ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಪ್ರಚಾರದ ಕಾರ್ಯವನ್ನು ಜೋರಾಗಿಯೇ ನಡೆಸಿವೆ. ಇದರ ಭಾಗವಾಗಿ ಬಿಜೆಪಿ ಬಿಜೆಪಿ 9 ದಿನಗಳ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭಿಸಿದ್ದು, ಈ ಸಂಬಂಧ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿನ್ನೆ (ಜ.21) ವಿಜಯಪುರದಲ್ಲಿ ವಿಜಯ ಸಂಕಲ್ಪಯಾತ್ರೆಗೆ ಚಾಲನೆ ನೀಡಿದರು. ಕಾಂಗ್ರೆಸ್ನ ಪ್ರಜಾಧ್ವನಿ ಹೆಸರಿನ ಬಸ್ಯಾತ್ರೆ ಎರಡು ತಂಡಗಳಾಗಿ ಜನರನ್ನು ತಲುಪುತ್ತಿದ್ದು, ದೇವೆಗೌಡರ ತವರು ಜಿಲ್ಲೆ ಹಾಸನದಲ್ಲಿ ಭರ್ಜರಿ ಸಮಾವೇಶ ನಡೆಸಿತ್ತು. ಇನ್ನು ಜೆಡಿಎಸ್ನ ಪಂಚರತ್ನ ಯಾತ್ರೆ ಜೋಳದ ನಾಡು ವಿಜಯಪುರ ತಲುಪಿದ್ದು, ಶನಿವಾರ ಮುದ್ದೇಬಿಹಾಳನಲ್ಲಿ ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಇದರ ಹೊರತಾಗಿ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೋಳಿ ಮತ್ತು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಗಿಫ್ಟ್ ಪೈಟ್ ನಡೆದಿದೆ. ಮತದಾರರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಮಿಕ್ಸಿ, ಪಾತ್ರೆಗಳನ್ನು ಗಿಫ್ಟ್ ಆಗಿ ನೀಡುತ್ತಿದ್ದು, ಅವರಗಿಂತ ನಾನು ಹೆಚ್ಚಾಗಿಯೇ ನೀಡುತ್ತೇನೆ ಎಂದು ರಮೇಶ್ ಜಾರಕಿಹೋಳಿ ಘಂಟಾಘೋಷವಾಗಿ ಘೋಷಿಸಿದ್ದಾರೆ. ಕರ್ನಾಟಕ ರಾಜಕಾರಣದ ಇಂದಿನ ಅಪ್ಡೇಟ್ ಇಲ್ಲಿ ಲಭ್ಯ.
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಹಂಕಾರದ ವ್ಯಕ್ತಿತ್ವ ಹೊಂದಿದ್ದಾರೆ. ಬಿಜೆಪಿಯವರ ಆಲೋಚನೆ, ಕ್ರಿಯೆ ಎಲ್ಲವೂ ಅಹಂಕಾರದಿಂದ ಕೂಡಿದೆ. ಚುನಾವಣೆ ವೇಳೆ ನೀಡಿದ ಯಾವ ಭರವಸೆಯೂ ಬಿಜೆಪಿ ಈಡೇರಿಸಿಲ್ಲ. ಅಂತಹ ಮೂರ್ಖರು ಇಂದು ಅಧಿಕಾರದಲ್ಲಿದ್ದಾರೆ. ಪ್ರಜಾಧ್ವನಿ ಯಾತ್ರೆ ಮೂಲಕ ಬದಲಾವಣೆ ಗಾಳಿ ಬೀಸಬೇಕಾಗಿದೆ. ಬಿಜೆಪಿಯನ್ನು ಕಿತ್ತು ಒಗೆಯುವ ಕಾಲ ಬಂದಿದೆ ಎಂದು ರಣದೀಪ್ ಹೇಳಿದರು.
ಮಂಗಳೂರು: ಒಂದು ದೇಶ, ಧರ್ಮ, ಭಾಷೆ ಎನ್ನುವ ಸಿದ್ಧಾಂತ ಇಲ್ಲಿ ಸಾಧ್ಯವಿಲ್ಲ. ಭಾರತ ಹಲವು ಧರ್ಮ, ಭಾಷೆ ಒಗ್ಗೂಡಿಕೊಂಡು ಹೋಗುವ ದೇಶ ಎಂದು ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿಗಳ ಕೊಠಡಿಯಲ್ಲೇ ಲಂಚದ ಬೋರ್ಡ್ ಹಾಕಿದ್ದಾರೆ. ಹೋಟೆಲ್ನಲ್ಲಿ ತಿಂಡಿಗೆ ದರ ಹಾಕಿದ ಹಾಗೇ ಬೋರ್ಡ್ ಹಾಕಿದ್ದಾರೆ. ವರ್ಗಾವಣೆ ಸೇರಿ ಎಲ್ಲದಕ್ಕೂ ಇವರು ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮಂಗಳೂರು: ಮಾತೆತ್ತಿದ್ರೆ ಬೊಮ್ಮಾಯಿ ಧಮ್, ತಾಕತ್ ಇದ್ಯಾ ಅಂತ ಕೇಳ್ತಾರೆ. ಚರ್ಚೆಗೆ ಬರೋಕೆ ಬೊಮ್ಮಾಯಿಗೆ ಧಮ್, ತಾಕತ್ ಎರಡೂ ಇಲ್ಲ. ಕೊಟ್ಟ ಭರವಸೆ ಈಡೇರಿಸಿದ್ದೇವೆಂದು ಬಿಜೆಪಿಯವರು ಚರ್ಚೆಗೆ ಬರಲಿ. ಆದರೆ ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಿದೆ, ನಾವು ಚರ್ಚೆಗೆ ಸಿದ್ಧ. ಕರಾವಳಿಯಲ್ಲಿ ದ್ವೇಷದ ರಾಜಕಾರಣದ ಮೂಲಕ ಬೆಂಕಿ ಹಚ್ಚಿದ್ದೀರಿ. ಆರ್ಎಸ್ಎಸ್ನ ಮನುವಾದಿ ಸಿದ್ಧಾಂತ ಈ ದೇಶದಲ್ಲಿ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮಂಗಳೂರು: ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಎನ್ನುವ ಬ್ರ್ಯಾಂಡ್ ಬಂದಿದೆ ಎಂದು ಪ್ರಜಾಧ್ವನಿ ಸಮಾವೇಶದಲ್ಲಿ ಡಿಕೆಶಿ ಹೇಳಿದರು. ಬಿಜೆಪಿಯವರು ನಿಮ್ಮನ್ನು ಭಾವನೆಗಳ ಮೇಲೆ ಕೆರಳಿಸುತ್ತಾರೆ. ಆದರೆ ನಮ್ಮದು ಭಾವನೆ ಇಲ್ಲ, ನಮ್ಮದೇನಿದ್ದರೂ ಬದುಕು. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಎಲ್ಲ ಭರವಸೆ ಈಡೇರಿಸ್ತೀವಿ. ಟಿಕೆಟ್ ಮುಖ್ಯ ಅಲ್ಲ, ಕಾಂಗ್ರೆಸ್ ಪಕ್ಷ ನಮಗೆ ಮುಖ್ಯ ಎಂದು ಹೇಳಿದರು.
ಮಂಗಳೂರು: ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೋಮು ದ್ವೇಷ ಬಿತ್ತಲಾಗಿದೆ. ಅಂತಹ ಮನಸ್ಥಿತಿಗೆ ಈ ಬಾರಿ ಉತ್ತರ ಕೊಡುವ ಕಾಲ ಬಂದಿದೆ ಎಂದು ಪ್ರಜಾಧ್ವನಿ ಸಮಾವೇಶದಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. ಮೋದಿ, ಬೊಮ್ಮಾಯಿ ಸರ್ಕಾರದಿಂದ ದೌರ್ಜನ್ಯ ನಡೆಯುತ್ತಿದೆ. ಕರಾವಳಿ ಭಾಗದಲ್ಲಿ ಹಿಂದುತ್ವ ಅಮಲು ಬಿತ್ತಲಾಗಿದೆ ಎಂದು ರಣದೀಪ್ ಹೇಳಿದರು.
ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತೇವೆ. ಕರಾವಳಿ ಅಭಿವೃದ್ಧಿಗಾಗಿ ಉದ್ಯೋಗ, ಬಂಡವಾಳ ಹೂಡಿಕೆ, ಪ್ರವಾಸೋದ್ಯಮ ಭಾವೈಕ್ಯತೆಯಿಂದ ಬಾಳುವುದು, 2050 ಕೋಟಿ ಮುಂಗಡವಾಗಿ ಇಡುತ್ತೇವೆ ಎಂದು ಕಾಂಗ್ರೆಸ್ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸಿದೆ.
ಧಾರವಾಡ: ಪ್ರಧಾನಿ ಮೋದಿಯನ್ನ ಹಿಟ್ಲರ್ಗೆ ಹೋಲಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಅವರ ಬಗ್ಗೆ ಗೌರವ ಇತ್ತು. ಆದ್ರೆ ಇತ್ತೀಚೆಗೆ ರಾಹುಲ್ ಗಾಂಧಿ ಸಹವಾಸದಿಂದ ಏನೇನೋ ಮಾತಾಡ್ತಿದ್ದಾರೆ. ಸಿದ್ರಾಮಯ್ಯ ಮೆಂಟಲ್ ಬ್ಯಾಲೆನ್ಸ್ ಕಳ್ಕೊಂಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಮಂಗಳೂರು: ಕಾಂಗ್ರೆಸ್ನ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಮುಖಂಡರು. ರಣ್ ದೀಪ್ ಸುರ್ಜೆವಾಲ, ಹಿರಿಯ ಮುಖಂಡ ಜನಾರ್ಧನ ಪೂಜಾರಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್, ಜಿ.ಪರಮೇಶ್ವರ್, ಬಿ.ಕೆ.ಹರಿಪ್ರಸಾದ್ ಮುಂತಾದ ಮುಖಂಡರು ಭಾಗಿ ಆಗಿದ್ದಾರೆ.
