ಟಿಕೆಟ್ ಸಿಗದೇ ಬಂಡೆದ್ದು ಬೇರೆ-ಬೇರೆ ಪಕ್ಷಕ್ಕೆ ಹೋಗಿದ್ದ ಜಂಪಿಂಗ್ ಸ್ಟಾರ್ಸ್ ಗೆದ್ರಾ? ಸೋತ್ರಾ? ಇಲ್ಲಿದೆ ವಿವರ
ಕಾಂಗ್ರೆಸ್ ಭರ್ಜರಿ ಜಯಬೇರಿ ಸಾಧಿಸಿದೆ. ಆದ್ರೆ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಿಟ್ಟು ಬಂದವರು ಗೆದ್ರಾ? ಅಥವಾ ಕಾಂಗ್ರೆಸ್‌ನಿಂದ ಬಂಡೆದ್ದು ಹೋದವರ ಕತೆ ಏನಾಯ್ತು? ತೆನೆ ಹೊತ್ತ ಮಹಿಳೆಯ ಕೈ ಹಿಡಿದವರ ಕತೆ ಏನಾಯ್ತು? ಟಿಕೆಟ್ ಹಂಚಿಕೆ ವೇಳೆ ಬಂಡಾಯ ಎದ್ದು ಬಂಡಾಯ ನಿಂತವರ ರಿಸಲ್ಟ್ ಪಾಸ್ ಮಾಡಿದ್ರಾ.. ಇಲ್ಲಿದೆ ನೋಡಿ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ.
ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದುಕೊಮಡಿದೆ. ಇದರ ಮಧ್ಯೆ ಬಂಡೆದ್ದವರ ಹೋರಾಟ. ಅಖಾಡದಲ್ಲಿ ಪಕ್ಷ ತೊರೆದು ಮತ್ತೊಂದು ಪಕ್ಷ ಸೇರಿದವರ ಆರ್ಭಟ. ಕೆಲವರು ಪಕ್ಷ ತೊರೆದು ಭವಿಷ್ಯ ರೂಪಿಸಿಕೊಂಡಿದ್ರೆ, ಮತ್ತೆ ಕೆಲವರ ಭವಿಷ್ಯ ಡೋಲಾಯಮಾನವಾಗಿದೆ. ಬಿಜೆಪಿಯಿಂದ ಇತರೆ ಪಕ್ಷಕ್ಕೆ ಹೋದವರು, ಕಾಂಗ್ರೆಸ್‌ನಿಂದ ಇತರೆ ಪಕ್ಷ ಸೇರಿದವರು, ತೆನೆ ಇಳಿಸಿ ಅಖಾಡದಲ್ಲಿ ಹೋರಾಟ ನಡೆಸಿದವರಲ್ಲಿ ಕೆಲವರು ಗೆದ್ದು ಬೀಗಿದ್ರೆ, ಹಲವರು ನೆಲಕಚ್ಚಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕ್ಯಾಂಡಿಡೇಟ್ ಅಂದ್ರೆ ಅದು ಜಗದೀಶ್ ಶೆಟ್ಟರ್, ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನಿಂದ ಬಿಜೆಪಿ ಟಿಕೆಟ್ ಸಿಗದ್ದಕ್ಕೆ ಬಂಡೆದ್ದು ಕಾಂಗ್ರೆಸ್ ಸೇರಿದ್ದ ಶೆಟ್ಟರ್, ಸಂಚಲನ ಎಬ್ಬಿಸಿದ್ದರು. ಆದ್ರೆ, ಮಹೇಶ್ ಟೆಂಗಿನಕಾಯಿ ವಿರುದ್ಧ ಗೆಲುವಿನ ಕಾಯಿ ಒಡೆಯಲಾಗದೇ ಸೋಲುಂಡಿದ್ದಾರೆ. ಇನ್ನೂ ಅಥಣಿಯಲ್ಲಿ ಕಹಳೆ ಊದಿ, ರಮೇಶ್ ಜಾರಕಿಹೊಳಿ ವಿರುದ್ಧ ತೊಡೆ ತಟ್ಟಿದ್ದ ಲಕ್ಷ್ಮಣ ಸವದಿ, ಬಿಜೆಪಿಯಿಂದ ಕಾಂಗ್ರೆಸ್ ಸೇರಿ ವಿಜಯಪತಾಕೆ ಹಾರಿಸಿದ್ದಾರೆ.
ವಲಸೆ ಹಕ್ಕಿಗಳ ಭವಿಷ್ಯ ಏನಾಯ್ತು?
