Explainer: ‘ಉತ್ತರ ಪ್ರದೇಶ ಈಗ ‘ಸೈಫಈ’ಗೆ ಕುಖ್ಯಾತಿ ಪಡೆದಿಲ್ಲ’ ಎಂದ ಯೋಗಿ ಆದಿತ್ಯನಾಥ್; ಏನಿದು ‘ಸೈಫಈ? ಕುಖ್ಯಾತಿಯೇಕೆ? ಇಲ್ಲಿದೆ ವಿವರ
Yogi Adityanath | Saifai: ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡುತ್ತಾ ‘ಸೈಫಈ’ ಉತ್ಸವವನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ಅವರು ಉತ್ತರ ಪ್ರದೇಶ ಈಗ ‘ಸೈಫಈ’ ರೀತಿಯ ಕಾರ್ಯಕ್ರಮಕ್ಕೆ ಕುಖ್ಯಾತಿ ಪಡೆದಿಲ್ಲ ಎಂದಿದ್ದರು. ಏನಿದು ಸೈಫಈ? ಕುಖ್ಯಾತಿಯೇಕೆ? ಇಲ್ಲಿದೆ ವಿವರ.
ಉತ್ತರ ಪ್ರದೇಶ ರಾಜ್ಯವು ವಿವಾದಿತ ‘ಸೈಫಈ’ (Saifai) ಉತ್ಸವಕ್ಕೆ ಕುಖ್ಯಾಥಿ ಪಡೆದಿಲ್ಲ. ಅದರ ಬದಲಾಗಿ ಪ್ರಸ್ತುತ ಅಯೋಧ್ಯೆಯ ದೀಪೋತ್ಸವ ಮತ್ತು ದಿವ್ಯ ಕುಂಭದಂತಹ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಖ್ಯಾತವಾಗಿದೆ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದರು. ಸೈಫಈ ಉತ್ಸವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಕುಟುಂಬ ಅವರ ಸ್ವಕ್ಷೇತ್ರ ‘ಸೈಫಈ’ಯಲ್ಲಿ ಆಯೋಜಿಸುತ್ತಿದ್ದ ವಾರ್ಷಿಕ ಉತ್ಸವ. ಆದರೆ ಇದು ಹಲವಾರು ಕಾರಣಗಳಿಂದ ವಿವಾದ ಹುಟ್ಟುಹಾಕಿತ್ತು. ಅಲ್ಲದೇ ಈ ಉತ್ಸವದ ಭಾಗವಾಗಿ ಖ್ಯಾತ ಬಾಲಿವುಡ್ ತಾರೆಯರು ಆಗಮಿಸಿ ‘ಬಾಲಿವುಡ್ ನೈಟ್’ (Bollywood Night) ನಡೆಸಲಾಗುತ್ತಿತ್ತು. ಮೂಲ ಸೌಕರ್ಯ ಕೊರತೆಯಿರುವ ರಾಜ್ಯದಲ್ಲಿ ಅದ್ದೂರಿ ಕಾರ್ಯಕ್ರಮ ಅದರಲ್ಲೂ ಬಾಲಿವುಡ್ ನೈಟ್ ಆಯೋಜಿಸುವುದಕ್ಕೆ ಸರ್ಕಾರದ ಹಣ ವ್ಯಯಿಸುವುದು ತೀವ್ರ ಟೀಕೆಗೆ ಒಳಗಾಗಿತ್ತು. ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದು ಏಕೆ? ಯೋಗಿ ಆದಿತ್ಯನಾಥ್ ಇದನ್ನು ಉಲ್ಲೇಖಿಸಲು ಕಾರಣವೇನು? ಮೊದಲಾದ ವಿಚಾರಗಳ ಕುರಿತು OpIndia ತಾಣದಲ್ಲಿ ಗೋಪಾಲ್ ತಿವಾರಿ ವಿಸ್ತೃತ ಬರಹ ಬರೆದಿದ್ದಾರೆ. ಅದರ ಆಧಾರಿತ ಬರಹ ಇಲ್ಲಿದೆ.
