11 ಡಿಸಿಎಂಗಳಲ್ಲಿ ನಾಲ್ವರಿಗೆ ಒಲಿದು ಬಂದ ಸಿಎಂ ಯೋಗ: ಕರ್ನಾಟಕದಲ್ಲಿ ಫಸ್ಟ್ ಡಿಸಿಎಂ ಸೃಷ್ಟಿಯಾಗಿದ್ದು ಯಾವಾಗ?
ಕರ್ನಾಟಕದಲ್ಲಿ ಈವರೆಗೆ 11 ಜನರು ಉಪಮುಖ್ಯಮಂತ್ರಿಗಳಾಗಿದ್ದು, ಇವರಲ್ಲಿ ಈ ಪೈಕಿ ನಾಲ್ವರಿಗೆ ಮುಖ್ಯಮಂತ್ರಿಯಾಗುವ ಯೋಗ ಒಲಿದುಬಂದಿದೆ. ಯಾರ್ಯಾರು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಕಾಂಗ್ರೆಸ್ (Comgress) ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್(DK Shivakumar) ಅವರು ನಿನ್ನೆ(ಮೇ.20) ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಸಿಎಂ(Deputy CM) ಹುದ್ದೆ ಸೃಷ್ಟಿಯಾಗಿದ್ದು 1993ರಲ್ಲಿ. ನಾಯಕರ ಅವರ ಸಾಮರ್ಥ್ಯ, ಚುನಾವಣ ಫಲಿತಾಂಶ, ಅದೃಷ್ಟದ ಮೇಲೆ ಈ ಹುದ್ದೆ ನಿಂತಿದೆ. ರಾಜ್ಯದಲ್ಲಿ ಇದುವರೆಗೆ 11 (ಸಿದ್ದರಾಮಯ್ಯ 2 ಬಾರಿ) (ಡಿಕೆ ಶಿವಕುಮಾರ್ ಹೊರತುಪಡಿಸಿ) ಮಂದಿ ಉಪ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದು ಅವರಲ್ಲಿ ನಾಲ್ವರಿಗೆ ಮುಖ್ಯಮಂತ್ರಿಯಾಗಿ ರಾಜ್ಯದ ಅಧಿಕಾರ ನಡೆಸುವ ಯೋಗ ಒಲಿದಿದೆ.
ಹೌದು..ಈವರೆಗೆ 11 ಜನರು ಉಪಮುಖ್ಯಮಂತ್ರಿಗಳಾಗಿದ್ದು, ಈ ಪೈಕಿ ನಾಲ್ವರು ಅಂದರೆ ಜೆಹೆಚ್ ಪಟೇಲ್, ಎಸ್ಎಂ ಕೃಷ್ಣ, ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದಾರೆ.
ದೇವೇಗೌಡರು ಪ್ರಧಾನಿಯಾದ ಅನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜೆ.ಎಚ್. ಪಟೇಲ್ ಹಾಗೂ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಕ್ಕಲಿಗ, ಲಿಂಗಾಯತ, ಕುರುಬ ಕಾಂಬಿನೇಶನ್‌ನಡಿ ಪಕ್ಷಕ್ಕೆ ಬಹುಮತ ಬಂದಿದ್ದರಿಂದ ಒಕ್ಕಲಿಗರ ಬಳಿಕ ಲಿಂಗಾಯತರಿಗೆ ಆ ಸ್ಥಾನ ಬಿಟ್ಟುಕೊಡುವುದು ಸೂಕ್ತ, ಹೆಚ್ಚಿನ ಸಂಖ್ಯೆಯ ಶಾಸಕರೂ ಬೆಂಬಲಕ್ಕಿದ್ದಾರೆ ಎಂಬ ವಾದದಡಿ ಜೆ.ಎಚ್.ಪಟೇಲ್‌ಗೆ ಸಿಎಂ ಪಟ್ಟ ಒಲಿದಿತ್ತು. ಅನಂತ ರ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಸಿದ್ದರಾಮಯ್ಯ ಅವರು ಜೆ.ಎಚ್. ಪಟೇಲ್ ಸಂಪುಟದಲ್ಲಿ (1996ರಿಂದ 1999) ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು.
ಇದಾದ ಅನಂತರ 2004ರಲ್ಲಿ ಕಾಂಗ್ರೆಸ್‌ಗೆ ಬಹುಮತ ಬಾರದಿದ್ದಾಗ ಜೆಡಿಎಸ್ ಜತೆ ಸೇರಿ ಸರಕಾರ ರಚಿಸಲಾಯಿತು. ಆಗ ಜೆಡಿಎಸ್‌ಗೆ ಸಿಎಂ ಸ್ಥಾನ ಪಡೆಯಬೇಕು ಎಂದು ಸಿದ್ದರಾಮಯ್ಯ ಹಠ ಹಿಡಿದಿದ್ದರು. ಆದರೆ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾದಾಗ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಹುದ್ದೆ ನೀಡಿ ಸಮಾಧಾನ ಪಡಿಸಲಾಯಿತು. ನಂತರ ಧರಂಸಿಂಗ್ ಸಂಪುಟದಿಂದ ಸಿದ್ದರಾಮಯ್ಯ ಅವರನ್ನು ತೆಗೆದು, ಬದಲಿಗೆ ಎಂ.ಪಿ. ಪ್ರಕಾಶ್ ಅವರನ್ನು ಡಿಸಿಎಂ ಮಾಡಲಾಯಿತು.