ಇನ್ನೂ ಬಿಎಸ್‌ವೈ ಆಪ್ತ ಎನ್.ಆರ್ ಸಂತೋಷ್ ಸೆಡ್ಡು ಹೊಡೆದು ಜೆಡಿಎಸ್ ಸೇರಿದ್ರು. ಆದ್ರೆ, ಆರಸೀಕೆರೆಯಲ್ಲಿ ಸೋಲು ಅನುಭವಿಸಿದ್ದಾರೆ. ಆದ್ರೆ, ಇತ್ತ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ಯು.ಬಿ ಬಣಕಾರ್ ಹಿರೇಕೆರೂರಿನಲ್ಲಿ ಬಿ.ಸಿ ಪಾಟೀಲ್ ವಿರುದ್ಧ ಗೆದ್ದಿದ್ದಾರೆ. ಹಾಗೆಯೇ ವಿಜಯನಗರದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದ್ದ ಹೆಚ್.ಆರ್ ಗವಿಯಪ್ಪ ಆನಂದ್ ಸಿಂಗ್ ಪುತ್ರನ ವಿರುದ್ಧ ಜಯಬೇರಿ ಬಾರಿಸಿದ್ದಾರೆ. ಅಂತೆಯೇ ಮೊಳಕಾಲ್ಮೂರು ಯುದ್ಧದಲ್ಲಿ ಬಿಜೆಪಿಗೆ ಡಿಚ್ಚಿ ಕೊಟ್ಟು ಕಾಂಗ್ರೆಸ್ ಸೇರಿದ್ದ ಎನ್.ವೈ ಗೋಪಾಲಕೃಷ್ಣ ಗೆಲುವು ಸಾಧಿಸಿದ್ದಾರೆ. ಹಾಗೆಯೇ ಇತ್ತ ಚಿಕ್ಕಮಗಳೂರಲ್ಲಿ ಸಿ.ಟಿ ರವಿ ಆಪ್ತ ಹೆಚ್.ಡಿ ತಮ್ಮಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ಬೀಗಿದ್ದಾರೆ. ಇನ್ನೂ ಎ. ಮಂಜು ಸಹ ಅರಕಲಗೂಡಿನಲ್ಲಿ ಕಾಂಗ್ರೆಸ್,ಬಿಜೆಪಿ ಎಂದು ಸುತ್ತಾಡಿ ಕೊನೆಗೆ ಜೆಡಿಎಸ್‌ನಿಂದ ಗೆದ್ದಿದ್ದಾರೆ.
ಇಡೀ ರಾಜ್ಯದಲ್ಲಿ ಸದ್ದು ಮಾಡಿದ್ದ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಬಂಡೆದ್ದು ಪಕ್ಷೇತರರಾಗಿ ಸ್ಪರ್ದಿಸಿದ್ದ ಅರುಣ್ ಕುಮಾರ್ ಪುತ್ತಿಲ ಸೋಲಿತ್ತಾರೆ. ಹಾಗೆಯೇ ಹೊಸದುರ್ಗದಲ್ಲೂ ಬಂಡೆದ್ದಿದ್ದ ಗೂಳಿಹಟ್ಟಿ ಶೇಖರ್, ಹಾಗೆಯೇ ಮೂಡಿಗೆರೆಯಲ್ಲಿ ಬಿಜೆಪಿಯಿಂದ ಜೆಡಿಎಸ್ ಸೇರಿದ್ದ ಎಂ.ಪಿ ಕುಮಾರಸ್ವಾಮಿ ನೆಲಕಚ್ಚಿದ್ದಾರೆ.
ಇನ್ನೂ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ, ಪುಟ್ಟಣ್ಣ ರಾಜಾಜಿನಗರದಲ್ಲಿ ಸೋಲನುಭವಿಸಿದ್ದಾರೆ. ಗುರುಮಿಠಕಲ್‌ನಲ್ಲಿ ತೊಡೆ ತಟ್ಟಿದ್ದ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್‌ಗೆ ಬಂದು ಸೋತಿದ್ದಾರೆ. ಹಾಗೆಯೇ ಹಗರಿ ಬೊಮ್ಮನಹಳ್ಳಿಯಲ್ಲಿ ಬಿಜೆಪಿಯಿಂದ ಜೆಿಡಿಎಸ್‌ಗೆ ಸೇರಿದ್ದ ನೇಮಿರಾಜ್ ನಾಯ್ಕ್, ಭೀಮನಾಯ್ಕ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್‌ಗೆ ‘ಕೈ’ ಕೊಟ್ಟವರು ಗೆದ್ರಾ? ಸೋತ್ರಾ?
