Hebbal Election Results: ಹೆಬ್ಬಾಳ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ತ್ರಿಕೋನ ಸ್ಪರ್ಧೆ ಯಾರಿಗೆ ಗೆಲುವು?
Hebbal Assembly Election Result 2023 Live Counting Updates: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿ ಶೇ. 52ರಷ್ಟು ಮತದಾನವಾಗಿತ್ತು.
Hebbal Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಮತದಾನದಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿ (Hebbal Assembly Elections 2023) ಶೇ. 52ರಷ್ಟು ಮತದಾನವಾಗಿತ್ತು. ಹೆಬ್ಬಾಳ ಕ್ಷೇತ್ರದಲ್ಲಿರುವ ಒಟ್ಟು ಮತದಾರರು 2,88,928. ಪುರುಷರು 1,47,155. ಮಹಿಳೆಯರು 1,41,720. ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು 14. ಕಾಂಗ್ರೆಸ್ ಶಾಸಕ ಬಿ.ಎಸ್. ಸುರೇಶ್ (ಬೈರತಿ) ಎದುರಾಳಿಯಾಗಿ ಬಿಜೆಪಿಯ ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಕೆ.ಎಸ್. ಜಗದೀಶ ಕಟ್ಟಾ ಕಣದಲ್ಲಿರುವುದು ಹೆಬ್ಬಾಳ ಕ್ಷೇತ್ರದ ಕದನ ಕುತೂಹಲ ಮತ್ತು ಕಾವನ್ನು ಹೆಚ್ಚಿಸಿದೆ. ಜೆಡಿಎಸ್ ನಿಂದ ಸಯ್ಯದ್ ಮೊಹಿದ್ ಅಲ್ತಾಫ್ ಅಖಾಡದಲ್ಲಿದ್ದಾರೆ. ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರೂ ಇಲ್ಲಿ ತ್ರಿಕೋನ ಸ್ಪರ್ಧೆಯಿದೆ. ಕ್ಷೇತ್ರದಲ್ಲಿ ಮುಸ್ಲಿಂ, ಪರಿಶಿಷ್ಟರು ಮತ್ತು ಒಕ್ಕಲಿಗರದ್ದೇ ಪ್ರಾಬಲ್ಯ, ಈ ಬಾರಿಯೂ ಜಾತಿ ಸಮೀಕರಣದ ಲೆಕ್ಕಾಚಾರ ಕ್ಷೇತ್ರದಲ್ಲಿ ಭಾರೀ ಚರ್ಚೆಯಲ್ಲಿದೆ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬ ಬಗ್ಗೆ ಆರಂಭದಿಂದಲೂ ಗೊಂದಲ ಇರಲಿಲ್ಲ. ಚುನಾವಣೆ ಘೋಷಣೆಗೂ ಮುನ್ನವೇ ಭೈರತಿ ಸುರೇಶ್, ಕ್ಷೇತ್ರ ಸುತ್ತಾಡಿ ಮತದಾರರನ್ನು ಓಲೈಸಿದ್ದಾರೆ. ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಮೂಲಕ ಐದು ವರ್ಷಗಳ ತಮ್ಮ ಸಾಧನೆಯನ್ನು ಕರಪತ್ರಗಳಲ್ಲಿ ಛಾಪಿಸಿ, ಹಂಚಿ ಮನಸ್ಸಿನಲ್ಲಿ ಮುದ್ರೆಯೊತ್ತಿದ್ದಾರೆ. ಅವರ ಪರ ಪತ್ನಿ ಪದ್ಮಾವತಿ, ಪುತ್ರ ಸಂಜಯ್ ಪ್ರಚಾರಕ್ಕಿಳಿದಿದ್ದಾರೆ. ಬಿಜೆಪಿ ಭದ್ರ ಕೋಟೆಯಾಗಿದ್ದ ಈ ಕ್ಷೇತ್ರವನ್ನು 2018ರಲ್ಲಿ ಕಾಂಗ್ರೆಸ್ ತೆಕ್ಕೆಗೆ ತಂದಿರುವ ಸುರೇಶ್, ಈ ಬಾರಿ ದಾಖಲೆಯ ಮತಗಳಿಂದ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
‘ನಾವು ಮಾಡುವ ಕೆಲಸ ನಮ್ಮನ್ನು ಕೈಹಿಡಿಯುತ್ತದೆ ಎಂಬುದಕ್ಕೆ ಎಲ್ಲಡೆ ದೊರೆಯುತ್ತಿರುವ ಅಭೂತಪೂರ್ವ ಬೆಂಬಲ, ಜನಸ್ಪಂದನೆಯೇ ಸಾಕ್ಷಿ. ಕಳೆದ ಐದು ವರ್ಷಗಳಲ್ಲಿ ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿ ಶೇ 90 ಅಭಿವೃದ್ಧಿ ಕಾರ್ಯಗಳಾಗಿವೆ. ಈ ಬಾರಿ ಆಯ್ಕೆಯಾದರೆ ಅಭಿವೃದ್ಧಿ ಕಾರ್ಯಗಳ ಜೊತೆಗೆ, ಹೆಬ್ಬಾಳ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ ಎಂಬ ಭರವಸೆಯಲ್ಲಿದ್ದಾರೆ.
