಸೌಲಭ್ಯಗಳು: ಈ ಜಿಲ್ಲೆಗಳು ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಇದು ಅನುಕೂಲಕರ ಕಲಿಕೆಯ ವಾತಾವರಣಕ್ಕೆ ಕೊಡುಗೆ ನೀಡುತ್ತದೆ.

ಶಿಕ್ಷಕರ ಗುಣಮಟ್ಟ: ನುರಿತ ಮತ್ತು ಸಮರ್ಪಿತ ಬೋಧನಾ ಸಿಬ್ಬಂದಿಯ ಉಪಸ್ಥಿತಿಯು ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಶಿಕ್ಷಣಕ್ಕೆ ಒತ್ತು: ಈ ಜಿಲ್ಲೆಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಶೈಕ್ಷಣಿಕ ಸಾಧನೆಯನ್ನು ಮೌಲ್ಯಮಾಪನ ಮಾಡುವ ಸಂಸ್ಕೃತಿಯು ವಿದ್ಯಾರ್ಥಿಗಳನ್ನು ಉತ್ತಮ ಸಾಧನೆ ಮಾಡಲು ಪ್ರೇರೇಪಿಸುತ್ತದೆ.

ಸಮುದಾಯ ಬೆಂಬಲ: ಪೋಷಕರು ಮತ್ತು ಸ್ಥಳೀಯ ಅಧಿಕಾರಿಗಳು ಸೇರಿದಂತೆ ಸಮುದಾಯವು ಶೈಕ್ಷಣಿಕ ಉಪಕ್ರಮಗಳನ್ನು ಸಕ್ರಿಯವಾಗಿ ಬೆಂಬಲಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ, ಧನಾತ್ಮಕ ಕಲಿಕೆಯ ವಾತಾವರಣಕ್ಕೆ ಕೊಡುಗೆ ನೀಡುತ್ತದೆ.

ಪರಿಣಾಮಕಾರಿ ಆಡಳಿತ: ಈ ಜಿಲ್ಲೆಗಳಲ್ಲಿನ ಶೈಕ್ಷಣಿಕ ಸಂಸ್ಥೆಗಳ ದಕ್ಷ ಆಡಳಿತ ಮತ್ತು ನಿರ್ವಹಣೆಯೂ ಸಹ ಅವುಗಳ ಸ್ಥಿರವಾದ ಕಾರ್ಯಕ್ಷಮತೆಯಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ.

ಈ ಅಂಶಗಳು ಈ ಜಿಲ್ಲೆಗಳ ಯಶಸ್ಸಿಗೆ ಕೊಡುಗೆ ನೀಡುತ್ತವೆ ಎಂಬುದನ್ನು ಗಮನಿಸುವುದು ಮುಖ್ಯ. ಆದರೆ, ಇದೇ ಮುಖ್ಯ ಕಾರಣ ಎಂಬುದಲ್ಲ. ಯಾಕೆಂದರೆ, ಕರ್ನಾಟಕದ ಇತರ ಜಿಲ್ಲೆಗಳು ಸಹ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು ಇದೇ ರೀತಿಯ ಉಪಕ್ರಮಗಳು ಮತ್ತು ಪ್ರಯತ್ನಗಳನ್ನು ಹೊಂದಿದೆ. ಆದಾಗ್ಯೂ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಅಂಶಗಳ ನಿರ್ದಿಷ್ಟ ಸಂಯೋಜನೆಯು ದ್ವಿತೀಯ ಪಿಯುಸಿ ಮತ್ತು ಎಸ್​ಎಸ್​ಎಲ್​ಸಿಯ ಫಲಿತಾಂಶಗಳಲ್ಲಿ ಅವರ ಸ್ಥಿರ ಸಾಧನೆಗೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಸತತವಾಗಿ ಉತ್ತಮ ಸಾಧನೆ ಮಾಡುತ್ತಿರುವ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಆಳ್ವಾ, ”ದ. ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರಿ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಕಠಿಣ ಪರಿಶ್ರಮದಿಂದ ಈ ಸಾಧನೆ ಆಗುತ್ತಿದೆ. ಪರೀಕ್ಷೆಗಿಂತ ಮೊದಲೇ ಪೂರ್ವ ಸಿದ್ದತಾ ಪರೀಕ್ಷೆ ನಡೆಸಲಾಗುತ್ತದೆ. ನಮ್ಮಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಉಪನ್ಯಾಸಕರಿಗೆ ತರಬೇತಿ, ವಿಚಾರಗೋಷ್ಠಿ ಏರ್ಪಡಿಸಲಾಗುತ್ತದೆ. ಯಾವುದೇ ವಿದ್ಯಾರ್ಥಿ ಕೂಡ ಅಡ್ಡ ದಾರಿ ಹಿಡಿದು, ನಕಲು ಮಾಡಿ ಪಾಸಾಗಬೇಕೆಂದು ಇರಾದೆ ಇಲ್ಲ. ಆರಂಭದಿಂದಲೇ ಅಂದರೆ ಪ್ರಾಥಮಿಕ ಮತ್ತು ಹೈಸ್ಕೂಲ್​ನಲ್ಲಿಯೇ ನಾವು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಅದೆ ಗುಣಮಟ್ಟ ಮುಂದೆಯೂ ಪಡೆದುಕೊಳ್ಳುತ್ತಾರೆ,” ಎಂಬುದು ಆಳ್ವಾ ಅವರ ಮಾತು.

ದಕ್ಷಿಣ ಕನ್ನಡಲ್ಲಿ ಟಾಪರ್​ಗಳಿಗೆ ಉಚಿತ ಪ್ರವೇಶ:

ಈ ಜಿಲ್ಲೆಯ ಮತ್ತೊಂದು ವಿಶೇಷ ಎಂದರೆ, ಮಂಗಳೂರು ಮತ್ತು ಸುತ್ತಮುತ್ತಲಿನ ಪಿಯು ಕಾಲೇಜುಗಳು 10 ನೇ ತರಗತಿಯ ಟಾಪರ್‌ಗಳು ಅಥವಾ ಉನ್ನತ ಸಾಧನೆ ಮಾಡಿದವರಿಗೆ ಉಚಿತ ಪ್ರವೇಶವನ್ನು ನೀಡುತ್ತವೆ. ಆಳ್ವಾಸ್ ಮೂಡುಬಿದಿರೆಯಂತಹ ಕೆಲವು ಕಾಲೇಜುಗಳು 10 ನೇ ತರಗತಿಯ ಟಾಪರ್‌ಗಳಿಗೆ ಎಲ್ಲ ಸೌಲಭ್ಯವನ್ನು ಫ್ರೀ ಆಗಿ ನೀಡುತ್ತದೆ. ಈ ಟಾಪರ್‌ಗಳು ಪಿಯು ಬೋರ್ಡ್ ಪರೀಕ್ಷೆಗಳಲ್ಲಿ ಕೂಡ  ಉತ್ತಮ ಫಲಿತಾಂಶ ಪಡೆಯುತ್ತಾರೆ.

ಹಲವು ವರ್ಷಗಳಿಂದ ಪಿಯು ಮತ್ತು ಸಿಇಟಿಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಎಕ್ಸ್‌ಪರ್ಟ್, ಎಕ್ಸಲೆಂಟ್, ಬಾಸ್ಕೊಸ್, ಆಳ್ವಾಸ್ ಮತ್ತು ಮಹೇಶ್ ಪಿಯು ಮುಂತಾದ ಉನ್ನತ ಕಾಲೇಜುಗಳಲ್ಲಿ ಕಲಿಸುವ ಅನೇಕ ಉಪನ್ಯಾಸಕರು ತಯಾರಿಸುತ್ತಾರೆ. ಇದು ಅಲ್ಲಿನ ವಿದ್ಯಾರ್ಥಿಗಳಿಗೆ ತುಂಬಾ ಸಹಾಯ ಮಾಡುತ್ತದೆ.

ಕಳೆದ ಐದು ವರ್ಷಗಳ ದಕ್ಷಿಣ ಕನ್ನಡದ ದ್ವಿತೀಯ ಪಿಯುಸಿ ಫಲಿತಾಂಶ:

ವರ್ಷ ಶೇಕಡವಾರು ಫಲಿತಾಂಶ
2019-20 90.71 %
2020-21 100 %
2021-22 88.02 %
2022-23 95.33 %
2023-24 97.37 %

ದಕ್ಷಿಣ ಕನ್ನಡದ ಎಸ್​ಎಸ್​ಎಲ್​ಸಿ ಫಲಿತಾಂಶ:

ವರ್ಷ ಶೇಕಡವಾರು ಫಲಿತಾಂಶ
2019-20 86.73 %
2020-21 84.57 %
2021-22 ಎ ಗ್ರೇಡ್
2022-23 89.47 %

ದಕ್ಷಿಣ ಕನ್ನಡದ ಶಿಕ್ಷಣದಲ್ಲಿ ಒತ್ತಡವಿಲ್ಲದ ವಾತಾವರಣವಿದೆ:

ಅಧ್ಯಯನದಲ್ಲಿ ವಾತಾವರಣವು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ 2016 ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್​ನಲ್ಲಿ ತೇರ್ಗಡೆಯಾದ ಸುಮಾ ಸಿ.. ಟಿವಿ9 ಆ್ಯಪ್ ಜೊತೆ ಮಾತನಾಡಿದ ಸುಮಾ, ”ಇಲ್ಲಿನ ಹೆಚ್ಚಿನ ವಿದ್ಯಾರ್ಥಿಗಳು 10 ನೇ ತರಗತಿಯಲ್ಲಿ ಅಥವಾ ದ್ವಿತೀಯ ಪಿಯುಸಿಯಲ್ಲಿ (90% ಮತ್ತು ಅದಕ್ಕಿಂತ ಹೆಚ್ಚಿನ) ಉನ್ನತ ಸಾಧನೆ ಮಾಡುವವರಾಗಿರುವುದರಿಂದ ಇತರ ವಿದ್ಯಾರ್ಥಿಗಳಿಗೆ ಕೂಡ ಇದು ಅಧ್ಯಯನದ ಮೇಲೆ ಕೇಂದ್ರೀಕರಿಸಲು ವಾತಾವರಣವನ್ನು ಸೃಷ್ಟಿಸುತ್ತದೆ. ಅಧ್ಯಾಪಕರು ಫಲಿತಾಂಶಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಇದಕ್ಕಾಗಿ ಶಾಲಾ-ಕಾಲೇಜಿಗಳಲ್ಲಿ ಗ್ರೂಪ್ ಮಾಡಿ ಕಲಿಸುತ್ತಾರೆ. ಆಗ ವಿದ್ಯಾರ್ಥಿಗಳು ಯಾವಾಗಲೂ ಅಧ್ಯಯನದಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ. ಇಲ್ಲಿ ಮಾದರಿ ಪಠ್ಯಕ್ರಮವನ್ನು ಮುಂಚಿತವಾಗಿ ಯೋಜಿಸಲಾಗುತ್ತದೆ. ಹೆಚ್ಚಿನ ಸಮಯ ಶಾಲಾ ಅವಧಿ ಮುಗಿದರೂ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಾರೆ, ಪೂರ್ವಸಿದ್ಧತಾ ಪರೀಕ್ಷೆಗಳಿಗೆ ಉತ್ತಮ ಸಮಯವನ್ನು ನೀಡುತ್ತಾರೆ,” ಎಂಬುದು ಈಗ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ಸುಮಾ ಅವರ ಮಾತು.

”ಜೊತೆಗೆ ಇಲ್ಲಿಯ ಶಿಕ್ಷಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೂಡ ಇದೆ. ಗೈರಾದ ವಿದ್ಯಾರ್ಥಿಗಳ ಬಗ್ಗೆ ತಕ್ಷಣವೇ ಅವರ ಮನೆಗೆ ಮಾಹಿತಿ ನೀಡಿ ಆತ ಯಾತಕ್ಕಾಗಿ ಗೈರಾಗಿದ್ದಾನೆ ಎಂದು ತಿಳಿದುಕೊಳ್ಳಲಾಗುತ್ತದೆ. ಈಗ ಬಹುತೇಕ ಕಾಲೇಜುಗಳಲ್ಲಿ ಗೈರು ಆದರೆ ಹೆತ್ತವರಿಗೆ ಮೆಸೇಜ್ ಹೋಗುತ್ತದೆ. ಜೊತೆಗೆ ಇಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲಾ-ಕಾಲೇಜುಗಳ ಮಧ್ಯೆ ಉತ್ತಮ ಪೈಪೋಟಿ ಇದೆ. ಇದುಕೂಡ ಒಳ್ಳೆಯ ಫಲಿತಾಂಶಕ್ಕೆ ಕಾರಣ. ಶಾಲಾ ಅವಧಿ ಮುಗಿದರೂ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವುದು, ತಮ್ಮ ಮಕ್ಕಳಂತೆ ಕಾಣುವ ಪ್ರವೃತ್ತಿ, ಮಕ್ಕಳ ಉತ್ತಮ ಅಂಕ ಗಳಿಕೆಗೆ ಹೆಚ್ಚಿನ ಒತ್ತು ಉಪನ್ಯಾಸಕರು, ಪ್ರಾಂಶುಪಾಲರು ನೀಡುತ್ತಿದ್ದಾರೆ ಎಂದು ಹೇಳುತ್ತಾರೆ,” ಸುಮಾ.

