ಲೋಕಸಬೆ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ, ಗಮನಿಸಲೇಬೇಕಾದ ಅಂಶಗಳು

| Updated By: Ganapathi Sharma

Updated on: May 07, 2024 | 6:46 AM

ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಈ ಬಾರಿ ಹಲವು ವಿಶೇಷಗಳನ್ನೂ ಗಮನಿಸಬಹುದಾಗಿದೆ. ಕಣದಲ್ಲಿರುವ ಪ್ರಮುಖರು, ಹೊಸಬರು ಸೇರಿದಂತೆ ಈ ಬಾರಿಯ ವಿಶೇಷಗಳ ಬಗ್ಗೆ ಇಲ್ಲಿದೆ ಮಾಹಿತಿ.

ಲೋಕಸಬೆ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ, ಗಮನಿಸಲೇಬೇಕಾದ ಅಂಶಗಳು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮೇ 7: ಇಂದು ಕರ್ನಾಟಕದಲ್ಲಿ (Karnataka) 2ನೇ ಹಂತದಲ್ಲಿ ಲೋಕಸಭಾ ಚುನಾವಣೆಗೆ (Lok Sabha Elections) 14ಕ್ಷೇತ್ರಗಳಲ್ಲಿ ಮತದಾನ (Voting) ನಡೆಯಲಿದೆ. ಇಬ್ಬರು ಮಾಜಿ ಸಿಎಂಗಳ ಭವಿಷ್ಯವೂ ಸೇರಿದಂತೆ ಈ ಚುನಾವಣೆಯಲ್ಲಿ ಹಲವು ಸ್ವಾರಸ್ಯಕರ ಸಂಗತಿಗಳಿವೆ. ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಇಬ್ಬರು ಮಹಿಳೆಯರ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿರುವುದು ವಿಶೇಷ. ಈ ಬಾರಿ ಹೊಸ ಮುಖಗಳೇ ಹೆಚ್ಚು ಸದ್ದು ಮಾಡುತ್ತಿದ್ದು, ಸಂಸತ್‌ ಪ್ರವೇಶಕ್ಕೆ ಹೊಸಬರ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಮಾಜಿ ಸಿಎಂಗಳಿಬ್ಬರ ಭವಿಷ್ಯ ಇಂದು ನಿರ್ಧಾರ

ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬೆಳಗಾವಿಯಿಂದ ಜಗದೀಶ್‌ ಶೆಟ್ಟರ್‌ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸರ್ಕಸ್​ ಮಾಡ್ತಿದ್ದಾರೆ. ಈಗ 2ನೇ ಹಂತದ ಮತದಾನ ಬೊಮ್ಮಾಯಿ & ಶೆಟ್ಟರ್‌ ರಾಜಕೀಯ ಭವಿಷ್ಯ ನಿರ್ಧರಿಸಲಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದಕ್ಕೆ ಶೆಟ್ಟರ್‌ ಸಿಡಿದೆದ್ದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್‌ ಟಿಕೆಟ್‌ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. 1994ರಿಂದ ತಾವೇ ಪ್ರತಿನಿಧಿಸುತ್ತಾ ಬಂದಿದ್ದ ತಮ್ಮ ಕ್ಷೇತ್ರದಲ್ಲೇ ತಮ್ಮದೇ ಶಿಷ್ಯ ಮಹೇಶ್‌ ತೆಂಗಿನಕಾಯಿ ವಿರುದ್ಧವೇ ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದರು. ಈಗ ಮಾತೃಪಕ್ಷ ಬಿಜೆಪಿಗೆ ವಾಪಸ್‌ ಆಗಿದಾರೆ. ಈ ಚುನಾವಣೆ ಜಗದೀಶ್‌ ಶೆಟ್ಟರ್‌ ರಾಜಕೀಯ ಜೀವನಕ್ಕೆ ಪುನರ್ಜನ್ಮ ನೀಡಬಹುದು. ನೀಡದೆಯೂ ಇರಬಹುದು.