ಮೈಸೂರು: ಒಳ್ಳೆಯ ಕೆಲಸ ಮಾಡಿದಾಗ ವಿರೋಧಿಸುವ ಎಡಬಿಡಂಗಿಗಳು ಇದ್ದಾರೆ. ಅದನ್ನು ವಿರೋಧಿಸುವ ಎಡಬಿಡಂಗಿಗಳು ಎಲ್ಲಾ ಕಡೆ ಇರುತ್ತಾರೆ ಎಂದು ಸುತ್ತೂರು ಜಾತ್ರಾ ಕಾರ್ಯಕ್ರಮದಲ್ಲಿ ಬಿ.ಎಲ್.ಸಂತೋಷ್ ಹೇಳಿದರು. ಕೊರೊನಾ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಗೋಲಿಬಾರ್ ನಡೆಯಲಿಲ್ಲ. ಸರ್ಕಾರದ ಬಗ್ಗೆ ಬೇಸರ ವ್ಯಕ್ತಪಡಿಸಲಿಲ್ಲ, ಪರಿಸ್ಥಿತಿ ಬಗ್ಗೆ ಜನ ಬೇಸರವಾದರು. 7 ಲಕ್ಷದ 80 ಸಾವಿರ ಜನ ವಿದೇಶದಿಂದ ಮರಳಿ ಭಾರತಕ್ಕೆ ಬಂದರು. ಆಗ ಕೆಲವರು ಕೊಂಕು ಮಾತಾಡಿದ್ದಕ್ಕೆ ಯಾರು ತಲೆ ಕೆಡಿಸಿಕೊಳ್ಳಲಿಲ್ಲ. ಯಾಕಂದ್ರೆ ಜನರಿಗೆ ಕೊರೊನಾ ಸಂದರ್ಭದ ಪರಿಸ್ಥಿತಿ ಅರಿವಿತ್ತು. ದೇಶ, ಸಮಾಜ ಮುನ್ನಡೆಸುವುದಕ್ಕೆ ಸುತ್ತೂರು ಜಾತ್ರೆ ಉದಾಹರಣೆ ಆಗಿದೆ ಎಂದು ಹೇಳಿದರು.
ಮಂಡ್ಯ: ಸಂಸತ್ ಚುನಾವಣೆಯಲ್ಲಿ ಜೆಡಿಎಸ್ನ ದಿಗ್ಗಜರು ಕೂಗಿ ಅರಚುತ್ತಿದ್ದರು. ಅಂಬಿ ಅಣ್ಣನ ಹೆಂಡತಿ ಸುಮಲತಾ ಬಂದು ಸ್ವಾಭಿಮಾನ ಮತ ಕೇಳಿದ್ರು. HDK ಸೇರಿ JDSನ ಯಾರಿಗೂ ಸುಮಲತಾ ಗೆಲುವು ತಡೆಯಲಾಗಲಿಲ್ಲ. ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಅನ್ನೋದು ಕಿತ್ಕೊಂಡು ಹೋಯ್ತು. ಸ್ವಾಭಿಮಾನ, ಅನುಕಂಪದ ಮುಂದೆ ಯಾವ ದುಡ್ಡು, ಅಧಿಕಾರ ನಡೆಯಲ್ಲ ಎಂದು ಎಲ್.ಎರ್.ಶಿವರಾಮೇಗೌಡ ಹೇಳಿದರು.
ಉಡುಪಿ: ನಮ್ಮದು ಹೊಟ್ಟೆಪಾಡಿನ ರಾಜಕಾರಣ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನಮ್ಮ ಕರ್ನಾಟಕಕ್ಕೆ ಮೋದಿಯವರ ಮುಖ ಯಾಕೆ ಬೇಕು? ಇಲ್ಲಿ ಆಡಳಿತ ಮಾಡುವವರ ಮುಖ ಮುಂದಿಟ್ಟು ಎದುರಿಸಲಿ. ಬಿಜೆಪಿ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಇನ್ನು 60 ದಿನ ಅಷ್ಟೇ ಈ ಸರ್ಕಾರ ಇರುತ್ತೆ. ಕೊನೆ ದಿನಗಳು ಬಂದಿವೆ, ಕೌಂಡ್ಡೌನ್ ಶುರುವಾಗಿದೆ. ಫೆಬ್ರವರಿ 28ರಂದು ಬಿಜೆಪಿ ಸರ್ಕಾರ ಕ್ಲೋಸ್ ಆಗುತ್ತೆ. ಬಳಿಕ ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಾಗಲಿದೆ. 40 ದಿನದಲ್ಲಿ ಬಿಜೆಪಿಯವರು ಪ್ಯಾಕ್ ಮಾಡಿಕೊಂಡು ಹೋಗ್ತಾರೆ ಎಂದು ವಾಗ್ದಾಳಿ ಮಾಡಿದರು.
ಉಡುಪಿ: ರಾಜ್ಯದಲ್ಲಿ ನೆರೆ ಹಾನಿ ಬಂದು ಜನ ಕಷ್ಟದಲ್ಲಿದ್ದಾಗ ಮೋದಿ ಬರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು. 25 ಸಂಸದರಿದ್ದಾರೆ, ಅವರನ್ನು ಕರೆಸಿ ಒಂದು ದಿನ ಸಭೆ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಬರಲ್ಲ ಅನ್ನೋದು ಮೋದಿಗೆ ಖಾತ್ರಿಯಾಗಿದೆ. ಎಲ್ಲಾ ವರದಿಗಳು ಬಿಜೆಪಿ ಸರ್ಕಾರ ಬರುವುದಿಲ್ಲ ಅಂತ ಹೇಳಿವೆ. ಕರ್ನಾಟಕದಲ್ಲಿ 65ಕ್ಕಿಂತ ಹೆಚ್ಚು ಸ್ಥಾನ ಬಿಜೆಪಿಗೆ ಬರುವುದಿಲ್ಲ. ನಮ್ಮ ಪಕ್ಷದ ಆಂತರಿಕ ವರದಿಗಳು ಹೇಳಿವೆ ಎಂದು ಡಿಕೆಶಿ ಹೇಳಿದರು.