ಬಿಜೆಪಿಯಿಂದಷ್ಟೇ ಅಲ್ಲ, ಕಾಂಗ್ರೆಸ್‌ನಿಂದಲೂ ಸೆಡ್ಡು ಹೊಡೆದು ಪಕ್ಷ ತೊರೆದ್ದವರಲ್ಲಿ ಜಗಳೂರಲ್ಲಿ ಬಂಡಾಯ ಅಭ್ಯರ್ಥಿ ರಾಜೇಶ್ ಸೋತಿದ್ದಾರೆ. ಆದ್ರೆ, ಇತ್ತ ಹರಪನಹಳ್ಳಿಯಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದ ಲತಾ ಮಲ್ಲಿಕಾರ್ಜುನ ಗೆದ್ದು ಬೀಗಿದ್ದಾರೆ. ಆದ್ರೆ, ಪುಲಿಕೇಶಿನಗರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಿಂತಿದ್ದ ಅಖಂಡ ಶ್ರೀನಿವಾಸ ಮೂರ್ತಿ ಮಕಾಡೆ ಮಲಗಿದ್ದಾರೆ. ಇನ್ನೂ ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಇಡೀ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಸೋಲಿಸ್ತೀನಿ ಎಂದಿದ್ದ ರಘು ಆಚಾರ್ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದಾರೆ. ಇತ್ತ ಮಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮೊಹಿದ್ದೀನ್ ಬಾವಾ ಸಹ ಸೋತಿದ್ದಾರೆ.
‘ತೆನೆ’ ಇಳಿಸಿ ಹೋದ ರಣಕಲಿಗಳ ಭವಿಷ್ಯ ಭದ್ರವಾಯ್ತಾ?
ಜೆಡಿಎಸ್ ವಿರುದ್ದ ಅನುದಾನ ವಿಚಾರವಾಗಿ ಬಹಿರಂಗವಾಗಿಯೇ ತೊಡೆತಟ್ಟಿದ್ದ ಶಿವಲಿಂಗೇಗೌಡ, ತೆನೆ ಇಳಿಸಿ, ಕಾಂಗ್ರೆಸ್‌ಗೆ ಹೋಗಿ ಗೆಲುವಿನ ಪಾದಾರ್ಪಣೆ ಮಾಡಿದ್ದಾರೆ. ಆದ್ರೆ, ಜೆಡಿಎಸ್ ತೊರೆದು, ಕಾಂಗ್ರೆಸ್‌ಗೆ ಹೋಗಿ, ವಾಪಸ್ ಜೆಡಿಎಸ್‌ಗೆ ಬಂದ್ರೂ ವೈಎಸ್‌ವೈ ದತ್ತಾ ಕಡೂರಲ್ಲಿ ಸೋತಿದ್ದಾರೆ. ಇನ್ನೂ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿದ್ದ ಎಸ್.ಆರ್ ಶ್ರೀನಿವಾಸ್ ಗುಬ್ಬಿಯಲ್ಲಿ ವಿಜಯಪತಾಕೆ ಹಾರಿಸಿದ್ದಾರೆ.
ಭಾಸ್ಕರ್ ರಾವ್ಗೆ ಸೋಲು
ಇನ್ನು ಐಪಿಎಸ್ ಹುದ್ದೆಗೆ ರಾಜೀನಾಮೆ ನೀ ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಭಾಸ್ಕರ್ ರಾವ್ ಅವರು ಚುನಾವಣೆ ಸಮಯದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಬಸನಗುಡಿ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದ ಭಾಸ್ಕರ್ ರಾವ್ ಅವರಿಗೆ ಚಾಮರಾಜಪೇಟೆ ಟಿಕೆಟ್ ನೀಡಿತ್ತು. ಆದ್ರೆ, ಚುನಾವಣೆಯಲ್ಲಿ ಕಾಂಗ್ರೆಸ್ನ ಜಮೀರ್ ಅಹಮ್ಮದ್ ಖಾನ್ ಅವರ ವಿರುದ್ಧ ಸೋಲು ಕಂಡಿದ್ದಾರೆ.
ಒಟ್ಟಿನಲ್ಲಿ ಪಕ್ಷದಿಂದ ಪಕ್ಷಕ್ಕೆ ಜಂಪ್ ಮಾಡಿದ್ದವರ ಕೆಲವರ ಭವಿಷ್ಯ ಭದ್ರವಾಗಿದ್ರೆ, ಮತ್ತೆ ಕೆಲವರ ಭವಿಷ್ಯ ಛಿದ್ರವಾಗಿದೆ.