ಚುನಾವಣಾ ಆಯೋಗದ ಉಪ ಆಯುಕ್ತರು ಬಿಜೆಪಿ ಪರವಾಗಿದ್ದಾರೆ: ಟಿಎಂಸಿ ನಾಯಕರಿಂದ ಗಂಭೀರ ಆರೋಪ

West Bengal Assembly elections 2021: ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸೇವೆಯಿಂದ ವರ್ಗಾಯಿಸಬೇಕು ಎಂದು ಟಿಎಂಸಿಯ ಹಿರಿಯ ನಾಯಕ ಡೆರೆಕ್ ಓಬ್ರಿಯಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  • TV9 Web Team
  • Published On - 20:23 PM, 4 Mar 2021
ಚುನಾವಣಾ ಆಯೋಗದ ಉಪ ಆಯುಕ್ತರು ಬಿಜೆಪಿ ಪರವಾಗಿದ್ದಾರೆ: ಟಿಎಂಸಿ ನಾಯಕರಿಂದ ಗಂಭೀರ ಆರೋಪ
ಟಿಎಂಸಿ (ಪ್ರಾತಿನಿಧಿಕ ಚಿತ್ರ)

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ಬಿಜೆಪಿ ಪರ ನಿಲುವು ತಳೆಯುತ್ತಿದ್ದು, ಅವರನ್ನು ತಕ್ಷಣ ಗೌರವಯುತ ಸ್ಥಾನದಿಂದ ತೆರವುಗೊಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ. ಈ ಮೂಲಕ ಬಿಜೆಪಿ-ಟಿಎಂಸಿ ನಡುವಿನ ಸಮರ ಚುನಾವಣಾ ಆಯೋಗದ ಅಧಿಕಾರಿಗಳ ಮಟ್ಟ ತಲುಪಿದೆ.

ರಾಜ್ಯ ಮುಖ್ಯ ಚುನಾವಣಾ ಕಚೇರಿಗೆ ಪತ್ರ ಬರೆದಿರುವ ರಾಜ್ಯಸಭಾ ಸಂಸದ ಮತ್ತು ಟಿಎಂಸಿಯ ಹಿರಿಯ ನಾಯಕ ಡೆರೆಕ್ ಓಬ್ರಿಯಾನ್, ‘ಉಪ ಚುನಾವಣಾ ಅಧಿಕಾರಿ ಸುದೀಪ್ ಜೈನ್ ಅವರು ನಿಷ್ಪಕ್ಷಪಾತ ಧೋರಣೆ ಅನುಸರಿಸುತ್ತಿಲ್ಲ. ಮತ್ತು ಎಲ್ಲಾ ಪಕ್ಷಗಳನ್ನು ಸಮಾನವಾಗಿ ಪರಿಗಣಿಸುತ್ತಿಲ್ಲ ಎಂಬ ಬಲವಾದ ಅನುಮಾನ ನಮ್ಮನ್ನು ಕಾಡುತ್ತಿದೆ. ಅವರು ಬಿಜೆಪಿ ಪರ ನಿಲುವುಗಳನ್ನು ತಳೆಯುತ್ತಿದೆ ಎಂದು ನಮಗೆ ಅನಿಸುತ್ತಿದೆ’ ಎಂದು ಗಂಭೀರ ಆರೋಪ ಮಾಡಿದೆ.

ಸುದೀಪ್ ಜೈನ್ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸೇವೆಯಿಂದ ವರ್ಗಾಯಿಸಬೇಕು ಎಂದು ಟಿಎಂಸಿಯ ಹಿರಿಯ ನಾಯಕ ಡೆರೆಕ್ ಓಬ್ರಿಯಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಂದು ನಡೆಯಲಿದೆ ಚುನಾವಣೆ?
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 294 ಸೀಟುಗಳಿರುವ ವಿಧಾನಸಭೆಗೆ ಮಾರ್ಚ್ 27ರಿಂದ ಏಪ್ರಿಲ್29ರವರೆಗೆ ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ. ಈ ಚುನಾವಣೆಯಲ್ಲಿ 200ಕ್ಕಿಂತಲೂ ಹೆಚ್ಚು ಸೀಟು ಗೆಲ್ಲಲು ಬಿಜೆಪಿ ಹವಣಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಟಿಎಂಸಿಯಿಂದ ಹಲವಾರು ಸದಸ್ಯರು ಬಿಜೆಪಿಗೆ ಸೇರಿರುವುದರಿಂದ ಮತ್ತು ಟಿಎಂಸಿ ನಾಯಕರ ಮೇಲೆ ಭ್ರಷ್ಟಾಚಾರ ಆರೋಪಗಳಿರುವುದರಿಂದ ಈ ಚುನಾವಣೆ ಟಿಎಂಸಿ ಪಾಲಿಗೆ ನಿರ್ಣಾಯಕವಾಗಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಪೈಪೋಟಿ ನಡೆಸುತ್ತಿದ್ದವು. ಆದರೆ ಈ ಬಾರಿ ಬಿಜೆಪಿ ಮತ್ತು ಟಿಎಂಸಿ ನಡುವಿನ ಸ್ಪರ್ಧೆ ಎಂದೇ ಪಶ್ಚಿಮ ಬಂಗಾಳ ಚುನಾವಣೆಯನ್ನು ಬಿಂಬಿಸಲಾಗುತ್ತದೆ.