ದಕ್ಷಿಣ ಕನ್ನಡ ಜಿಲ್ಲೆಯ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ರಾಕೇಶ್ ಕುಮಾರ್ ಕಮ್ಮಾಜೆ ಅವರು ಟಿವಿ9 ಆ್ಯಪ್ ಜೊತೆ ಮಾತನಾಡಿದ್ದು, ಪಿಯುಸಿ, ಎಸ್​ಎಸ್​ಎಲ್​ಸಿಯಲ್ಲಿ ದಕ್ಷಿಣ ಕನ್ನಡ ಹೆಚ್ಚಿನ ಬಾರಿ ಪ್ರಥಮ ಬರಲು ಎರಡು ಕಾರಣಗಳನ್ನು ತಿಳಿಸಿದರು.

ರಾಕೇಶ್ ಕುಮಾರ್ ಕಮ್ಮಾಜೆ- ಪ್ರಾಂಶುಪಾಲರು, ಅಂಬಿಕಾ ಮಹಾವಿದ್ಯಾಲಯ.

”ಮೊದಲನೆಯದು ದಕ್ಷಿಣ ಕನ್ನಡದಲ್ಲಿ ಶೈಕ್ಷಣಿಕ ವಾತಾವರಣ ಅಚ್ಚುಕಟ್ಟಾಗಿದೆ. ಹಾಗಾಗಿ ಶಿಕ್ಷಣ ಯಾವ ಗುಣಮಟ್ಟವನ್ನು ಹೊಂದಿರಬೇಕೆಂಬ ಸ್ಪಷ್ಟ ಕಲ್ಪನೆ ಈ ಭಾಗದ ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿವೆ. ಜತೆಗೆ ಶಿಕ್ಷಕರ ಗುಣಮಟ್ಟವನ್ನೂ ವಿವಿಧ ಮಾನದಂಡಗಳ ಮುಖಾಂತರ ಕಾಲಕಾಲಕ್ಕೆ ಪರೀಕ್ಷಿಸುವ ಮೂಲಕ ಅತ್ಯುತ್ತಮ‌ ಶಿಕ್ಷಕರನ್ನು ರೂಪಿಸುವ ಕಾರ್ಯವೂ ಈ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದೆ. ಹೀಗೆ ತಜ್ಞ ಶಿಕ್ಷಕರನ್ನು ರೂಪಿಸುವ ಕಾರ್ಯವನ್ನೂ ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ಕೈಗೆತ್ತಿಕೊಂಡಿರುವುದು ಫಲಿತಾಂಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ.”

”ಎರಡನೆಯದಾಗಿ, ದಕ್ಷಿಣ ಕನ್ನಡದ ಶಿಕ್ಷಣ ವ್ಯವಸ್ಥೆ ಚೆನ್ನಾಗಿರುವುದರಿಂದ ರಾಜ್ಯದ ನಾನಾ ಭಾಗಗಳ  ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಈ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಜತೆಗೆ ದಕ್ಷಿಣ ಕನ್ನಡದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಹಜವಾಗಿಯೇ ಇಲ್ಲಿಯ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿರುವುದರಿಂದ ಪಿಯು ವರೆಗೆ ‘ಪ್ರತಿಭಾ ಪಲಾಯನ’ ಈ ಜಿಲ್ಲೆಯಲ್ಲಿ ಆಗುತ್ತಿಲ್ಲ. ಇದರಿಂದಾಗಿ ಅತ್ಯುತ್ತಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಗಮ ಈ ಭಾಗದಲ್ಲಿ ಪ್ರತಿವರ್ಷ ಸಾಧ್ಯವಾಗುತ್ತಿದೆ. ಇವೆಲ್ಲದರ ಸತ್ಪರಿಣಾಮ ಫಲಿತಾಂಶದ ಮುಖೇನ ಹೊರಹೊಮ್ಮುತ್ತಿದೆ,” ಎಂಬುದು ರಾಕೇಶ್ ಕುಮಾರ್ ಅವರ ಅಭಿಪ್ರಾಯ.