2013ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದ್ದರಿಂದ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ 2018ರ ವರೆಗೆ ಆಡಳಿತ ನಡೆಸಿದ್ದರು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಚುನಾವಣೆಯಲ್ಲಿ ಸೋತಿದ್ದ ಕಾರಣ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಸಾಧ್ಯವಾಯ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಡಿಸಿಎಂ ಹುದ್ದೆ ಸೃಷ್ಟಿಯ ಬೇಡಿಕೆ ಇತ್ತಾದರೂ ಅದು ಸಾಧ್ಯವಾಗಿರಲಿಲ್ಲ.
ಈ ನಡುವೆ, ಬಿಜೆಪಿ ವಿಚಾರಕ್ಕೆ ಬಂದರೆ ಬಿ.ಎಸ್. ಯಡಿಯೂರಪ್ಪ ಅವರು, ಹೆಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ (2006- 2007) ಡಿಸಿಎಂ ಆಗಿದ್ದರು. ಅನಂತರ ಬಿ.ಎಸ್. ಯಡಿಯೂರಪ್ಪ 2007ರ ನವೆಂಬರ್ 12ರಿಂದ ನ.19ರ ವರೆಗೆ 7 ದಿನ ಸಿಎಂ ಹಾಗೂ 2008 ರ ಮೇ ನಿಂದ 2011ರ ಆಗಸ್ಟ್‌ವರೆಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ಮತ್ತೆ ಯಡಿಯೂರಪ್ಪ ಅವರು 2018ರ ಮೇ 17 ರಿಂದ ಮೇ 23ರ ವರೆಗೆ ಅಂದರೆ 6 ದಿನ ಸಿಎಂ ಆಗಿದ್ದರು. ಆದರೆ ಯಡಿಯೂರಪ್ಪ ಅವರು ಆಪರೇಷನ್ ಕಮಲದ ಮೂಲಕ 2019ರಿಂದ 2021ರ ವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.
ಈ ನಡುವೆ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಡಾ.ಜಿ. ಪರಮೇಶ್ವರ್ ಅವರು ಡಿಸಿಎಂ ಆಗಿದ್ದರು. ಆದರೆ ಇವರಿಗೆ ಸಿಎಂ ಯೋಗ ಲಭಿಸಿಲ್ಲ. ಇದೀಗ ಸಿದ್ದರಾಮಯ್ಯ 2ನೇ ಬಾರಿಗೆ ಸಿದ್ದರಾಮಯ್ಯ ಅವರು ಸಿಎಂ ಆಗಿ ನೇಮಕಗೊಂಡಿದ್ದು, ಡಿಕೆ ಶಿವಕುಮಾರ್ ಡಿಸಿಎಂ ಆಗಿದ್ದಾರೆ. ಮುಂದೆ ಇವರಿಗೆ ಮುಖ್ಯಮಂತ್ರಿ ಯೋಗ ಕೂಡಿಬರಲಿದ್ಯಾ ಎನ್ನುವುದನ್ನು ಕಾದುನೋಡಬೇಕಿದೆ.
ಈ ವರೆಗೆ ಉಪಮುಖ್ಯಮಂತ್ರಿಯಾಗಿದ್ದವರು
- ಎಸ್ ಎಂ ಕೃಷ್ಣ:21 ಜನವರಿ 1993 ರಿಂದ 9 ಡಿಸೆಂಬರ್ 1994
- ಜೆ ಎಚ್ ಪಟೇಲ್: 11 ಡಿಸೆಂಬರ್ 1994-31 ಮೇ 1996
- ಸಿದ್ದರಾಮಯ್ಯ: 31 ಮೇ 1996-22 ಜುಲೈ 1999
- ಸಿದ್ದರಾಮಯ್ಯ: 28 ಮೇ 2004-5 ಆಗಸ್ಟ್ 2005
- ಎಂ.ಪಿ.ಪ್ರಕಾಶ್: 8 ಆಗಸ್ಟ್ 2005-28 ಜನವರಿ 2006
- ಬಿಎಸ್ ಯಡಿಯೂರಪ್ಪ: 3 ಫೆಬ್ರವರಿ 2006-8 ಅಕ್ಟೋಬರ್ 2007
- ಆರ್.ಅಶೋಕ:12 ಜುಲೈ 2012-12 ಮೇ 2013
- ಕೆ ಎಸ್ ಈಶ್ವರಪ್ಪ-12 ಜುಲೈ 2012-12 ಮೇ 2013
- ಜಿ.ಪರಮೇಶ್ವರ:23 ಮೇ 2018-23 ಜುಲೈ 2019
- ಸಿ ಎನ್ ಅಶ್ವಥ್ ನಾರಾಯಣ: 26 ಆಗಸ್ಟ್ 2019-26 ಜುಲೈ 2021
- ಗೋವಿಂದ ಕಾರಜೋಳ:26 ಆಗಸ್ಟ್ 2019-26 ಜುಲೈ 2021
- ಲಕ್ಷ್ಮಣ ಸವದಿ: 26 ಆಗಸ್ಟ್ 2019-26 ಜುಲೈ 2021 ಡಿಕೆ ಶಿವಕುಮಾರ್: 20 ಮೇ 2023-(ಸದ್ಯ ಡಿಸಿಎಂ ಆಗಿದ್ದಾರೆ)