ಈಗಾಗಲೇ ಚುನಾವಣಾ ಪ್ರಚಾರಗಳು ಭರದಿಂದ ನಡೆಯುತ್ತಿದ್ದು ಬಿಜೆಪಿ ಮತ್ತು ಟಿಎಂಸಿ ನಾಯಕರು ಪರಸ್ಪರ ಟೀಕೆ-ವಾಗ್ವಾದಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೋಲ್ ಕೀಪರ್ ಆಗಲಿದ್ದು, ಬೇರೆ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಒಂದೇ ಒಂದು ಗೋಲು ಬಾರಿಸಲು ಬಿಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅದೇ ವೇಳೆ ಮೆರವಣಿಗೆ, ರೋಡ್ ಶೋಗಳನ್ನು ನಡೆಸುತ್ತಾ ಅಬ್ಬರದ ಪ್ರಚಾರ ನಡೆಸುತ್ತಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನು ಸೋನರ್ ಬಾಂಗ್ಲಾ ಮಾಡುವುದಾದಿ ಭರವಸೆ ನೀಡಿದೆ. ಮಮತಾ ಬ್ಯಾನರ್ಜಿ ಅವರ ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳನ್ನು ಎತ್ತಿ ತೋರಿಸಿ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.

ಮೂರನೇ ಬಾರಿ ಮುಖ್ಯಮಂತ್ರಿ ಆಗುತ್ತಾರಾ ದೀದಿ?

ಒಂದು ವೇಳೆ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಗೆದ್ದರೆ ಮಮತಾ ಬ್ಯಾನರ್ಜಿ ಮೂರನೇ ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ. ಬಿಜೆಪಿ ಇಲ್ಲಿಯವರೆಗೆ ಯಾವುದೇ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆದರೆ ಬಿಜೆಪಿ ಇಲ್ಲಿ ಖಾತೆ ತೆರೆದರೆ ಅದು ರಾಜಕೀಯವಲಯದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ.

ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ಅವಲೋಕನ ನಡೆಸಸಲು ಚುನಾವಣಾ ಆಯೋಗದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬಂಗಾಳದಾದ್ಯಂತವಿರುವ 78,000 ಮತಗಟ್ಟೆಗಳನ್ನು ಇವರು ಪರಿಶೀಲಿಸಿದ್ದು, ಅಲ್ಲಿ ನೀರು, ಶೌಚಾಲಯ ಮತ್ತು ಇನ್ನಿತರ ಸೌಕರ್ಯಗಳು ಇರುವುದಾಗಿ ಖಾತ್ರಿ ಪಡಿಸಿದ್ದಾರೆ.

ಕೊವಿಡ್ ಸಂಕ್ರಾಮಿಕದ ಹೊತ್ತಲ್ಲಿ ನಡೆಯುವ ಚುನಾವಣೆ ಇದಾಗಿರುವ ಕಾರಣ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಮತಗಟ್ಟೆಯಲ್ಲಿರುವ ಸಿಬ್ಬಂದಿಗಳು ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಮತ್ತು ಸ್ಯಾನಿಟೈಸರ್​ಗಳನ್ನು ಬಳಸಬೇಕು. ಮತದಾರರ ದೇಹದ ಉಷ್ಣತೆ ಪರೀಕ್ಷಿಸಿದ ನಂತರವೇ ಮತದಾನಕ್ಕೆ ಅವಕಾಶ ನೀಡಲಾಗುವುದು.

ಒಟ್ಟು 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) 209 ಸ್ಥಾನ ಪಡೆದಿದೆ. ಟಿಎಂಸಿ ಮೈತ್ರಿ ಪಕ್ಷ ಜಿಜೆಎಂ 2 ಸ್ಥಾನ ಹೊಂದಿದೆ. ಬಿಜೆಪಿ 27, ಕಾಂಗ್ರೆಸ್ 23, ಸಿಪಿಎಂ 19 ಸ್ಥಾನ ಪಡೆದಿದೆ. 10 ಕ್ಷೇತ್ರಗಳು ಖಾಲಿಯಿವೆ.

ಇದನ್ನೂ ಓದಿ: West Bengal Elections: ಪಶ್ಚಿಮ ಬಂಗಾಳ ಬಿಜೆಪಿ ಪ್ರಚಾರ ಯಾತ್ರೆಯಲ್ಲಿ ಸ್ಕೂಟರ್ ಓಡಿಸಿದ ಸ್ಮೃತಿ ಇರಾನಿ

ಮಮತಾ ಬ್ಯಾನರ್ಜಿ ಅಹಂಕಾರಕ್ಕೆ ಪಶ್ಚಿಮ ಬಂಗಾಳದ ಜನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ: ಅಬ್ಬಾಸ್ ಸಿದ್ದಿಕಿ