ದಕ್ಷಿಣ ಕನ್ನಡದ ಪ್ರಸಿದ್ಧ ಸೇಂಟ್ ಜಾರ್ಜ್ ಹೈಸ್ಕೂಲ್​ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸ್ಮಿತಾ ಅವರ ಪ್ರಕಾರ, ”ಈ ಪ್ರಾಂತ್ಯದಲ್ಲಿ ಶಿಕ್ಷಣ ವ್ಯವಸ್ಥೆ ಇತರ ಪ್ರಾಂತ್ಯಗಳಿಗಿಂತ ವಿಭಿನ್ನವಾಗಿದೆ. ಇದು ಶಿಕ್ಷಣ ನೀಡುವ ವಿಧಾನದ ಮತ್ತು ಕಲಿಕಾ ಸಾಮಗ್ರಿಯ ವೈವಿಧ್ಯತೆಯ ಮೂಲಕ ಗೋಚರಿಸುತ್ತದೆ. ದಕ್ಷಿಣ ಕನ್ನಡ ಪ್ರಾಂತ್ಯದ ಭಾಷಾ ಮತ್ತು ಸಾಂಸ್ಕೃತಿಕ ಬೇರುಗಳು ಅದರ ವಿಶೇಷತೆಗಳಲ್ಲಿ ಒಂದು. ಈ ಪ್ರಾಂತ್ಯದ ಭಾಷಾ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ವ್ಯತ್ಯಾಸಗಳು ಅದನ್ನು ಇನ್ನಷ್ಟು ವಿಶೇಷಗೊಳಿಸುತ್ತವೆ,” ಎನ್ನುತ್ತಾರೆ.

ಮಾತು ಮುಂದುವರೆಸಿದ ಅವರು, ”ದಕ್ಷಿಣ ಕನ್ನಡ ಪ್ರಾಂತ್ಯದ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಮತ್ತು ಅನುಭವದ ದೃಷ್ಟಿಯಿಂದ ಮೆಚ್ಚುಗೆಯನ್ನು ಹೊಂದಿವೆ. ಅವು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದರ ಮೂಲಕ ಬೆಳೆಯುವ ಕ್ಷೇತ್ರಗಳಾಗಿವೆ. ಅದರಲ್ಲಿ ಅವರ ಅಭಿರುಚಿಗಳನ್ನು ಅನುಸರಿಸುವ ಪ್ರತಿಷ್ಠಾನಗಳು ಇವೆ. ಇಲ್ಲಿ ಬೆಳೆಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಅನೇಕ ಸಮಯಗಳಲ್ಲಿ ಪ್ರಥಮ ಬರುವ ಕಾರಣಗಳು. ಇವು ಸುಂದರ ಸಾಂಸ್ಕೃತಿಕ ಹಿನ್ನೆಲೆ, ಸಹಕಾರದ ಭಾವನೆ ಮತ್ತು ಜನರ ಸಾಮಾಜಿಕ ಸಹಾನುಭೂತಿಯ ಸಾಕಾರಾತ್ಮಕ ಪ್ರಭಾವವನ್ನು ಉತ್ಪಾದಿಸುತ್ತವೆ,” ಎಂಬುದು ಸ್ಮಿತಾ ಅವರ ಅಭಿಪ್ರಾಯ.

ದಕ್ಷಿಣ ಕನ್ನಡವರು ಟ್ಯೂಷನ್ ಮೋರೆ ಹೋಗುವುದು ಕಡಿಮೆ:

ದಕ್ಷಿಣ ಕನ್ನಡದಲ್ಲಿ ಶಿಕ್ಷಣದ ಅಭಿವೃದ್ದಿಗೆ ಅಲ್ಲಿ ನೀಡುತ್ತಿರುವ ಟ್ಯೂಷನ್ ಕೂಡ ಕಾರಣ ಎನ್ನುವ ಮಾತನ್ನು ಅಲ್ಲಿಯ ಶಿಕ್ಷಕರು ಒಪ್ಪುವುದಿಲ್ಲ. ಈ ಬಗ್ಗೆ ಟಿವಿ9 ಆ್ಯಪ್ ಜೊತೆ ಮಾತನಾಡಿದ ಕೆಪಿಎಸ್ ಕೆಯ್ಯೂರು ಶಿಕ್ಷಕಿ ಜೆಸ್ಸಿ ಪಿವಿ, ”ಟ್ಯೂಷನ್ ಕ್ಲಾಸ್ ಇಲ್ಲಿರುವುದಕ್ಕಿಂತ ಹೆಚ್ಚಾಗಿ ಬೆಂಗಳೂರಿನಂತಹ ಮೆಟ್ರೋ ಸಿಟಿಗಳಲ್ಲಿದೆ. ದ.ಕ ದಲ್ಲಿ ಕಡಿಮೆ ಸಂಖ್ಯೆಯ ಮಕ್ಕಳಷ್ಟೇ ಟ್ಯೂಷನ್​ಗೆ ಹೋಗುತ್ತಾರೆ. ಇಲ್ಲಿ ಹಳ್ಳಿಗಾಡಿನ ಮಕ್ಕಳೇ ಹೆಚ್ಚು. ಅವರಿಗೆ ಟ್ಯೂಷನ್ ಸೌಲಭ್ಯವೂ ಇಲ್ಲ. ಶಾಲೆಗಳಲ್ಲಿ ಶಿಕ್ಷಕರು ಅನುಸರಿಸುವ ಕ್ರಮಗಳು, ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ತಯಾರುಗೊಳಿಸುವ ರೀತಿ ಇವುಗಳಿಂದಾಗಿ ಉತ್ತಮ ಫಲಿತಾಂಶ ಬರುತ್ತದೆ. ಇಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿರುವುದರಿಂದ ಪೋಷಕರಿಗೆ ಉಳಿದ ಜಿಲ್ಲೆಗಳಿಗಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕಾಳಜಿ ಇರುವುದೂ ಒಂದು ಕಾರಣ,” ಎನ್ನುತ್ತಾರೆ.

ದಕ್ಷಿಣ ಕನ್ನಡಲ್ಲಿ ಪ್ರತಿಭಾ ಪಲಾಯನ ಆಗುತ್ತಿಲ್ಲ:

ಇಂದು ಯುವಕರಿಂದ ಹಿಡಿದು ಮಧ್ಯ ವಯಸ್ಸಿನವರು ಕೆಲಸಕ್ಕೆಂದು ಬೆಂಗಳೂರು ಅಥವಾ ಬೇರೆ ರಾಜ್ಯಕ್ಕೆ ಹೋಗುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಇದರಲ್ಲಿ ದಕ್ಷಿಣ ಕನ್ನಡದವರ ಸಂಖ್ಯೆ ತೀರಾ ಕಡಿಮೆ. ಏಕೆಂದರೆ ಅಲ್ಲಿನ ಹೆಚ್ಚಿನ ಜನ ಅಲ್ಲಿಯೇ ಉದ್ಯೋಗವನ್ನು ಆರಿಸುತ್ತಾರೆ. ಮಂಗಳೂರನ್ನು ಕರ್ನಾಟಕದ ಎರಡನೇ ಅತಿ ದೊಡ್ಡ ನಗರ ಎಂದು ಕರೆಯಲಾಗುತ್ತದೆ. ಕರಾವಳಿಯಲ್ಲಿಯೇ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಮಂಗಳೂರಿನಲ್ಲಿ ದೊಡ್ಡ ದೊಡ್ಡ ಕಂಪನಿಗಳು ತಲೆ ಎತ್ತಿವೆ. ಪಕ್ಕದ ಉಡುಪಿ ಜಿಲ್ಲೆ, ಮಣಿಪಾಲದಲ್ಲೂ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಮಂಗಳೂರಿನ ಮುಡಿಪುವಿಯಲ್ಲಿ ಇನ್ಫೋಸಿಸ್ ಕೂಡ ಇದೆ. ಹೀಗಾಗಿ ದಕ್ಷಿಣ ಕನ್ನಡದ ಪ್ರತಿಭಾವಂತರು ತಮ್ಮ ಊರಿನಲ್ಲೇ ಇದ್ದುಕೊಂಡು ಕೆಲಸ ಮಾಡಲು ಇಷ್ಟ ಪಡುತ್ತಾರೆ.

Published On - 4:10 pm, Tue, 16 April 24