ಉಡುಪಿ: ಕಾಂಗ್ರೆಸ್ನಲ್ಲಿ ಡಿ ಟೀಂ ಮತ್ತು ಎಸ್ ಟೀಂ ಇದೆ ಎಂಬ ಬಿಜೆಪಿಗರ ಆರೋಪಕ್ಕೆ ಶಾಸಕ ಯು.ಟಿ.ಖಾದರ್ ತಿರುಗೇಟು ನೀಡಿದ್ದು, ಅವರಿಗೆ ಮುಂದಿನ ಮುಖ್ಯಮಂತ್ರಿ ಯಾರು ಎಂದು ಹೇಳುವ ಧಮ್ ಇಲ್ಲ. ಮತ್ತೆ ನಮ್ಮ ಪಕ್ಷದ ಬಗ್ಗೆ ಮಾತನಾಡ್ತಾರೆ. ಮುಂದೆ ಗೆಲ್ಲುವ ಬಗ್ಗೆ ಅಷ್ಟೊಂದು ಆತ್ಮವಿಶ್ವಾಸ ಇದ್ರೆ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂದು ಘೋಷಿಸಲಿ ಎಂದು ಸವಾಲ್ ಹಾಕಿದರು.
ಉಡುಪಿ: ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿದ್ದು ನಿಜ ಎಂದು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದರು. ಮದ್ದೂರಿನಿಂದ ಸ್ಪರ್ಧಿಸುವಂತೆ ಕೇಳಿದ್ದಾರೆ, ಇಲ್ಲ ಅಂತಾ ಹೇಳಲ್ಲ. ಮಂಡ್ಯ, ಮದ್ದೂರು ಕಾರ್ಯಕರ್ತರು ನನ್ನ ಜತೆ ಮಾತನಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ನಾನು ಅವಕಾಶ ನೀಡಲ್ಲ ಎಂದು ಹೇಳಿದರು.
ಉಡುಪಿ: ನಳಿನ್ ಕುಮಾರ್ ಕಟೀಲು ಬಿಜೆಪಿ ಅಧ್ಯಕ್ಷನಾಗಲು ನಾಲಾಯಕ್. ರಸ್ತೆ, ಚರಂಡಿ ಸಮಸ್ಯೆ ಬಗ್ಗೆ ಮಾತಾಡಬೇಡಿ ಎಂದು ಕಟೀಲು ಹೇಳ್ತಾರೆ. ದಯವಿಟ್ಟು ಬಿಜೆಪಿಯವರ ಮಾತಿಗೆ ಮರುಳಾಗಬೇಡಿ ಎಂದು ಸಿದ್ದರಾಮಯ್ಯ ಹೇಳಿದರು. ನರೇಂದ್ರ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ. ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಸಾವರ್ಕರ್ ಮಾಸಾಶನ ಪಡೆದಿದ್ದರು. ಕರಾವಳಿಯನ್ನು ಹಿಂದುತ್ವದ ಪ್ರಯೋಗಾಲಯ ಮಾಡಲು ಹೊರಟಿದ್ದಾರೆ. ನಮ್ಮ ವಿರೋಧ ಮನುವಾದಿಗಳಿಗೆ ಹೊರತು ಹಿಂದೂವಾದಿಗೆ ಅಲ್ಲ. ವಿಧಾನಸೌಧದ ಗೋಡೆಗಳು ಲಂಚ ಲಂಚ ಎಂದು ಪಿಸುಗುಡುತ್ತಿವೆ ಎಂದು ವಾಗ್ದಾಳಿ ಮಾಡಿದರು.
ಮಂಗಳೂರು: ಕರಾವಳಿ ಭಾಗದ ಯುವಕರು ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ಬಿಜೆಪಿಯವರು ಹಿಂದೂಗಳ ಪರವಾಗಿರುವವರು ಅಲ್ಲ ಹಿಂದುತ್ವದ ಪರವಾಗಿರುವವರು. ನಾನು, ಡಿ.ಕೆ.ಶಿವಕುಮಾರ್, ವೀರಪ್ಪ ಮೊಯ್ಲಿ, ಹರಿಪ್ರಸಾದ್ ಅಪ್ಪಟ ಹಿಂದೂ, ಆದ್ರೆ ನಾವು ಹಿಂದೂತ್ವವಾದಿಗಳಲ್ಲ. ಹಿಂದೂಗಳ ಪರವಾಗಿರುವವರು ಅಂದ್ರೆ ಮನುಷ್ಯತ್ವದ ಪರವಾಗಿರುವವರು ಎಂದು ಹೇಳಿದರು.
ಧಾರವಾಡ: ಧಾರವಾಡದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಶಂಕು ಸ್ಥಾಪನೆ ಹಿನ್ನೆಲೆ 28ಕ್ಕೆ ಗೃಹ ಸಚಿವ ಅಮಿತ್ ಶಾ ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಹಾಗಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರ್ನಾಟಕ ವಿವಿಯ ಹಲವು ಮೈದಾನಗಳ ವೀಕ್ಷಣೆ ಮಾಡಿದರು.
