Ramanagara Assembly Election: ರಾಮನಗರದಲ್ಲಿ ಜೆಡಿಎಸ್ಯೇ ಅಧಿಪತಿ, ಅದೃಷ್ಟ ಪರೀಕ್ಷೆಗಿಳಿದ ನಿಖಿಲ್ ಕುಮಾರಸ್ವಾಮಿ
ರಾಮನಗರ ಜೆಡಿಎಸ್‌ನ ಭದ್ರಕೋಟೆ ಮಾತ್ರವಲ್ಲದೇ, ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಜನ್ಮ ನೀಡಿದ ಕ್ಷೇತ್ರ. ಈ ಬಾರಿ ರಾಮನಗರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ದೇವೇಗೌಡರ ಮೊಮ್ಮಗ, ಕುಮಾರಸ್ವಾಮಿ ಅವರ ಸುಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದಾರೆ.
ರಾಮನಗರ: ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ರಾಮನಗರ(Ramanagara Assembly Constituency), ಸಿಲ್ಕ್ ಹಾಗೂ ಮಿಲ್ಕ್ ಗೆ ಫೇಮಸ್. ರಾಮನಗರದಲ್ಲಿ ಅತೀ ಹೆಚ್ಚು ರೇಷ್ಮೆ ಬೆಳೆಯಲಾಗುತ್ತದೆ. ಆನಂತರ ಮಾವು ಬೆಳೆಯನ್ನ ಬೆಳೆಯಲಾಗುತ್ತದೆ. ದೇಶದಲ್ಲಿಯೇ ಅತ್ಯಂತ ದೊಡ್ಡದಾದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ರಾಮನಗರದಲ್ಲಿದ್ದು ಇದು ಹಳೇ ಮೈಸೂರಿನ ಹೆಬ್ಬಾಗಿಲು. ಜೆಡಿಎಸ್‌ನ ಭದ್ರಕೋಟೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಗೆ ಪೈಪೋಟಿ ನೀಡುತ್ತಿದ್ರೆ, ಕಮಲ ಅರಳಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಮತದಾನಕ್ಕೆ ಸಮೀಪಿಸುತ್ತಿದ್ದಂತೆ ಬಿಜೆಪಿ ಕೇಂದ್ರ ನಾಯಕರು ರಾಮನಗರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಮತ್ತೊಂದೆಡೆ ಆರೋಗ್ಯ ಸಮಸ್ಯೆಯ ನಡುವೆಯೇ ಹೆಚ್ಡಿ ದೇವೇಗೌಡರು ಕೂಡ ಮತಬೇಟೆ ನಡೆಸಿದ್ದರು. ಅಂದಹಾಗೆ ಚುನಾವಣಾ ಕದನ ಕುತೂಹಲ ಹೆಚ್ಚಿಸಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಗಳೇ ಹೀರೊಗಳು. ಈವರೆಗೂ ಪಕ್ಷದ ಆಧಾರದ ಮೇಲೆ ನಡೆಯುತ್ತಿದ್ದ ಚುನಾವಣೆ ಈ ಬಾರಿ ಬದಲಾಗಿದೆ. ಜೆಡಿಎಸ್, ಬಿಜೆಪಿಯಿಂದ ಹೊಸ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದಾರೆ.
ರಾಮನಗರ ಜೆಡಿಎಸ್‌ನ ಭದ್ರಕೋಟೆ ಮಾತ್ರವಲ್ಲದೇ, ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಜನ್ಮ ನೀಡಿದ ಕ್ಷೇತ್ರ. ಈ ಬಾರಿ ರಾಮನಗರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ದೇವೇಗೌಡರ ಮೊಮ್ಮಗ, ಕುಮಾರಸ್ವಾಮಿ ಅವರ ಸುಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದಾರೆ. 1994ರಿಂದ ರಾಮನಗರ ಕ್ಷೇತ್ರ ದೇವೇಗೌಡ ಕುಟುಂದ ಭದ್ರಕೋಟೆ. 1994ರಲ್ಲಿ ದೇವೇಗೌಡರು ರಾಮನಗರದಿಂದಲೇ ಸ್ವರ್ಧೆ ಮಾಡಿ ಗೆಲುವು ಸಾಧಿಸಿ ಮುಖ್ಯಮಂತ್ರಿ ಸಹಾ ಆಗಿದ್ದರು. ನಂತರ ಇಲ್ಲಿಂದಲೇ ಪಿಎಂ ಸಹಾ ಆಗಿದ್ದರು. ಬಳಿಕ 1999ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ 2004ರಿಂದ ನಿರಂತರವಾಗಿ ಜೆಡಿಎಸ್ ಗೆಲವು ಸಾಧಿಸುತ್ತಾ ಬಂದಿದೆ. 2004 ರಲ್ಲಿ ಗೆಲುವು ಸಾಧಿಸಿದ್ದ ಕುಮಾರಸ್ವಾಮಿ 2006ರಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ರು. ನಂತರ 2018ರಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಹೆಚ್ ಡಿ ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲೂ ಗೆಲವು ಸಾಧಿಸಿ, ನಂತರ ಚನ್ನಪಟ್ಟಣ ಕ್ಷೇತ್ರವನ್ನ ಉಳಿಸಿಕೊಂಡು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದರು. ನಂತರ ಸಿಎಂ ಆಗಿದ್ದರು. ಉಪಚುನಾವಣೆಯಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸ್ವರ್ಧೆ ಮಾಡಿದ್ದರು.
