M B Patil: 26 ನೇ ವಯಸ್ಸಿಗೆ ವಿಧಾನಸಭೆ ಮೆಟ್ಟಿಲು ಏರಿದ್ದ ಎಂ ಬಿ ಪಾಟೀಲ್ಗೆ ಸಚಿವ ಸ್ಥಾನ
ರಾಜಕೀಯ ಹಿನ್ನಲೆ ಹೊಂದಿದ್ದ ಎಂ ಬಿ ಪಾಟೀಲ್ರು ರಾಜಕೀಯ ಜೀವನಕ್ಕೆ ಬಂದಿದ್ದೆ ಅಚಾನ್ಕ್ಕಾಗಿ, ಹೌದು ಅವರ ರಾಜಕೀಯ ಜೀವನ, ಶಿಕ್ಷಣ, ಸಚಿವರಾಗಿದ್ದಾಗ ಮಾಡಿದ ಕಾರ್ಯದ ಕುರಿತು ಇಲ್ಲಿದೆ ಮಾಹಿತಿ.
ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಎಂ.ಬಿ ಪಾಟೀಲ್ (M B Patil) ಎಲ್ಲರಿಗೂ ಚಿರಪರಿಚಿತ ಹೆಸರು. ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕರಾಗಿದ್ದಾರೆ. ಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕ, ಜಲಸಂಪನ್ಮೂಲ ಸಚಿವರಾಗಿ ಹೆಸರು ಗಳಿಸಿದವರು. ಈಗ ಕರ್ನಾಟಕ ಚುನಾವಣೆ (Karnataka Assembly Election)ಯಲ್ಲಿ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಸಚಿವ ಸ್ಥಾನ ಅಲಂಕರಿಸಿದರು. ಮಲ್ಲನಗೌಡ ಬಸನಗೌಡ ಪಾಟೀಲ್ ಎಂಬುದು ಎಂ.ಬಿ.ಪಾಟೀಲ್ರ ಪೂರ್ಣ ಹೆಸರು. ಪೂರ್ಣ ಹೆಸರು ಹೇಳಿದರೆ ಎಲ್ಲರಿಗೂ ಬೇಗನೆ ಅವರ ಪರಿಚಯವಾಗುವುದಿಲ್ಲ. ಎಂಬಿ ಪಾಟೀಲ್ರು 1964 ಅಕ್ಟೋಬರ್ 7 ರಂದು ಜನಿಸಿದರು.
ರಾಜಕೀಯ ಕೌಟುಂಬಿಕ ಹಿನ್ನೆಲೆ ಉಳ್ಳವರಾಗಿರುವ ಎಂ.ಬಿ ಪಾಟೀಲ್ರು, ಅವರ ತಂದೆ ಬಿ.ಎಂ ಪಾಟೀಲ್ ಕೂಡ ಶಾಸಕರಾಗಿದ್ದವರು. ತಾಯಿ ಕಮಲಾಬಾಯಿ ಪಾಟೀಲ್, ಸಹೋದರ ಸುನೀಲಗೌಡ ಪಾಟೀಲ್ ವಿಧಾನ ಪರಿಷತ್ ಸದಸ್ಯ, ಇವರಿಗೆ ನಂದಾ, ಕಲ್ಪನಾ ಹಾಗೂ ಸವಿತಾ ಮೂವರು ಸಹೋದರಿಯರಿದ್ದಾರೆ. ಬಿಇ ಸಿವಿಲ್ ಇಂಜಿನೀಯರಿಂಗ್ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಎಂ.ಬಿ ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್. ಈ ದಂಪತಿಗೆ ಬಸನಗೌಡ ಪಾಟೀಲ್ ಹಾಗೂ ದೃವ ಪಾಟೀಲ್ ಇಬ್ಬರು ಪುತ್ರರಿದ್ದಾರೆ.