2012ರ ನಂತರ ಹೆಚ್ಚು ಸದ್ದು ಮಾಡಿದ ‘ಸೈಫಈ’: ಸೈಫಈ ಕಾರ್ಯಕ್ರಮ ಪ್ರಾರಂಭವಾಗಿದ್ದು 1997ರಲ್ಲಿ. ಇದನ್ನು ಆರಂಭಿಸಿದ್ದು ದಿ.ರಣವೀರ್ ಸಿಂಗ್ ಯಾದವ್. ಅವರ ಮರಣಾನಂತರ ಈ ಕಾರ್ಯಕ್ರಮಕ್ಕೆ ‘ರಣವೀರ್ ಸಿಂಗ್ ಸ್ಮರಣಾರ್ಥ ಸೈಫಈ ಮಹೋತ್ಸವ’ ಎಂದು ಹೆಸರಿಡಲಾಯಿತು. 2012ರ ಮಾರ್ಚ್ನಲ್ಲಿ ಅಖಿಲೇಶ್ ಯಾದವ್ ರಾಜ್ಯದ ಮುಖ್ಯಮಂತ್ರಿಯಾದರು. ಶೀಘ್ರದಲ್ಲೇ ಅವರು 2012ರ ಡಿಸೆಂಬರ್ನಲ್ಲಿ ಅದ್ದೂರಿ ‘ಸೈಫಈ’ ಸಮಾರಂಭಕ್ಕೆ ತಯಾರಿ ನಡೆಸಿದರು. ಸರ್ಕಾರ ಇದಕ್ಕೆ ವಿಶೇಷ ಕಾಳಜಿ ವಹಿಸಿದ್ದರಿಂದ ಕಾರ್ಯಕ್ರಮದ ವ್ಯಾಪ್ತಿ ಹಿರಿದಾಯಿತು. ಬಾಲಿವುಡ್ನ ಖ್ಯಾತ ಕಲಾವಿದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಇದರಲ್ಲಿ ಜನಪ್ರಿಯ ಕಲಾವಿದರಾದ ಗಾಯಕ ಕೈಲಾಶ್ ಖೇರ್ ಮತ್ತು ಕವಿ ಮುನವ್ವರ್ ರಾಣಾ ಭಾಗವಹಿಸಿದ್ದರು. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕಪಿಲ್ ಶರ್ಮಾ ಅವರೊಂದಿಗೆ ಪಾಕಿಸ್ತಾನಿ ಹಾಸ್ಯನಟ ಇರ್ಫಾನ್ ಅಲಿ ಹಸನ್ ಕೂಡ ಭಾಗವಹಿಸಿದ್ದರು. ಆ ವರ್ಷದ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಗಾಯಕಿ ಸಪ್ನಾ ಮುಖರ್ಜಿ ಮತ್ತು ನೃತ್ಯಗಾರ್ತಿ ಶ್ಯಾಮಕ್ ದಾವರ್ ಕೂಡ ಇದ್ದರು.
ಈ ಬಾಲಿವುಡ್ ಕಾರ್ಯಕ್ರಮದಲ್ಲಿ ಬಾಲಿವುಡ್ ಗಾಯಕ ಶಾನ್ ಅವರ ಗಾಯನ, ಖ್ಯಾತ ತಾರೆ ಹೃತಿಕ್ ರೋಷನ್ ಅವರ ನೃತ್ಯ ಪ್ರದರ್ಶನ ಮೊದಲಾದ ತಾರಾ ಕಾರ್ಯಕ್ರಮವೂ ಸೇರಿತ್ತು. ‘ಸೈಫಈ’ನಲ್ಲಿ ಇವರನ್ನು ಗೌರವಿಸಲಾಯಿತು ಮತ್ತು ಪ್ರಶಸ್ತಿ ನೀಡಲಾಯಿತು. 14 ದಿನಗಳ ಉತ್ಸವದಲ್ಲಿ ಖರ್ಚು ವೆಚ್ಚಗಳು ರಾಜ್ಯದ ಬೊಕ್ಕಸದಿಂದ ಪಾವತಿಸಲ್ಪಟ್ಟಿತ್ತು. ಇದಕ್ಕೂ ಮುನ್ನ ಅಂದರೆ 2007 ರಿಂದ 2012 ರವರೆಗಿನ ಬಿಎಸ್ಪಿಯ ಮಾಯಾವತಿಯವರ ಆಡಳಿತದಲ್ಲಿ ಉತ್ಸವದ ಆಡಂಬರ ಸ್ವಲ್ಪಮಟ್ಟಿಗೆ ಕಡಿಮೆಯಿತ್ತು.