ಇದನ್ನೂ ಓದಿ: ನನ್ನನ್ನು ಸೋಲಿಸಲು ರಾಮನಗರದಲ್ಲಿ ಬಿಜೆಪಿ ಕಾಂಗ್ರೆಸ್ ಒಳಒಪ್ಪಂದ: ಕುಮಾರಸ್ವಾಮಿ ಆರೋಪ
ಅನಿತಾ ಪರ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಚಾರ ಮಾಡಿತ್ತು. ಕಾಂಗ್ರೆಸ್ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನ ಹಾಕಿರಲಿಲ್ಲ. ಇನ್ನು ಬಿಜೆಪಿಯಿಂದ ಸ್ವರ್ಧೆ ಮಾಡಿದ್ದ ಚಂದ್ರಶೇಖರ್ ರನ್ನ ಅಪರೇಷನ್ ಕಾಂಗ್ರೆಸ್ ಮಾಡಿ ಕದನ ಕಣದಿಂದ ಹಿಂದೆ ಸರಿಯುವಂತೆ ಸಹಾ ಮಾಡಲಾಗಿತ್ತು. ಹೀಗಾಗಿ ಲಕ್ಷ ಮತಗಳಿಂದ ಅನಿತಾ ಕುಮಾರಸ್ವಾಮಿ ಗೆಲವು ಸಾಧಿಸಿದ್ದರು. ಇನ್ನು ಈ ಬಾರಿ ತಮ್ಮ ಮಗನಿಗೆ ಕ್ಷೇತ್ರವನ್ನ ಅನಿತಾ ಕುಮಾರಸ್ವಾಮಿ ಬಿಟ್ಟು ಕೊಟ್ಟಿದ್ದಾರೆ. ಹೀಗಾಗಿ 2023ರ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕಣಕ್ಕೆ ಇಳಿಯುತ್ತಿದ್ದಾರೆ.
ಕಾಂಗ್ರೆಸ್ ನಿಂದ ಇಕ್ಬಾಲ್ ಹುಸೇನ್ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರೇ ನಿರ್ಣಯಕ. ಒಕ್ಕಲಿಗ ಮತಗಳೇ ಹೆಚ್ಚಿದ್ದು, ಒಕ್ಕಲಿಗರ ಒಲವು ಯಾರ ಕಡೆ ಇರುತ್ತದೆ. ಆ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ.
ರಾಮನಗರ ಕ್ಷೇತ್ರದ ಜಾತಿ ಲೆಕ್ಕಾಚಾರ
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಈ ಪೈಕಿ ಒಕ್ಕಲಿಗ ಮತಗಳೇ ಒಂದು ಲಕ್ಷದಷ್ಟಿದ್ದು, ಅವರೇ ನಿರ್ಣಾಯಕ. ಇದಲ್ಲದೆ ದಲಿತ ಮತಗಳು 45 ಸಾವಿರದಷ್ಟಿದ್ದರೆ, ಮುಸ್ಲಿಮರ ಮತಗಳು 35 ಸಾವಿರ ಇದೆ. ಹೀಗಾಗಿ, ಇವರನ್ನು ಗೇಮ್ ಚೇಂಜರ್ ಎಂದೇ ಹೇಳಬಹುದು. ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಲು ಕಾರಣ ಒಕ್ಕಲಿಗ ಮತಗಳು. ಈ ಹಿಂದೆ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಒಕ್ಕಲಿಗ ಮತಗಳು ಇದೀಗ ಜೆಡಿಎಸ್ ಕೈ ಹಿಡಿದಿವೆ. ಇಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲವೇ ಇಲ್ಲ ಎಂಬ ಪರಿಸ್ಥಿತಿ ಇದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ್ ಹಾಗೂ ಸಿ. ಪಿ. ಯೋಗೇಶ್ವರ್ ಇಬ್ಬರೂ ಸೇರಿ ರಾಮನಗರದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಲು ಹರ ಸಾಹಸ ನಡೆಸ್ತಿದ್ದಾರೆ. ಅಭಿವೃದ್ದಿಯ ಮೂಲಕ ಜನಮನ ಗೆಲ್ಲಲು ಯತ್ನಿಸುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ಪಕ್ಷಕ್ಕೆ ಮೇಕೆದಾಟು ಪಾದಯಾತ್ರೆ ಅಸ್ತ್ರವಾಗಿದ್ದರೆ, ಜೆಡಿಎಸ್ ಕೂಡಾ ಜಲಧಾರೆ ಅಭಿಯಾನದ ಮೂಲಕ ಜನ ಮನ ಗೆಲ್ಲಲು ಯತ್ನಿಸಿದೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್‌ನ ಯಾತ್ರೆಗಳು ಎಷ್ಟರ ಮಟ್ಟಿಗೆ ಕೈ ಹಿಡಿಯಲಿವೆ ಎಂಬುವುದು ಮೇ13ರಂದು ತಿಳಿಯಲಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:52 am, Sun, 7 May 23