ಇದನ್ನೂ ಓದಿ:ಪ್ರತ್ಯೇಕ ಲಿಂಗಾಯತ ಧರ್ಮ: ಮತ್ತೆ ಧ್ವನಿ ಎತ್ತಿದ ಎಂಬಿ ಪಾಟೀಲ್ಗೆ ಶಾಮನೂರು ಶಿವಶಂಕರಪ್ಪ ಗುದ್ದು
ಅಚಾನಕ್ ರಾಜಕೀಯಕ್ಕೆ ಎಂಟ್ರಿಕೊಟ್ಟ ಎಂಬಿ ಪಾಟೀಲ್
ಎಂಬಿ ಪಾಟೀಲ್ ಅವರ ತಂದೆ ಬಿಎಂ ಪಾಟೀಲ್ ಅವರು 1991ರಲ್ಲಿ ಅಚಾನಕ್ ನಿಧನರಾದರು. ಈ ಕಾರಣದಿಂದ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಎಂಬಿ ಪಾಟೀಲ್ ಅವರು 1992 ರಲ್ಲಿ ತಿಕೋಟಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲ್ಲುವ ಮುಖಾಂತರ 26 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಧಾನಸಭೆಯ ಮೆಟ್ಟಿಲು ಹತ್ತಿದರು. 1998 ರಲ್ಲಿ ವಿಜಯಪುರ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ 2004 ರಲ್ಲಿ ತಿಕೋಟಾ ಕ್ಷೇತ್ರದಿಂದ ಶಾಸಕರಾಗಿ ಗೆದ್ದರು. 2008, 2013, 2018, 2023 ರಲ್ಲಿ ಸತತ ನಾಲ್ಕು ಬಾರಿ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2013 ರಿಂದ 2018 ರಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವರಾಗಿ ಸೇವೆ
ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ, ಆಣೆಕಟ್ಟುಗಳ, ನಾಲೆಗಳ ಆಧುನೀಕರಣ, ಭದ್ರಾಮೇಲ್ದಂಡೆ ಯೋಜನೆ, ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆ, ಮೆಕೆದಾಟು, ಎತ್ತಿನಹೊಳೆ, ಅತ್ಯಂತ ಎತ್ತರದ ಪ್ರದೇಶಕ್ಕೆ ನೀರಾವರಿ ಒದಗಿಸುವ ತುಬಚಿ ಬಬಲೇಶ್ವರ ಏತನೀರಾವರಿ, ಆಡಳಿತ ಯಂತ್ರದಲ್ಲಿ ವ್ಯಾಪಕ ಸುಧಾರಣೆಗಳು, ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಇತರೆ ಕಾರ್ಯಗಳನ್ನು ಮಾಡಿರುವ ಎಂ ಬಿ ಪಾಟೀಲ್, 2018 ರಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕೆಲ ತಿಂಗಳುಗಳ ಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು.
ಇದನ್ನೂ ಓದಿ:ಸ್ಕಾಡಾ ಯೋಜನೆ ವಿಚಾರ: ಮಾಜಿ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಹರಿಹಾಯ್ದ ಶಾಸಕ ರಾಜುಗೌಡ
ಉಕ್ರೇನ್‌ನಿಂದ ಮರಳಿದ 17 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
1 ಉಕ್ರೇನ್‌ನಿಂದ ಮರಳಿದ 17 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದ್ದರು.
2 ನಿರಂತರ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ಔರಾದ್ಕರ್ ಸಮಿತಿಯ ವರದಿಯನ್ನು ಜಾರಿಗಾಗಿ ಪ್ರಯತ್ನಿಸಿದರು, ಹೌದು ‘ಔರಾದ್ಕರ್ ವರದಿ ಪ್ರಕಾರ ಪೊಲೀಸ್ ಸಿಬ್ಬಂದಿಯ ವೇತನದಲ್ಲಿ ಹೆಚ್ಚಳ, ಬಡ್ತಿ ಹಾಗೂ ಇನ್ನಿತರ ಬದಲಾವಣೆಗಳನ್ನು ತರಲು ಔರಾಧ್ಕರ್ ವರದಿ ಜಾರಿಗೆ ಶಿಫಾರಸ್ಸು ಮಾಡಿದ್ದರು.
3 ಗೃಹ ಸಚಿವರಿಗೆ ನೀಡಲಾಗುತ್ತಿದ್ದ ಝೀರೋ ಟ್ರಾಫಿಕ್ ಸೌಲಭ್ಯವನ್ನು ನಿರಾಕರಣೆ ಮಾಡಿದ್ದರು.
4 ಪೊಲೀಸ್ ವಂದನೆ ಸಂಸ್ಕೃತಿಯನ್ನು ನಿಲ್ಲಿಸಿದ್ದರು.
ಇವರ ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಶೈಕ್ಷಣಿಕ ಬದ್ಧತೆಗಳಿಂದಾಗಿ ಬಸವಶಾಂತಿ, ಆಧುನಿಕ ಭಗೀರಥ, ಮೃತ್ಯುಂಜಯ ಪ್ರಶಸ್ತಿ, ಬಿ.ಡಿ ಜತ್ತಿ ಸ್ಮಾರಕ ಪ್ರಶಸ್ತಿ, ಪರ್ಯಾವರಣ ರಕ್ಷಕ ಸಮ್ಮಾನ-2019 ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಜೊತೆಗೆ ಮಹಾರಾಷ್ಟ್ರದ ಕೋಲ್ಹಾಪುರದ ಡಿ ವೈ ಪಾಟೀಲ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