Congress Manifesto 2023: ಈ ಬಾರಿ ಚುನಾವಣೆಯಲ್ಲಿ ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್, ಶೇ.50ರಿಂದ ಶೇ.75ಕ್ಕೇರಿಸುವ ಭರವಸೆ

|

Updated on: May 02, 2023 | 11:09 AM

ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಚುನಾವಣೆಗೆ ಮೀಸಲಾತಿ ಅಸ್ತ್ರವನ್ನು ಪ್ರಯೋಗಿಸಿದೆ.

Congress Manifesto 2023: ಈ ಬಾರಿ ಚುನಾವಣೆಯಲ್ಲಿ ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್, ಶೇ.50ರಿಂದ ಶೇ.75ಕ್ಕೇರಿಸುವ ಭರವಸೆ
Follow us on

ಬೆಂಗಳೂರು: ಕಾಂಗ್ರೆಸ್​ ಈಗಾಗಲೇ ಆರು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿರುವ ಕಾಂಗ್ರೆಸ್‌, ಇನ್ನೂ ಹತ್ತು ಹಲವು ಭರವಸೆಗಳನ್ನು ಒಳಗೊಂಡ ‘ಸರ್ವ ಜನಾಂಗದ ಶಾಂತಿಯ ತೋಟ ಇದುವೆ ಕಾಂಗ್ರೆಸ್​ ಬದ್ಧತೆ’ ಎನ್ನುವ ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಇಂದು(ಮೇ 02) ಬಿಡುಗಡೆ ಮಾಡಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಪ್ರದೇಶ ಹಾಗೂ ಬೆಂಗಳೂರು ನಗರಗಳಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ಕರ್ನಾಟಕದ ಜನತೆಗೆ ಹಲವು ಭರಪೂರ ಕೊಡುಗೆಗಳ ಭರವಸೆ ನೀಡಿದೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್​, ಈಗಿರುವ ಒಟ್ಟಾರೆ ಮೀಸಲಾತಿಯನ್ನು ಶೇ.50ರಿಂದ ಶೇ75ಕ್ಕೆ ಹೆಚ್ಚಿಸುವುದಾಗಿ ಮಹತ್ವದ ಭರಸವೆ ನೀಡಿದೆ.

ಇದನ್ನೂ ಓದಿ: Karnataka Congress Manifesto: ಕಾಂಗ್ರೆಸ್​ನ ಪ್ರಣಾಳಿಕೆ ಬಿಡುಗಡೆ, ಕರ್ನಾಟಕಕ್ಕೆ ಏನೆಲ್ಲಾ ಭರವಸೆ?

ಹೌದು….ಎಸ್.ಸಿ ಎಸ್.ಟಿ ಮೀಸಲಾತಿ ಸೇರಿದಂತೆ ಶೇ.50 ರಿಂದ ಶೇ.75ಕ್ಕೆ ಏರಿಕೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್​ ತನ್ನ ಸರ್ವಜನಾಂಗದ ಶಾಂತಿಯ ತೋಟ ವಾಗ್ದಾನಗಳ ಪಟ್ಟಿಯಲ್ಲಿ ತಿಳಿಸಿದೆ. ಎಸ್.ಸಿ ಮೀಸಲಾತಿ ಶೇ.17ಕ್ಕೆ ಏರಿಕೆ, ಎಸ್.ಟಿ ಮೀಸಲಾತಿ ಶೇ. 7ಕ್ಕೆ ಏರಿಕೆ ಮಾಡುವುದಾಗಿ ಹೇಳಿದೆ. ಅಲ್ಲದೇ ಅಲ್ಪ ಸಂಖ್ಯಾತರಿಗೆ ಶೇ.4 ರ ಮೀಸಲಾತಿ ಮರು ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದೆ.

ಇತ್ತೀಚೆಗೆಷ್ಟೇ ಕರ್ನಾಟಕದಲ್ಲಿ ಜಾತಿ ಮೀಸಲಾತಿ ಹೋರಾಟಗಳೇ ಸದ್ದು ಮಾಡಿದ್ದವು. ಪಂಚಮಸಾಲಿ, ಕುರುಬ, ಒಕ್ಕಲಿಗ ಸಮುದಾಯಗಳುಸೇರಿ ಹಲವು ಸಮುದಾಯಗಳು ಮೀಸಲಾತಿ ವಿಚಾರವಾಗಿ ಬೀದಿಗಿಳಿದಿದ್ದವು. ಎಸ್‌ಸಿ/ಎಸ್‌ಟಿ ಸಮುದಾಯಗಳು ಕೂಡ ಮೀಸಲು ಹೆಚ್ಚಳಕ್ಕೆ ಹೋರಾಟ ಮಾಡಿ ಭಾಗಶಃ ಯಶಸ್ವಿಯಾಗಿವೆ. ಸಾಲು ಸಾಲು ಮೀಸಲಾತಿ ಹೋರಾಟಗಳಿಂದ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಇದರ ಮಧ್ಯೆ ಇದೀಗ ಕಾಂಗ್ರೆಸ್, ಈ ವಿಧಾನಸಭೆ ಚುನಾವಣೆಯಲ್ಲಿ ಈ ಮೂಲಕ ಕಾಂಗ್ರೆಸ್​ ಈ ಬಾರಿಯ ಚುನಾವಣೆಗೆ ಮೀಸಲಾತಿ ಅಸ್ತ್ರ ಪ್ರಯೋಗಿಸಿದೆ.