ಉಡುಪಿ: ಕೋಲಾರ ಕ್ಷೇತ್ರದಿಂದ ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಸಿದ್ದರಾಮಯ್ಯ ಮನೆ ಹುಡುಕುವ ಬಗ್ಗೆ ಎದ್ದಿರುವ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ‘ಕೋಲಾರದಲ್ಲಿ ನಾನು ಮನೆ ಹುಡುಕುತ್ತಿಲ್ಲ. ನಮ್ಮ ಪಕ್ಷದವರು ಹುಡುಕುತ್ತಿದ್ದಾರೆ. ಮನೆ ಹುಡುಕುವ ಬಗ್ಗೆ ನನಗೆ ಗೊತ್ತೇ ಇಲ್ಲ’ ಎಂದು ಹೇಳಿದರು. ‘ಡಿ ಪಾರ್ಟಿ, ಎಸ್ ಪಾರ್ಟಿ’ ಕುರಿತು ಆರ್.ಅಶೋಕ್ ಮಾಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಇದೆಲ್ಲ ಸುಳ್ಳು ಮಾತುಗಳು. ಇದೆಲ್ಲ ಸುಳ್ಳು.. ಬರಿ ಸುಳ್ಳು ಎಂದರು. ಯತ್ನಾಳ್ ಮೇಲೆ ಬಿಜೆಪಿ ಯಾಕೆ ಕ್ರಮ ಕೈಗೊಂಡಿಲ್ಲ? ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆಯೋ ಇಲ್ಲವೋ? ನಡ್ಡಾ ಕಾರ್ಯಕ್ರಮಕ್ಕೆ ಹೋಗಿಲ್ಲ ಯಾಕೆ? ಅಶೋಕ ಹೇಳಿಬಿಟ್ಟ ಕೂಡಲೆ ಗುಂಪುಗಾರಿಕೆ ಆಗಲು ಸಾಧ್ಯವೇ ಎಂದು ಪ್ರಶ್ನೆಗಳನ್ನು ಹರಿಬಿಟ್ಟರು. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 130, ಗರಿಷ್ಠ 150 ಸ್ಥಾನ ಗೆಲ್ಲುತ್ತೇವೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸ ಪ್ರಕಟಿಸಿದರು.
ಹಾಸನ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳನ್ನಾದರೂ ಕಾಂಗ್ರೆಸ್ ಗೆಲ್ಲಲೇಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಉಚಿತವಾಗಿ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಈಗ ಬಿಜೆಪಿಯವರು ಕೇವಲ 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ. ಕುಟುಂಬದ ಹಿರಿಯ ಮಹಿಳೆಗೆ ತಿಂಗಳಿಗೆ ₹ 2 ಸಾವಿರ ನೀಡುತ್ತೇವೆ. ಉಚಿತವಾಗಿ ತಿಂಗಳಿಗೆ 200 ಯೂನಿಟ್ ವಿದ್ಯುತ್ ಕೊಡುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಕೊಟ್ಟ ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಿಸಿದರು.
ಉಡುಪಿ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದಾಗ ಅಮಿತ್ ಶಾ ಎಷ್ಟು ಸಲ ಅಲ್ಲಿಗೆ ಹೋಗಿದ್ದರು. ಇಲ್ಲಿಗೂ ಅಷ್ಟೇ, ಅವರು ಅದೆಷ್ಟು ಸಲ ಬಂದರೂ ಏನೂ ಪ್ರಯೋಜನವಿಲ್ಲ. ‘ಆಪರೇಷನ್ ಓಲ್ಡ್ ಮೈಸೂರ್’ ಎಂದು ಅಮಿತ್ ಶಾ ಹೇಳಿದ ತಕ್ಷಣ ಆಗಿಬಿಡುತ್ತದೆಯೇ? ಅಲ್ಲಿ ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಕೆಳಗಿಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಸಲು ಅಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಉಡುಪಿ: ಬಿಜೆಪಿಯವರಿಗೆ ಕರ್ನಾಟಕದ ಜನರ ಅಭಿವೃದ್ಧಿ ಬೇಕಾಗಿಲ್ಲ. ಬಿಜೆಪಿಯ ಮನಸ್ಸು ಮತ್ತು ಮನಸ್ಥಿತಿ ಜನರಿಗೆ ಅರ್ಥವಾಗಿದೆ ಎಂದು ಉಡುಪಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪ್ರಧಾನಿ ಮೋದಿಯನ್ನು ಹಿಟ್ಲರ್ಗೆ ಹೋಲಿಸಿದ ಅವರು, ಹಿಟ್ಲರ್, ಮುಸಲೋನಿ ಸ್ವಲ್ಪ ದಿನ ಮೆರೆದರು ಆಮೇಲೆ ಏನಾಯ್ತು? ಇಂತಹವರು ಸ್ಪಲ್ಪ ದಿನ ಮೆರೆಯುತ್ತಾರೆ ಆಮೇಲೆ ಇಳಿಯಲೇಬೇಕು ಎಂದರು. ಪ್ರದಾನಿ ಮೋದಿ ಕರ್ನಾಟಕಕ್ಕೆ ಬಂದು ಹೋಗಬಹುದು ಆದರೆ ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಬಂದರೆ ಅಸಾಧ್ಯ, ರಾಜ್ಯಕ್ಕೆ 100 ಬಾರಿ ಮೋದಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಬಿಜೆಪಿ ಸರ್ಕಾರದ ಬಗ್ಗೆ ರಾಜ್ಯದ ಜನತೆಗೆ ಭ್ರಮನಿರಸನವಾಗಿದೆ ಎಂದು ತಿಳಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದು, ನಿನ್ನೆ (ಜ.21) ರಂದು ಕೋಲಾರದಲ್ಲಿ ನನ್ನ ಗೆಲವು ಶತಸಿದ್ದ ಎಂದು ಭರವಸೆ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಜೆಡಿಎಸ್ ಮತ್ತು ಬಿಜೆಪಿಯನ್ನು ಹಣಿಯಲು ಟೊಂಕ ಕಟ್ಟಿ ನಿಂತಿವೆ. ಬಿಜೆಪಿಯ ಪಾಳಯದಲ್ಲಿ ಎಂಎಲ್ಸಿ ವರ್ತೂರ್ ಪ್ರಕಾಶ ಟಿಕೇಟ್ ಆಕಾಂಕ್ಷಿಯಾಗಿದ್ದು ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಶಿಷ್ಯ ಎಂದು ಗುರುತಿಸಿಕೊಂಡಿದ್ದರು. ಇನ್ನು ಕೋಲಾರದಲ್ಲಿ ಎಸ್ಸಿ: 49,000, ಮುಸ್ಲಿಂ :41,000, ಒಕ್ಕಲಿಗ:38,000, ಕುರುಬರು:25,000, ಎಸ್ಟಿ:11,000, ಬ್ರಾಹ್ಮಣ: 5,000, ಇತರೆ: 53,000 ಮತಗಳಿದ್ದು, ಇಲ್ಲಿ ದಲಿತರ, ಮುಸ್ಲಿಂ ಮತ್ತು ಒಕ್ಕಲಿಗರ ಮತ ನಿರ್ಣಾಯಕವಾಗಿವೆ. ಈಗಾಗಲೆ ದಲಿತರು ಸಿದ್ದರಾಮಯ್ಯ ವಿರುದ್ಧ ಬುಸುಗುಡುತ್ತಿದ್ದಾರೆ.
ಈ ಹಿನ್ನೆಲೆ ಟಗರು ಕೋಲಾರದ ಅಖಾಡದಲ್ಲಿ ಮೈ ಎಲ್ಲ ಕಣ್ಣಾಗಿ, ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಚುನಾವಣಾ ಸಿದ್ದತೆ ಬಗ್ಗೆ ಭಾರೀ ಅಲರ್ಟ್ ಆಗಿರುವ ಸಿದ್ದರಾಮಯ್ಯ ಅತ್ಯಾಪ್ತರು, ಈಗಾಗಲೇ ತಾಂತ್ರಿಕ ಟೀಂ ರಚನೆ ಮಾಡಿ ಕಸರತ್ತು ನಡೆಸುತ್ತಿದ್ದಾರೆ.ಕೋಲಾರದಲ್ಲಿ ಬಿಎಲ್ ಸಂತೋಷ್ ಅಖಾಡಕ್ಕೆ ಇಳಿಯುತ್ತಿದ್ದಂತೆ ಅಲರ್ಟ್ ಆಗಿರುವ ಸಿದ್ದರಾಮಯ್ಯ ಟೀಂ, ಕೋಲಾರದಲ್ಲಿ ಗ್ರೌಂಡ್ ಲೆವೆಲ್ನಲ್ಲಿ ತಂಡ ರಚನೆ ಮಾಡುತ್ತಿದ್ದಾರೆ. ಪ್ರತಿ ಬೂತ್ಗೆ ಒಬ್ಬ ಏಜೆಂಟ್ ಹಾಗೂ 20 ಮಂದಿ ಕ್ರ್ಯೂ ಟೀಂ ರೆಡಿಯಾಗುತ್ತಿದೆ.
284 ಬೂತ್ ಗಳಿಗೆ ತಲಾ 20 ಮಂದಿಯಂತೆ ಚುನಾವಣಾ ಸಿದ್ದತೆಗಳು ನಡೆಯುತ್ತಿದ್ದು, 5500 ಕ್ಕೂ ಹೆಚ್ಚು ಮಂದಿಯ ಟೀಂ ರೆಡಿ ಮಾಡಿ ವರ್ಕೌಟ್ ಪ್ರಾರಂಭವಾಗಿದೆ. ಪ್ರತಿ ಬೂತ್ನಲ್ಲಿ ಸಿದ್ದರಾಮಯ್ಯ ಪರ ಅಲೆ ಎಬ್ಬಿಸಲು ಸಿದ್ದವಾಗಿದ್ದು, ಇದರೊಂದಿಗೆ ಸಿದ್ದರಾಮಯ್ಯ ಅತ್ಯಾಪ್ತರು ಪ್ರತ್ಯೇಕ ತಂಡವನ್ನು ರಚನೆ ಮಾಡಿ ಅಖಾಡಕ್ಕೆ ಇಳಿಸಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಒಲವು ಮೂಡಿಸುವುದು, ಸಿದ್ದರಾಮಯ್ಯ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರಚಾರ ಮಾಡಲಾಗುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರನ್ನು ಸೆಳೆಯಲು ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ.