ಮುಜಾಫರ್ನಗರ ಗಲಭೆಯ ಸಂದರ್ಭದಲ್ಲಿ ತೀವ್ರ ವಿವಾದ ಸೃಷ್ಟಿಸಿದ ‘ಸೈಫಈ’: 2013ರಲ್ಲಿ ಮುಜಾಫರ್‌ನಗರದಲ್ಲಿ ತೀವ್ರ ಗಲಭೆ ಏರ್ಪಟ್ಟಿತ್ತು. ಅದರಲ್ಲಿ 62 ಜನರು ಮೃತಪಟ್ಟು, 93 ಜನರು ಗಾಯಗೊಂಡಿದ್ದರು. ಸುಮಾರು 50,000 ಜನರು ನಿರಾಶ್ರಿತರಾಗಿದ್ದರು. ಜನರಿಗೆಂದು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿತ್ತು. ಡಿಸೆಂಬರ್ನಲ್ಲಿ ‘ಸೈಫಈ’ ನಿಗದಿಯಾಗಿತ್ತು. ನಿರಾಶ್ರಿತರು ಮೂಲಸೌಕರ್ಯಗಳ ಕೊರತೆಯಿಂದ ಶಿಬಿರಗಳಲ್ಲಿ ನಲುಗುತ್ತಿರುವಾಗ ಸರ್ಕಾರ ಅದ್ದೂರಿಯಾಗಿ ‘ಸೈಫಈ’ ಕಾರ್ಯಕ್ರಮ ನಡೆಸಿತ್ತು. ಇದು ತೀವ್ರ ವಿವಾದಕ್ಕೆ ನಾಂದಿ ಹಾಡಿತು.
ಮುಲಾಯಂ ಸಿಂಗ್ ಯಾದವ್ ಅವರನ್ನು ಈ ಕುರಿತು ಪ್ರಶ್ನಿಸಿದ್ದಾಗ ಇದನ್ನು ವದಂತಿ ಎಂದು ಹೇಳುವ ಮೂಲಕ ಹಾರಿಕೆಯ ಉತ್ತರ ನೀಡಿದ್ದರು. ರಾಜ್ಯದಲ್ಲಿ ಸಮಾಜವಾದಿ ಪಕ್ಷ ಮತ್ತು ಸರ್ಕಾರದ ಪ್ರತಿಷ್ಠೆಯನ್ನು ಕೆಡಿಸುವ ಬಿಜೆಪಿಯ ನಡೆ ಇದು ಎಂದು ಮುಲಾಯಂ ಸಿಂಗ್ ಯಾದವ್ ಆಗ ಹೇಳಿದ್ದರು. ಇದಕ್ಕೆ ಪೂರಕವಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಚಳಿಯಿಂದ ಯಾರೂ ಸಾಯುವುದಿಲ್ಲ ಎಂದು ವಿವಾದಿತ ಹೇಳಿಕೆ ನೀಡಿದ್ದರು.