ಇನ್ನು ಯಡಿಯೂರಪ್ಪ ನಂತರ ರಾಜ್ಯ ಬಿಜೆಪಿ ಸಾರಥಿಯಾಗಿ, ರಾಜ್ಯದ ಸಿಎಂ ಆಗಿ ಆಡಳಿತ ನಡೆಸಿದ್ದು ಬಸವರಾಜ​ ಬೊಮ್ಮಾಯಿ. ಆದ್ರೆ ಇದೇ ಬೊಮ್ಮಾಯಿ ಆಡಳಿತದಲ್ಲಿ ವಿಧಾನಸಭೆ ಚುನಾವಣೆ ಅಗ್ನಿಪರೀಕ್ಷೆ ಎದುರಿಸಿದ್ದ ಬಿಜೆಪಿ ಮಕಾಡೆ ಮಲಗಿತ್ತು. ಈ ಬೆಳವಣಿಗೆ ನಂತ್ರ ಬೊಮ್ಮಾಯಿಗೆ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನ ಕೂಡ ಒಲಿಯಲಿಲ್ಲ. ಇನ್ನು ಲೋಕಸಭೆ ಚುನಾವಣೆಯಲ್ಲಿ ಬೊಮ್ಮಾಯಿ ಗೆದ್ರೆ, ಎನ್‌ಡಿಎ ಮತ್ತೆ ಅಧಿಕಾರಕ್ಕೇರಿದ್ರೆ ಸಚಿವರಾದರೂ ಆಗಬಹುದು. ಸೋತ್ರೆ ಶಾಸಕಾಗಿ ಮುಂದುವರೀತಾರಷ್ಟೇ.

ಸಿದ್ದೇಶ್ವರ್-ಶಾಮನೂರು ಫ್ಯಾಮಿಲಿ ಫೈಟ್‌; ಡಾ. ಪ್ರಭಾ Vs ಗಾಯತ್ರಿ

ದಾವಣಗೆರೆಯಲ್ಲಿ ಈ ಬಾರಿಯೂ ಸಿದ್ದೇಶ್ವರ್ & ಶಾಮನೂರು ಕುಟುಂಬದ ರಾಜಕೀಯ ಸಮರ ಮುಂದುವರೆದಿದೆ. ಆದ್ರೆ ಈ ಬಾರಿ ಅದೇ ಕುಟುಂಬದಿಂದ ಮಹಿಳಾ ಮಣಿಗಳಿಬ್ಬರು ಅದೃಷ್ಟ ಪರೀಕ್ಷೆಗಿಳಿದಿದಾರೆ. ಬಿಜೆಪಿಯಿಂದ ಸಂಸದ ಸಿದ್ದೇಶ್ವರ್ ಪತ್ನಿ ಗಾಯತ್ರಿ ಮೊದಲ ಬಾರಿಗೆ ಅಖಾಡಕ್ಕೆ ಧುಮುಕ್ಕಿದ್ರೆ, ಕಾಂಗ್ರೆಸ್‌ನಿಂದ ಸಚಿವ ಮಲ್ಲಿಕಾರ್ಜುನ್‌ ಪತ್ನಿ ಡಾ. ಪ್ರಭಾ ಚುನಾವಣಾ ರಾಜಕಾರಣಕ್ಕೆ ಮೊದಲ ಬಾರಿ ಎಂಟ್ರಿ ಕೊಟ್ಟಿದಾರೆ. ಮಹಿಳೆಯರು ಕರ್ನಾಟಕದಿಂದ ಗೆದ್ದು ಪಾರ್ಲಿಮೆಂಟ್‌ಗೆ ಹೋಗಿದ್ದು ತುಂಬಾ ವಿರಳ. 1996ರಿಂದಲೇ ನೋಡಿದ್ರೆ ಈವರೆಗೂ ಶೇ 5ರಷ್ಟು ಮಹಿಳೆಯರು ಸಂಸತ್‌ ಪ್ರವೇಶಿಸಿದ್ದಾರೆ. ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ಮಹಿಳೆಯರಿಗೆ ಟಿಕೆಟ್‌ ಕೊಟ್ಟಿದ್ರಿಂದ ಮಹಿಳೆಯರೊಬ್ಬರು ದಾವಣಗೆರೆ ಲೋಕ ಕ್ಷೇತ್ರದಿಂದ ಗೆದ್ದು ದಿಲ್ಲಿಗೆ ಹಾರಲಿದ್ದಾರೆ.