ಇನ್ನು ಸಿದ್ದರಾಮ್ಯ ಕೇವಲ ಪಕ್ಷದ ನಾಯಕರನ್ನು ಮಾತ್ರ ನಂಬಿ ಸ್ಪರ್ಧೆ ಮಾಡುತ್ತಿಲ್ಲ. ಪಕ್ಷದ ನಾಯಕರ ಜೊತೆ ಜೊತೆಗೆ ಸಿದ್ದು ಪುತ್ರ ಯತೀಂದ್ರರಿಂದಲೂ ತಂತ್ರ ಹೆಣೆಯಲಾಗುತ್ತಿದೆ. ಈ ಸಂಬಂಧ ಯತೀಂದ್ರ ಸಿದ್ದರಾಮಯ್ಯರ ಪ್ರತ್ಯೇಕ ಟೀಂನಿಂದಲೂ ಭರದ ತಯಾರಿ ನಡೆಯುತ್ತಿದೆ. ಡಾ.ಯತೀಂದ್ರ ಡಿಸೆಂಬರ್ ತಿಂಗಳಲ್ಲಿಯೇ ಬೂತ್ ಮಟ್ಟದ ಸರ್ವೆ ಮಾಡಿಸಿದ್ದರು. ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಬಳಿಕವೂ ಯತೀಂದ್ರ ಟೀಂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಪರ ಈಗಾಗಲೇ ಎಂಎಲ್ಸಿ ನಜೀರ್ ಅಹಮದ್, ಎಂಎಲ್ಸಿ ಅನಿಲ್ ಕುಮಾರ್, ವಿ ಸುದರ್ಶನ್ ಹಾಗೂ ಕೃಷ್ಣ ಭೈರೇಗೌಡ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅವರೇ ಘೋಷಿಸಿಕೊಂಡಂತೆ ಸಿದ್ದರಾಮಯ್ಯಗೆ ಅಂತಿಮ ಚುನಾವಣೆಯಾಗಿದ್ದು, ಗೆದ್ದರೂ ಅಥವಾ ಸೋತರೂ ಇದು ಅಂತಿಮ ಚುನಾವಣೆಯಾಗಲಿದೆ ಎನ್ನಬಹುದು.
ಬಿಜೆಪಿ ಪಕ್ಷವನ್ನು ತೊರೆದು ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ "ಕಲ್ಯಾಣ ರಾಜ್ಯ ಪ್ರಗತಿ ಪಕ್ಷ" ಘೋಷಣೆ ಮಾಡಿದ್ದು ಬಿಜೆಪಿ ಮತ್ತು ಕಾಂಗ್ರೆಸ್ಗೆ ಮುಳುವಾಗಿ ಪರಿಣಿಮಿಸಿದೆ. ಜನಾರ್ದನ ರೆಡ್ಡಿಯವರನ್ನು ಪಕ್ಷಕ್ಕೆ ಮರು ಸೇರಿಸಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ಶತಾಯಗತಾಯ ಪ್ರಯತ್ನಿಸುತ್ತಿದ್ದು, ಈ ವಿಷಯವನ್ನು ಶುಕ್ರವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಗಮನಕ್ಕೂ ತಂದಿದ್ದಾರೆ. ಆದರೆ ಬಿ ಎಲ್ ಸಂತೋಷ ಮಾತ್ರ ಹೈಕಮಾಂಡ ಏನು ನಿರ್ಧರಿಸುತ್ತಾರೆ ಕಾದು ನೋಡಬೇಕಿದೆ ಎನ್ನುವ ಮೂಲಕ ಜಾರಿಕೊಂಡಿದ್ದಾರೆ. ಆದರೆ ಬಿಜೆಪಿಗೆ ಮಾತ್ರ ಜನಾರ್ದನ ರೆಡ್ಡಿ ಮಗ್ಗಲು ಮುಳ್ಳಾಗಿದ್ದಾರೆ.
ಇನ್ನು ಬಿಜೆಪಿಯ ಘಟಾನುಗಟ್ಟಿ ಪಟ್ಟುಗಳನ್ನು ಅರಿತಿರುವ ಜನಾರ್ದನ ರೆಡ್ಡಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಬಹುದು ಎಂಬ ಆತಂಕ ಬಿಜೆಪಿಯಲ್ಲಿ ಶುರುವಾಗಿದೆ. ಕೆಆರ್ಪಿಪಿ ಪಕ್ಷ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಗ್ಗುಲ ಮುಳ್ಳಾಗುವ ಭೀತಿ ಬಿಜೆಪಿಗೆ ಎದುರಾಗಿದೆ. ಹಳೆ ಮೈಸೂರು ಭಾಗದ ನಂತರ ಬಿಜೆಪಿ ಸಂಘಟನೆ ದುರ್ಬಲವಾಗಿರುವ ಭಾಗ ಕಲ್ಯಾಣ ಕರ್ನಾಟಕವಾಗಿದ್ದು, ಸರ್ಕಾರಿ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಮುಂದಾಗಿದೆ. ಜನಾರ್ದನ ರೆಡ್ಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಮನ ಹರಿಸಿರುವುದು ಬಿಜೆಪಿಯ ಸಂಘಟನೆಗೆ ಹೊಡೆತ ಬೀಳುವ ದುಗುಡ ಶುರುವಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೆಆರ್ಪಿಪಿ ಸಮಸ್ಯೆಯಾಗುವ ಭೀತಿ ಇದ್ದು, ಈಗ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಇಲ್ಲದಿದ್ದರೂ ಚುನಾವಣೆ ಘೋಷಣೆ ಬಳಿಕ ಸಮಸ್ಯೆಯಾಗುವ ಸಾಧ್ಯತೆ ಇದೆ.
ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ರೆಡ್ಡಿ ಸೆಳೆದು ಮತ ವಿಭಜನೆಯ ಹೆದರಿಕೆ ಶುರುವಾಗಿದ್ದು, ಬಿಜೆಪಿಗೆ ಜನಾರ್ದನ ರೆಡ್ಡಿಯನ್ನು ಆಹ್ವಾನಿಸಿದಲ್ಲಿ ತಕ್ಷಣಕ್ಕೆ ವಾಪಸ್ ಬರುವ ಸಾಧ್ಯತೆ ಕಡಿಮೆ ಇದೆ. ಚುನಾವಣೆ ನಂತರದ ಪರಿಸ್ಥಿತಿ ಅವಲಂಬಿಸಿ ತೀರ್ಮಾನ ಮಾಡಬಹುದಾದ ಸಾಧ್ಯತೆ ಇದೆ. ಬಳ್ಳಾರಿ ಸುತ್ತಮುತ್ತಲಿನ ಜಿಲ್ಲೆಗಳಲ್ಲೇ ಬಿಜೆಪಿಗೆ ರೆಡ್ಡಿ ಪಕ್ಷ ಸಮಸ್ಯೆ ತಂದಿರುವ ಭೀತಿ ಎದುರಾಗಿದೆ. ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಕ್ಷೇತ್ರಗಳಲ್ಲಿ, ಕನಿಷ್ಠ ಅಂತರದಿಂದ ಸೋತಿದ್ದ ಕ್ಷೇತ್ರಗಳಲ್ಲಿ ಮತ ವಿಭಜಿಸಲ್ಪಡುವ ಸಾಧ್ಯತೆ ಇದೆ.
ರೆಡ್ಡಿ ಪಕ್ಷ ಕಾಂಗ್ರೆಸ್ ಪಕ್ಷಕ್ಕೂ ತೆಲೆನೋವಾಗಿದೆ. ರೆಡ್ಡಿ ಕಟ್ಟಿದ ಹೊಸ ಪಕ್ಷದ ಬಗ್ಗೆ ಸಮೀಕ್ಷೆ ನಡೆದಿದ್ದು, ಈ ವರದಿ ಕಾಂಗ್ರೆಸ್ ಕೈ ಸೇರಿದೆ. ವರದಿಯಲ್ಲಿ ಸುಮಾರು 5-6 ಜಿಲ್ಲೆಗಳಲ್ಲಿ ಫಲಿತಾಂಶದ ಮೇಲೆ ಜನಾರ್ಧನ ರೆಡ್ಡಿ ಪ್ರಭಾವ ಬೀರುವ ಸಾಧ್ಯತೆ ಇದೆ. 9 ರಿಂದ 11 ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ಮೇಲೆ ಜನಾರ್ಧನ ರೆಡ್ಡಿ ಪ್ರಭಾವ ಬೀರುವ ಸಾಧ್ಯತೆ ಇದೆ. ಕೊಪ್ಪಳ- ಗಂಗಾವತಿ, ಬಳ್ಳಾರಿ, ರಾಯಚೂರು, ದಾವಣಗೆರೆ, ಕೋಲಾರದ ಚುನಾವಣಾ ಫಲಿತಾಂಶದ ಮೇಲೆ ರೆಡ್ಡಿ ಪ್ರಭಾವ ಬೀರಬಹುದು ಎನ್ನಲಾಗುತ್ತಿದೆ.
ಅಲ್ಪ ಸಂಖ್ಯಾತ ಸಮುದಾಯದ ಮತಗಳನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೆಳೆಯುವ ಭೀತಿ ಇದೆ. ಕಲ್ಯಾಣ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಅಲ್ಪ ಸಂಖ್ಯಾತ ಸಮುದಾಯವೇ ನಿರ್ಣಾಯಕ ಮತದಾರರಾಗಿದ್ದು, ಅಕಸ್ಮಾತ್ ತೆಲಂಗಾಣದ ಬಿಆರ್ಎಸ್ ಕೂಡ ಗಡಿಭಾಗದಲ್ಲಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ಗೆ ಹೊಡೆತ ಬೀಳುವ ಸಾಧ್ಯತೆ ಇದೆ. ತೆಲುಗು ಭಾಷಿಕರು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ರೆಡ್ಡಿ ಪ್ರಭಾವ ರಿಸಲ್ಟ್ ನಲ್ಲಿ ವ್ಯತ್ಯಾಸ ಮಾಡುವ ಸಾಧ್ಯತೆ ಇದೆ. ಇನ್ನು ಜಾತಿವಾರು ಲೆಕ್ಕಾಚಾರ ಮಾಡುವುದಾರೇ ಹೆಮರೆಡ್ಡಿ ಮಲ್ಲಮ್ಮ ಹಾಗೂ ವೇಮನ ಸಮುದಾಯಗಳ ಮತಗಳು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪಾಲಾಗಲಿವೆ ಎನ್ನಲಾಗುತ್ತಿದೆ. 9 ರಿಂದ 11 ಕ್ಷೇತ್ರಗಳ ಮತ ವ್ಯತ್ಯಾಸವಾದರೆ ಬಹುಮತದ ಮೇಲೂ ನೇರ ಪರಿಣಾಮ ಬೀರಬಹುದು. ಈಗಾಗಲೇ ತಳಮಟ್ಟದ ಎಲ್ಲ ನಾಯಕರನ್ನು ಸೆಳೆಯುತ್ತಿರುವ ಜನಾರ್ಧನ ರೆಡ್ಡಿಯಿಂದ ಕಾಂಗ್ರೆಸ್ಗೆ ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಕೆಲ ಕ್ಷೇತ್ರಗಳ ಬಗ್ಗೆ ಟೆನ್ಶನ್ ಶುರುವಾಗಿದೆ.
Published On - Jan 22,2023 9:59 AM