ಗ್ರಾಮೀಣ ಮತ್ತು ಜಾನಪದ ಸಂಸ್ಕೃತಿಯನ್ನು ಉಳಿಸುವ ಮತ್ತು ಸ್ಥಳೀಯ ಕಲೆಯನ್ನು ಉತ್ತೇಜಿಸುವ ಉಪಕ್ರಮವಾಗಿ ಸೈಫಈ ಉತ್ಸವವನ್ನು ಪ್ರಾರಂಭಿಸಲಾಗಿತ್ತು. ಆದರೆ ವಾಸ್ತವದಲ್ಲಿ ಜಾನಪದ ಅಥವಾ ಗ್ರಾಮೀಣ ಕಲೆಯ ಉತ್ತೇಜನಕ್ಕಿಂತ ಸರ್ಕಾರದ ಹಣ ಬಳಸಿ ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ಬಾಲಿವುಡ್ ಮನರಂಜನೆ ನೀಡುವ ಕಾರ್ಯಕ್ರಮವಾಗಿ ಬದಲಾಯಿತು. ಸ್ಟ್ಯಾಂಡ್-ಅಪ್ ಕಾಮಿಡಿ ಪ್ರದರ್ಶನಗಳು, ಬಾಲಿವುಡ್ ನೃತ್ಯ ಮತ್ತು ಗಾಯನ ಕಾರ್ಯಕ್ರಮಗಳೇ ಉತ್ಸವದ ಆಕರ್ಷಣೆಯಾದವು. ಸೈಕಲ್ ಮ್ಯಾರಥಾನ್, ಕುಸ್ತಿ ಸ್ಪರ್ಧೆ, ಮಕ್ಕಳ ಗಾಯನ ಕಾರ್ಯಕ್ರಮ, ಗ್ರಾಮೀಣ ಮತ್ತು ಜಾನಪದ ಕಲಾವಿದರಿಗಿಂತ ಹೆಚ್ಚಾಗಿ ಚಿತ್ರರಂಗದ ಗಣ್ಯರು ಉತ್ಸವದಲ್ಲಿ ಗುರುತಿಸಿಕೊಳ್ಳುತ್ತಿದ್ದರು.
2014ರ ‘ಸೈಫಈ’ ಉತ್ಸವದಲ್ಲಿ ಗದ್ದಲ ನಡೆಯಿತು. ಜನ ಸಮೂಹ ನಿಯಂತ್ರಿಸಲು ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು. ಇದಕ್ಕೆ ಪ್ರತಿಯಾಗಿ ಜನರು ಪೊಲೀಸರ ಮೇಲೆ ದಾಳಿ ನಡೆಸಿದರು. ಜನರ ಈ ಅನಿರೀಕ್ಷಿತ ಹಿಂಸಾತ್ಮಕ ವರ್ತನೆಯ ಬಗ್ಗೆ ಪೊಲೀಸರು ಸಿಎಂಗೆ ದೂರು ನೀಡಿದ್ದರು. ಆದರೆ ಇದರ ಪರಿಣಾಮ ಏನೂ ಆಗಲಿಲ್ಲ.
ವಿವಾದಿತ ‘ಸೈಫಈ’ ಉತ್ಸವಕ್ಕೆ ರಾಜ್ಯ ಸರ್ಕಾರ ಖರ್ಚು ಮಾಡುತ್ತಿದ್ದುದು ಎಷ್ಟು? ಯುಪಿಯಲ್ಲಿ ಮೂಲಭೂತ ಅವಶ್ಯಕತೆಗಳ ಕೊರತೆಯಿರುವಾಗ ಬಾಲಿವುಡ್ ತಾರೆಯರಿಗಾಗಿ ನೂರಾರು ಕೋಟಿ ಖರ್ಚು ಮಾಡಲಾಗಿತ್ತು. 2014 ರಲ್ಲಿ, ಈ ಉತ್ಸವಕ್ಕೆ ಸುಮಾರು ರೂ.334 ಕೋಟಿ ಖರ್ಚು ಮಾಡಲಾಗಿತ್ತು. ಮತ್ತು ಇದರಲ್ಲಿ ಬಾಲಿವುಡ್ ನೈಟ್ ಕಾರ್ಯಕ್ರಮಕ್ಕೆ 100 ಕೋಟಿ ಖರ್ಚು ಮಾಡಲಾಗಿತ್ತು. ಅತಿಥಿಗಳಲ್ಲಿ ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಕೂಡ ಇದ್ದರು. ರಾಜ್ಯದ ಇನ್ನೊಂದು ತುದಿಯಲ್ಲಿರುವ ಮುಜಾಫರ್‌ನಗರದಲ್ಲಿ, ಪರಿಹಾರ ಶಿಬಿರಗಳಲ್ಲಿ ತಂಗಿದ್ದ ಗಲಭೆಗಳ ಸಂತ್ರಸ್ತರು ಚಳಿಯಲ್ಲಿ ನಡುಗುತ್ತಿದ್ದರು ಎಂದು ಆಗಿನ ವರದಿಗಳಲ್ಲಿ ಪ್ರಸ್ತಾಪವಾಗಿತ್ತು. ಆದರೆ ಮುಲಾಯಂ ಸಿಂಗ್ ಯಾದವ್ ಅವರು ಪರಿಹಾರ ಶಿಬಿರಗಳಲ್ಲಿ ಯಾರೂ ಇಲ್ಲ ಮತ್ತು ಅಲ್ಲಿದ್ದವರೆಲ್ಲರೂ ತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ ಎಂದು ಹೇಳುತ್ತಿದ್ದರು.