ಹೊಸ ಮುಖಗಳ ಅದೃಷ್ಟ ಪರೀಕ್ಷೆ

ಅಚ್ಚರಿ ಎಂಬಂತೆ ರಾಜ್ಯದ 15 ಹಾಲಿ ಬಿಜೆಪಿ ಸಂಸದರಿಗೆ ಈ ಬಾರಿ ಟಿಕೆಟ್‌ ನಿರಾಕರಿಸಲಾಗಿದೆ. ಗಮನಾರ್ಹವೆಂದರೆ, ಉತ್ತರ ಕನ್ನಡದ ಅನಂತಕುಮಾರ್‌ ಹೆಗಡೆ, ಬೆಳಗಾವಿಯ ಮಂಗಳಾ ಅಂಗಡಿ, ಕೊಪ್ಪಳದ ಕರಡಿ ಸಂಗಣ್ಣ, ಬಳ್ಳಾರಿಯ ವೈ ದೇವೆಂದ್ರಪ್ಪಗೆ ಟಿಕೆಟ್ ಸಿಕ್ಕಿಲ್ಲ. ಹಾವೇರಿಯ ಶಿವಕುಮಾರ್‌ ಉದಾಸಿ ತಾವೇ ಕಣದಿಂದ ಹಿಂದೆ ಸರಿದಿದ್ದಾರೆ. ಬಳ್ಳಾರಿಯಲ್ಲಿ ಬಿ ಶ್ರೀರಾಮುಲು ಬಿಟ್ರೆ ಉಳಿದವರೆಲ್ಲರೂ ದಿಲ್ಲಿಗೆ ಹೊಸ ಮುಖಗಳಾಗಿವೆ.

ಉತ್ತರ ಕರ್ನಾಟಕದಲ್ಲಿ ಲಿಂಗಾಯತರ ಲಿಂಗಾಯತ ಪ್ರಾಬಲ್ಯ

ಉತ್ತರ ಕರ್ನಾಟಕದಲ್ಲಿನ ಹಳೇ ಟ್ರೆಂಡ್‌ ಈ ಸಾರಿಯೂ ಮುಂದುವರೆದಿದೆ. 14 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ನೀಡಿರುವ ಟಿಕೆಟ್‌ಗಳಲ್ಲಿ ಲಿಂಗಾಯತರದ್ದೇ ಸಿಂಹಪಾಲು. 14ರಲ್ಲಿ ವಿಜಯಪುರ, ಕಲಬುರಗಿ, ರಾಯಚೂರು, ಬಳ್ಳಾರಿ ಮೀಸಲು ಕ್ಷೇತ್ರಗಳಾಗಿವೆ. ಉತ್ತರ ಕನ್ನಡ, ಧಾರವಾಡದಲ್ಲಿ ಬ್ರಾಹ್ಮಣರಿಗೆ ಟಿಕೆಟ್‌ ಸಿಕ್ಕಿದ್ದು ಬಿಟ್ರೆ, ಉಳಿದ 8 ಲೋಕಸಭಾ ಕ್ಷೇತ್ರದಲ್ಲೂ ಒಬ್ಬರಿಲ್ಲ ಒಬ್ಬರು ಲಿಂಗಾಯತ ಅಭ್ಯರ್ಥಿ ಕಣದಲ್ಲಿದ್ದಾರೆ. ಬೆಳಗಾವಿ, ಬೀದರ್‌, ದಾವಣಗೆರೆ, ಬಾಗಲಕೋಟೆ ಈ ಐದೂ ಕ್ಷೇತ್ರಗಳಲ್ಲೂ ಲಿಂಗಾಯತ ವರ್ಸಸ್ ಲಿಂಗಾಯತ ಅನ್ನೋ ವಾತಾವರಣವಿದೆ.

ಇದನ್ನೂ ಓದಿ: ಮತದಾನ ಮಾಡಿ ಗುರುತು ತೋರ್ಸಿದ್ರೆ ಈ ಬಾರ್​ನಲ್ಲಿ ಸಿಗಲಿದೆ ಸ್ಪೆಷಲ್ ಡಿಸ್ಕೌಂಟ್!

ಮೊದಲ ಬಾರಿ ಸಂಸತ್‌ ಪ್ರವೇಶಕ್ಕೆ ಅಭ್ಯರ್ಥಿಗಳ ನಡುವೆ ರೇಸ್

ಇಂದು ಮತದಾನ ನಡೆಯಲಿರುವ 14ರಲ್ಲಿ 10 ಲೋಕಸಭಾ ಕ್ಷೇತ್ರಗಳಾದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಗುಲ್ಬರ್ಗಾ, ಬೀದರ್, ರಾಯಚೂರು, ಕೊಪ್ಪಳ, ಹಾವೇರಿ, ದಾವಣಗೆರೆ ಕಾಂಗ್ರೆಸ್‌ ಅಥವಾ ಬಿಜೆಪಿಯಿಂದ ಒಬ್ಬರಾದ್ರೂ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಲು ಲೋಕಸಭಾ ಚುನಾವಣಾ ಅಖಾಡಕ್ಕಿಳಿದವರಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್‌, ಬಿಜೆಪಿಯಿಂದ ಸ್ಪರ್ಧಿಸಿರುವ ಇಬ್ಬರೂ ಮಹಿಳೆಯರು, ಚುನಾವಣಾ ರಾಜಕಾರಣಕ್ಕೆ ಹೊಸಬರಾಗಿದ್ದಾರೆ.

ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