ಇನ್ನು, ಹಿಂದೆ ಕ್ಷೇತ್ರ ಗೆದ್ದು ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೆಸರು ಕ್ಷೇತ್ರದಲ್ಲಿ ಮನೆಮಾತು. ಅವರೇ ಬಿಜೆಪಿ ಅಭ್ಯರ್ಥಿ ಆಗಲಿದ್ದಾರೆಂದು ಅನೇಕರು ಭಾವಿಸಿದ್ದರು. ಭೈರತಿ ಸುರೇಶ್ ಮತ್ತು ಕೆ ಸುಬ್ರಹ್ಮಣ್ಯ ನಾಯ್ಡು ನಡುವಿನ ಗುದ್ದಾಟವನ್ನು ಜನ ನಿರೀಕ್ಷಿಸಿದ್ದರು. ಆದರೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಅವರ ಮಗನಿಗೆ ಬಿಜೆಪಿ ಟಿಕೆಟ್ ನೀಡಿರುವುದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ. ಆ ಅಸಮಾಧಾನವನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದೇವೆ ಎಂದು ಬಿಜೆಪಿ ಬೆಂಬಲಿಗರು ಹೇಳುತ್ತಾರೆ.
ಹಾಗೆ ನೋಡಿದರೆ, ಜೆಡಿಎಸ್ ಜಾಣ್ಮೆಯ ನಡೆ ಇಟ್ಟಿದೆ. ಕ್ಷೇತ್ರದಲ್ಲಿ ಪ್ರಾಬಲ್ಯವಿರುವ ಮುಸ್ಲಿಂ ಮತದಾರರ ಮೇಲೆ ಕಣ್ಣಿಟ್ಟು ವಿದ್ಯಾವಂತ, ವೃತ್ತಿಯಲ್ಲಿ ವಕೀಲರಾಗಿರುವ ಸಯ್ಯದ್ ಮೊಹಿದ್ ಅಲ್ತಾಫ್ ಅವರನ್ನು ಕಣಕ್ಕಿಳಿಸಿದೆ. ಮನೆ, ಮನೆ ಪ್ರಚಾರದಲ್ಲಿ ಸಕ್ರಿಯವಾಗಿರುವ ಅವರು, ಪಕ್ಷದ ‘ಪಂಚರತ್ನ’ ಯೋಜನೆಗಳು ಮತ ತಂದುಕೊಡಬಲ್ಲದು ಎಂಬ ವಿಶ್ವಾಸದಲ್ಲಿದ್ದಾರೆ.
2008ರಲ್ಲಿ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ಸಮುದಾಯದ ‘ನಾಯ್ಡು, 2013ರಲ್ಲಿ ಬಿಜೆಪಿಯ ಆರ್. ಜಗದೀಶ್ ಕುಮಾರ್ ಇಲ್ಲಿ ಅರಿಸಿ ಬಂದಿದ್ದರು. 2015ರಲ್ಲಿ ಹೃದಯಾಘಾತದಿಂದ ಜಗದೀಶ್ ಕುಮಾರ್ ನಿಧನರಾಗಿದ್ದರಿಂದ 2016ರಲ್ಲಿ ಉಪ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಸಿಕೆ ಜಾಫರ್ ಷರೀಫ್ ಅವರ ಮೊಮ್ಮಗ ಅಬ್ದುಲ್ ರಹಮಾನ್ ಷರೀಫ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿತ್ತು. ಆದರೆ, ಮತದಾರರು ಅವರ ಕೈಹಿಡಿಯಲಿಲ್ಲ. 19 ಸಾವಿರ ಮತಗಳ ಅಂತರದಿಂದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಮೇಲುಗೈ ಸಾಧಿಸಿದ್ದರು. ಅದೇ ಗೆಲುವಿನ ಉಮೇದಿನಲ್ಲಿ 2018 ರಲ್ಲಿ ಕಣಕ್ಕಿಳಿದಿದ್ದರು. ಅಬ್ದುಲ್ ರೆಹಮಾನ್ ಷರೀಫ್ ಅವರ ಬದಲು ಕುರುಬ ಸಮುದಾಯದ ಭೈರತಿ ಸುರೇಶ್ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ತಮ್ಮವರಿಗೆ ಟಿಕೆಟ್ ನೀಡಿಲ್ಲ ಎಂಬ ಮುನಿಸಿನ ನಡುವೆಯೂ ಮುಸ್ಲಿಂ ಮತಗಳು ಸುರೇಶ್ ಕೈಹಿಡಿದ ಕಾರಣ ಅವರು ಸುಲಭವಾಗಿ ದಡ ಸೇರಿದ್ದರು.