1000ಕ್ಕೂ ಹೆಚ್ಚು ವಿವಿಐಪಿ ಅತಿಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು. ಈ ಉತ್ಸವದ ಆಯೋಜನೆಗೆ 400 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸರ್ಕಾರದ ಇತರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕೆಲವೇ ದಿನಗಳಲ್ಲಿ 85ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳು ಟೇಕಾಫ್‌ಗಳು ಮತ್ತು ಲ್ಯಾಂಡಿಂಗ್‌ಗಳಿಗೆ ಸಾಕ್ಷಿಯಾದ ಉತ್ಸವ ಅದು. ಈ ಉತ್ಸವಕ್ಕೆ ವಿವಿಐಪಿಗಳು ಮತ್ತು ಅತಿಥಿಗಳನ್ನು ಕರೆತರಲು ಒಟ್ಟು 9 ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ನಂತರದ ವರ್ಷ ಅಂದರೆ 2015ರಲ್ಲಿ ರಣವೀರ್ ಸಿಂಗ್ ಮತ್ತು ಮಲ್ಲಿಕಾ ಶೆರಾವತ್ ಪ್ರಮುಖ ಆಕರ್ಷಣೆಯಾಗಿದ್ದರು. ಮುಲಾಯಂ ಸಿಂಗ್ ಯಾದವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಲಾಯಂ ಸಿಂಗ್ ಯಾದವ್ ಅವರ ಸೋದರಳಿಯ ರಣವೀರ್ ಸಿಂಗ್ ಯಾದವ್ ಅವರ ಸ್ಮರಣಾರ್ಥ ಆಯೋಜಿಸಲಾದ 18 ನೇ ಸೈಫೈ ಉತ್ಸವ ಅದಾಗಿತ್ತು. ಉತ್ಸವವು ಗಜಲ್ ಸೆಷನ್‌ಗಳಿಂದ ಹಿಡಿದು ರಂಗುರಂಗಿನ ಬೆಳಕು ಮತ್ತು ಧ್ವನಿ ಕಾರ್ಯಕ್ರಮಗಳವರೆಗೆ ಎಲ್ಲವನ್ನೂ ಹೊಂದಿತ್ತು. ಲಿಸಾ ಹೇಡನ್, ರಣವೀರ್ ಸಿಂಗ್ ಮತ್ತು ಹೃತಿಕ್ ರೋಷನ್ ಆಹ್ವಾನಿತರಾಗಿದ್ದರೆ, ಬೊಮನ್ ಇರಾನಿ, ಹುಮಾ ಖುರೈಶಿ, ಗಾಯಕ ಅರಿಜಿತ್ ಸಿಂಗ್, ಪರಿಣಿತಿ ಚೋಪ್ರಾ, ಜಾಕ್ವೆಲಿನ್ ಫರ್ನಾಂಡಿಸ್, ಸುಶಾಂತ್ ಸಿಂಗ್, ವಾಣಿ ಕಪೂರ್, ರಿಚಾ ಚಡ್ಡಾ, ಲೋರಿನ್ ಡಿಸೋಜಾ ಭಾಗವಹಿಸಿದ್ದರು.