ಈಗಿರುವ ಒಟ್ಟಾರೆ ಮೀಸಲಾತಿ  ಶೇ 50ರಿಂದ ಹೇಗೆ ಹೆಚ್ಚಿಸಬಹುದು?

ಶೇ.50ರಷ್ಟು ಮೀಸಲು ಹೆಚ್ಚಿಸಬೇಕೆಂದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿದೆ. ಇದಕ್ಕಾಗಿ ಸಂಸತ್‌ನ ಎರಡು ಸದನಗಳಲ್ಲಿ ಮಸೂದೆ ಪಾಸ್‌ ಮಾಡಿಕೊಂಡು ಬಳಿಕ, ಶೇ.50ಕ್ಕೂ ಹೆಚ್ಚು ರಾಜ್ಯಗಳು ಒಪ್ಪಿಗೆ ಸೂಚಿಸಬೇಕಿದೆ. ಬಳಿಕ ರಾಷ್ಟ್ರಪತಿಗಳ ಅಂಕಿತ ಬೇಕು. ಇಷ್ಟೊಂದು ಸಂಕೀರ್ಣ ಪ್ರಕ್ರಿಯೆ ಮುಗಿದ ಬಳಿಕ ಸಂವಿಧಾನದ ತಿದ್ದುಪಡಿಯಾಗಿ ಮೀಸಲಾತಿ ಹೆಚ್ಚಳವಾಗುತ್ತದೆ.

ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಎಷ್ಟಿದೆ ಎನ್ನುವುದನ್ನು ನೋಡುವುದಾದರೆ ಕರ್ನಾಟಕ – 50, ಮಹಾರಾಷ್ಟ್ರ – 73, ತಮಿಳುನಾಡು – 69. ತೆಲಂಗಾಣ – 62. ಕೇರಳ – 50. ಆಂಧ್ರ ಪ್ರದೇಶ – 50ರಷ್ಟು ಒಟ್ಟು ಮೀಸಲಾತಿ ಇದೆ. ಮೀಸಲು ಪ್ರಮಾಣ ಶೇ.50 ಅನ್ನು ಮೀರಬಾರದು ಎಂಬ ಸುಪ್ರೀಂ ಕೋರ್ಟ್ ಕಟ್ಟಪ್ಪಣೆ ಇರುವುದರಿಂದ ಸರ್ಕಾರಗಳು ಶೇ.50ರಷ್ಟು ಮೀಸಲಾತಿಯಲ್ಲೇ ಎಲ್ಲ ಸಮುದಾಯಗಳ ಬೇಡಿಕೆಯನ್ನು ಈಡೇರಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಒಂದು ಸಮುದಾಯದ ಮೀಸಲಾತಿ ಹೆಚ್ಚಿಸಿದರೆ ಮತ್ತೊಂದು ಜಾತಿಯ ಮೀಸಲು ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.

ಮೀಸಲಾತಿಯಲ್ಲಿ ಬದಲಾವಣೆ ಮಾಡಿದ್ದ ಸರ್ಕಾರ

ಇನ್ನು ಇತ್ತೀಚೆಗಷ್ಟೇ ಆಡಳಿತರೂಢ ಬಿಜೆಪಿ ಸರ್ಕಾರ ಕೆಲ ಸಮುದಾಯಗಳ ಮೀಸಲಾತಿಯಲ್ಲಿ ಬದಲಾವಣೆ ಮಾಡಿತ್ತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ. 15 ರಿಂದ ಶೇ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ.7ಕ್ಕೆ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿತ್ತು. ಇನ್ನುಅಲ್ಪ ಸಂಖ್ಯಾತರಿಗೆ ಈ ಹಿಂದೆ 2ಬಿಯಡಿ ನೀಡುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಸೇರಿಸಲು ನಿರ್ಧರಿಸಲಾಗಿತ್ತು. ಒಕ್ಕಲಿಗ ಸಮುದಾಯಕ್ಕೆ ಮತ್ತು ಲಿಂಗಾಯಿತರಿಗೆ 2ಸಿ ಮತ್ತು 2ಡಿಯಡಿ ನೀಡುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇಕಡ 4ರಿಂದ 6ಕ್ಕೆ ಹಾಗೂ ಶೇಕಡ 5ರಿಂದ 7ಕ್ಕೆ ಏರಿಕೆ ಮಾಡಲಾಗಿದ್ದು, ಈ ಬಗ್ಗೆ ಕೋರ್ಟ್​ನಲ್ಲಿ ವಿಚಾರಣೆಯಲ್ಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