2016 ರಲ್ಲಿ ಸೋನಮ್ ಕಪೂರ್ ಮತ್ತು ಕರೀನಾ ಕಪೂರ್ ಖಾನ್ ಅವರಂತಹ ನಟಿಯರು ರಣವೀರ್ ಸಿಂಗ್ ಜೊತೆಗೆ ಪ್ರದರ್ಶನಗಳಲ್ಲಿ ಭಾಗವಹಿಸಿದಾಗ ಉತ್ಸವವು ಮತ್ತಷ್ಟು ಗ್ಲಾಮರ್ ಆಗಿತ್ತು. ಬಾಲಿವುಡ್ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರಿಗೆ ಸರ್ಕಾರವು ‘ರಾಯಲ್ ಫೀಸ್ಟ್’ ನೀಡಿತ್ತು. ಗಾಯಕ ಅಂಕಿತ್ ತಿವಾರಿ ಉತ್ಸವದಲ್ಲಿ ಸಂಗೀತ ನೀಡಿದ್ದರು. ಅರ್ಜುನ್ ಕಪೂರ್, ಸೋನಾಕ್ಷಿ ಸಿನ್ಹಾ ಮತ್ತು ಮಿಕಾ ಸಿಂಗ್, ರಣವೀರ್ ಸಿಂಗ್ ಮೊದಲಾದವರು ಭಾಗವಹಿಸಿದ್ದರು. ಆ ವರ್ಷವೂ ಕೆಲ ವಿವಾದ ನಡೆದಿತ್ತು.
2017 ರಲ್ಲಿ ಯಾದವ್ ಕುಟುಂಬವು ಕೌಟುಂಬಿಕ ಕಲಹಗಳಲ್ಲಿ ಸಿಕ್ಕಿಹಾಕಿಕೊಂಡಿತು ಮತ್ತು ಉತ್ಸವವನ್ನು ಆಯೋಜಿಸಲಿಲ್ಲ. ಅದೇ ವರ್ಷ ರಾಜ್ಯ ಸರ್ಕಾರದಲ್ಲಿ ಬದಲಾವಣೆಯಾಗಿತ್ತು. ಮತ್ತು ಅಂದಿನಿಂದ ಸೈಫಈ ಮಹೋತ್ಸವ ನಿಂತುಹೋಯಿತು. ಈ ಎಲ್ಲಾ ಕಾರಣದಿಂದ ‘ಸೈಫಈ’ ಉತ್ಸವವು ಪ್ರತೀ ವರ್ಷ ಸಾಕಷ್ಟು ಸುದ್ದಿಯಾಗಿತ್ತು. ಇದು ಯೋಗಿ ಆದಿತ್ಯನಾಥ್ ‘ಸೈಫಈ’ ಉತ್ಸವವನ್ನು ಉಲ್ಲೇಖಿಸಿ ಅಖಿಲೇಶ್ ಯಾದವ್ ಹಾಗೂ ಕುಟುಂಬದ ವಿರುದ್ಧ ಹರಿಹಾಯಲು ಪ್ರಮುಖ ಕಾರಣ.
ಇದನ್ನೂ ಓದಿ:
‘ಕರೀನಾ ಸಿಕ್ಕಾಪಟ್ಟೆ ಡೇಂಜರ್’ ಎಂದು ಸೈಫ್ಗೆ ಹಿತೋಪದೇಶ ನೀಡಿದ್ದ ಅಕ್ಷಯ್; ಇಲ್ಲಿದೆ ಕರೀನಾ- ಸೈಫ್ ಪ್ರೇಮ ಪುರಾಣ!
ರಾಜನಾಥ್ ಸಿಂಗ್ ಸಲಹೆ ನಿರ್ಲಕ್ಷಿಸಿ ಮತ್ತೊಮ್ಮೆ ಜಿನ್ನಾ ಹೆಸರು ಬಳಸಿದ ಯೋಗಿ ಆದಿತ್ಯನಾಥ